ಆ್ಯಪ್ನಗರ

ಹೇಮಗಿರಿ, ಮಂದಗೆರೆ ನಾಲೆಗಳಿಗೆ ನೀರು ಹರಿಸುವೆ

ಕೆಆರ್‌ಪೇಟೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆಬಿಚಂದ್ರಶೇಖರ್‌ ಭರವಸೆ ವಿಕ ಸುದ್ದಿಲೋಕ ಕೆಆರ್‌...

Vijaya Karnataka 5 May 2018, 5:00 am

ಕೆ.ಆರ್‌.ಪೇಟೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌ ಭರವಸೆ

ಕೆ.ಆರ್‌.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ರೈತರಿಗೆ ಜೀವನಾಧಾರವಾಗಿರುವ ಹೇಮಗಿರಿ, ಮಂದಗೆರೆ ನಾಲೆಗಳಿಗೆ 3 ವರ್ಷಗಳಿಂದ ನೀರು ಕೊಡಿಸುವಲ್ಲಿ ಶಾಸಕ ಕೆ.ಸಿ.ನಾರಾಯಣಗೌಡ ವಿಫಲರಾಗಿದ್ದಾರೆ ಎಂದು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌ ಆರೋಪಿಸಿದರು.

ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ನಾನಾ ಭಾಗಗಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿ ಮಾತನಾಡಿದ ಅವರು, ''ಈ ಬಾರಿ ರೈತರು ನನ್ನನ್ನು ಬೆಂಬಲಿಸಿ ಆಯ್ಕೆ ಮಾಡಿದರೆ ತಮಗೆ ವರ್ಷದ ಎರಡು ಬೆಳೆಗೂ ನೀರು ಕೊಡಿಸುವ ಜವಾಬ್ದಾರಿ ನನ್ನದು'' ಎಂದು ಭರವಸೆ ನೀಡಿದರು.

''ಕಳೆದ ಅವಧಿಯಲ್ಲಿ ಬಿಜೆಪಿ ಸರಕಾರವಿದ್ದರೂ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸಾವಿರಾರು ರೈತರಿಗೆ ಅನುಕೂಲವಾಗುವ ಮಂದಗೆರೆ ಎಡ ಮತ್ತು ಬಲ ನಾಲೆಗಳು ಮತ್ತು ಹೇಮಗಿರಿ ನಾಲೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರ ಮನವೊಲಿಸಿ ಮಂಜೂರು ಮಾಡಿಸಿದ್ದೆ. ಕೇವಲ 6 ತಿಂಗಳ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೆ. ಆದರೆ, ನಂತರ ಬಂದ ಶಾಸಕರು ಹೇಮಾವತಿ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳದೆ ನೀರು ಬಿಡಿಸುವಲ್ಲಿ ವಿಫಲವಾಗಿದ್ದಾರೆ'' ಎಂದು ದೂರಿದರು.

''ಅಧಿಕಾರಿಗಳೊಂದಿಗೆ ಪ್ರೀತಿ ವಿಶ್ವಾಸದಿಂದ ಕೆಲಸ ಮಾಡಿಸಿಕೊಳ್ಳುವ ಬದಲಿಗೆ ಅವರ ಮೇಲೆ ದೌರ್ಜನ್ಯ ನಡೆಸಿದ್ದರಿಂದ ರೈತರು ಮೂರು ವರ್ಷದಿಂದ 6 ಬೆಳೆಯಿಂದ ವಂಚಿತರಾಗಿದ್ದಾರೆ. ತಮ್ಮ ಜಾನುವಾರು ರಕ್ಷಿಸಿಕೊಳ್ಳಲು ಮೇವಿಗೂ ಕಷ್ಟಪಡುವಂತೆ ಮಾಡಿದ್ದಾರೆ'' ಎಂದು ಆರೋಪಿಸಿದರು.

ಮಾಜಿ ಶಾಸಕ ಬಿ.ಪ್ರಕಾಶ್‌ ಮಾತನಾಡಿ, ''ಜೆಡಿಎಸ್‌ನಲ್ಲಿ ಪಕ್ಷ ಕಟ್ಟಿದವರಿಗೆ ಹಾಗೂ ನಿಷ್ಠಾವಂತರಿಗೆ ಬೆಲೆ ಇಲ್ಲದ ಕಾರಣ ಆ ಪಕ್ಷ ವನ್ನು ತ್ಯಜಿಸಿ ಕಾಂಗ್ರೆಸ್‌ಗೆ ಬಂದಿದ್ದೇನೆ. ಶಾಸಕ ನಾರಾಯಣಗೌಡರು ಕಳೆದ ಚುನಾವಣೆಯಲ್ಲಿ ನಮ್ಮನ್ನು ಜತೆಯಲ್ಲಿ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಮತದಾರರಿಗೆ ನೀಡಿದ ಯಾವುದೇ ಆಶ್ವಾಸನೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡದ್ದರಿಂದ ಅಭಿವೃದ್ಧಿಯಾಗಿಲ್ಲ. ಹಾಗಾಗಿ ಈ ಬಾರಿ ತಾಲೂಕಿನ ಮತದಾರರು ಜೆಡಿಎಸ್‌ ಅಭ್ಯರ್ಥಿಯನ್ನು ತಿರಸ್ಕರಿಸಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌ ಅವರನ್ನು ಆಯ್ಕೆ ಮಾಡಬೇಕು'' ಎಂದು ಮನವಿ ಮಾಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಆರ್‌.ರವೀಂದ್ರಬಾಬು, ಜಿ.ಪಂ.ಮಾಜಿ ಸದಸ್ಯ ಬಿ.ನಾಗೇಂದ್ರಕುಮಾರ್‌, ಮನ್‌ಮುಲ್‌ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್‌, ಡಿ.ಸಿ.ಸಿ.ಬ್ಯಾಂಕ್‌ ಮಾಜಿ ಅಧ್ಯಕ್ಷ ವಿ.ಡಿ.ಹರೀಶ್‌, ತಾ.ಪಂ.ಮಾಜಿ ಸದಸ್ಯ ಎ.ಎಂ.ಸಂಜೀವಪ್ಪ, ಶಾಸಕ ನಾರಾಯಣಗೌಡ ಸಹೋದರ ಕೆ.ಸಿ.ರಾಮಚಂದ್ರೇಗೌಡ, ಹಿರಿಯ ಮುಖಂಡರಾದ ಅಕ್ಕಿಹೆಬ್ಬಾಳು ವೆಂಕಟಪ್ಪ, ಕೆ.ಟಿ.ಚಂದ್ರೇಗೌಡ, ಸಿದ್ದಿಕ್‌, ಪಠಾಣ್‌ಬಾಬು, ರಾಜಾನಾಯಕ್‌, ಜಿ.ಎ.ರಾಯಪ್ಪ, ಗುಡುಗನಹಳ್ಳಿ ನಾಗರಾಜು, ಗ್ರಾ.ಪಂ.ಸದಸ್ಯ ಶ್ರೀನಿವಾಸ್‌, ಕೆ.ಬಿ.ವಿವೇಕ್‌, ಬ್ಲಾಕ್‌ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಕಟ್ಟೆಕ್ಯಾತನಹಳ್ಳಿ ಪಾಪಣ್ಣ, ಮಚವೊಳಲು ಪ್ರಸನ್ನ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ