ಆ್ಯಪ್ನಗರ

ವರ್ಣಮಾಲೆಯಲ್ಲೇ ವಿನಾಯಕನ ವರ್ಣಿಸಿದ ವನಿತೆ..! ಮಾನಸಿ ಸುಧೀರ್ Exclusive ಸಂದರ್ಶನ

ಸೋಷಿಯಲ್‌ ಮೀಡಿಯಾ ಎಂಬುದು ಅದೆಷ್ಟೋ ಪ್ರತಿಭೆಗಳ ಕಲಾ ಪ್ರದರ್ಶನಕ್ಕೆ ವೇದಿಕೆಯಾಗಿ ಹೊರಹೊಮ್ಮಿದೆ. ಅದರಲ್ಲೂ ಪ್ರಸ್ತುತ ಲಾಕ್‌ ಡೌನ್‌ ಅವಧಿಯಲ್ಲಿ ಎಲ್ಲರೂ ಒಂದರ್ಥದಲ್ಲಿ ಇದೇ ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳುವ ರೀತಿ ಹಾಗೂ ಪ್ರಸ್ತುತ ಪಡಿಸುವ ವಿಧಾನ ಭಿನ್ನ - ವಿಭಿನ್ನವಾಗಿದೆ. ಇದಕ್ಕೆ ಉದಾಹರಣೆಯೆಂದರೆ ತಮ್ಮಲ್ಲಿರುವ ಸುಪ್ತ ಕಲೆಯನ್ನು ವಿಡಿಯೋ ಮಾಡಿ ಹರಿಬಿಟ್ಟು ಸಖತ್‌ ವೈರಲ್‌ ಆದ ಮಾನಸಿ ಸುಧೀರ್.

Vijaya Karnataka Web 27 Aug 2020, 2:01 pm
ಈ ಬಾರಿಯ ಗಣೇಶನ ಹಬ್ಬದಲ್ಲಿ ರಾಜ್ಯದ ಜನರಿಗೆ ಒಂದು ವಿಶೇಷ ಕಾದಿತ್ತು. ಹಬ್ಬದ ಸಂದರ್ಭದಲ್ಲಿ ಒಂದು ವಿಡಿಯೋ ಭರ್ಜರಿ ವೈರಲ್ ಆಗಿತ್ತು. ಅದು ವರ್ಣಮಾಲೆಯ ವಿಡಿಯೋ..! ಗಣೇಶನನ್ನು, ವಿನಾಯಕ ಚತುರ್ಥಿ ಹಬ್ಬದ ಆಚರಣೆಯನ್ನು ಅ, ಆ, ಇ, ಈ ಬಳಸಿ ವರ್ಣಿಸುವ ಹಾಡು ಅದು. ಆ ಹಾಡು, ಆ ಮ್ಯೂಸಿಕ್‌ ಇವೆರನ್ನೂ ಮೀರಿಸುವಂಥಾ ಮುಖಭಾವ..! ಆ ಗೃಹಿಣಿಯ ಮುಖಭಾವ ನೋಡಿದವರು ಮತ್ತೆ ಮತ್ತೆ ಆ ವಿಡಿಯೋ ನೋಡುತ್ತಾ, ಅ, ಆ, ಇ, ಈ ಹಾಡು ಕೇಳುತ್ತಾ ಗಣೇಶನ ಹಬ್ಬವನ್ನು ಕಳೆದುಬಿಟ್ಟರು..! ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಆ ಗೃಹಿಣಿಯ ಹೆಸರು ಮಾನಸಿ ಸುಧೀರ್.. ಇವರು ಮೂಲತಃ ಉಡುಪಿ ಜಿಲ್ಲೆಯವರು.. ಗೃಹಿಣಿ ಮಾತ್ರವಲ್ಲ, ಇವರು ಬಹುಮುಖ ಪ್ರತಿಭೆಯ ಕಲಾವಿದೆ ಕೂಡಾ...
Vijaya Karnataka Web artist manasi sudhir exclusive interview ganesha festival social media viral song
ವರ್ಣಮಾಲೆಯಲ್ಲೇ ವಿನಾಯಕನ ವರ್ಣಿಸಿದ ವನಿತೆ..! ಮಾನಸಿ ಸುಧೀರ್ Exclusive ಸಂದರ್ಶನ


ತಮ್ಮ ಭರತನಾಟ್ಯ, ಸಂಗೀತ ಜ್ಞಾನ ಎಲ್ಲವನ್ನೂ ಸೇರಿಸಿ ಭಾವನಾಭಿನಯ ವಿಶೇಷ ಲೇಪನಗೈದು ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಟಿಸಿರುವ ಮಾನಸಿ ಸುಧೀರ್, ಕಥನ ಶೈಲಿಯ ಗಣಪನ ಹಾಡಿನಲ್ಲಿ ಕನ್ನಡ ವರ್ಣಮಾಲೆಯ ಸ್ವರಾಕ್ಷರಗಳನ್ನು ಇಟ್ಟುಕೊಂಡು ವಿನಾಯಕನನ್ನು ವಿವರಿಸಿದ್ದರು. ಹಾಗೆಯೇ ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರ ಮನಸ್ಸನ್ನೂ ಗೆದ್ದಿತು. ದಿವಂಗತ ಮುಂಡಾಜೆ ರಾಮಚಂದ್ರ ಭಟ್ ಅವರು ಸುಮಾರು 40 ವರ್ಷದ ಹಿಂದೆ ಬರೆದ ಈ ಶಿಶುಗೀತೆಗೆ ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮರುಜೀವ ಬರಿಸಿದ ಕೀರ್ತಿ ಮಾನಸಿಯವರದ್ದು.

ಸೋಷಿಯಲ್ ಮೀಡಿಯಾದ ಈ ಸೂಪರ್ ಸೆನ್ಸೇಷನ್, ನಿಮ್ಮ ವಿಜಯ ಕರ್ನಾಟಕ ವೆಬ್‌ನ ಆನ್‌ಲೈನ್ ಸಂದರ್ಶನಕ್ಕೆ ಸಿಕ್ಕಿದರು. ವಿಜಯ ಕರ್ನಾಟಕ ವೆಬ್ ಮೈಸೂರು ವರದಿಗಾರ್ತಿ ಯಶಸ್ವಿನಿ ಅವರು, ಮಾನಸಿ ಸುಧೀರ್‌ರನ್ನು ಮಾತನಾಡಿಸಿದ್ದಾರೆ. ಮಾನಸಿ ಅವರ ಹಿನ್ನೆಲೆ, ಕಲಾ ಸಾಧನೆ ಎಲ್ಲದರ ಚಿತ್ರಣ ಈ ಸಂದರ್ಶನದಲ್ಲಿದೆ. ಮಾನಸಿ ಅವರ ಸಂದರ್ಶನದ ಸಂಕ್ತಿಪ್ತ ಲೇಖನ ಇಲ್ಲಿದೆ. ಲೇಖನದ ಕೊನೆಯಲ್ಲಿ ವಿಡಿಯೋ ಸಂದರ್ಶನವನ್ನು ವೀಕ್ಷಿಸಬಹುದಾಗಿದೆ.

​ಪತಿ, ಪತ್ನಿ ಇಬ್ಬರೂ ಕಲಾವಿದರೇ..!

ಮಾನಸಿ ಅವರು ತಮ್ಮ ಪತಿ ವಿದ್ವಾನ್ ಸುಧೀರ್‌ ರಾವ್‌ ಅವರೊಂದಿಗೆ ನೃತ್ಯಶಾಲೆಯನ್ನು ನಡೆಸುತ್ತಿದ್ದು, ಇದೇ ರೀತಿ ನಮ್ಮ ಸಾಂಸ್ಕೃತಿಕ ಲೋಕಕ್ಕೆ ಬಹಳಷ್ಟು ಪ್ರತಿಭೆಗಳನ್ನು ಪರಿಚಯಿಸಲು ಸಜ್ಜಾಗಿದ್ದಾರೆ. ಕನ್ನಡದ 'ಅಮ್ಮನ ಮನೆ', ತುಳುವಿನ 'ಕಂಚಿಲ್ದ ಬಾಲೆ 'ಎಂಬ ತುಳು ಸಿನಿಮಾದಲ್ಲೂ ಅಭಿನಯಿಸಿದ್ದು, ಧಾರಾವಾಹಿಗಳಾದ 'ಮಹಾಭಾರತ', 'ಸೀತೆ' ಹಾಗೂ ಭಕ್ತಿ ಪ್ರಧಾನ ಧಾರಾವಾಹಿ 'ಗುರು ರಾಘವೇಂದ್ರ ವೈಭವ'ದಲ್ಲಿ ನಟಿಸಿದ್ದಾರೆ.

​‘ವರ್ಣಮಾಲೆ’ ಹಾಡು ಝಲಕ್ ಮಾತ್ರ..! ಮಾನಸಿ ಸಾಧನೆ ಒಂದೆರಡಲ್ಲ..!

ಮಾನಸಿ ಅಭಿನಯಿಸಿರುವ ಬೇಂದ್ರೆ ಅವರ 'ಬೃಂಗದ ಬೆನ್ನೇರಿ’ ಹಾಗೂ ಬಿ ಆರ್ ಲಕ್ಷ್ಮಣರಾವ್‌ ಅವರ 'ಹೇಗಿದ್ದೀಯೇ ಟ್ವಿಂಕಲ್‌’, ‘ಏನೀ ಅದ್ಭುತವೇ ಗೆಳತಿ ಎಂಥ ಅದ್ಭುತವೇ ಗೆಳೆತಿ’, ದುಂಡಿರಾಜ್ ಅವರ ‘ಗಣರಾಜ್ಯದ ಗುಣಗಾನ’ ಹಾಡು ವೈರಲ್ ಆಗಿದೆ.

ಲಾಕ್ಡೌನ್ ವೇಳೆಯಲ್ಲಿ ಮನೆಯಲ್ಲಿ ಹಾಡು ಹಾಡಿ ಅದಕ್ಕೆ ತಕ್ಕ ಭಾವಾಭಿನಯ ಸೇರಿಸಿ ಸ್ನೇಹಿತರ ವಲಯದಲ್ಲಿ ವಿಡಿಯೋ ಹಂಚಿಕೊಳ್ಳುತ್ತಿದ್ದರಂತೆ ಮಾನಸಿ. ಸ್ನೇಹಿತರಿಂದ ಮೆಚ್ಚುಗೆ ಮಾತುಗಳು ಕೇಳಿ ಬಂದಾಗ ಅದರಿಂದ ಪ್ರೇರಣೆಗೊಂಡು ಮತ್ತಷ್ಟು ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡತೊಡಗಿದರು. ತದ ನಂತರ ಭಾರೀ ಜನಮನ್ನಣೆಗೂ ಪಾತ್ರವಾದರು.

​ಮಾನಸಿ ಅವರದ್ದು ಕಲಾವಿದ ಕುಟುಂಬ..

ಮಾನಸಿ ತಂದೆಯವರಾದ ಮುರುಳೀಧರ್‌ ಉಪಾಧ್ಯಾಯರು ಸಹ ಕನ್ನಡ ಸಾಹಿತ್ಯ ಲೋಕದ ವಿರ್ಮಶಕರಾಗಿದ್ದು, ಹಾಡನ್ನು ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರೆ, ಗುರುಗಳಾದ ಗುರುರಾಜ್ ಮಾರ್ಪಳ್ಳಿ ಅವರ ರಾಗ ಸಂಯೋಜನೆಯಲ್ಲಿ ಹಾಡು ಮೂಡಿಬರುತ್ತದೆ. ನಂತರ ಅದನ್ನು ಹಾಡಲು ಮಾನಸಿಯವರ ಮಗಳ ಸಹಾಯ ಪಡೆದುಕೊಂಡರೆ, ಭಾವಾಭಿನಯಕ್ಕೆ ಪತಿ ಹಾಗೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಹೀಗೆ ಒಂದು ಟೀಂ ವರ್ಕ್‌ ಮೂಲಕ ಅದ್ಬುತವೊಂದನ್ನು ಸೃಷ್ಟಿಸಿದ್ದಾರೆ ಮಾನಸಿ.

​ಮಾನಸಿ ಅವರ ಸಾಧನೆ ಲಾಕ್‌ಡೌನ್ ವೇಳೆ ಅರಳಿದ ಹೂ..!

ಲಾಕ್‌ ಡೌನ್‌ ಅವಧಿಯಲ್ಲಿ ಮನೆಯಲ್ಲಿದ್ದ ಮಾನಸಿ ಅವರಿಗೆ ಹೊಸತನದ ತುಡಿತವಿತ್ತು. ಭಾವಗೀತೆಗಳಿಗೆ ಹೊಸ ಮೆರುಗನ್ನು ನೀಡಬೇಕು ಅನ್ನೋದು ಅವರ ಹಂಬಲವಾಗಿತ್ತು. ಬಾಲ್ಯದ ದಿನಗಳಿಂದಲೇ ಕಲೆಯ ಬಗ್ಗೆ ಅಪಾರವಾದ ಆಸಕ್ತಿಯನ್ನು ಹೊಂದಿದ್ದ ಮಾನಸಿ, ಕೇವಲ ಹಾಡುಗಾರ್ತಿ ಮಾತ್ರವಲ್ಲ, ಭರತನಾಟ್ಯ ಕಲಾವಿದೆಯೂ ಹೌದು. ಅದರಿಂದಲೇ ಭಾವಾಭಿನಯಕ್ಕೆ ಗಮನಕೊಟ್ಟೆ ಎಂದು ವಿಜಯ ಕರ್ನಾಟಕದೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ ಮಾನಸಿ ಸುಧೀರ್.

ಒಟ್ಟಿನಲ್ಲಿ ಹೇಳಬೇಕೆಂದರೆ, ಹಬ್ಬದ ಖುಷಿಯ ಜೊತೆಗೆ ಕನ್ನಡ ಪ್ರೀತಿಯನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ಹೇಳುತ್ತಿರುವ ಮಾನಸಿಯವರ ಹಾಡುಗಳು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್ ಶಿಕ್ಷಣ ಹೆಚ್ಚು ಮಹತ್ವ ಪಡೆಯುತ್ತಿರುವುದರಿಂದ, ಈ ರೀತಿಯಲ್ಲೂ ಪಾಠ ಮಾಡಿ ಮಕ್ಕಳ ಮನ ಗೆಲ್ಲಬಹುದು ಎಂಬ ಈ ವಿಡಿಯೋ ಎಲ್ಲರಲ್ಲೂ ಜಾಗೃತಿ ಮೂಡಿಸುತ್ತಿರುವುದರಲ್ಲಿ ಸಂಶಯವೇ ಇಲ್ಲ..

Video-ವರ್ಣಮಾಲೆಯಲ್ಲೇ ವಿನಾಯಕನ ವರ್ಣಿಸಿದ ವನಿತೆ..! ಮಾನಸಿ ಸುಧೀರ್ Exclusive ಸಂದರ್ಶನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ