Please enable javascript.ಕೋಟಿಗಟ್ಟಲೆ ಹಣವಿದ್ದರೂ ಜಾಗವಿಲ್ಲ! - land problem - Vijay Karnataka

ಕೋಟಿಗಟ್ಟಲೆ ಹಣವಿದ್ದರೂ ಜಾಗವಿಲ್ಲ!

ವಿಕ ಸುದ್ದಿಲೋಕ 23 Dec 2016, 3:12 pm
Subscribe

ಒಂದರ ಹಿಂದೊಂದರಂತೆ ಕೋಟಿಗಟ್ಟಲೆ ರೂ.ಗಳ ಯೋಜನೆ ಮಂಜೂರಾಗಿದೆ. ಆದರೇನು ಮಾಡೊದು, ಅದನ್ನೆಲ್ಲ ಅನುಷ್ಠಾನ ಮಾಡಲು ಸೂಕ್ತ ಜಾಗವೇ ಇಲ್ಲ! ಜಮೀನು ಮಂಜೂರು ಮಾಡಿಕೊಡಬೇಕಾದ ಕಂದಾಯ ಇಲಾಖೆ ರಾಜಕೀಯ ಗುದ್ದಾಟಗಳಿಗೆ ರೋಸಿ ಹೋಗಿದೆ.

land problem
ಕೋಟಿಗಟ್ಟಲೆ ಹಣವಿದ್ದರೂ ಜಾಗವಿಲ್ಲ!

ಸುಧಾಕರ ಸುವರ್ಣ ತಿಂಗಳಾಡಿ ಪುತ್ತೂರು

ಒಂದರ ಹಿಂದೊಂದರಂತೆ ಕೋಟಿಗಟ್ಟಲೆ ರೂ.ಗಳ ಯೋಜನೆ ಮಂಜೂರಾಗಿದೆ. ಆದರೇನು ಮಾಡೊದು, ಅದನ್ನೆಲ್ಲ ಅನುಷ್ಠಾನ ಮಾಡಲು ಸೂಕ್ತ ಜಾಗವೇ ಇಲ್ಲ! ಜಮೀನು ಮಂಜೂರು ಮಾಡಿಕೊಡಬೇಕಾದ ಕಂದಾಯ ಇಲಾಖೆ ರಾಜಕೀಯ ಗುದ್ದಾಟಗಳಿಗೆ ರೋಸಿ ಹೋಗಿದೆ.

ಕಳೆದ ಎರಡು ಮೂರು ವರ್ಷಗಳ ಅವಧಿಯಲ್ಲಿ ಪುತ್ತೂರು ವಿಧಾನಸಭೆ ಕ್ಷೇತ್ರಕ್ಕೆ ಕೋಟ್ಯಂತರ ರೂ. ಮೊತ್ತದ ಯೋಜನೆಗಳನ್ನು ಶಾಸಕರು ಜಾರಿ ತಂದಿದ್ದಾರೆ. ದುರಂತವೆಂದರೆ ಜಮೀನು ಸಮಸ್ಯೆಯಿಂದ ಇದರಲ್ಲಿ ಬಹುಪಾಲು ಯೋಜನೆಗಳು ವಾಪಸ್‌ ಹೋಗುತ್ತಿವೆ ಎಂಬ ಬೇಸರ ಸ್ವತಃ ಶಾಸಕರಿಗೇ ಇದೆ.

ಪುತ್ತೂರು ನಗರದಲ್ಲಿ ಸುಸಜ್ಜಿತ ಅಂಬೇಡ್ಕರ್‌ ಭವನ ನಿರ್ಮಿಸಬೇಕೆಂಬ ಬಹುಕಾಲದ ಬೇಡಿಕೆಗೆ ಸ್ಪಂದಿಸಿರುವ ಸರಕಾರ ಶಾಸಕರ ಶಿಫಾರಸಿನ ಮೇರೆಗೆ ಒಂದು ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಪರಿಶಿಷ್ಟ ಸಮುದಾಯದ ಜನರಿಗೆ ಉಪಯುಕ್ತವಾಗುವ ಭವನ ನಿರ್ಮಾಣ ಇದರ ಉದ್ದೇಶ. ಇನ್ನೊಂದು ಕಡೆ ಹಿಂದುಳಿದ ವರ್ಗದವರಿಗೆ ನೆರವಾಗಲೆಂದು ದೇವರಾಜ ಅರಸು ಸಭಾಭವನ ನಿರ್ಮಾಣಕ್ಕೆ ಒಂದೂವರೆ ಕೋಟಿ ರೂ. ಮಂಜೂರಾಗಿದೆ.

ದುರದೃಷ್ಟವೆಂದರೆ ಎರಡೂ ಯೋಜನೆಗಳಿಗೂ ಜಾಗದ ಕೊರತೆ! ಅದರಲ್ಲೂ ಅಂಬೇಡ್ಕರ್‌ ಭವನವನ್ನು ನಗರದ ಮಧ್ಯದ ಉಪ ನೋಂದಣಿ ಅಧಿಕಾರಿ ಕಚೇರಿಯ ಜಾಗದಲ್ಲೇ ನಿರ್ಮಿಸಬೇಕೆಂದು ದಲಿತ ಸಂಘಟನೆಗಳು ಪಟ್ಟು ಹಿಡಿದಿದ್ದು, ಸಮಸ್ಯೆ ಬಗೆಹರಿದಿಲ್ಲ.

ಒಂದೂವರೆ ಕೋಟಿ ರೂ.ವೆಚ್ಚದ ದೇವರಾಜ ಅರಸು ಸಭಾ ಭವನಕ್ಕೆ ಜಾಗ ಹುಡುಕಲು ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದ್ದು, ಅದಿನ್ನೂ ಶೋಧನೆಯ ಹಾದಿಯಲ್ಲಿದೆ. ಉಪ್ಪಿನಂಗಡಿಯಲ್ಲಿ ಐವತ್ತು ಲಕ್ಷ ರೂ. ವೆಚ್ಚದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಮಂಜೂರಾಗಿದ್ದು, ಅಲ್ಲೂ ಜಮೀನಿನ ಸಮಸ್ಯೆ ಎದುರಾಗಿದ್ದು, ಇದೀಗ ಕೊನೆ ಕ್ಷ ಣದಲ್ಲಿ ಅದು ಇತ್ಯರ್ಥವಾಗುವ ಲಕ್ಷ ಣ ಗೋಚರಿಸಿದೆ.

ಗ್ರಾಮೀಣ ಪ್ರದೇಶಗಳಿಗೆ 15 ಅಂಬೇಡ್ಕರ್‌ ಭವನ ಮಂಜೂರು ಮಾಡಲಾಗಿದೆ. ಎಲ್ಲದಕ್ಕೂ ತಲಾ ಹತ್ತು ಲಕ್ಷ ರೂ. ಮಂಜೂರು ಮಾಡಿಸಿದ್ದೇನೆ. ಅದರಲ್ಲಿ ನಾಲ್ಕೈದು ಕಡೆ ಮಾತ್ರ ಜಮೀನು ಸಮಸ್ಯೆ ಇಲ್ಲ ಇತರ ಕಡೆ ಜಮೀನು ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ. ದೇವರಾಜ ಅರಸು ಸಭಾಭವನಕ್ಕೆ ಹಣ ಮಂಜೂರಾಗಿದ್ದು, ಪುತ್ತೂರು ನಗರದಲ್ಲಿ ಜಮೀನು ಶೋಧಿಸಲು ನಮಗೆ ಸೂಚನೆ ಇದೆ. ಆದರೆ ಇನ್ನೂ ಸಿಕ್ಕಿಲ್ಲ ಎಂದು ಉಪ ತಹಸೀಲ್ದಾರ್‌ ಶ್ರೀಧರ್‌ ಕೋಡಿಜಾಲ್‌ ಹೇಳುತ್ತಾರೆ.

ಬಜತ್ತೂರು ವಿವಾದ: ತಾಲೂಕಿನ ಬಜತ್ತೂರಿಗೆ ಮಂಜೂರಾದ ಅಂಬೇಡ್ಕರ್‌ ಭವನದ ಜಾಗದ ಸಮಸ್ಯೆ ಉಲ್ಬಣಿಸಿದ್ದು, ಹಲವು ಸುತ್ತಿನ ಸಮೀಕ್ಷೆಗಳು ನಡೆದಿವೆ. ಅಲ್ಲಿ ಭವನ ನಿರ್ಮಾಣಕ್ಕೆ ಡೀಸಿ ಮನ್ನಾ ಜಮೀನಿನಲ್ಲಿ ಜಾಗ ಗಡಿ ಗುರುತು ಮಾಡಲಾಗಿದೆ. ಆದರೆ ಅದು ಅರಣ್ಯ ಇಲಾಖೆ ಜಮೀನು ಎಂಬುದು ಆ ಇಲಾಖೆಯ ವಾದ. ಕೊನೆಗೂ ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸಮೀಕ್ಷೆ ನಡೆದಿದ್ದು, ಫಲಿತಾಂಶಕ್ಕೆ ಕಾಯಲಾಗುತ್ತಿದೆ. ಒಂದು ವೇಳೆ ಶೀಘ್ರ ಬಗೆಹರಿಯದಿದ್ದರೆ ಹಣ ಲ್ಯಾಫ್ಸ್‌ ಆಗಲಿದೆ.

ಸಬ್‌ ರಿಜಿಸ್ಟ್ರಾರ್‌ ಕಚೇರಿ ಜಾಗವೇ ಬೇಕು!: ಪುತ್ತೂರು ನಗರಕ್ಕೆ ಮಂಜೂರಾದ ಒಂದು ಕೋಟಿ ರೂ.ಗಳ ಅಂಬೇಡ್ಕರ್‌ ಭವನಕ್ಕೆ ಜಮೀನು ಸಮಸ್ಯೆ ತಾರಕಕ್ಕೇರಿದೆ. ಸರಕಾರಿ ಆಸ್ಪತ್ರೆ ಪಕ್ಕದಲ್ಲಿರುವ ಸಬ್‌ ರಿಜಿಸ್ಟ್ರಾರ್‌ ಕಚೇರಿಯನ್ನು ಅಲ್ಲಿಂದ ಮಿನಿ ವಿಧಾನಸೌಧಕ್ಕೆ ಸ್ಥಳಾಂತರ ಮಾಡಲಾಗುತ್ತದೆ ಎಂಬ ವಿಷಯ ಬೆಳಕಿಗೆ ಬರುತ್ತಲೇ, ಆ ಜಾಗ ಅಂಬೇಡ್ಕರ್‌ ಭವನಕ್ಕೆ ಕೊಡಿ ಎಂದು ದಲಿತ ಸಂಘಟನೆಗಳು ನಾನಾ ಹಂತದಲ್ಲಿ ಆಗ್ರಹಿಸಿವೆ. ಆದರೆ ಸಬ್‌ ರಿಜಿಸ್ಟ್ರಾರ್‌ ಕಚೇರಿ ಇನ್ನೂ ಸ್ಥಳಾಂತರಗೊಂಡಿಲ್ಲ. ಅಂಬೇಡ್ಕರ್‌ ಭವನಕ್ಕೆ ಬೇರೆ ಜಾಗ ಸಿಕ್ಕಿಲ್ಲ. ಸಬ್‌ ರಿಜಿಸ್ಟ್ರಾರ್‌ ಕಚೇರಿಯ ಜಾಗವನ್ನು ಅಂಬೇಡ್ಕರ್‌ ಭವನಕ್ಕೆ ಮಂಜೂರು ಮಾಡಲು ನಾವು ಹೋರಾಟ ತೀವ್ರಗೊಳಿಸಲಿದ್ದೇವೆ ಎಂದು ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡ್‌ ತಿಳಿಸಿದ್ದಾರೆ.

ಸರಕಾರಿ ಮಟ್ಟದಲ್ಲಿ ವ್ಯವಹರಿಸಿ ಕಷ್ಟಪಟ್ಟು ಯೋಜನೆಗಳನ್ನು ತರುತ್ತಿದ್ದೇನೆ. ಬಡವರು, ಹಿಂದುಳಿದವರು ಪ್ರಯೋಜನ ಪಡೆಯಲಿ ಎಂಬುದು ನನ್ನಾಸೆ. ಹೆಚ್ಚಿನ ಕಡೆ ಜಮೀನಿನ ಕೊರತೆ ಇದೆ. ಯೋಜನೆ ತಂದ ಮೇಲೆ ಅದಕ್ಕೆ ಬೇಕಾದ ಜಮೀನು ಮಂಜೂರಿಗೆ ಸ್ಥಳೀಯ ಜನಪ್ರತಿನಿಧಿಗಳು ಕೆಲಸ ಮಾಡಬೇಕು. ಆದರೆ ಅದರಲ್ಲಿ ರಾಜಕೀಯ ಮಾಡುತ್ತಾರೆ. ಊರೂರಿನಲ್ಲೂ ಜಮೀನು ಹುಡುಕಲು ಶಾಸಕರೇ ಹೋಗಬೇಕೆಂದರೆ ಏನು ಮಾಡಲಿ? -ಶಕುಂತಳಾ ಟಿ.ಶೆಟ್ಟಿ, ಶಾಸಕರು ಪುತ್ತೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ