Please enable javascript.ಜಿಲ್ಲೆdistrict,ಜಿಲ್ಲೆಯಲ್ಲಿ ರೈಲ್ವೆ ಮಾರ್ಗಕ್ಕೆ ಅವಕಾಶ ಇಲ್ಲ - railway line not allowed in ditrict - Vijay Karnataka

ಜಿಲ್ಲೆಯಲ್ಲಿ ರೈಲ್ವೆ ಮಾರ್ಗಕ್ಕೆ ಅವಕಾಶ ಇಲ್ಲ

Vijaya Karnataka 19 Jun 2018, 5:00 am
Subscribe

ಜಿಲ್ಲೆಯ ಮೂಲಕ ಮೈಸೂರು-ತಲಚೇರಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.

railway line not allowed in ditrict
ಜಿಲ್ಲೆಯಲ್ಲಿ ರೈಲ್ವೆ ಮಾರ್ಗಕ್ಕೆ ಅವಕಾಶ ಇಲ್ಲ
ಮಡಿಕೇರಿ: ಜಿಲ್ಲೆಯ ಮೂಲಕ ಮೈಸೂರು-ತಲಚೇರಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆ ಹಾನಿಯಿಂದ ಆಗಿರುವ ನಷ್ಟ ಹಾಗೂ ಕೈಗೊಂಡಿರುವ ಕ್ರಮದ ಬಗ್ಗೆ ನಡೆಸಿದ ಪರಿಶೀಲನಾ ಸಭೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಅವರು ರೈಲ್ವೆ ಮಾರ್ಗದ ಕುರಿತು ಗಮನ ಸೆಳೆದರು.

''ಕೊಡಗಿನಲ್ಲಿ ರೈಲ್ವೆ ಮಾರ್ಗ ನಿರ್ಮಾಣವನ್ನು ನಾವು ಒಪ್ಪುವುದಿಲ್ಲ. ಹಿಂದಿನ ಸರಕಾರದ ಪರವಾಗಿ ನೀವೇ ವಿಧಾನಸಭೆಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದೀರಿ. ಆದರೆ, ಇದೀಗ ಕೇರಳ ಸರಕಾರದ ಪರವಾಗಿ ಕೆಲವರು ದಕ್ಷಿಣ ಕೊಡಗಿನಲ್ಲಿ ಸರ್ವೆ ಮಾಡಿದ್ದಾರೆ. ಇದನ್ನು ಯಾರ ಗಮನಕ್ಕೂ ತರಲಿಲ್ಲ. ಅವರನ್ನು ತಡೆದು ಓಡಿಸುವಂತೆ ಜನರಿಗೆ ತಿಳಿಸಿದ್ದೇನೆ. ಈ ಕುರಿತು ನೀವು ಮತ್ತೊಮ್ಮೆ ಸ್ಪಷ್ಟಪಡಿಸಬೇಕು,'' ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ದೇಶಪಾಂಡೆ, ''ಮೈಸೂರು-ತಲಚೇರಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ನಮ್ಮ ವಿರೋಧವಿದೆ. ಕೇರಳಕ್ಕೆ ಎಷ್ಟೇ ಲಾಭ ಇದ್ದರೂ ಇಲ್ಲಿನ ಪರಿಸರಕ್ಕೆ ಹಾನಿ ಮಾಡುವ ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳುವುದಿಲ್ಲ. ಅದೇ ರೀತಿ ಈ ಯೋಜನೆಗೆ ನಮ್ಮ ವಿರೋಧವಿದೆ. ಇಲ್ಲಿನ ಜನರ ವಿರೋಧವನ್ನು ಪರಿಗಣಿಸಿ ಸರಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ಕಳುಹಿಸಿ. ನಾನು ಮುಖ್ಯಮಂತ್ರಿಯೊಂದಿಗೆ ಮಾತನಾಡುತ್ತೇನೆ,'' ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರಿಗೆ ಸೂಚಿಸಿದರು.

''ಇತ್ತೀಚೆಗೆ ದಕ್ಷಿಣ ಕೊಡಗಿನಲ್ಲಿ ಸರ್ವೆ ನಡೆಸಿರುವುದು ಸ್ವತಃ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಅಕ್ರಮವಾಗಿ ಪ್ರವೇಶ ಮಾಡಿ ಸರ್ವೆ ಮಾಡಲು ಅವಕಾಶ ನೀಡಬೇಡಿ. ಇಂತಹ ಕಾರ್ಯ ನಡೆಸುವ ಮುನ್ನ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರವಾನಗಿ ಪಡೆಯಬೇಕು. ಅದರ ಉದ್ದೇಶ ತಿಳಿಸಬೇಕು,'' ಎಂದರು.

ಎನ್‌ಡಿಆರ್‌ಎಫ್‌, ಕೇರಳ ನೆರವಿಗೆ ಪ್ರಶಂಸೆ: ಜಿಲ್ಲೆಯಲ್ಲಿ ಮಳೆಯಿಂದಾಗಿ ಮಾಕುಟ್ಟ ರಸ್ತೆಯ ಸುಮಾರು 60 ಕಡೆ ಭೂಕುಸಿತವಾಗಿ, ಮರ ಉರುಳಿದ ಸಂದರ್ಭ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಹಾಗೂ ಕೇರಳದ ರಾಜ್ಯದ ಅಧಿಕಾರಿಗಳು ತಕ್ಷಣ ಸ್ಪಂದಿಸಿ ನೆರವು ನೀಡಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸಚಿವರ ದೇಶಪಾಂಡೆ ತಿಳಿಸಿದರು.

ತುರ್ತು ಸಂದರ್ಭ ಸ್ಪಂದಿಸುವುದು ಮುಖ್ಯ. ಕೇರಳದಿಂದ ಕ್ರೈನ್‌, ಜೆಸಿಬ್‌ಗಳನ್ನು ತಂದು ರಸ್ತೆಯಲ್ಲಿನ ಮಣ್ಣು, ಮರ ತೆರವು ಮಾಡಲು ನೆರವು ನೀಡಲಾಗಿದೆ. ಮಾನವೀಯತೆ ದೃಷ್ಟಿಯಿಂದ ಈ ರೀತಿ ಸ್ಪಂದಿಸಿದ್ದಾರೆ ಎಂದು ಅವರು ಹೇಳಿದರು.


ಬಂಜರು ಭೂಮಿ ಸಮೀಕ್ಷೆಗೆ ಸೂಚನೆ

ಜಿಲ್ಲೆಗೆ ತಾವು ಭೇಟಿ ನೀಡಿದ ಸಂದರ್ಭ ಸಾಕಷ್ಟು ಭೂಮಿಗಳನ್ನು ಕೃಷಿಗೆ ಬಳಸದೆ ಬಂಜರು ಬಿಟ್ಟಿರುವುದು ಗಮನಕ್ಕೆ ಬಂದಿದ್ದು, ಅವುಗಳ ಕುರಿತು ವರದಿ ನೀಡುವಂತೆ ಸಚಿವ ದೇಶಪಾಂಡೆ ಅಧಿಕಾರಿಗಳಿಗೆ ನಿದೇರ್ಶನ ನೀಡಿದ್ದಾರೆ.

ಈ ರೀತಿ ಕೃಷಿ ಭೂಮಿಯನ್ನು ಪಾಳುಬಿಡುವುದು ರಾಷ್ಟ್ರೀಯ ನಷ್ಟವಾಗಿದೆ. ಜಿಲ್ಲೆಯಲ್ಲಿ ಎಷ್ಟು ಇಂತಹ ಭೂಮಿ ಇದೆ, ಏಕೆ ಕೃಷಿ ಮಾಡುತ್ತಿಲ್ಲ ಎನ್ನುವುದರ ಬಗ್ಗೆ ತನಗೆ ಸಮಗ್ರ ವರದಿ ನೀಡಬೇಕು. ಸಂಬಂಧಪಟ್ಟ ಇಲಾಖೆಯಿಂದ ಕಾರ್ಯಕ್ರಮ ಹಮ್ಮಿಕೊಂಡು ಸ್ಥಳೀಯರ ಮನ ಪರಿವರ್ತಿಸಿ ಕೃಷಿಯಲ್ಲಿ ತೊಡಗುವಂತೆ ಪ್ರೇರಿಪಿಸಬೇಕು ಎಂದು ಹೇಳಿದರು.

ಈ ಸಂದರ್ಭ ಅಧಿಕಾರಿ ಪ್ರತಿಕ್ರಿಯಿಸಿ, ಭತ್ತ ಬೆಳೆಯಿಂದ ಜಿಲ್ಲೆಯಲ್ಲಿ ರೈತರು ನಷ್ಟ ಅನುಭವಿಸುತ್ತಿರುವುದರಿಂದ ಭೂಮಿಯನ್ನು ಬಂಜರು ಬಿಡುತ್ತಿದ್ದಾರೆ. ಕೇರಳ ಮಾದರಿಯಿಂದ ಭತ್ತ ಕೃಷಿಯಲ್ಲಿ ತೊಡಗುವ ರೈತರಿಗೆ ಎಕರೆಗೆ 10 ರಿಂದ 15 ಸಾವಿರ ರೂ. ಪ್ರೋತ್ಸಾಹ ಧನ ನೀಡುವಂತೆ ಕೋರಿಕೆ ಬಂದಿದೆ ಎಂದು ಹೇಳಿದರು.

ಈ ಕುರಿತು ವರದಿ ಕಳುಹಿಸುವಂತೆ, ಸರಕಾರದ ಮಟ್ಟದಲ್ಲಿ ಪರಿಶೀಲನೆ ನಡೆಸುವುದಾಗಿ ಸಚಿವರ ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ