Please enable javascript.ಮರಳು ಸಮಸ್ಯೆ: ನ.25 ಡೆಡ್‌ಲೈನ್ - ಮರಳು ಸಮಸ್ಯೆ: ನ.25 ಡೆಡ್‌ಲೈನ್ - Vijay Karnataka

ಮರಳು ಸಮಸ್ಯೆ: ನ.25 ಡೆಡ್‌ಲೈನ್

ವಿಕ ಸುದ್ದಿಲೋಕ 11 Nov 2014, 4:17 am
Subscribe

ಜಿಲ್ಲೆಯಾದ್ಯಂತ ಉದ್ಭವಿಸಿರುವ ಮರಳು ಅಭಾವವನ್ನು ನಿವಾರಿಸಲು ನ. 25 ರೊಳಗೆ ರಾಜ್ಯ ಸರಕಾರ ಕ್ರಮಕೈಗೊಳ್ಳದಿದ್ದಲ್ಲಿ ಬಲವಂತವಾಗಿ ಮರಳನ್ನು ತೆಗೆದು ಸ್ಟಾಕ್ ಯಾರ್ಡ್‌ನಲ್ಲಿ ಸಂಗ್ರಹಿಸಲು ವಿವಿಧ ಪಕ್ಷ ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ನಿರ್ಧರಿಸಲಾಯಿತು.

 25
ಮರಳು ಸಮಸ್ಯೆ: ನ.25 ಡೆಡ್‌ಲೈನ್
ನಾನಾ ಸಂಘ, ಸಂಸ್ಥೆ, ಜನಪ್ರತಿನಿಧಿಗಳ ಸಭೆಯಲ್ಲಿ ನಿರ್ಧಾರ

ಮಡಿಕೇರಿ: ಜಿಲ್ಲೆಯಾದ್ಯಂತ ಉದ್ಭವಿಸಿರುವ ಮರಳು ಅಭಾವವನ್ನು ನಿವಾರಿಸಲು ನ. 25 ರೊಳಗೆ ರಾಜ್ಯ ಸರಕಾರ ಕ್ರಮಕೈಗೊಳ್ಳದಿದ್ದಲ್ಲಿ ಬಲವಂತವಾಗಿ ಮರಳನ್ನು ತೆಗೆದು ಸ್ಟಾಕ್ ಯಾರ್ಡ್‌ನಲ್ಲಿ ಸಂಗ್ರಹಿಸಲು ವಿವಿಧ ಪಕ್ಷ ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ನಿರ್ಧರಿಸಲಾಯಿತು.

ನಗರದ ಕಾಫಿ ಕಪಾ ಸಭಾಂಗಣದಲ್ಲಿ ಶಾಸಕ ಕೆ.ಜಿ.ಬೋಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಪಕ್ಷಗಳ ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಮರಳು ಅಭಾವಕ್ಕೆ ಕಾರಣರಾಗಿರುವ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧೋರಣೆಯ ವಿರುದ್ಧ ಆಕ್ರೋಶದ ಧ್ವನಿ ಕೇಳಿ ಬಂದಿತು.

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಜಿಲ್ಲೆಯಲ್ಲಿ ಜೆಲ್ಲಿಕಲ್ಲು ಮತ್ತು ಮರಳಿನ ಸಮಸ್ಯೆ ಉದ್ಭವಿಸಿದ್ದು, ಸರಕಾರಿ ಒಡೆತನದ ಮತ್ತು ಖಾಸಗಿ ಕಟ್ಟಡಗಳ ನಿರ್ಮಾಣಕ್ಕೆ ಅಡ್ಡಿಯಾಗುತ್ತಿದೆ. ಜಿಲ್ಲಾಡಳಿತ ಜನಪರ ಧೋರಣೆ ತಳೆಯದೆ ತೊಂದರೆಕೊಡುವ ಕಾಯಕದಲ್ಲಿ ನಿರತವಾಗಿದೆ. ಇದೇ ಧೋರಣೆ ಮುಂದುವರಿದಲ್ಲಿ ನಿಗದಿತ ಶುಲ್ಕ ಪಾವತಿಸಿ ಈಗಾಗಲೇ ಗುರುತಿಸಲಾಗಿರುವ ಬ್ಲಾಕ್‌ಗಳಲ್ಲಿ ಮರಳು ತೆಗೆದು ಸಂಗ್ರಹಿಸಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುಜಾಕುಶಾಲಪ್ಪ ಮಾತನಾಡಿ, ಮರಳು ಸಮಸ್ಯೆಯನ್ನು ನಿವಾರಿಸಲು ಸರಕಾರಕ್ಕೆ ಗಡುವು ನೀಡಿ, ಅದರೊಳಗೆ ಪರಿಹಾರ ದೊರೆಯದಿದ್ದಲ್ಲಿ ಜನಪ್ರತಿನಿಧಿಗಳ ಸಹಕಾರದೊಂದಿಗೆ ಮರಳು ತೆಗೆದು ಬೇಡಿಕೆಗೆ ಅನುಗುಣವಾಗಿ ಪೂರೈಸಬೇಕು ಎಂದು ಹೇಳಿದರು. ಬೆಳೆಗಾರರ ಸಂಸ್ಥೆಯ ಅಧ್ಯಕ್ಷ ಶಂಕರು ನಾಚಪ್ಪ ಮಾತನಾಡಿ, ಜಿಲ್ಲಾಡಳಿತದ ಧೋರಣೆಯಿಂದಾಗಿ ಮರಳಿನ ಸಮಸ್ಯೆ ಉದ್ಭವವಾಗಿದೆ. ಇದರಿಂದಾಗಿ ಕಟ್ಟಡದ ನಿರ್ಮಾಣಕ್ಕೆ ತೊಡಕುಂಟಾಗಿದ್ದು, ತಕ್ಷಣವೇ ಸಮಸ್ಯೆಗೆ ಪರಿಹಾರ ದೊರೆಯದಿದ್ದಲ್ಲಿ ಮರಳು ಕಾನೂನಿಗೆ ವಿರುದ್ಧವಾಗಿ ವರ್ತಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ.ವಿಜಯ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಗಣಿಗಾರಿಕೆಯ ಪರವಾನಗಿಯನ್ನು ನವೀಕರಿಸುತ್ತಿಲ್ಲ. ಇದರಿಂದಾಗಿ ಜೆಲ್ಲಿ ಕಲ್ಲು ಮತ್ತು ಮರಳಿನ ಸಮಸ್ಯೆ ಉದ್ಭವವಾಗಿದ್ದು ಅದರ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು ಎಂದು ಹೇಳಿದರು.

ಲಾರಿ ಮಾಲೀಕರ ಸಂಘದ ಪ್ರತಿನಿಧಿ ಪಿ.ಟಿ.ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಮರಳು ತೆಗೆಯಲು ಗುರುತಿಸಲಾಗಿರುವ 9 ಬ್ಲಾಕ್‌ಗಳಿಗೆ ಪರಿಸರ ಮಂಡಳಿ ಇದುವರೆಗೆ ಅನುಮತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿ ಅನುಮತಿ ಪಡೆಯುವುದು ಸೂಕ್ತ ಎಂದು ಸಲಹೆಯಿತ್ತರು.

ವಿರಾಜಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷ ಕೊಳೇರ ದಯಾ ಚಂಗಪ್ಪ, ಮಾಜಿ ಅಧ್ಯಕ್ಷ ಅರುಣ್ ಭೀಮಯ್ಯ, ಸೂರಜ್ ತಮ್ಮಯ್ಯ, ಕೊಡ್ಲಿಪೇಟೆಯ ಭಗವಾನ್, ಮಾಣೀರ ವಿಜಯ್ ನಂಜಪ್ಪ ಮಾತನಾಡಿ, ನಮ್ಮ ಸಂಪತ್ತನ್ನು ನಾವು ಬಳಸಿಕೊಳ್ಳಲು ಮುಂದಾದ ಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದರು.

ಸಿ.ಪಿ.ಐ.(ಎಂ)ನ ಡಾ.ದುರ್ಗಾ ಪ್ರಸಾದ್ ಮಾತನಾಡಿ, ಸರಕಾರದ ಧೋರಣೆಯ ವಿರುದ್ಧ ಕಾನೂನು ಭಂಗ ಚಳುವಳಿ ನಡೆಸಬೇಕು ಎಂದು ಸಲಹೆಯಿತ್ತರು.

ಸೋಮವಾರಪೇಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ಎಂ.ಲೋಕೇಶ್ ಮಾತನಾಡಿ, ಮರಳು ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆಯಲಾಗಿದೆ. ಈ ಸಮಸ್ಯೆಯ ಪರಿಹಾರಕ್ಕೆ ಕಾಲಾವಕಾಶದ ಅಗತ್ಯವಿದ್ದು, ಸರಕಾರಕ್ಕೆ ಗಡುವು ನೀಡಬೇಕು. ನ 16 ರಂದು ಜಿಲ್ಲೆಗೆ ಆಗಮಿಸಲಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ ಜೆ ಜಾರ್ಜ್ ಸಮ್ಮುಖದಲ್ಲಿ ಮತ್ತೊಂದು ಸಭೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಜಿ.ಪಂ.ಅಧ್ಯಕ್ಷೆ ಶರೀನ್ ಸುಬ್ಬಯ್ಯ, ಉಪಾಧ್ಯಕ್ಷೆ ಬೀನಾ ಬೊಳ್ಳಮ್ಮ, ಕೊಡಗು ಕಾಫಿ ಬೆಳೆಗಾರ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ, ತಲಕಾವೇರಿ ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ , ವಿವಿಧ ಪಕ್ಷಗಳ ಸಂಘ ಸಂಸ್ಥೆಯ ಪ್ರಮುಖರಾದ ನಾಪಂಡ ರವಿ ಕಾಳಪ್ಪ, ಪಟ್ರಪಂಡ ರಘುನಾಣಯ್ಯ, ಬಿ.ಎಂ.ರಾಜು, ಎನ್.ಎ.ರವಿ ಬಸಪ್ಪ, ಎನ್.ಯು.ನಾಚಪ್ಪ, ಬಿಜೆಪಿ ಜಿಲ್ಲಾ ವಕ್ತಾರ ಸುಬ್ರಹ್ಮಣ್ಯ ಉಪಾಧ್ಯಾಯ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ