ಆ್ಯಪ್ನಗರ

ಮರಳು ಕೊರತೆ ನೀಗಿಸಲು ‘ಎಂ ಸ್ಯಾಂಡ್’: ಸಚಿವ ಕುಲಕರ್ಣಿ

ರಾಜ್ಯದಲ್ಲಿ ನದಿ ಮರಳಿನ ಕೊರತೆಯಿಂದಾಗಿ ಮನೆ ಕಟ್ಟುವುದು ಸೇರಿದಂತೆ ನಿರ್ಮಾಣ ಕಾಮಗಾರಿಗಳಿಗೆ ತೊಂದರೆಯಾಗಿರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಇನ್ನಷ್ಟು ಎಂ-ಸ್ಯಾಂಡ್ (ಮ್ಯಾನುಫ್ಯಾಕ್ಚರ್‌ಡ್ ಸ್ಯಾಂಡ್) ಘಟಕಗಳಿಗೆ ಸರಕಾರ ಅನುಮತಿ ನೀಡಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ವಿನಯ ಕುಲಕರ್ಣಿ ಹೇಳಿದರು.

ವಿಕ ಸುದ್ದಿಲೋಕ 7 Mar 2016, 4:26 pm
ಮಂಗಳೂರು: ರಾಜ್ಯದಲ್ಲಿ ನದಿ ಮರಳಿನ ಕೊರತೆಯಿಂದಾಗಿ ಮನೆ ಕಟ್ಟುವುದು ಸೇರಿದಂತೆ ನಿರ್ಮಾಣ ಕಾಮಗಾರಿಗಳಿಗೆ ತೊಂದರೆಯಾಗಿರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಇನ್ನಷ್ಟು ಎಂ-ಸ್ಯಾಂಡ್ (ಮ್ಯಾನುಫ್ಯಾಕ್ಚರ್‌ಡ್ ಸ್ಯಾಂಡ್) ಘಟಕಗಳಿಗೆ ಸರಕಾರ ಅನುಮತಿ ನೀಡಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ವಿನಯ ಕುಲಕರ್ಣಿ ಹೇಳಿದರು.
Vijaya Karnataka Web
ಮರಳು ಕೊರತೆ ನೀಗಿಸಲು ‘ಎಂ ಸ್ಯಾಂಡ್’: ಸಚಿವ ಕುಲಕರ್ಣಿ


ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಮಂಗಳೂರಿಗೆ ಆಗಮಿಸಿದ್ದ ಸಂದರ್ಭ ಅವರು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶಾಸಕರು ಮತ್ತು ಅಧಿಕಾರಿಗಳ ಜತೆ ಮರಳುಗಾರಿಕೆ ಕುರಿತು ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನದಿ ಮರಳುಗಾರಿಕೆಗೆ ಬಿಗಿಯಾದ ಕಾನೂನು ಕ್ರಮ ಕೈಗೊಂಡಿರುವುದರಿಂದ ರಾಜ್ಯದಲ್ಲಿ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಮರಳಿನ ಬೇಡಿಕೆ ಪೂರೈಸುವ ಜತೆಗೆ ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳಬೇಕಾಗಿದೆ. ಕೋಲಾರದಲ್ಲಿ ಅಂತರ್ಜಲ 2000 ಅಡಿಗೆ ಕುಸಿದಿದ್ದರೆ, ಮಲೆನಾಡು ಪ್ರದೇಶದಲ್ಲೂ 400 ಅಡಿವರೆಗೆ ಕುಸಿದಿದೆ. ಈ ಬಗ್ಗೆ ಭೂಗರ್ಭ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಈ ಹಿನ್ನೆಲೆಯಲ್ಲಿ ಜೆಲ್ಲಿ ಕ್ರಶರ್‌ಗಳಿಗೆ ಪ್ರತ್ಯೇಕ ಯಂತ್ರ ಅಳವಡಿಸಿ ಅದರಿಂದ ಎಂ- ಸ್ಯಾಂಡ್ ಉತ್ಪಾದನೆಗೆ ಉತ್ತೇಜನ ನೀಡುವುದು ಅಗತ್ಯವಾಗಿದೆ. ಈ ಯಂತ್ರಕ್ಕೆ 4-5 ಕೋಟಿ ರೂ. ತಗಲುತ್ತದೆ. ಈ ಮರಳು ಒಂದು ಟನ್ 600 ರೂ.ನಲ್ಲಿ ಲಭಿಸುತ್ತದೆ ಎಂದರು.

ರಾಜ್ಯದ ಕೆಲವು ಪಟ್ಟಾ ಭೂಮಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಳು ಇದೆ. ಅದನ್ನೂ ಗುರುತಿಸಲಾಗಿದೆ. ಈ ಖಾಸಗಿ ಭೂಮಿಯವರು ಮುಂದೆ ಬಂದಲ್ಲಿ ಅವರಿಗೆ ಸಬ್ಸಿಡಿ, ರಿಯಾಯಿತಿ ಮೂಲಕ ಮರಳುಗಾರಿಕೆಗೆ ಪರವಾನಿಗೆ ಒದಗಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ವಾರ್ಷಿಕ 28 ಸಾವಿರ ಲಕ್ಷ ಮೆಟ್ರಿಕ್ ಟನ್ ಮರಳಿನ ಬೇಡಿಕೆ ಇದೆ. ಆದರೆ, ಪ್ರಸ್ತುತ 10 ಸಾವಿರ ಮೆಟ್ರಿಕ್ ಟನ್ ಮರಳು ಉತ್ಪಾದನೆಯಾಗುತ್ತಿದೆ. ಎಂ-ಸ್ಯಾಂಡ್ (ಜಲ್ಲಿಯನ್ನು ಮರಳಿನ ಗಾತ್ರಕ್ಕೆ ಪುಡಿ ಮಾಡಿದರೂಪ)ನ 86 ಘಟಕ ಇವೆ. ಬೆಂಗಳೂರಿನಲ್ಲಿ 40 ಘಟಕಗಳಿದ್ದು, ಒಂದು ಘಟಕದಲ್ಲಿ ವಾರ್ಷಿಕ 4ರಿಂದ 5 ಕೋಟಿ ವಹಿವಾಟು ನಡೆಯುತ್ತಿದೆ. ಮರಳಿನ ಅಭಾವ ರಾಜ್ಯಾದ್ಯಂತದ ಸಮಸ್ಯೆಯಾಗಿದ್ದು, ಇದರಿಂದ ಮನೆ ಮತ್ತಿತರ ನಿರ್ಮಾಣ ಕಾರ್ಯಗಳಿಗೆ ತೊಂದರೆಯಾಗಿದೆ. ಎಂ- ಸ್ಯಾಂಡ್ ಮೂಲಕ ಆರು ತಿಂಗಳೊಳಗೆ ಮರಳಿನ ಪ್ರಸಕ್ತ ಉತ್ಪಾದನೆ ದ್ವಿಗುಣಗೊಳಿಸಲಾಗುವುದು ಎಂದರು.

ಕರಾವಳಿಯ ಸಮುದ್ರ ಹಾಗೂ ಕೆಲವೆಡೆ ನದಿಯಿಂದ ತೆಗೆದಿರುವ ಹೂಳಿನಲ್ಲಿರುವ ಮರಳನ್ನು ಸೋಸಿ ಮರುಬಳಕೆ ಮಾಡಲು ಅವಕಾಶವಿದ್ದು, ಈ ಬಗ್ಗೆ ಚಿಂತಿಸಲಾಗುವುದು. ಮರಳು ಸಾಗಾಟ ಮಾಡುವ ವಾಹನಗಳಿಗೆ ಜಿಪಿಎಸ್, ಬಾರ್‌ಕೋಡ್ ಹೊಂದಿರುವ ಟ್ರಿಪ್ ಶೀಟ್ ಕಡ್ಡಾಯ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಆರೋಗ್ಯ ಸಚಿವ ಯು.ಟಿ.ಖಾದರ್, ಶಾಸಕರಾದ ಮೊಯ್ದೀನ್ ಬಾವ, ಜೆ.ಆರ್ ಲೋಬೊ, ಐವನ್ ಡಿಸೋಜ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಶರಣಪ್ಪ ಎಸ್.ಡಿ., ಜಿಲ್ಲಾ ಪಂಚಾಯಿತಿ ಸದಸ್ಯ ತುಂಬೆ ಪ್ರಕಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ದ.ಕ.ದಲ್ಲಿ 5 ಮಂದಿಗೆ ಪರವಾನಗಿ: ಜಿಲ್ಲೆಯ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆಗೆ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ದೊರೆಯಬೇಕಿದೆ. ಒಂದೆರಡು ತಿಂಗಳಲ್ಲಿ ಈ ಸಮಸ್ಯೆ ಬಗೆಹರಿಯಬಹುದು. ಸಿಆರ್‌ಝಡೇತರ 38 ಬ್ಲಾಕ್ ಗುರುತಿಸಿ, ಅದರಲ್ಲಿ 23 ಬ್ಲಾಕ್‌ಗಳಿಗೆ ಟೆಂಡರ್ ಕರೆಯಲಾಗಿತ್ತು. ಅದರಲ್ಲಿ 11 ಬ್ಲಾಕ್‌ಗಳಿಗೆ ಟೆಂಡರ್ ಹಾಕಿದ್ದು, ಅರ್ಹ ಐದು ಮಂದಿಗೆ ಮಾತ್ರ ಪರವಾನಗಿ ನೀಡಲಾಗಿದೆ ಎಂದು ಸಚಿವ ವಿನಯ ಕುಲಕರ್ಣಿ ಹೇಳಿದರು.

ಮರಳುಗಾರಿಕೆ ನಡೆಸುವವರು ಸ್ವಂತ ವಾಹನ ಹೊಂದಿರಬೇಕು ಸೇರಿದಂತೆ ವಿವಿಧ ಶರತ್ತುಗಳಿದ್ದು, ಟೆಂಡರ್ ಹಾಕಲು ಹೆಚ್ಚು ಮಂದಿ ಮುಂದೆ ಬಂದಿಲ್ಲ. ಇದೀಗ ಎರಡನೇ ಬಾರಿಗೆ ನಿಯಮ ಸಡಿಲಿಸಿ ಟೆಂಡರ್ ಕರೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ