Please enable javascript.ತೊಟ್ಟು ನೀರಿಲ್ಲದ ಪೊಟ್ಟೊಳಿಕೆ - no drop of water in pottolike - Vijay Karnataka

ತೊಟ್ಟು ನೀರಿಲ್ಲದ ಪೊಟ್ಟೊಳಿಕೆ

ವಿಕ ಸುದ್ದಿಲೋಕ 28 Apr 2015, 5:04 am
Subscribe

ನರಿಂಗಾನ ಗ್ರಾಮದ ಪೊಟ್ಟೊಳಿಕೆ ಎಂಬುದು ವಸ್ತುಶ: ಪೊಟ್ಟು ಬಾವಿಗಳ ಊರು! ಯಾಕೆಂದರೆ, ಇಲ್ಲಿ 800 ಅಡಿ ಆಳಕ್ಕೆ ಕೊಳವೆ ಬಾವಿ ತೋಡಿದರೂ ನೀರು ಸಿಕ್ಕದ ಹತ್ತಾರು ಉದಾಹರಣೆಗಳಿವೆ. ಸಾವಿರ ಅಡಿ ಆಳದಲ್ಲೂ ಅಂತರ್ಜಲದ ಕೊರತೆ ಕಂಡುಬರುತ್ತಿದೆ.

no drop of water in pottolike
ತೊಟ್ಟು ನೀರಿಲ್ಲದ ಪೊಟ್ಟೊಳಿಕೆ
-ಸತೀಶ್ ಕುಮಾರ್ ಪುಂಡಿಕಾಯಿ ನರಿಂಗಾನ ಗ್ರಾಮದ ಪೊಟ್ಟೊಳಿಕೆ ಎಂಬುದು ವಸ್ತುಶ: ಪೊಟ್ಟು ಬಾವಿಗಳ ಊರು! ಯಾಕೆಂದರೆ, ಇಲ್ಲಿ 800 ಅಡಿ ಆಳಕ್ಕೆ ಕೊಳವೆ ಬಾವಿ ತೋಡಿದರೂ ನೀರು ಸಿಕ್ಕದ ಹತ್ತಾರು ಉದಾಹರಣೆಗಳಿವೆ. ಸಾವಿರ ಅಡಿ ಆಳದಲ್ಲೂ ಅಂತರ್ಜಲದ ಕೊರತೆ ಕಂಡುಬರುತ್ತಿದೆ.

ಪೊಟ್ಟೊಳಿಕೆ ಎತ್ತರದ ಪ್ರದೇಶ. ಹಾಗಾಗಿ ನೀರು ಸಿಗುತ್ತಿಲ್ಲ ಎಂದೇನೋ ಸಮಜಾಯಿಷಿ ಹೇಳಬಹುದು. ಆದರೆ, ಅದಕ್ಕಿಂತ ಸುಮಾರು 400 ಅಡಿ ಕೆಳಗಿನ ಮೋರ್ಲ ಮತ್ತು ಬೋಳ ಪರಿಸರದಲ್ಲಿ ಕೃಷಿಗಾಗಿ ಇತ್ತೀಚೆಗೆ 600 ಅಡಿ ಆಳಕ್ಕೆ ಮೂರು ಕೊಳವೆ ಬಾವಿ ತೋಡಿದ್ದರೂ ಹನಿ ನೀರು ಸಿಕ್ಕಿಲ್ಲ ಎನ್ನುವುದು ಈ ಭಾಗದ ನೀರಿನ ಸಮಸ್ಯೆಯ ತುರೀಯ ಸ್ಥಿತಿಯನ್ನು ತೆರೆದಿಡುತ್ತದೆ.

ಹಾಗಂತ, ಈ ಸಮಸ್ಯೆ ಎಲ್ಲರಿಗೆ ಎದುರಾಗಿದೆ ಎಂದಲ್ಲ, ಪೊಟ್ಟೊಳಿಕೆಯಲ್ಲಿ ಕೆಲವು ಉದ್ದಿಮೆಗಳು ಮತ್ತು ನೂರಾರು ಕಾರ್ಮಿಕರಿದ್ದು, ಉದ್ದಿಮೆಗಳಿಗೆ ನೀರಿನ ಸಮಸ್ಯೆ ಎದುರಾಗಿಲ್ಲ. ಇದಕ್ಕೆ ಕಾರಣ, ಅವರು ಬೃಹತ್ ಕೊಳವೆ ಬಾವಿಗಳ ಮೂಲಕ ನೀರೆತ್ತುತ್ತಿರುವುದು. ಆದರೆ, ಸರಕಾರ ತೋಡಿಸುವ ಬೋರ್‌ವೆಲ್‌ಗಳಲ್ಲಿ ಹನಿ ನೀರಿಲ್ಲ!

ಇರುವ ಅಂತರ್ಜಲವನ್ನು ದೊಡ್ಡ ಬೋರ್‌ವೆಲ್‌ಗಳ ಮೂಲಕ ಮೇಲೆತ್ತಿದ್ದರ ಅಂತಿಮ ಪರಿಣಾಮ ಏನಾಗಿದೆ ಎಂದರೆ, ತಳಭಾಗದಲ್ಲಿರುವ ಸರ್ಕುಡೇಲು ಕೃಷಿ ಭೂಮಿ ವಸ್ತುಶ: ಬರಡಾಗಿ ಹೋಗಿದೆ.

ಜಿಲ್ಲೆಯಲ್ಲೇ ಕುಡಿಯುವ ನೀರಿನ ಗರಿಷ್ಠ ಸಮಸ್ಯೆ ಇರುವ ಪ್ರದೇಶವೆಂಬ ಅಪಕೀರ್ತಿ ಒಂದು ಕಾಲದಲ್ಲಿ ಕುರ್ನಾಡು ಜಿಪಂ ಕ್ಷೇತ್ರಕಿತ್ತು. ಕೇವಲ ನಾಲ್ಕು ವರುಷಗಳ ಅವಧಿಯಲ್ಲಿ ಇದು ಅಕ್ಷರಶಃ ಬದಲಾಗಿದೆ.

ಸ್ವಂತ ಖರ್ಚಿನಲ್ಲಿ ಬೋರ್ ತೋಡಿಸಿದರು: ಪರಂಚಿಲು ಬಳಿ ನೀರಿನ ಟ್ಯಾಂಕ್ ನಿರ್ಮಾಣಗೊಂಡಿದ್ದು, ಮುಂದಿನ ತಿಂಗಳು ಲೋಕಾರ್ಪಣೆಗೊಳ್ಳಲಿದೆ. ಸದ್ಪಾಡಿಯಲ್ಲಿ 7.5 ಲಕ್ಷ ರೂ. ವೆಚ್ಚದಲ್ಲಿ , ರಾಮ್ ಭಾಗ್‌ನಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡಿದ್ದು ಎರಡೂ ಈ ವಾರ ಉದ್ಘಾಟನೆಗೊಳ್ಳಲಿದೆ. ನರಿಂಗಾನ ಗ್ರಾಮದ ಪೊಟ್ಟೊಳಿಕೆ, ಕೈರಂಗಳ, ಮೊಂಟೆಪದವು, ಬಾಳೆಪುಣಿ ನವಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ನೀರಿನ ಮೂಲಗಳು ಇಲ್ಲದಿರುವುದೇ ಮುಖ್ಯ ಸಮಸ್ಯೆ. ಎಪ್ರಿಲ್ ಮೇ ತಿಂಗಳಲ್ಲಿ ಸ್ವಲ್ಪ ಸ್ವಲ್ಪ ನೀರಿನ ವ್ಯವಸ್ಥೆ ಮಾಡಿದರೂ ದೊಡ್ಡ ಕುಟುಂಬಗಳಿಗೆ ಸಾಲುತ್ತಿಲ್ಲ. ಜಿಪಂ ಮತ್ತು ಟಾಸ್ಕ್ ಫೋರ್ಸ್ ಮೂಲಕ ಸಂಬಂಧಿತ ಭಾಗಕ್ಕೆ ಬೋರ್‌ವೆಲ್ ತೋಡುವ ಅಥವಾ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡುತ್ತಿದೆ. ಈಗಲೇ ನೀರು ಕೊಡಿಸಿ ಎಂಬ ಪ್ರತಿಭಟನಾಕಾರರ ಆಗ್ರಹಕ್ಕೆ ನೀರಿನ ಮೂಲಗಳೇ ಇಲ್ಲ. ಎಪ್ರಿಲ್-ಮೇ ತಿಂಗಳಲ್ಲಿ ಟ್ಯಾಂಕರ್ ಮೂಲಕವೇ ಹರಿಸುವುದು ಸೂಕ್ತ ಎಂಬ ಇಲಾಖೆ ಮಾಹಿತಿಯನ್ನು ಜಿ.ಪಂ. ಸದಸ್ಯರು ಪ್ರತಿಭಟನಾಕಾರರಿಗೆ ಬಗೆ ಬಗೆಯಾಗಿ ಹೇಳಿದ್ದರೂ ಮಣಿಯದಿದ್ದಾಗ ಕಡೆಗೆ ಸ್ವಂತ ಖರ್ಚಿನಲ್ಲಿ ಕೊಳವೆ ಬಾವಿ ತೋಡಿಸಿಯೂ ಒಂದು ಹನಿ ನೀರು ಸಿಗದಿರುವುದನ್ನು ಕಂಡು ಪ್ರತಿಭಟನಾಕಾರರು ಹಿಂದೆ ಸರಿದ ಘಟನೆ ಈ ಕ್ಷೇತ್ರದಲ್ಲಿ ನಡೆದಿದೆ. * ಪೊಟ್ಟೊಳಿಕೆಯಲ್ಲಿ ಟಾಸ್ಕ್ ಫೋರ್ಸ್ ಮೂಲಕ ಕೊಳವೆ ಬಾವಿ ತೋಡಲಾಗಿದ್ದು ಸ್ವಲ್ಪ ಮಟ್ಟಿಗೆ ನೀರು ಸಿಕ್ಕಿದೆ. ಮೋರ್ಲಹಿತ್ಲುವಿನ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದುದರಿಂದ ಅಲ್ಲಿಯೇ ಕ್ರಶ್ ಮಾಡಿದ ಪರಿಣಾಮ ಸ್ವಲ್ಪ ಮಟ್ಟಿಗೆ ಸಮಸ್ಯೆ ನೀಗಿದೆ. ಬೋಳ ಒಂದು ಭಾಗದಲ್ಲಿ ತೋಡಲಾದ ಕೊಳವೆ ಬಾವಿಯಲ್ಲಿ ನೀರು ಲಭ್ಯವಾದರೂ ಅದಕ್ಕೆ ಪಂಪು, ಪೈಪ್‌ಲೈನ್ ಸಂಪರ್ಕ ಆಗಿಲ್ಲ. ಪೊಟ್ಟೊಳಿಕೆಯಲ್ಲಿ 800 ಅಡಿ ತೋಡಿದ ಬೋರ್‌ವೆಲ್‌ನಲ್ಲಿ ಬರೀ ಒಂದಿಂಚು ನೀರು ಸಿಕ್ಕಿದೆ. ಇಲ್ಲಿಗೆ ಟ್ಯಾಂಕರ್‌ನಲ್ಲಿ ನೀರು ಪೂರೈಸುವುದೂ ಕಷ್ಟ. ವಿದ್ಯಾನಗರದಲ್ಲೂ ಸಮಸ್ಯೆ ಇದೆ. ಹಾಗಾಗಿ ನರಿಂಗಾನ ಗ್ರಾಮದ ಒಂದು ಭಾಗಕ್ಕಾದರೂ ತುಂಬೆಯಿಂದ ನೀರು ತರಲು ಮನಸು ಮಾಡಬೇಕು. - ಮುರಳೀಧರ ಶೆಟ್ಟಿ ಮೋರ್ಲ, ಸದಸ್ಯರು, ಯುವಕ ಮಂಡಲ ನರಿಂಗಾನ *ನರಿಂಗಾನದ ಪೊಟ್ಟೊಳಿಕೆ, ಕೈರಂಗಳ, ಮೊಂಟೆಪದವು, ಬಾಳೆಪುಣಿ, ಕುರ್ನಾಡು ನವಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇಲ್ಲಿ ಐದು ಕೊಳವೆ ಬಾವಿ ಇದೆ. ಟ್ಯಾಂಕ್ ಇದೆ. ಹಾಗಿದ್ದರೂ ಅಲ್ಲಿ ನೀರಿನ ಸಮಸ್ಯೆ ಇದೆ. ವಿದ್ಯುತ್ ಆಗಾಗ ಕೈಕೊಡುವುದು, ಲೋ ವೋಲ್ಟೇಜ್‌ನಿಂದ ಮೋಟಾರ್ ಕೆಡುತ್ತದೆ. ಹಾಗಾಗಿ ನೀರು ಸರಬರಾಜಿಗೆ ತೊಂದರೆ ಆಗುತ್ತದೆ. ಗರಿಷ್ಠ ಸಮಸ್ಯೆ ಇದ್ದ ಕುರ್ನಾಡು ಜಿಪಂ ವ್ಯಾಪ್ತಿಯ ಸಮಸ್ಯೆಗಳನ್ನು ಬಹುತೇಕ ಪರಿಹರಿಸಲಾಗಿದೆ. -ಸಂತೋಷ್ ಕುಮಾರ್ ರೈ ಬೋಳಿಯಾರು, ಜಿ.ಪಂ. ಸದಸ್ಯರು *ಪೊಟ್ಟೊಳಿಕೆ ಭಾಗದಲ್ಲಿ ನೀರಿನ ಮೂಲ ಇಲ್ಲದಿರುವುದೇ ದೊಡ್ಡ ಸಮಸ್ಯೆ. ಕಲ್ಮಿಂಜ, ಆಳ್ವರಬೆಟ್ಟು ಹಾಗೂ ಕಲ್ಲರಕೋಡಿಯಲ್ಲಿ ಕೆಲವು ದಶಕಗಳಿಂದ ಕಾಡುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿದೆ. - ರಮೇಶ್ ಬೆದ್ರೊಳಿಕೆ, ಸಿವಿಲ್ ಕಂಟ್ರಾಕ್ಟರ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ