Please enable javascript.Tuberculosis,ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ - active tuberculosis detection campaign - Vijay Karnataka

ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ

Vijaya Karnataka 1 Jul 2018, 5:00 am
Subscribe

ಮಂಡ್ಯ: ಜಿಲ್ಲೆಯಲ್ಲಿ ಜುಲೈ 2ರಿಂದ 13ರವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ನಡೆಯಲಿದೆ ಎಂದು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ರೋಚನಾ ತಿಳಿಸಿದರು.

active tuberculosis detection campaign
ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ
ಮಂಡ್ಯ: ಜಿಲ್ಲೆಯಲ್ಲಿ ಜುಲೈ 2ರಿಂದ 13ರವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ನಡೆಯಲಿದೆ ಎಂದು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ರೋಚನಾ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಮತ್ತು ಜಿಲ್ಲಾ ಕ್ಷಯರೋಗ ಕೇಂದ್ರ ಜಂಟಿಯಾಗಿ ಈ ಆಂದೋಲನ ನಡೆಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ 2035 ವರ್ಷದ ಹೊತ್ತಿಗೆ ವಿಶ್ವದಾದ್ಯಂತ ಕ್ಷಯ ನಿರ್ಮೂಲನೆ ಮಾಡುವ ಗುರಿ ಹೊಂದಿದೆ. ಆದರೆ, ಭಾರತ ಇನ್ನು ಎಂಟು ವರ್ಷಗಳಲ್ಲಿಯೇ (2025) ಕ್ಷಯ ರೋಗ ನಿರ್ಮೂಲನೆ ಮಾಡುವ ಪಣತೊಟ್ಟಿದೆ. ಆ ನಿಟ್ಟಿನಲ್ಲಿ ನಾನಾ ಯೋಜನೆಗಳನ್ನು ಹಾಕಿಕೊಂಡಿದೆ. ಇದರಲ್ಲಿ ಸಕ್ರಿಯ ಕ್ಷಯ ರೋಗ ಪತ್ತೆ ಅಭಿಯಾನ ಒಂದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಸುಮಾರು 187 ಗ್ರಾಮಗಳನ್ನು ಈ ಆಂದೋಲನಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಗಣಿಗಾರಿಕೆ, ಸ್ಲಂಗಳು ಹಾಗೂ ಹೆಚ್ಚು ಕ್ಷಯ ರೋಗಿಗಳು ಕಂಡು ಬಂದಿರುವ ಗ್ರಾಮಗಳಿಗೆ ಆದ್ಯತೆ ನೀಡಲಾಗಿದ್ದು, ಇಷ್ಟು ಪ್ರದೇಶಗಳು ಸುಮಾರು 2.61 ಲಕ್ಷ ಜನಸಂಖ್ಯೆಯನ್ನೊಳಗೊಂಡಿದೆ. ತಲಾ ಒಬ್ಬರು ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಇರುವ 287 ತಂಡಗಳು ಆಂದೋಲನದಲ್ಲಿ ಕಾರ‍್ಯ ನಿರ್ವಹಿಸಲಿವೆ ಎಂದು ಹೇಳಿದರು.

ಆಂದೋಲನದ ಬಗ್ಗೆ ಖಾಸಗಿ ಆಸ್ಪತ್ರೆಗಳ ವೈದ್ಯರಿಗೂ ಮಾಹಿತಿ ನೀಡಲಾಗಿದ್ದು, ಅಲ್ಲಿಗೆ ಬರುವ ರೋಗಿಗಳನ್ನು ತಪಾಸಣೆ ನಡೆಸುವ ವಿವರ ಪಡೆಯುತ್ತಿದ್ದೇವೆ. ಇದಕ್ಕಾಗಿ ರೋಗಿಗಳಿಗೆ ಚಿಕಿತ್ಸೆ, ಎಕ್ಸ್‌ರೇ, ಔಷಧ, ಪರೀಕ್ಷೆ ಎಲ್ಲವೂ ಉಚಿತವಾಗಿ ಸಿಗಲಿದೆ. ಅಲ್ಲದೆ, ಪ್ರತಿಯೊಬ್ಬ ರೋಗಿಗೂ ಸರಕಾರದಿಂದ 500 ರೂ. ನೀಡಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ಹಾಗೂ ಕ್ಷಯ ರೋಗ ಇರುವ ರೋಗಿಗಳು ಯಾವುದೇ ಮುಜುಗರ ಪಡದೆ ನೇರವಾಗಿ ನಮ್ಮನ್ನು ಸಂಪರ್ಕಿಸಬಹುದು. ಇಲ್ಲದಿದ್ದರೆ ಗ್ರಾಮಕ್ಕೆ ಬರುವ ನಮ್ಮ ಸಿಬ್ಬಂದಿಗೆ ತಿಳಿಸಿ ಚಿಕಿತ್ಸೆ ಪಡೆದುಕೊಂಡು ಆರೋಗ್ಯವಂತರಾಗಿ ಬದುಕಬಹುದು ಎಂದು ಮಾಹಿತಿ ನೀಡಿದರು.

ಕ್ಷಯ ರೋಗ ಒಂದು ಅಂಟು ರೋಗವಾಗಿದ್ದು, ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತದೆ. ನಿರಂತರ ಕೆಮ್ಮು, ಕಫಾದಲ್ಲಿ ರಕ್ತ ಬೀಳುವುದು, ಬಿಟ್ಟು ಬಿಟ್ಟು ಜ್ವರ ಬರುವುದು. ಇದು ಕ್ಷಯ ರೋಗದ ಲಕ್ಷಣವಾಗಿದೆ. ಇಂಥ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಔಷಧ ತೆಗೆದುಕೊಳ್ಳುವುದರಿಂದ ಕ್ಷಯ ನಿಯಂತ್ರಿಸಬಹುದಾಗಿದೆ ಎಂದರು..

348 ಕ್ಷಯ ರೋಗಿಗಳ ಪತ್ತೆ

ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ಸುಮಾರು 348 ಕ್ಷಯ ರೋಗಿಗಳನ್ನು ಪತ್ತೆ ಮಾಡಲಾಗಿದೆ. ಮಂಡ್ಯ, ಮಳವಳ್ಳಿ, ಮದ್ದೂರು, ಶ್ರೀರಂಗಪಟ್ಟಣ ತಾಲೂಕುಗಳಲ್ಲಿ ಹೆಚ್ಚಿದ್ದಾರೆ. ಇದರಲ್ಲಿ ಈಗಾಗಲೇ 12 ಮಂದಿ ಸಾವನ್ನಪ್ಪಿದ್ದು, 51 ಮಂದಿ ಗಂಭೀರ ಸ್ಥಿತಿಗೆ ತಲುಪಿದ್ದಾರೆ. ರಾಜ್ಯದ ಇತರ ಜಿಲ್ಲೆಗಳಗೆ ಹೋಲಿಸಿದರೆ ಮಂಡ್ಯ ಉತ್ತಮ ಸ್ಥಿತಿಯಲ್ಲಿದೆ. ಕಳೆದ ವರ್ಷ 1800 ಮಂದಿ ಕ್ಷಯ ರೋಗಿಗಳು ಪತ್ತೆಯಾಗಿ, ಅದರಲ್ಲಿ 51 ಮಂದಿ ಸಾವನ್ನಪ್ಪಿದ್ದರು. ಇಲ್ಲಿವರೆಗೂ ಶೇ.5ರಷ್ಟು ಮಂದಿ ಕ್ಷಯ ರೋಗದಿಂದ ಸಾವನ್ನಪ್ಪಿದ್ದಾರೆ ಎಂದು ವಿವರಿಸಿದರು. ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಭವಾನಿಶಂಕರ್‌, ಕುಟುಂಬ ಕಲ್ಯಾಣಾಧಿಕಾರಿ ಡಾ.ಶಶಿಧರ್‌, ಡಾ.ಸುಭಾಷ್‌ಬಾಬು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ