Please enable javascript.ರೈಸ್‌ಮಿಲ್‌ಗಳಿಂದ ಒಂದೂವರೆ ಕೋಟಿ ರೂ. ತೆರಿಗೆ ಬಾಕಿ - ರೈಸ್‌ಮಿಲ್‌ಗಳಿಂದ ಒಂದೂವರೆ ಕೋಟಿ ರೂ. ತೆರಿಗೆ ಬಾಕಿ - Vijay Karnataka

ರೈಸ್‌ಮಿಲ್‌ಗಳಿಂದ ಒಂದೂವರೆ ಕೋಟಿ ರೂ. ತೆರಿಗೆ ಬಾಕಿ

Vijaya Karnataka Web 18 Feb 2015, 3:34 pm
Subscribe

ಭತ್ತದ ಕಣಜ ಖ್ಯಾತಿಗೆ ಕಳಸವಿಟ್ಟಂತಿರುವ ಸ್ಥಳೀಯ 16 ರೈಸ್‌ಮಿಲ್ ಹಾಗೂ ಇಂಡಸ್ಟ್ರೀಸ್‌ಗಳು, ಕಳೆದ ಹತ್ತು ವರ್ಷಗಳಲ್ಲಿ ಬರೋಬ್ಬರಿ ಒಂದೂವರೆ ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದು, ನಗರಸಭೆ ಆಡಳಿತದ ಆದಾಯಕ್ಕೆ ಕೊಕ್ಕೆ ಬಿದ್ದಿದೆ.

ರೈಸ್‌ಮಿಲ್‌ಗಳಿಂದ ಒಂದೂವರೆ ಕೋಟಿ ರೂ. ತೆರಿಗೆ ಬಾಕಿ
ರವಿ ಪಿ.ನಾಯಕ, ಗಂಗಾವತಿ

ಭತ್ತದ ಕಣಜ ಖ್ಯಾತಿಗೆ ಕಳಸವಿಟ್ಟಂತಿರುವ ಸ್ಥಳೀಯ 16 ರೈಸ್‌ಮಿಲ್ ಹಾಗೂ ಇಂಡಸ್ಟ್ರೀಸ್‌ಗಳು, ಕಳೆದ ಹತ್ತು ವರ್ಷಗಳಲ್ಲಿ ಬರೋಬ್ಬರಿ ಒಂದೂವರೆ ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದು, ನಗರಸಭೆ ಆಡಳಿತದ ಆದಾಯಕ್ಕೆ ಕೊಕ್ಕೆ ಬಿದ್ದಿದೆ.

ಮನೆ, ಸಣ್ಣಪುಟ್ಟ ವ್ಯಾಪಾರ ಮಳಿಗೆ, ಗೂಡಂಗಡಿ, ತಳ್ಳುಬಂಡಿಗಳಿಂದ ತೆರಿಗೆ ಸಂಗ್ರಹದಲ್ಲಿ ಇನ್ನಿಲ್ಲದ ಉತ್ಸಾಹ ತೋರುವ ನಗರಸಭೆ ಸಿಬ್ಬಂದಿ, ರೈಸ್‌ಮಿಲ್, ಇಂಡಸ್ಟ್ರೀಸ್ ಮಾಲೀಕರ ಗೊಡವೆಗೆ ಹೋಗದೇ ಇರುವುದು ಅನುಮಾನ ಮೂಡಿಸಿದೆ. 16 ರೈಸ್‌ಮಿಲ್ ಮಾಲೀಕರಿಗೆ ಫೆ.6ರಂದು ನಗರಸಭೆ ಆಡಳಿತ ನೋಟಿಸ್ ಜಾರಿಮಾಡಿದೆ. ಬಾಕಿ ತೆರಿಗೆ ಪಾವತಿಸಲು 15 ದಿನಗಳ ಗಡುವು ನೀಡಿದೆ. ಪ್ರತಿ ಮೂರು ವರ್ಷಕ್ಕೂಮ್ಮೆ ನಗರಸಭೆ, ತೆರಿಗೆ ಪ್ರಮಾಣದಲ್ಲಿ ಶೇ.15ರಿಂದ 20ರವರೆಗೆ ಹೆಚ್ಚಳಮಾಡುತ್ತದೆ. ಆದರೆ ನಗರಸಭೆ ಇತ್ತೀಚೆಗೆ ಹೆಚ್ಚಿಸಿದ ತೆರಿಗೆ ರೈಸ್‌ಮಿಲ್ ಮಾಲೀಕರನ್ನು ಚಿಂತೆಗೀಡುಮಾಡಿದೆ.

ಸಂಕಷ್ಟದಲ್ಲಿ ನಗರಸಭೆ: ತೆರಿಗೆಯ ಸಿಂಹಪಾಲು ಭರಿಸಬೇಕಾದ ರೈಸ್‌ಮಿಲ್‌ಗಳೇ ತೆರಿಗೆ ಪಾವತಿಸುವಲ್ಲಿ ನಿರ್ಲಕ್ಷ್ಯವಹಿಸಿದ್ದರಿಂದ ನಗರಸಭೆ ತನ್ನ ಖರ್ಚು, ವೆಚ್ಚ ಸರಿದೂಗಿಸಲು ಹೆಣಗಾಡುವಂತಾಗಿದೆ. ಸಂಗ್ರಹಿಸ ಲಾಗಿರುವ ತೆರಿಗೆ ಹಣವನ್ನು ಪೌರ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಕಾಯಂ ಸಿಬ್ಬಂದಿಯ ವೇತನ, ತ್ಯಾಜ್ಯ ವಿಲೇವಾರಿ ವಾಹನಗಳ ಇಂಧನಕ್ಕೂ ಬಳಸಬೇಕಿದೆ. ಮಾಸಿಕ 15-20 ಲಕ್ಷ ರೂ.ಗಳನ್ನು ಈ ಕಾರಣಗಳಿಗೆಂದೇ ವ್ಯಯಿಸಬೇಕಿದೆ. ಸದ್ಯ ತೆರಿಗೆ ಸಂಗ್ರಹ ಪ್ರಮಾಣ ಶೇ.40 ರಷ್ಟಾಗಿದ್ದು, ನಗರಸಭೆಯ ಗುತ್ತಿಗೆ, ದಿನಗೂಲಿ ಕಾರ್ಮಿಕರ ವೇತನ ಪಾವತಿಗೂ ಹಣ ಹೊಂದಿಸುವುದು ಕಷ್ಟ ಎನಿಸಿದೆ. ನಾಲ್ಕಾರು ತಿಂಗಳುಗಟ್ಟಲೇ ವೇತನ ಪಡೆಯಲಾಗದ ಕಾರ್ಮಿಕರು ಮೇಲಿಂದ ಮೇಲೆ ಪ್ರತಿಭಟನೆ ನಡೆಸುವುದು ಸಾಮಾನ್ಯವಾಗಿದೆ.

ಸಿಬ್ಬಂದಿ, ಮಾಲೀಕರ ಒಪ್ಪಂದ?: ರೈಸ್‌ಮಿಲ್ ಮಾಲೀಕರೊಂದಿಗೆ ನಗರಸಭೆಯ ತೆರಿಗೆ ಸಂಗ್ರಹ ಸಿಬ್ಬಂದಿ, ಪರೋಕ್ಷವಾಗಿ ಒಪ್ಪಂದ ಮಾಡಿಕೊಂಡಿದ್ದೇ ನಿಗದಿತ ತೆರಿಗೆ ಸಂಗ್ರಹಕ್ಕೆ ಹಿನ್ನಡೆ ಉಂಟಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಪ್ರತಿ ರೈಸ್‌ಮಿಲ್, ವಾರ್ಷಿಕ 40-50 ಸಾವಿರ ರೂ.ಗಳನ್ನು ನಗರಸಭೆಗೆ ತೆರಿಗೆ ರೂಪದಲ್ಲಿ ಪಾವತಿಸಬೇಕು. 2005-06 ರಿಂದ 2014-15ರವರೆಗೆ ನಗರಸಭೆ ವ್ಯಾಪ್ತಿಯ ಪ್ರತಿ ರೈಸ್‌ಮಿಲ್ ಹಾಗೂ ಇಂಡಸ್ಟ್ರೀಸ್‌ನಿಂದ 5-10 ಲಕ್ಷ ರೂ.ವರೆಗೆ ತೆರಿಗೆ ಬಾಕಿ ಉಳಿದಿದೆ. ರೈಸ್‌ಮಿಲ್‌ಗಳ ಜತೆಗೆ ಕೆಲ ಬಾರ್ ಆ್ಯಂಡ್ ರೆಸ್ಟೋರೆಂಟ್, ಚಿತ್ರಮಂದಿರ ಹಾಗೂ ವಾಣಿಜ್ಯ ಮಳಿಗೆಗಳು ತೆರಿಗೆ ಬಾಕಿ ಉಳಿಸಿಕೊಂಡಿವೆ ಎಂದು ನಗರಸಭೆ ಮೂಲಗಳು ತಿಳಿಸಿವೆ. ಆನ್‌ಲೈನ್ ಮೂಲಕ ತೆರಿಗೆ ಪಾವತಿ ಸೇವೆ ಆರಂಭಿಸಲು ನಗರಸಭೆ ಉತ್ಸುಕವಾಗಿದ್ದು, ಆಗಲಾದರೂ ನಿರೀಕ್ಷಿತ ತೆರಿಗೆ ಸಂದಾಯವಾಗುವುದೇ ಕಾದುನೋಡಬೇಕಿದೆ. --- ತೆರಿಗೆ ಬಾಕಿ ಉಳಿಸಿಕೊಂಡಿರುವ ರೈಸ್‌ಮಿಲ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಚಿತ್ರಮಂದಿರಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಈಗಾಗಲೇ ತೆರಿಗೆ ಬಾಕಿದಾರ ಮಾಲೀಕರಿಗೆ ನೋಟಿಸ್ ಕಳುಹಿಸಲಾಗಿದೆ. ನಿಗದಿತ ಸಮಯಕ್ಕೆ ಬಾಕಿ ತೆರಿಗೆ ಪಾವತಿಸದಿದ್ದರೆ ಜೆಸ್ಕಾಂಗೆ ಪತ್ರ ಬರೆದು, ರೈಸ್‌ಮಿಲ್‌ಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಕ್ಕೆ ಕೋರಲಾಗುವುದು.

-ಸಿ.ಆರ್.ರಂಗಸ್ವಾಮಿ , ಪೌರಾಯುಕ್ತ, ನಗರಸಭೆ, ಗಂಗಾವತಿ --

ಹಿಂದಿನ ಬಾಕಿ ಮತ್ತು ತೆರಿಗೆ ಪ್ರಮಾಣ ಹೆಚ್ಚಳ ಕುರಿತು ನಗರಸಭೆ ಆಡಳಿತ ಈ ಹಿಂದೆ ಯಾವುದೇ ರೀತಿಯ ನೋಟಿಸ್ ನೀಡಿಲ್ಲ. ಈಗ 15 ದಿನಗಳ ಗಡುವು ನೀಡಿ, ಬಾಕಿ ತೆರಿಗೆ ಪಾವತಿಸಲು ನೋಟಿಸ್ ನೀಡ ಲಾಗಿದೆ. ತೆರಿಗೆಯ ಕೆಲ ಅಂಕಿ ಅಂಶಗಳು ಗೊಂದಲ ಮೂಡಿಸಿವೆ. ಅದನ್ನು ಪುನಃ ಪರಿಶೀಲಿ ಸಲು ನಗರಸಭೆ ಆಡಳಿತಕ್ಕೆ ಕೋರಿದ್ದೇವೆ.

-ನೆಕ್ಕಂಟಿ ಸೂರಿಬಾಬು, ಅಧ್ಯಕ್ಷ, ತಾಲೂಕು ರೈಸ್‌ಮಿಲ್ ಅಸೋಸಿಯೇಶನ್, ಗಂಗಾವತಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ