ಆ್ಯಪ್ನಗರ

ಪಾಲೇಮಾಡು ಸಮಸ್ಯೆ ಬಗೆಹರಿಸಲು ಆಗ್ರಹ

ವಿಕ ಸುದ್ದಿಲೋಕ ಮಡಿಕೇರಿ ಪಾಲೇಮಾಡುವಿನ ಬಡ ಜನರ ಸಮಸ್ಯೆಗಳನ್ನು ಸಂಬಂಧಿಸಿದವರು ಶೀಘ್ರ ಪರಿಹರಿಸಿಕೊಡಬೇಕೆಂದು ಅಂಬೇಡ್ಕರ್‌ ಯುವಕ ಸಂಘ ಆಗ್ರಹಿಸಿದೆ...

ವಿಕ ಸುದ್ದಿಲೋಕ 19 Feb 2017, 8:54 pm

ಮಡಿಕೇರಿ: ಪಾಲೇಮಾಡುವಿನ ಬಡ ಜನರ ಸಮಸ್ಯೆಗಳನ್ನು ಸಂಬಂಧಿಸಿದವರು ಶೀಘ್ರ ಪರಿಹರಿಸಿಕೊಡಬೇಕೆಂದು ಅಂಬೇಡ್ಕರ್‌ ಯುವಕ ಸಂಘ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಂಬೇಡ್ಕರ್‌ ಯುವಕ ಸಂಘದ ಎಂ.ಆಶ್ವಥ್‌ ಮೌರ್ಯ, ಪಾಲೇಮಾಡುವಿನಲ್ಲಿರುವ ಹಿಂದುಳಿದ ವರ್ಗದ ಜನರು ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅವರಿಗೆ ಯಾವುದೇ ರೀತಿಯ ಮೂಲ ಸೌಲಭ್ಯಗಳನ್ನು ನೀಡಲಿಲ್ಲ. ಇಲ್ಲಿ ಎಲ್ಲರೂ ಬಡವರೇ ವಾಸವಿದ್ದು, ಅವರ ಸಂಕಷ್ಟಗಳನ್ನು ಜನಪ್ರತಿನಿಧಿಗಳು ಗಮನಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಾಲೇಮಾಡುವಿನಲ್ಲಿ ಸ್ಮಶಾನಕ್ಕಾಗಿ ಮೀಸಲಿಟ್ಟ ಜಾಗವನ್ನು ಕ್ರಿಕೆಟ್‌ ಕ್ರೀಡಾಂಗಣ ನಿರ್ಮಿಸಲು ನೀಡಿದ್ದಾರೆ. ಇದರಿಂದ ನಮ್ಮ ಭಾವನಗೆ ಧಕ್ಕೆ ಬಂದಿದೆ. ಕೂಡಲೇ ಸಂಬಂಧಿಸಿದವರು ಈ ಕುರಿತು ಗಮನ ಹರಿಸಿ ಸ್ಮಶಾನ ಜಾಗವನ್ನು ಉಳಿಸಿಕೊಡಬೇಕು. ನಾವು ಸಾಕಷ್ಟು ವರ್ಷಗಳಿಂದ ಅಲ್ಲಿ ವಾಸ ಮಾಡುತ್ತಿದ್ದು, ಪಟ್ಟೆ ನೀಡಲಾಗಿದೆ. ಆದರೆ, ಸೌಲಭ್ಯಗಳಿಂದ ವಂಚಿತವಾಗಿದ್ದೇವೆ. ಇತ್ತೀಚೆಗೆ ಜಾಗ ಮಂಜೂರಾದ ಕ್ರಿಕೆಟ್‌ ಅಸೋಸಿಯೇಶನ್‌ಗೆ ಜಿಲ್ಲಾಡಳಿತ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ ಎಂದು ಆಕ್ಷೇಪಿಸಿದರು.

ಪಾಲೇಮಾಡು ಜನರ ಪರ ಮಾತನಾಡಿದ ಬಿಎಸ್‌ಪಿ ಮುಖಂಡ ಕೆ. ಮೊಣ್ಣಪ್ಪ ಅವರ ವಿರುದ್ಧ ಕೆಲವರು ಆರೋಪ ಮಾಡಿರುವುದು ಸರಿಯಲ್ಲ. ಮೊಣ್ಣಪ್ಪ ಅವರನ್ನು ಗಡಿಪಾರು ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಯಾರನ್ನು ಗಡಿಪಾರು ಮಾಡಬೇಕು ಎನ್ನುವುದನ್ನು ಜನರು ತೀರ್ಮಾನಿಸಲಿ ಎಂದು ಹೇಳಿದರು.

ಕ್ರಿಕೆಟ್‌ ಕ್ರೀಡಾಂಗಣ ಬರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ನಮ್ಮ ಸ್ಮಶಾನದ ಜಾಗವೇ ಬೇಕು ಎನ್ನುವುದು ಸರಿಯಲ್ಲ. ಈ ವಿಭಾಗದಲ್ಲಿ ಸಾಕಷ್ಟು ಮಂದಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸಿ ಕ್ರೀಡಾಂಗಣಕ್ಕೆ ನೀಡಲಿ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಕೆ.ಎ. ರಫಿಕ್‌, ಕೆ.ಎಂ. ಸಿದ್ದಿಕ್‌, ಯು.ಬಿ. ರಶೀದ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ