Please enable javascript.ಕೈ ಬಿಡ್ರಪ ಕಮಾನು ! - drop Clearance arch - Vijay Karnataka

ಕೈ ಬಿಡ್ರಪ ಕಮಾನು !

ವಿಕ ಸುದ್ದಿಲೋಕ 29 Aug 2016, 9:00 am
Subscribe

ವಿಶ್ವವಿಖ್ಯಾತ ಹಂಪಿ, ಆನೆಗೊಂದಿಯ ಆಸುಪಾಸಿನಲ್ಲಿರುವ ನಗರದಲ್ಲಿ ಐತಿಹಾಸಿಕ ಸ್ಮಾರಕಗಳಂತೆ ಕಂಗೊಳಿಸುತ್ತಿರುವ ಕಮಾನುಗಳನ್ನು ತೆರವುಗೊಳಿಸಲು ಮುಂದಾದ ಆಡಳಿತ ವರ್ಗಕ್ಕೆ ಸಾರ್ವಜನಿಕರಿಂದಲೇ ಆಕ್ಷೇಪದ ಧ್ವನಿ ಮೊಳಗಿದೆ.

drop clearance arch
ಕೈ ಬಿಡ್ರಪ ಕಮಾನು !

ಕೊಪ್ಪಳ: ವಿಶ್ವವಿಖ್ಯಾತ ಹಂಪಿ, ಆನೆಗೊಂದಿಯ ಆಸುಪಾಸಿನಲ್ಲಿರುವ ನಗರದಲ್ಲಿ ಐತಿಹಾಸಿಕ ಸ್ಮಾರಕಗಳಂತೆ ಕಂಗೊಳಿಸುತ್ತಿರುವ ಕಮಾನುಗಳನ್ನು ತೆರವುಗೊಳಿಸಲು ಮುಂದಾದ ಆಡಳಿತ ವರ್ಗಕ್ಕೆ ಸಾರ್ವಜನಿಕರಿಂದಲೇ ಆಕ್ಷೇಪದ ಧ್ವನಿ ಮೊಳಗಿದೆ.

ಸುಗಮ ಸಂಚಾರದ ಹೆಸರಿನಲ್ಲಿ ನಡೆಸಲು ಉದ್ದೇಶಿಸಿದ ಕಾರ್ಯಾಚರಣೆಗೆ ಸದ್ದಿಲ್ಲದೇ ವಿರೋಧ ವ್ಯಕ್ತವಾಗಿದ್ದು, ದೂರುಗಳು ಡಿಸಿ ಕಚೇರಿ ಮೆಟ್ಟಿಲೇರಿವೆ. ನವಾಬರ ಆಡಳಿತ ಸಮಯದಲ್ಲಿ ನಾಲ್ಕು ಕಡೆ ತಲೆ ಎತ್ತಿದ ಕಮಾನುಗಳು ನಗರದ ಹೆಗ್ಗುರುತೆನಿಸಿದ್ದು, ಐತಿಹಾಸಿಕ ಹಿನ್ನೆಲೆಗೆ ಕಳಶ ಪ್ರಾಯದಂತಿವೆ. ಜಿಲ್ಲಾ ಕೇಂದ್ರದಲ್ಲಿರುವ ಕೋಟೆಯೂ ಆಕರ್ಷಕವಾಗಿದೆ. ಅದೇ ಸಮಯದಲ್ಲಿ ನಗರದ ನಾಲ್ಕು ದಿಕ್ಕಿನಲ್ಲಿ ಕಮಾನು ನಿರ್ಮಿಸಲಾಗಿದೆ. ಆದರೆ, ಜು.14, 2015 ರಂದು ಕಾತರಕಿ, ಗವಿಮಠ ರಸ್ತೆಯಲ್ಲಿದ್ದ ಎರಡು ಕಮಾನುಗಳನ್ನು ನಗರಸಭೆ ಆಡಳಿತ ದಿಢೀರ್‌ ತೆರವುಗೊಳಿಸಿದೆ. ಸದ್ಯ ಕೋಟೆ ರಸ್ತೆ, ಜವಾಹರ ರಸ್ತೆಯಲ್ಲಿರುವ ಕಮಾನುಗಳಷ್ಟೇ ಉಳಿದಿವೆ. ಅವುಗಳ ತೆರವಿಗೂ ನಗರಸಭೆ ಕೈ ಹಾಕಿದ್ದರಿಂದ ಜನಾಕ್ರೋಶ ಭುಗಿಲೆದ್ದಿದೆ.

ಲಿಖಿತ ದೂರು: ತೆರವಿಗೂ ಮುನ್ನ ನಗರಸಭೆ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದರಿಂದ ಸಾರ್ವಜನಿಕರು, ಪುರಾತತ್ವ ಇಲಾಖೆಗೆ ದೂರು ನೀಡಿದ್ದರು. ಜನರ ಆಕ್ಷೇಪ ಉಲ್ಲೇಖಿಸಿದ ಪುರಾತತ್ವ ಇಲಾಖೆ, ಆ.7, 2016 ರಂದು ಡಿಸಿಗೆ ಪತ್ರ ಬರೆದಿದೆ. ಕಾತರಕಿ, ಗವಿಮಠದ ಬಳಿಯ ಕಮಾನು ಈಗಾಗಲೇ ತೆರವಾಗಿವೆ. ಸದ್ಯ ಇರುವುದೇ ಎರಡು. ಅವುಗಳನ್ನು ತೆರವುಗೊಳಿಸಬಾರದು. ಹಂಪಿಯಷ್ಟೇ ಪ್ರಾಮುಖ್ಯ ಪಡೆದ ನಗರದಲ್ಲಿ ಸ್ಮಾರಕಗಳಿಗೆ ಧಕ್ಕೆಯಾಗಬಾರದು. ಕೋಟೆ ಕೊತ್ತಲ, ಅಶೋಕ ಶಿಲಾಶಾಸನ, ಅವಶೇಷ, ಕುರುಹುಗಳಿರುವ ಜಾಗ ಎನ್ನುವುದಕ್ಕೆ ನೂರಾರು ಶಾಸನ ಸಾಕ್ಷಿಯಿವೆ. ಶಾಸನಗಳ ಸಂಪುಟದಲ್ಲೂ ಉಲ್ಲೇಖಿಸಲಾಗಿದೆ ಎಂದು ಗಮನ ಸೆಳೆದಿರುವ ಪುರಾತತ್ವ ಇಲಾಖೆ, ನಗರಸಭೆ ಪೌರಾಯುಕ್ತರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೇಳಿದೆ.

ಡಿಸಿಯತ್ತ ಚಿತ್ತ: ಜನರಿಂದ ವ್ಯಕ್ತವಾದ ಪ್ರತಿಕ್ರಿಯೆಗಳು ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿ ತಲುಪಿವೆ. ಡಿಸಿ ಎಂ.ಕನಗವಲ್ಲಿ ಅವರು, ಪೌರಾಯುಕ್ತರಿಗೆ ಅಗತ್ಯ ನಿರ್ದೇಶನ ನೀಡಬೇಕಿದೆ. ಜಿಲ್ಲಾಧಿಕಾರಿ ಆ ಬಗ್ಗೆ ಏನನ್ನು ಪ್ರತಿಕ್ರಿಯಿಸಿಲ್ಲ. ಕಮಾನು ಇರುವುದರಿಂದ ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹಲವರು ವಾದಿಸುತ್ತಿದ್ದು, ಅದಕ್ಕೆ ನಗರಸಭೆಯ ಆಡಳಿತ ಮಂಡಳಿ ಈವರೆಗೂ ಸ್ಪಂದಿಸಿಲ್ಲ. ಬಹುತೇಕರು ಜಿಲ್ಲಾಧಿಕಾರಿಯತ್ತ ಮುಖ ಮಾಡಿದ್ದು, ಅವರು ಕೈಗೊಳ್ಳುವ ನಿರ್ಧಾರ ಸ್ಮಾರಕಗಳ ಅಳಿವು, ಉಳಿವು ನಿರ್ಧರಿಸಲಿದೆ.

ಸ್ಥಳ ಸೂಚಕ: ನಗರಕ್ಕೆ ಯಾರೇ ಬರಲಿ, ತಾವು ಮತ್ತೊಬ್ಬರನ್ನು ಭೇಟಿ ಮಾಡಬೇಕಾದಾಗ ಇಲ್ಲವೇ ಇತರ ಸಂದರ್ಭದಲ್ಲಿ ತಾವಿರುವ ಸ್ಥಳವನ್ನು ಕಮಾನುಗಳ ಹೆಸರಿನಲ್ಲಿಯೇ ಉಲ್ಲೇಖಿಸುತ್ತಾರೆ. ಕಾತರಕಿ ಕಮಾನು, ಕೋಟೆ ರಸ್ತೆ ಕಮಾನು ಎಂದೇ ವಿಳಾಸವನ್ನು ಹೇಳಿಕೊಂಡು ಇತರರನ್ನು ಭೇಟಿ ಮಾಡಲು ಸ್ಥಳ ನಿಗದಿಪಡಿಸುತ್ತಾರೆ. ನಾನಾ ಕಾರಣಕ್ಕೆ ಇಂತಹ ಮಹತ್ವ ಪಡೆದಿರುವ ಐತಿಹಾಸಿಕ ಸ್ಮಾರಕಗಳನ್ನು ತೆರವುಗೊಳಿಸಬಾರದು ಎನ್ನುವುದು ಹಲವರ ಒತ್ತಾಯ.

ಕಮಾನು ಖಾಲಿ ಮಾಡಲು ನಗರಸಭೆ ತಿಳಿಸಿದಾಗ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಪುರಾತತ್ವ ಇಲಾಖೆಗೂ ಪತ್ರ ತಲುಪಿತ್ತು. ಐತಿಹಾಸಿಕ ಕಮಾನುಗಳು ನಗರದ ಸೌಂದರ್ಯ ಹೆಚ್ಚಿಸುತ್ತವೆ. ಯಾವುದೇ ಕಾರಣಕ್ಕೂ ಅವುಗಳನ್ನು ತೆರವುಗೊಳಿಸಬಾರದು.

- ಗಾಳೆಪ್ಪ ಮುಂಗೋಲಿ, ಕೊಪ್ಪಳ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ