ಆ್ಯಪ್ನಗರ

ಮಂಡ್ಯ: ಇತರೆ ಕಾರ್ಖಾನೆಗಳಿಂದ ಪೈಪೋಟಿ, ಮೈಶುಗರ್‌ಗೆ ಕಬ್ಬು ಬರ?

Mysugar Factory: ಮಂಡ್ಯ ತಾಲೂಕಿನ ರೈತರ ಮುಂದಿನ ಭವಿಷ್ಯ ಕೂಡ ಮೈಶುಗರ್ ಅಳಿವು-ಉಳಿವಿನ ಮೇಲೆ ನಿಂತಿದೆ. ಹೀಗಾಗಿ ಮೈಶುಗರ್ ವ್ಯಾಪ್ತಿಯ ರೈತರು ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಬೇಕಿದೆ. ಯಾವ್ಯಾವುದೋ ಕಾರಣಗಳಿಂದಾಗಿ ಈಗ ಮೈಶುಗರ್ಗೆ ಕಬ್ಬು ಪೂರೈಸದೆ ಖಾಸಗಿ ಕಾರ್ಖಾನೆಗಳಿಗೆ ಕೊಟ್ಟರೆ, ಭವಿಷ್ಯದಲ್ಲಿ ಮೈಶುಗರ್ ಮುಚ್ಚುವ ಪರಿಸ್ಥಿತಿ ಎದುರಾಗಲಿದೆ ಎಂದು ಮೈಶುಗರ್ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್.ಕೃಷ್ಣ ಶಂಭೂನಹಳ್ಳಿ ಆತಂಕ ವ್ಯಕ್ತಪಡಿಸಿದ್ದಾರೆ.

Edited byಶ್ರುತಿ ಡಿ | Vijaya Karnataka Web 15 Jul 2023, 7:58 am

ಹೈಲೈಟ್ಸ್‌:

  • ಮೈಶುಗರ್ ಸಕ್ಕರೆ ಕಾರ್ಖಾನೆಗೆ ಕಬ್ಬಿನ ಕೊರತೆ ಸಾಧ್ಯತೆ.
  • ಇತರೆ ಸಕ್ಕರೆ ಕಾರ್ಖಾನೆಗಳು ಮೈಶುಗರ್‌ ವ್ಯಾಪ್ತಿಯ ಕಬ್ಬನ್ನು ಪಡೆದುಕೊಳ್ಳುತ್ತಿರುವುದರಿಂದ ಬರ.
  • ನಿತ್ಯ 5000 ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿರುವ ಕಾರ್ಖಾನೆಯಲ್ಲಿ ಪ್ರತಿನಿತ್ಯ 3000ಕ್ಕೂ ಹೆಚ್ಚು ಟನ್ ಕಬ್ಬು ಅರೆಯಬೇಕಿದೆ.

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವರದಿ-ನವೀನ್‌
ಮಂಡ್ಯ: ಮೈಸೂರು ಸಕ್ಕರೆ ಕಾರ್ಖಾನೆ (ಮೈಶುಗರ್‌) ಪುನಾರಂಭ ಮತ್ತು ಕಬ್ಬು ಕಟಾವು ಬಗ್ಗೆ ಈವರೆಗೆ ಇದ್ದ ಎಲ್ಲಗೊಂದಲಗಳು ಬಗೆಹರಿದಿದ್ದು, ರೈತರ ಆತಂಕವೂ ನಿವಾರಣೆಯಾಗಿದೆ. ಆದರೀಗ ಕಾರ್ಖಾನೆ ಸಮರ್ಥವಾಗಿ ನಡೆಯಲು ಕಬ್ಬಿನ ಕೊರತೆ ಎದುರಾಗಿದೆ. ಜಿಲ್ಲೆಯೊಳಗಿನ ಇತರೆ ಸಕ್ಕರೆ ಕಾರ್ಖಾನೆಗಳು ಮೈಶುಗರ್‌ ವ್ಯಾಪ್ತಿಯ ಕಬ್ಬನ್ನು ಪಡೆದುಕೊಳ್ಳುತ್ತಿರುವುದರಿಂದ ಮೈಶುಗರ್‌ಗೆ ಕಬ್ಬಿನ ಬರ ಎದುರಾಗುವ ಸಾಧ್ಯತೆಯಿದೆ.

ಮುಂದಿನ ವರ್ಷವೂ ಸರಕಾರದಿಂದಲೇ ಮೈಶುಗರ್‌ ಸಮರ್ಥವಾಗಿ ನಡೆಯಬೇಕಾದರೆ ಈ ವರ್ಷ ಕನಿಷ್ಠ 3.5 ಲಕ್ಷ ಟನ್‌ ಕಬ್ಬು ಅರೆದು, ಗುಣಮಟ್ಟದ ಸಕ್ಕರೆ ಉತ್ಪಾದಿಸಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಬೇಕಿದೆ. ಆದರೆ, ಈ ಸಾಮರ್ಥ್ಯ ಪ್ರದರ್ಶಿಸಲು ಮತ್ತು ಪ್ರಗತಿ ತೋರಿಸಲು ಮೂಲವಾಗಿ ಬೇಕಾಗಿರುವ ಕಬ್ಬು ಕೊರತೆಯೇ ಅಡ್ಡಿಯಾಗುವ ಆತಂಕ ಎದುರಾಗಿದೆ.

ಕಳೆದ ವರ್ಷ ಕೇವಲ 1 ಲಕ್ಷ ಟನ್‌ ಕಬ್ಬು ಅರೆದಿದ್ದ ಮೈಶುಗರ್‌, 2023-24ನೇ ಸಾಲಿನಲ್ಲಿ ಅರೆಯಲು 5.50 ಲಕ್ಷ ಟನ್‌ ಕಬ್ಬು ಒಪ್ಪಿಗೆ ಮಾಡಿಕೊಂಡಿದೆ. ನಿತ್ಯ 5000 ಟನ್‌ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿರುವ ಕಾರ್ಖಾನೆಯಲ್ಲಿ ನಿತ್ಯ 3000ಕ್ಕೂ ಹೆಚ್ಚು ಟನ್‌ ಕಬ್ಬು ಅರೆಯಬೇಕಿದೆ. ಕಾರ್ಖಾನೆ ಆರಂಭವಾದ ದಿನದಿಂದ ಈವರೆಗೆ ನಿತ್ಯ 1200 ರಿಂದ 2000 ಟನ್‌ ಕಬ್ಬು ಅರೆಯಲಾಗುತ್ತಿತ್ತು. ಈ ಮಧ್ಯೆ ಶುಕ್ರವಾರ (ಜು.13) ಗರಿಷ್ಠ 2,850 ಟನ್‌ ಕಬ್ಬು ಅರೆದಿದೆ.
ಎಕ್ಸ್‌ಪ್ರೆಸ್‌ ವೇಯಲ್ಲಿ ದರೋಡೆ-ರಾತ್ರಿ ವೇಳೆ ರಸ್ತೆಬದಿ ನಿಲ್ಲಿಸುವ ವಾಹನ ಸವಾರರೇ ಟಾರ್ಗೆಟ್‌!
ಆದರೆ, ನೆರೆಯ ಮದ್ದೂರು ತಾಲೂಕು ಕೊಪ್ಪದ ಎನ್‌ಎಸ್‌ಎಲ್‌ ಶುಗರ್ಸ್ ಮತ್ತು ಭಾರತಿನಗರದ ಚಾಮುಂಡೇಶ್ವರಿ ಶುಗರ್ಸ್ ಕಾರ್ಖಾನೆಯವರು ಮೈಶುಗರ್‌ ವ್ಯಾಪ್ತಿಯ ಕಬ್ಬಿಗೆ ಕೈ ಹಾಕಿದ್ದಾರೆ. ಈ ಬಗ್ಗೆ ಕಾರ್ಖಾನೆ ಪ್ರತಿನಿಧಿಗಳ ಮನವಿ ಮೇರೆಗೆ ಜಿಲ್ಲಾಧಿಕಾರಿಯವರು ಎರಡು ಬಾರಿ ಸ್ಪಷ್ಟ ಆದೇಶ ಹೊರಡಿಸಿದ್ದಾರೆ. ಆದಾಗ್ಯೂ ಈ ಆದೇಶವನ್ನು ಉಲ್ಲಂಘಿಸುತ್ತಿರುವ ಖಾಸಗಿ ಕಾರ್ಖಾನೆಗಳು ಮೈಶುಗರ್‌ ವ್ಯಾಪ್ತಿಯ ಕಬ್ಬನ್ನು ಪಡೆಯುತ್ತಲೇ ಇವೆ.

ಉಭಯ ಕಾರ್ಖಾನೆಗಳ ಕಬ್ಬು ವಿಭಾಗದ ಅಧಿಕಾರಿಗಳು ಮೈಶುಗರ್‌ ವ್ಯಾಪ್ತಿಯ ಪ್ರದೇಶದ ಗ್ರಾಮಗಳಿಗೆ ತೆರಳಿ ರೈತರ ಮನವೊಲಿಸಿ, ಕಬ್ಬು ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲೂ ತನಿ ಕಬ್ಬನ್ನೇ ಹೆಚ್ಚಾಗಿ ಪಡೆದುಕೊಳ್ಳುತ್ತಿದ್ದಾರೆ. ಜುಲೈ 14 ರಿಂದ ಪಾಂಡವಪುರದ ಪಿಎಸ್‌ಎಸ್‌ಕೆ ಕೂಡ ಕಬ್ಬು ಅರೆಯುವಿಕೆ ಆರಂಭಿಸಿದೆ. ಈ ಕಾರ್ಖಾನೆಯೂ ಮೈಶುಗರ್‌ ವ್ಯಾಪ್ತಿಯ ಕಬ್ಬು ಪಡೆದುಕೊಳ್ಳುವ ಸಾಧ್ಯತೆಯಿದೆ. ಮೈಶುಗರ್‌ ವ್ಯಾಪ್ತಿಯ ಕಬ್ಬನ್ನು ಇತರ ಕಾರ್ಖಾನೆಗಳು ಪಡೆದುಕೊಳ್ಳುವುದು ಮುಂದುವರಿದರೆ ಅದು ಮುಂದಿನ ದಿನಗಳಲ್ಲಿ ಮೈಶುಗರ್‌ ಅಸ್ತಿತ್ವಕ್ಕೇ ಮಾರಕವಾಗಲಿದೆ.

ಆದೇಶದಲ್ಲೇನಿದೆ?

ಮೈಶುಗರ್‌ ಪ್ರಾರಂಭವಾಗುವವರೆಗೆ ಕಾರ್ಖಾನೆ ವ್ಯಾಪ್ತಿಯ ರೈತರು 15 ತಿಂಗಳ ಅವಧಿ ಮೀರಿದ ಕಬ್ಬನ್ನು ಸ್ವಇಚ್ಛೆಯಿಂದ ಇತರ ಕಾರ್ಖಾನೆಗಳಿಗೆ ಸರಬರಾಜು ಮಾಡಲು ಸ್ವತಂತ್ರವಾಗಿದ್ದಾರೆ. ಆದರೆ, ಅನಧಿಕೃತವಾಗಿ ಮೈಶುಗರ್‌ ವ್ಯಾಪ್ತಿಯ ಕಬ್ಬನ್ನು ಇತರ ಕಾರ್ಖಾನೆಗಳು ಕಟಾವು ಮಾಡಿ ಪರಭಾರೆ ಮಾಡಬಾರದು. ಈಗಾಗಲೇ ಮೈಶುಗರ್‌ ವ್ಯಾಪ್ತಿಯಲ್ಲಿಇತರ ಖಾಸಗಿ ಕಾರ್ಖಾನೆಯವರು ಕಬ್ಬು ಕಟಾವು ಮಾಡುವ ಸಂಬಂಧ ಸಿಬ್ಬಂದಿಯನ್ನು ನಿಯೋಜಿಸಿ, ಕಚೇರಿಗಳನ್ನು ತೆರೆದಿದ್ದರೆ ಕೂಡಲೇ ಅವುಗಳನ್ನು ತೆರವುಗೊಳಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ.

ಈ ಆದೇಶ ಪತ್ರವನ್ನು ಜಿಲ್ಲೆಯ ಖಾಸಗಿ ಕಾರ್ಖಾನೆಗಳಾದ ಕೊಪ್ಪದ ಎನ್‌ಎಸ್‌ಎಲ್‌ ಶುಗರ್ಸ್, ಭಾರತಿನಗರದ ಚಾಂಶುಗರ್ಸ್, ಕೆ.ಆರ್‌.ಪೇಟೆ ತಾಲೂಕು ಮಾಕವಳ್ಳಿಯ ಐಸಿಎಲ್‌ ಸಕ್ಕರೆ ಕಾರ್ಖಾನೆ, ಪಾಂಡವಪುರದ ಪಿಎಸ್‌ಎಸ್‌ಕೆ ಹಾಗೂ ನೆರೆಯ ಮೈಸೂರು ಜಿಲ್ಲೆಯ ಅಳಗಂಚಿಯ ಬನ್ನಾರಿ ಅಮ್ಮನ್‌ ಶುಗರ್ಸ್, ಚಾಮರಾಜನಗರ ಜಿಲ್ಲೆಕುಂತೂರಿನ ಬನ್ನಾರಿ ಅಮ್ಮನ್‌ ಶುಗರ್ಸ್ನ ಉಪಾಧ್ಯಕ್ಷರಿಗೆ ಜು.6ರಂದೇ ಪತ್ರ ಬರೆದಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಗಂಟೆಗೆ 100 ಕಿ.ಮೀಗಿಂತ ವೇಗವಾಗಿ ವಾಹನ ಚಲಿಸಿದರೆ 1,000 ರೂ. ದಂಡ!
ಕಟ್ಟುನಿಟ್ಟಿನ ಆದೇಶವಾಗಿದೆ
ಖಾಸಗಿ ಕಾರ್ಖಾನೆಯವರು ಮೈಶುಗರ್‌ ವ್ಯಾಪ್ತಿಯ ಪ್ರದೇಶಕ್ಕೆ ಕಳುಹಿಸಿರುವ ಕಬ್ಬು ಕಟಾವು ಸಿಬ್ಬಂದಿಯನ್ನು ವಾಪಸ್‌ ಕರೆಸಿಕೊಂಡು, ತೆರೆದಿರುವ ಕಚೇರಿಗಳನ್ನು ತೆರವುಗೊಳಿಸುವಂತೆ ಮಾತ್ರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ, ಮೈಶುಗರ್‌ ಭವಿಷ್ಯದ ದೃಷ್ಟಿಯಿಂದ ಇನ್ನೂ ಕಟ್ಟುನಿಟ್ಟಿನ ಆದೇಶ ಹೊರಡಿಸಿ, ಮೈಶುಗರ್‌ ವ್ಯಾಪ್ತಿಯ ಕಬ್ಬು ಪಡೆಯುವ ಖಾಸಗಿ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

ಮಂಡ್ಯ ತಾಲೂಕಿನ ರೈತರ ಮುಂದಿನ ಭವಿಷ್ಯ ಕೂಡ ಮೈಶುಗರ್‌ ಅಳಿವು-ಉಳಿವಿನ ಮೇಲೆ ನಿಂತಿದೆ. ಹೀಗಾಗಿ ಮೈಶುಗರ್‌ ವ್ಯಾಪ್ತಿಯ ರೈತರು ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಬೇಕಿದೆ. ಯಾವ್ಯಾವುದೋ ಕಾರಣಗಳಿಂದಾಗಿ ಈಗ ಮೈಶುಗರ್‌ಗೆ ಕಬ್ಬು ಪೂರೈಸದೆ ಖಾಸಗಿ ಕಾರ್ಖಾನೆಗಳಿಗೆ ಕೊಟ್ಟರೆ, ಭವಿಷ್ಯದಲ್ಲಿ ಮೈಶುಗರ್‌ ಮುಚ್ಚುವ ಪರಿಸ್ಥಿತಿ ಎದುರಾಗಲಿದೆ. ಆಗ ಖಾಸಗಿ ಕಾರ್ಖಾನೆಗಳ ಶೋಷಣೆಗೆ ಒಳಗಾಗಬೇಕಾಗುತ್ತದೆ ಎನ್ನುತ್ತಾರೆ ಮೈಶುಗರ್‌ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್‌.ಕೃಷ್ಣ ಶಂಭೂನಹಳ್ಳಿ.

ಕಬ್ಬು ಕಟಾವಿಗಾಗಿ ಬಳ್ಳಾರಿ, ಬಿಜಾಪುರ, ಮಹಾರಾಷ್ಟ್ರದಿಂದ 1500ಕ್ಕೂ ಹೆಚ್ಚು ಮಂದಿ ಆಳುಗಳನ್ನು ಕರೆಸಲಾಗಿದ್ದು, ಅವರನ್ನು ಈಗಾಗಲೇ ಹಳ್ಳಿಗಳಿಗೆ ನಿಯೋಜಿಸಲಾಗಿದೆ. ಸ್ಥಳೀಯವಾಗಿ 500 ಕಾರ್ಮಿಕರು ಕಬ್ಬು ಕಟಾವು ಮಾಡುತ್ತಿದ್ದಾರೆ. ರೈತರ ಬೇಡಿಕೆಯಂತೆ ಹಳ್ಳಿಗಳನ್ನು ಆಳುಗಳನ್ನು ಕಳುಹಿಸಲಾಗುವುದು. ರೈತರು ಯಾವುದೇ ಕಾರಣಕ್ಕೂ ಬೇರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸದೆ, ಮೈಶುಗರ್‌ಗೆ ಕೊಡಬೇಕು. ಕಾರ್ಖಾನೆ ಉಳಿವಿಗೆ ಸಹಕರಿಸಬೇಕು ಎಂದು ಮೈಶುಗರ್‌ ಮುಖ್ಯ ಕಬ್ಬು ಅಭಿವೃದ್ಧಿ ಅಧಿಕಾರಿ ಡಿ.ಎನ್‌.ಚಂದ್ರಶೇಖರ ಮನವಿ ಮಾಡಿಕೊಂಡಿದ್ದಾರೆ.
ಲೇಖಕರ ಬಗ್ಗೆ
ಶ್ರುತಿ ಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ, ಗುತ್ತಿಗೆ ಆಧಾರದ ಮೇಲೆ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಹುಟ್ಟಿ ಬೆಳೆದಿದ್ದು, ಮಲೆನಾಡು ಶಿವಮೊಗ್ಗ ಜಿಲ್ಲೆಯ, ಹೊಸನಗರ ತಾಲೂಕಿನ ಯಡೂರು ಗ್ರಾಮದಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪುಸ್ತಕ ಓದುವುದು, ಬರೆಯುವುದು, ಹಿನ್ನೆಲೆ ಧ್ವನಿ, ಚಾರಣ, ಕವನ ರಚನೆ ನೆಚ್ಚಿನ ಹವ್ಯಾಸ. ಪ್ರಚಲಿತ ವಿದ್ಯಮಾನ, ರಾಜಕೀಯ, ಕೃಷಿ ಆಸಕ್ತಿವುಳ್ಳ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ