ಆ್ಯಪ್ನಗರ

ಕೊಡಗಿಗೆ ಟಿಪ್ಪು ಜಯಂತಿ ಬೇಡವೇ ಬೇಡ

ಪ್ರಜ್ಞಾವಂತ ಸ್ವಾಭಿಮಾನಿ ಮಹಿಳೆಯರಿಂದ ಪ್ರತಿಭಟನೆ, ಮನವಿ ವಿಕ ಸುದ್ದಿಲೋಕ, ಮಡಿಕೇರಿ ಟಿಪ್ಪು ಜಯಂತಿ ಆಚರಣೆಯನ್ನು ಸರಕಾರ ಹಿಂಪಡೆಯಬೇಕೆಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ...

ವಿಕ ಸುದ್ದಿಲೋಕ 3 Nov 2016, 4:00 am

ಪ್ರಜ್ಞಾವಂತ ಸ್ವಾಭಿಮಾನಿ ಮಹಿಳೆಯರಿಂದ ಪ್ರತಿಭಟನೆ, ಮನವಿ

ಮಡಿಕೇರಿ: ಟಿಪ್ಪು ಜಯಂತಿ ಆಚರಣೆಯನ್ನು ಸರಕಾರ ಹಿಂಪಡೆಯಬೇಕೆಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೊಡಗಿನ ಪ್ರಜ್ಞಾವಂತ ಸ್ವಾಭಿಮಾನಿ ಮಹಿಳೆಯರು ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಸರಕಾರದ ನಿರ್ಣಯದ ವಿರುದ್ಧ ಘೋಷಣೆ ಕೂಗಿ ಟಿಪ್ಪು ಜಯಂತಿ ಆಚರಣೆಯನ್ನು ಕೈ ಬಿಡಬೇಕೆಂದು ಒತ್ತಾಯಿಸಿದರು.

ಕಳೆದ ಬಾರಿ ಟಿಪ್ಪು ಜಯಂತಿ ಆಚರಣೆ ಮಾಡಿ ದುರ್ಘಟನೆ ನಡೆದಿದೆ. ಆದರೆ, ಈ ಬಾರಿಯೂ ಟಿಪ್ಪು ಜಯಂತಿ ಆಚರಿಸುತ್ತೇವೆ ಎಂಬ ನಿರ್ಧಾರವನ್ನು ಸರಕಾರ ಪ್ರಕಟಿಸಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಮಾಜಿ ಸಂಸದೆ ತೇಜಸ್ವಿನಿ ರಮೇಶ್‌, ಪ್ರಜಾಪ್ರಭುತ್ವದಲ್ಲಿ ಜನತೆಯ ಧ್ವನಿಗೆ, ಭಾವನೆಗಳಿಗೆ ಬೆಲೆ ಕೊಡುವಂತಹ ಪರಂಪರೆ ಇರಬೇಕು. ಆದರೆ, ಕಳೆದ ಎರಡು ವರ್ಷಗಳಿಂದ ಟಿಪ್ಪುವಿನ ಜಯಂತಿ ಆಚರಣೆ ಮಾಡಿ ಆಶಾಂತಿ ವಾತಾವರಣವನ್ನುಂಟು ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶತಮಾನಗಳಿಂದ ಅನೇಕ ಧರ್ಮ, ಜಾತಿ, ಸಮೂಹಗಳು ಪ್ರೀತಿಯಿಂದ ಬದುಕುತ್ತಿದ್ದ ವಾತಾವರಣವನ್ನು ಕದಡಲು ನೇರ ಕಾರಣ ಸರಕಾರದ ಮೂರ್ಖತನದ ನಿರ್ಧಾರ. ಕಳೆದ ವರ್ಷ ಕಹಿ ಘಟನೆ ನಡೆದರೂ ಹಲವರ ಒತಾಯಕ್ಕೂ ಮಣಿಯದೇ ಈ ಬಾರಿ ಟಿಪ್ಪು ಜಯಂತಿ ಆಚರಿಸುತ್ತೇವೆ ಎಂಬ ಹಠಮಾರಿತನಕ್ಕೆ ಸರಕಾರ ಬಿದ್ದಿರುವುದು ದುರದೃಷ್ಟಕರ ಎಂದರು.

ಓಟ್‌ ಬ್ಯಾಂಕ್‌ಗಾಗಿ ಮಾತ್ರ ಸರಕಾರ ಟಿಪ್ಪು ಜಯಂತಿ ಆಚರಿಸುತ್ತಿದೆ. ಇಲ್ಲದಿದ್ದರೆ ಶತಮಾನಗಳಿಂದ ಆಚರಣೆ ಮಾಡದಿದ್ದ ಜಯಂತಿಯನ್ನು ದಿಢೀರನೆ ಕಳೆದ ವರ್ಷದಿಂದ ಆಚರಿಸುವಂತದ್ದು ಏಕೆ ಎಂದು ಪ್ರಶ್ನಿಸಿದರು.

ಈ ಭೂಮಿಯಲ್ಲಿ ಎಂದಿಗೂ ಧರ್ಮವೇ ಗೆಲ್ಲುವಂತದ್ದು. ಟಿಪ್ಪು ಇಂದು ಯಾರಿಗೆ ಪ್ರೇರಣೆಯಾಗಿದ್ದಾನೆ. ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗುವಂತಹ ಮಕ್ಕಳು, ಯುವಕರು ಇಂದು ಟಿಪ್ಪು ಎನ್ನುವ ಹೆಸರಿನಿಂದ ಪ್ರಚೋದನೆ ಪಡೆಯುತ್ತಿದ್ದಾರೆ. ಅಲ್ಪಸಂಖ್ಯಾತ ಮಕ್ಕಳ ಕೈಗೆ ಪುಸ್ತಕ ನೀಡಿ, ಅದರ ಬದಲಾಗಿ ನಿಮ್ಮ ಓಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಅವರ ಕೈಗೆ ಶಸ್ತ್ರಾಸ್ರ ನೀಡುವ ಅವಕಾಶವನ್ನು ಮಾಡಬೇಡಿ ಎಂದು ಮನವಿ ಮಾಡಿದರು.

ಕೊಡಗಿನ ಪ್ರಜ್ಞಾವಂತ ಸ್ವಾಭಿಮಾನಿ ಮಹಿಳೆಯರ ಮುಖಂಡರಾದ ಕಾಂತಿ ಸತೀಶ್‌ ಮಾತನಾಡಿ, ರಾಜ್ಯ ಸರಕಾರ ಅನಿರೀಕ್ಷಿತವಾಗಿ ಟಿಪ್ಪು ಜಯಂತಿ ಆಚರಿಸುವುದರ ಮೂಲಕ ಶಾಂತಿಯ ನಾಡಲ್ಲಿ ಅಶಾಂತಿ ಉಂಟು ಮಾಡಿದೆ ಎಂದು ದೂರಿದರು. ಸಮಯ ಇನ್ನೂ ಮೀರಿಲ್ಲ. ಇನ್ನಾದರೂ ಸರಕಾರ ಎಚ್ಚೆತ್ತುಕೊಂಡು ಟಿಪ್ಪು ಜಯಂತಿ ಆಚರಣೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಅಪರ ಜಿಲ್ಲಾಧಿಕಾರಿ ಎಂ.ಸತೀಶ್‌ ಕುಮಾರ್‌ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು. ಪ್ರಮುಖರಾದ ಅನಿತಾ, ಗೀತಾ ಪವಿತ್ರ, ಮೋಂತಿ ಗಣೇಶ್‌, ಶೋಭಾ ಮೋಹನ್‌, ಕವಿತಾ ಪ್ರಭಾಕರ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ