Please enable javascript.ಯಡಿಯೂರಪ್ಪ ಧಮಕಿ ರಾಜಕಾರಣ: ಉಗ್ರಪ್ಪ - ಯಡಿಯೂರಪ್ಪ ಧಮಕಿ ರಾಜಕಾರಣ: ಉಗ್ರಪ್ಪ - Vijay Karnataka

ಯಡಿಯೂರಪ್ಪ ಧಮಕಿ ರಾಜಕಾರಣ: ಉಗ್ರಪ್ಪ

ವಿಕ ಸುದ್ದಿಲೋಕ 19 Jan 2013, 8:12 pm
Subscribe

ಅಧ್ಯಕ್ಷ ಸ್ಥಾನ ಕೊಟ್ಟಿಲ್ಲ, ಸಿಎಂ ಮಾಡಲಿಲ್ಲ ಎಂದು ಕಾರಣಕ್ಕೆ ಕೆಜೆಪಿ ಕಟ್ಟಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಧಮಕಿ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಕೆಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಹೇಳಿದರು.

ಯಡಿಯೂರಪ್ಪ ಧಮಕಿ ರಾಜಕಾರಣ: ಉಗ್ರಪ್ಪ

ಮಂಗಳೂರು: ಅಧ್ಯಕ್ಷ ಸ್ಥಾನ ಕೊಟ್ಟಿಲ್ಲ, ಸಿಎಂ ಮಾಡಲಿಲ್ಲ ಎಂದು ಕಾರಣಕ್ಕೆ ಕೆಜೆಪಿ ಕಟ್ಟಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಧಮಕಿ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಕೆಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಹೇಳಿದರು.

ಒಂದೊಮ್ಮೆ ಕುಮಾರಸ್ವಾಮಿ, ಡಿ.ವಿ. ಸದಾನಂದ ಗೌಡ, ಜಗದೀಶ್ ಶೆಟ್ಟರ್ ಅವರನ್ನು ಇದೇ ಯಡಿಯೂರಪ್ಪ ಬಾಯಿ ತುಂಬಾ ಹೊಗಳುತ್ತಿದ್ದರು. ಈಗ ನೀರಿನಿಂದ ಹೊರ ಹಾಕಿದ ಮೀನಿನಂತೆ ಒದ್ದಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಅವರು ಹೇಳಿದರು.

ಒಂದು ಪಕ್ಷದಿಂದ ಅಧಿಕೃತವಾಗಿ ಟಿಕೆಟ್ ಪಡೆದು, ಗೆದ್ದು ಬಂದವರು ಪಕ್ಷಾಂತರ ಮಾಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಸಂವಿಧಾನದ 10ನೇ ವಿಧಿ ಹೇಳುತ್ತದೆ. ಯಡಿಯೂರಪ್ಪ ಕೂಡಾ ತಮ್ಮ ಬೆಂಬಲಿಗರಿಂದ ರಾಜೀನಾಮೆ ಪಡೆಯುತ್ತಿಲ್ಲ. ಅಂದು ಅಧಿಕಾರ ಹೋಗುತ್ತದೆ ಎನ್ನುವಾಗ 16 ಮಂದಿಯನ್ನು ಅನರ್ಹಗೊಳಿಸಿದ್ದ ಬಿಜೆಪಿಯೂ ಇಂದು ಸುಮ್ಮನಾಗಿದೆ. ಇಬ್ಬರೂ ಸೇರಿಕೊಂಡು ರಾಜ್ಯವನ್ನು ದೋಚುವ ಷಡ್ಯಂತ್ರ ಹೂಡಿದ್ದಾರೆ ಎಂದು ಉಗ್ರಪ್ಪ ಆರೋಪಿಸಿದರು.

ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಪರ ವಾದಿಸುತ್ತಿರುವ ನಾರೀಮನ್ ಅವರು ಸರಕಾರದ ಪರ ವಾದಿಸುತ್ತಿಲ್ಲ. ಒಂದು ವೇಳೆ ಅವರು ರಾಜ್ಯದ ಪರವಾಗಿ ವಾದಿಸುವುದಾದರೆ ಸರಕಾರ, ಸರ್ವ ಪಕ್ಷ ಕರೆದು ಕಾವೇರಿ ಅಂತಿಮ ತೀರ್ಪು ಅಧಿಸೂಚನೆ ನಡೆಸುವುದನ್ನು ಆಕ್ಷೇಪಿಸಲು ತಿಳಿಸಬಹುದಿತ್ತು. ಆದರೆ, ಹಾಗೆ ಆಗುತ್ತಿಲ್ಲ. ನಾರೀಮನ್ ಸರಕಾರದ ಪರ ವಹಿಸದೆ, ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರವು ಹಲವು ರಾಜ್ಯಗಳಂತೆ ಕರ್ನಾಟಕಕ್ಕೂ ಐಐಟಿ ನೀಡಲು ಹೊರಟಿದ್ದು, ಟಿಪ್ಪು ಹೆಸರಿಗೆ ವಿರೋಧ ವ್ಯಕ್ತಮಾಡುವ ಮೂಲಕ ಬಿಜೆಪಿ ಅಡ್ಡಗಾಲು ಹಾಕುತ್ತಿದೆ. ರಾಜ್ಯದ ಹಿತ ಕಾಯುವ ಬದಲು, ಬಲಿ ಕೊಡಲು ಹೊರಟಿದೆ.

ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ 2011ರ ಜು.27ರಂದು ಅಕ್ರಮ ಗಣಿಗಾರಿಕೆಯ ಅಂತಿಮ ವರದಿ ನೀಡಿ 22 ಸಾವಿರ ಕೋಟಿ ರೂ. ವಸೂಲಿಗೆ ಆದೇಶಿಸಿದ್ದರೂ, ಸರಕಾರ ಇನ್ನೂ ಜಾರಿಗೆ ತಂದಿಲ್ಲ.ಲೋಕಾಯುಕ್ತ ನಿಯಮ ಪ್ರಕಾರ, 90 ದಿನದಲ್ಲಿ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು. ತೃಪ್ತಿಯಾಗದಿದ್ದರೆ, ರಾಜ್ಯಪಾಲರಿಗೆ ವಿಶೇಷ ವರದಿ ಸಲ್ಲಿಸಬೇಕು. ಇದೆಲ್ಲಾ ಮಾಡಲು ಲೋಕಾಯುಕ್ತರನ್ನೇ ನೇಮಿಸದೆ, ಸರಕಾರ ಭ್ರಷ್ಟಾಚಾರವನ್ನು ಪೋಷಿಸುತ್ತಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ನಾಯಕರಾದ ಕೆ. ಅಶ್ರಫ್, ಕೃಪಾ ಆಳ್ವ, ಟಿ.ಕೆ. ಸುಧೀರ್, ನಝೀರ್ ಬಜಾಲ್, ಮೋಹನ್ ಮೆಂಡನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ