Please enable javascript.ಮಳೆಗೆ ಬೆದರದ ಹುಣಸೆಹಣ್ಣು - ಮಳೆಗೆ ಬೆದರದ ಹುಣಸೆಹಣ್ಣು - Vijay Karnataka

ಮಳೆಗೆ ಬೆದರದ ಹುಣಸೆಹಣ್ಣು

Vijaya Karnataka Web 10 Mar 2014, 4:00 am
Subscribe

ಅಕಾಲಿಕ ಮಳೆ ಅಡ್ಡಿಯ ನಡುವೆಯೂ ಗ್ರಾಮೀಣ ಭಾಗದಲ್ಲಿ ಹುಣಸೆಹಣ್ಣು ಬಿಡಿಸುವ ಪ್ರಕ್ರಿಯೆ ಜೋರಾಗಿದೆ.ಹೊಲಗಳ ಬದುಗಳಲ್ಲಿ ನೈಸರ್ಗಿಕವಾಗಿಯೇ ಬೆಳೆಯುವ ಹುಣಸೆ ಗಿಡಗಳಲ್ಲಿ ಕಾಯಿ ಬಿಟ್ಟಾಗ ಭಜಂತ್ರಿ ಸಮುದಾಯದವರು ಗಿಡಗಳನ್ನು ಗುತ್ತಿಗೆ ಪಡೆಯುತ್ತಾರೆ. ಈ ವರ್ಷ ಹುಣಸೆ ಗಿಡಗಳಲ್ಲಿ ಹಣ್ಣು ಹುಲುಸಾಗಿ ಬಿಟ್ಟಿದೆ. ಇದೀಗ ಬಹುತೇಕ ಕಟಾವು ಮುಗಿದಿದೆ. ಗಿಡದಲ್ಲೇ ಉಳಿದ ಹಣ್ಣು ಅಕಾಲಿಕ ಮಳೆಗೆ ತುತ್ತಾಗಿ ಹಸಿಮುದ್ದೆಯಂತಾಗಿದ್ದು, ಗಿಡಗಳನ್ನು ಗುತ್ತಿಗೆ ಹಿಡಿದವರು ನಷ್ಟ ಅನುಭವಿಸುವಂತಾಗಿದೆ. ಜತೆಗೆ ಮನೆಗಳಲ್ಲಿ ಸಂಗ್ರಹಿಸಿ ಇಟ್ಟಿರುವ ಹುಣಸೆಹಣ್ಣು ಹವಾಮಾನ ವೈಪರೀತ್ಯದಿಂದಾಗಿ ಹಸಿಯಾಗಿದೆ.

ಮಳೆಗೆ ಬೆದರದ ಹುಣಸೆಹಣ್ಣು
ಕುಷ್ಟಗಿ; ಅಕಾಲಿಕ ಮಳೆ ಅಡ್ಡಿಯ ನಡುವೆಯೂ ಗ್ರಾಮೀಣ ಭಾಗದಲ್ಲಿ ಹುಣಸೆಹಣ್ಣು ಬಿಡಿಸುವ ಪ್ರಕ್ರಿಯೆ ಜೋರಾಗಿದೆ.

ಹೊಲಗಳ ಬದುಗಳಲ್ಲಿ ನೈಸರ್ಗಿಕವಾಗಿಯೇ ಬೆಳೆಯುವ ಹುಣಸೆ ಗಿಡಗಳಲ್ಲಿ ಕಾಯಿ ಬಿಟ್ಟಾಗ ಭಜಂತ್ರಿ ಸಮುದಾಯದವರು ಗಿಡಗಳನ್ನು ಗುತ್ತಿಗೆ ಪಡೆಯುತ್ತಾರೆ. ಈ ವರ್ಷ ಹುಣಸೆ ಗಿಡಗಳಲ್ಲಿ ಹಣ್ಣು ಹುಲುಸಾಗಿ ಬಿಟ್ಟಿದೆ. ಇದೀಗ ಬಹುತೇಕ ಕಟಾವು ಮುಗಿದಿದೆ. ಗಿಡದಲ್ಲೇ ಉಳಿದ ಹಣ್ಣು ಅಕಾಲಿಕ ಮಳೆಗೆ ತುತ್ತಾಗಿ ಹಸಿಮುದ್ದೆಯಂತಾಗಿದ್ದು, ಗಿಡಗಳನ್ನು ಗುತ್ತಿಗೆ ಹಿಡಿದವರು ನಷ್ಟ ಅನುಭವಿಸುವಂತಾಗಿದೆ. ಜತೆಗೆ ಮನೆಗಳಲ್ಲಿ ಸಂಗ್ರಹಿಸಿ ಇಟ್ಟಿರುವ ಹುಣಸೆಹಣ್ಣು ಹವಾಮಾನ ವೈಪರೀತ್ಯದಿಂದಾಗಿ ಹಸಿಯಾಗಿದೆ.

ಬಿಡಿಸುವ ಕಾರ್ಯ ಜೋರು: ಕಟಾವು ಮಾಡಿದ ಹಣ್ಣನ್ನು ಸಿಪ್ಪೆ ಸಹಿತ ಮನೆಗಳಲ್ಲಿ ದಾಸ್ತಾನು ಮಾಡಿಕೊಂಡಿರುವ ಭಜಂತ್ರಿ ಕುಟುಂಬದವರು ಸಿಪ್ಪೆ ಮತ್ತು ಬೀಜ ಬೇರ್ಪಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ಹಣ್ಣಿನಿಂದ ಬೀಜ ಬೇರ್ಪಡಿಸುವಾಗ ಹಳ್ಳಿಗಳ ಹತ್ತಾರು ಜನರಿಗೆ ತಾತ್ಕಾಲಿಕ ಉದ್ಯೋಗವೂ ದೊರೆಯುತ್ತಿದೆ. ಮನೆಯಲ್ಲಿನ ವಯಸ್ಸಾದ ಮಹಿಳೆಯರು, ಶಾಲೆ ಅವಧಿ ನಂತರ ಮಕ್ಕಳು ಈ ಕೆಲಸದಲ್ಲಿ ತೊಡಗುವುದು ಹೆಚ್ಚು. ಬೀಜ ಬೇರ್ಪಡಿಸಿದ ಪ್ರತಿ ಕೆಜಿ ಹಣ್ಣಿಗೆ 5ರೂ. ನೀಡಲಾಗುತ್ತಿದೆ. ಕೆಲಸದಲ್ಲಿ ಚುರುಕುತನ ತೋರಿಸುವವರು ದಿನಕ್ಕೆ 3-4ಕೆಜಿ ಹಣ್ಣು ಬೇರ್ಪಡಿಸುತ್ತಾರೆ. ಖಾಲಿ ಕೂಡುವ ಬದಲು ಎಲೆ-ಅಡಕೆ ಖರ್ಚಿಗಾದರೂ ರೊಕ್ಕ ಆಗುತ್ತದೆ ಎಂದು ಕೆಲಸಕ್ಕೆ ಬರುವವರು ಹೆಚ್ಚು.

ಬೆಲೆ: ಪ್ರಸಕ್ತ ವರ್ಷ ಹುಣಸೆಹಣ್ಣು ಗುಣಮಟ್ಟಕ್ಕೆ ಅನುಗುಣವಾಗಿ ಪ್ರತಿ ಕ್ವಿಂಟಲ್‌ಗೆ 5-6ಸಾವಿರ ರೂ.ಗೆ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದೆ. ಕುಷ್ಟಗಿ ಪಟ್ಟಣದಲ್ಲಿ ನಡೆಯುವ ವಾರದ ಸಂತೆಯಲ್ಲಿ ಹುಣಸೆಹಣ್ಣು ವಹಿವಾಟು ಆಗುತ್ತದೆ. ದೂರದ ವಿಜಾಪುರ ಮತ್ತು ಬೆಳಗಾವಿಯಿಂದ ಖರೀದಿದಾರರು ಬರುತ್ತಿದ್ದಾರೆ. ಪ್ರತಿವರ್ಷ ತಾಲೂಕಿನಿಂದ ಸಾವಿರಾರು ಕ್ವಿಂಟಲ್ ಹುಣಸೆಹಣ್ಣು ವಿಕ್ರಯವಾಗುತ್ತದೆ. ವಾಸ್ತವವಾಗಿ ಹುಣಸೆಹಣ್ಣು ವಹಿವಾಟು ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲೇ ನಡೆಯಬೇಕಿದ್ದರೂ ಕೆಲ ಪ್ರಭಾವಿಗಳ ಕೈವಾಡದಿಂದ ಇಲ್ಲಿನ ಸಂತೆ ಮೈದಾನಕ್ಕೆ ಹೊಂದಿಕೊಂಡ ಬಯಲು ಜಾಗದಲ್ಲಿ ನಡೆಯುತ್ತಿದೆ. ಕಳೆದ ವರ್ಷ ಎಪಿಎಂಸಿಯವರು ಹುಣಸೆಹಣ್ಣು ವಹಿವಾಟನ್ನು ಎಪಿಎಂಸಿ ಯಾರ್ಡ್‌ನಲ್ಲಿ ನಡೆಸಲು ಸೂಚಿಸಿದ್ದರು. ವಹಿವಾಟುದಾರರು ಮತ್ತೆ ಪ್ರತಿವರ್ಷದಂತೆ ಸಂತೆ ಮೈದಾನದಲ್ಲೇ ವಹಿವಾಟು ಆರಂಭಿಸಿದ್ದಾರೆ. ಇದರಿಂದ ಎಪಿಎಂಸಿಗೆ ಸೇರಬೇಕಾದ ಮಾರುಕಟ್ಟೆ ಶುಲ್ಕ ವಂಚನೆಯಾಗುತ್ತಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಹುಣಸೆಹಣ್ಣು ಹೆಚ್ಚಿಗೆ ಬೆಳೆದಿದೆ. ಪ್ರತಿಕೂಲ ಹವಾಮಾನ ಮತ್ತು ಅಕಾಲಿಕ ಮಳೆ ಹಣ್ಣಿನ ಗುಣಮಟ್ಟದ ಮೇಲೆ ಪರಿಣಾಮ ಬೀರಲಿದೆ. ಹಣ್ಣು ಕಪ್ಪಾಗುವ ಸಾಧ್ಯತೆಗಳು ಹೆಚ್ಚಿಗೆ ಇವೆ. ಹೋಲ್‌ಸೇಲ್ ದರ ಪ್ರತಿ ಕ್ವಿಂಟಲ್‌ಗೆ 5-6ಸಾವಿರ ರೂ. ಇದ್ದರೂ ಸಣ್ಣ ಅಂಗಡಿಗಳ ಮೂಲಕ ಗ್ರಾಹಕರಿಗೆ ಪ್ರತಿ ಕೆಜಿ ಗೆ 75-80ರೂ.ಗೆ ಮಾರಾಟ ಮಾಡಲಾಗುತ್ತಿದೆ.

---

ಕೋಟ್

ಹುಣಸೆ ಹಣ್ಣು ಈ ವರ್ಷ ಭಾಳ ಬಿಟ್ಟೈತಿ. ಒಂದು ವಾರದಿಂದ ಮಳೆ ಒಂದಾಸವನೆ ಬರುತ್ತಿದ್ದು, ಬೀಜ ಬೇರ್ಪಡಿಸುವ ಕೆಲಸಕ್ಕೆ ಅಡಚಣೆಯಾಗುತ್ತಿದೆ. ಗಿಡದಾಗ ಇರುವ ಹಣ್ಣು ಕಪ್ಪಾಗುತ್ತದೆ. ಹಣ್ಣು ಕಪ್ಪಾದರೆ ದರ ಕಡಿಮೆಯಾಗಲಿದೆ.

-ಮಾರೆಪ್ಪ ಭಜಂತ್ರಿ, ಶಾಖಾಪುರ, ಕುಷ್ಟಗಿ ತಾಲೂಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ