Please enable javascript.ನೆಲಕಚ್ಚಿದ ನಿರ್ಮಲ ಭಾರತ ಅಭಿಯಾನ! - ನೆಲಕಚ್ಚಿದ ನಿರ್ಮಲ ಭಾರತ ಅಭಿಯಾನ! - Vijay Karnataka

ನೆಲಕಚ್ಚಿದ ನಿರ್ಮಲ ಭಾರತ ಅಭಿಯಾನ!

ವಿಕ ಸುದ್ದಿಲೋಕ 30 Apr 2014, 4:00 am
Subscribe

ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ಸಾಕಷ್ಟು ಅರಿವು ಮೂಡಿಸಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಪ್ರೋತ್ಸಾಹ ಧನ ನೀಡುತ್ತಿರುವ ಯೋಜನೆ ಅನುಷ್ಠಾನದ ಮೇಲೆ ಅಧಿಕಾರಿಗಳ ಆಸಕ್ತಿ ಇಲ್ಲದೆ ಮುಗ್ಗರಿಸಿದೆ. ಶೌಚಾಲಯ ನಿರ್ಮಾಣ ಮಾಡಿ ಆರು ತಿಂಗಳು ಕಳೆದರೂ ಕೆಲ ಕಡೆ ಬಿಲ್ ಪಾವತಿಯಾಗಿಲ್ಲ.ಇನ್ನು ಹಲವು ಗ್ರಾ.ಪಂ.ಗಳು ಶೌಚಾಲಯ ನಿರ್ಮಾಣದ ಪ್ರಗತಿಯನ್ನೇ ತೋರಿಲ್ಲ!

ನೆಲಕಚ್ಚಿದ ನಿರ್ಮಲ ಭಾರತ ಅಭಿಯಾನ!
*ಪ್ರಗತಿ ತೋರದ ಗ್ರಾ.ಪಂ.ಗಳ ಸಿಬ್ಬಂದಿ

*ಹಿಡಿತ ಕಳೆದುಕೊಂಡ ತಾ.ಪಂ. ಅಧಿಕಾರಿಗಳು

*ಫಲಾನುಭವಿಗಳ ನಿತ್ಯ ಅಲೆದಾಟ

ಮಲ್ಲಿಕಾರ್ಜುನ ಚಿಲ್ಕರಾಗಿ , ಸಿಂಧನೂರು


ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ಸಾಕಷ್ಟು ಅರಿವು ಮೂಡಿಸಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಪ್ರೋತ್ಸಾಹ ಧನ ನೀಡುತ್ತಿರುವ ಯೋಜನೆ ಅನುಷ್ಠಾನದ ಮೇಲೆ ಅಧಿಕಾರಿಗಳ ಆಸಕ್ತಿ ಇಲ್ಲದೆ ಮುಗ್ಗರಿಸಿದೆ. ಶೌಚಾಲಯ ನಿರ್ಮಾಣ ಮಾಡಿ ಆರು ತಿಂಗಳು ಕಳೆದರೂ ಕೆಲ ಕಡೆ ಬಿಲ್ ಪಾವತಿಯಾಗಿಲ್ಲ.ಇನ್ನು ಹಲವು ಗ್ರಾ.ಪಂ.ಗಳು ಶೌಚಾಲಯ ನಿರ್ಮಾಣದ ಪ್ರಗತಿಯನ್ನೇ ತೋರಿಲ್ಲ!

ತಾಲೂಕಿನ 34 ಗ್ರಾ.ಪಂ.ಗಳಲ್ಲಿ ಈ ಸಂಗತಿ ನಡೆದಿದ್ದು, ತಾ.ಪಂ. ಅಧಿಕಾರಿಗಳ ಹಿಡಿತವಿಲ್ಲದೆ ಶೌಚಾಲಯ ನಿರ್ಮಾಣ ಯೋಜನೆ ಮುಗ್ಗರಿಸಿದೆ. ಜಿ.ಪಂ. ಅಧಿಕಾರಿಗಳು ನಿರ್ಮಲ ಭಾರತ ಅಭಿಯಾನದ ಬಗ್ಗೆ ಒತ್ತಿ ಹೇಳಿಕೊಳ್ಳುತ್ತಿದ್ದರೂ ಪ್ರಯೋಜನವಾಗಿಲ್ಲ .ಕಳೆದ 2013-14ನೇ ಸಾಲಿನಲ್ಲಿ ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ನೀಡಿದ್ದ 4,559 ಶೌಚಾಲಯಗಳ ನಿರ್ಮಾಣ ಗುರಿಯಲ್ಲಿ ಕೇವಲ 1,412 ಶೌಚಾಲಯಗಳನ್ನು ಮಾತ್ರ ನಿರ್ಮಿಸಲಾಗಿದೆ. ಕೆಲವು ಪಂಚಾಯಿತಿ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಫಲಾನಿಭವಿಗಳನ್ನೇ ಆಯ್ಕೆ ಮಾಡದ ಸಂಗತಿಗಳು ಬೆಳಕಿಗೆ ಬಂದಿವೆ.

ವರ್ಷದ ಸಾಧನೆ: ಕಳೆದ ವರ್ಷ ತಾಲೂಕಿನಲ್ಲಿ ನಿರ್ಮಲ ಭಾರತ ಯೋಜನೆಯಡಿ 4,559 ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಡುವ ಯೋಜನೆಯನ್ನು ಜಿ.ಪಂ.ರೂಪಿಸಿತ್ತು. ಫಲಾನುಭವಿಯ ವಂತಿಗೆ 800 ರೂ., ನಿರ್ಮಲ ಭಾರತ ಅಭಿಯಾನ ಯೋಜನೆಯಡಿ 4,700 ರೂ., ಉದ್ಯೋಗ ಖಾತರಿ ಯೋಜನೆಯಡಿ 4,500ರೂ. ಪ್ರೋತ್ಸಾಹ ಧನ ಸೇರಿ ಒಟ್ಟು 10,000 ರೂ. ಮೊತ್ತದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡುವುದು ಯೋಜನೆಯ ರೂಪುರೇಷಯಾಗಿತ್ತು. ಇದರಂತೆ ತಾಲೂಕಿನಲ್ಲಿ ವೈಯಕ್ತಿಕ ಶೌಚಾಲಯಗಳು ಕೇವಲ 4,559 ಕುಟುಂಬಗಳಿಗೆ ಅಷ್ಟೇ ಅಲ್ಲ. ಕೆಲವು ಪಂಚಾಯಿತಿ ಪಿಡಿಒಗಳು ವಿಶೇಷ ಆಸಕ್ತಿ ವಹಿಸಿ ಎನ್‌ಆರ್‌ಇಜೆ ಯಲ್ಲೂ ಶೌಚಾಲಯಗಳ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದ್ದರು. ಇದರಿಂದ ಶೌಚಾಲಯಗಳ ಗುರಿ ತಾಲೂಕಿನಲ್ಲಿ ಸುಮಾರು 6 ಸಾವಿರದ ಗಡಿ ದಾಟಿದೆ. ಆದರೆ ಅನುಷ್ಠಾನದ ಪ್ರಗತಿ ಪರಾಮರ್ಶೆ ವೇಳೆ ಅಂಕೆ-ಸಂಖ್ಯೆಗಳೇ ತಾಳೆಯಾಗುತ್ತಿಲ್ಲ. ವರ್ಷದಲ್ಲಿ ತಾಲೂಕಿನಲ್ಲಿ ಒಟ್ಟು 1,412 ಶೌಚಾಲಯಗಳು ಕಾಮಗಾರಿ ಪೂರೈಸಿ ಬಿಲ್ ಪಾವತಿಸಿರುವ ಸಂಗತಿಯೊಂದೇ ಸ್ಪಷ್ಟವಾಗಿದ್ದು ಉಳಿದವು ಅಯೋಮಯವಾಗಿದೆ.

ಅಲೆದಾಟ: ಸ್ಥಳೀಯ ತಾ.ಪಂ. ಇಲಾಖೆಯಲ್ಲಿನ ದಾಖಲೆಗಳ ಪ್ರಕಾರ ತಾಲೂಕಿಗೆ ನೀಡಿದ ಒಟ್ಟು 4,559ರ ಗುರಿಯಲ್ಲಿ 34 ಪಂಚಾಯಿತಿಯಿಂದ ಫಲಾನುಭವಿಗಳು ಆಯ್ಕೆಯಾಗಿದ್ದು, ಕೇವಲ 2,809. ಇದರಲ್ಲಿ 1,412 ಜನರ ಶೌಚಾಲಯ ಪೂರ್ಣಗೊಂಡಿದ್ದರೆ, ಉಳಿದ 1,397 ಶೌಚಾಲಯಗಳು ನಾನಾ ಹಂತದಲ್ಲಿ ನಿರ್ಮಾಣದಲ್ಲಿದ್ದು, ಬಿಲ್ ಪಾವತಿ ಇಲ್ಲದೇ ನನೆಗುದಿಗೆ ಬಿದ್ದಿವೆ. ಇನ್ನು ಉಳಿದ 1,750 ಶೌಚಾಲಯಗಳಿಗೆ ಫಲಾನುಭವಿಗಳನ್ನೇ ಆಯ್ಕೆ ಮಾಡಿಲ್ಲ. ಗ್ರಾಮಸಭೆ, ವಾರ್ಡ್ ಸಭೆ ಮಾಡಿ ಚರ್ಚಿಸದ ಕಾರಣ ಕೆಲ ಗ್ರಾ.ಪಂ.ಗಳಲ್ಲಿ ಜನತೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಆಸಕ್ತಿ ತೋರಿಲ್ಲ. ಶೌಚಾಲಯ ನಿರ್ಮಿಸಿಕೊಳ್ಳುತ್ತಿರುವ 1,397 ಜನರಿಗೆ ಶೌಚಾಲಯದ ಪ್ರೋತ್ಸಾಹ ಧನ ದೊರೆಯುತ್ತಿಲ್ಲ. ಚೆಕ್‌ಗಾಗಿ ಫಲಾನುಭವಿಗಳು ಕಳೆದ ನವೆಂಬರ್‌ನಿಂದ ನಿತ್ಯ ಅಲೆದಾಟ ನಡೆಸಿದ್ದಾರೆ. ಗ್ರಾ.ಪಂ., ತಾ.ಪಂ. ಸಿಬ್ಬಂದಿಗಳು ಅನುದಾನ ಕೊರತೆಯೊಡ್ಡಿ ದಿನದೂಡುತ್ತಿದ್ದಾರೆ.

---
9 ಪಂಚಾಯಿತಿ ಪ್ರಗತಿಯೇ ಇಲ್ಲ

ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆ ನೀಡಲಾದ ಗುರಿಯಲ್ಲಿ ತಾಲೂಕಿನ 9 ಗ್ರಾ.ಪಂ.ಗಳಲ್ಲಿ ಫಲಾನುಭವಿಗಳ ಆಯ್ಕೆ, ಪೂರ್ಣಗೊಂಡ ಶೌಚಾಲಯಗಳ ವಿವರ, ಪ್ರಗತಿ ಹಂತದಲ್ಲಿರುವ ಶೌಚಾಲಯಗಳ ಸಂಖ್ಯೆ ಸೇರಿ ನಾನಾ ಮಾಹಿತಿಯನ್ನೇ ನೀಡಿಲ್ಲ. ಸ್ಥಳೀಯ ತಾ.ಪಂ. ಅಧಿಕಾರಿಗಳ ಹಿಡಿತದ ಕೊರತೆ ಪರಿಣಾಮ ಈ ಅಂಕೆ-ಸಂಖ್ಯೆಗಳಿಗೆ ತಾಳೆ ಇರದಂತಾಗಿದೆ. ತಾಲೂಕಿನ ಮಾಡಶಿರವಾರ, ಗುಡದೂರು, ಗುಂಡಾ, ವಿರುಪಾಪೂರ, ಬಸಾಪೂರ(ಕೆ), ಆರ್.ಎಚ್.ಕ್ಯಾಂಪ್-1, ರವುಡುಕುಂದಾ ಸೇರಿ 9 ಗ್ರಾ.ಪಂ.ಗಳಲ್ಲಿ ಶೌಚಾಲಯ ನಿರ್ಮಿಸಿದ್ದರ ಕುರಿತು ತಾ.ಪಂ. ಇಒ ಮೌಖಿಕವಾಗಿ ಒಪ್ಪಿಕೊಳ್ಳುತ್ತಿದ್ದರೂ, ತಾ.ಪಂ.ಗೆ ಸಲ್ಲಿಕೆಯಾದ ಪ್ರಗತಿ ವರದಿಯ ದಾಖಲೆಗಳಲ್ಲಿ ಈ ಪಂಚಾಯಿತಿಯಲ್ಲಿನ ಶೌಚಾಲಯ ನಿರ್ಮಾಣದ ಪ್ರಗತಿ 0 ಎಂದು ನಮೋದಿಸಲಾಗಿದೆ.

---
ಶೌಚಾಲಯಗಳ ಪೂರ್ಣಗೊಂಡ ಕುರಿತು ಬಿಲ್ ಪಾವತಿಗಾಗಿ ಜಿ.ಪಂ.ಗೆ ಸಲ್ಲಿಸಲಾಗಿದೆ. ಇನ್ನೂ ಅನುದಾನ ಬಂದಿರದ ಕಾರಣ ಹಣ ಪಾವತಿ ವಿಳಂಬವಾಗಿದೆ. ಇನ್ನೆರಡ್ಮೂರು ದಿನಗಳಲ್ಲಿ ಹಣ ಬರುವ ಸಾಧ್ಯತೆ ಇದೆ.

-ಜೆ.ಬಿ.ಹೂಗಾರ, ಇಒ, ತಾ.ಪಂ. ಸಿಂಧನೂರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ