Please enable javascript.Nrega,ನರೇಗಾ ಕಾರ್ಮಿಕರ ನೆರವಿಗೆ ಸರ್ಕಾರ: ಕಾರ್ಮಿಕರು ಮೃತಪಟ್ಟರೆ 2 ಲಕ್ಷ ರೂ. ಪರಿಹಾರ.. - nrega workers will get 2 lakh rupees death compensation - Vijay Karnataka

ನರೇಗಾ ಕಾರ್ಮಿಕರ ನೆರವಿಗೆ ಸರ್ಕಾರ: ಕಾರ್ಮಿಕರು ಮೃತಪಟ್ಟರೆ 2 ಲಕ್ಷ ರೂ. ಪರಿಹಾರ..

Edited byದಿಲೀಪ್ ಡಿ. ಆರ್. | Vijaya Karnataka 11 May 2022, 5:33 pm
Subscribe

ಕಾರ್ಮಿಕ ಆಕಸ್ಮಿಕವಾಗಿ ಮೃತಪಟ್ಟರೆ ಆತ ನರೇಗಾ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಿದ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಥಳ ಮಹಜರ್‌ ನಡೆಸಿ, ಆತನೊಂದಿಗೆ ಕೆಲಸ ಮಾಡಿದ ಕೂಲಿಕಾರರ ಸಹಿ ಪಡೆಯುವುದು. ಕೂಲಿಕಾರರು ಕಾಮಗಾರಿ ಸ್ಥಳಕ್ಕೆ ಪ್ರಯಾಣಿಸುವಾಗ ಅಥವಾ ಕಾಮಗಾರಿ ಸ್ಥಳದಿಂದ ಮನೆಗೆ ವಾಪಸ್‌ ಆಗುವ ವೇಳೆಯಲ್ಲಿ ಅಪಘಾತದಿಂದಾಗಿ ಸಾವು ಸಂಭವಿಸಿದ್ದಲ್ಲಿ 24 ಗಂಟೆಯೊಳಗೆ ಕೂಲಿಕಾರನೊಂದಿಗೆ ಇದ್ದ ಕೂಲಿಕಾರರ ಹೇಳಿಕೆ ದಾಖಲಿಸಿಕೊಳ್ಳುವುದು. ಪೊಲೀಸ್‌ ವರದಿ ಮತ್ತು ವೈದ್ಯಕೀಯ ವರದಿಗಳನ್ನು ಪಡೆದುಕೊಳ್ಳುವುದು ಎಂದು ಸೂಚನೆ ನೀಡಲಾಗಿದೆ.

ಹೈಲೈಟ್ಸ್‌:

  • ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್‌ ಇಲಾಖೆ ಅಧಿಕೃತ ಆದೇಶ
  • ಗಾಯಗೊಂಡ ಕಾರ್ಮಿಕರಿಗೆ ಉಚಿತ ಚಿಕಿತ್ಸೆ
  • ಯೋಜನೆಯ ಆಡಳಿತಾತ್ಮಕ ವೆಚ್ಚದಲ್ಲಿ ಪಾವತಿ
ನರೇಗಾ
ಸಾಂದರ್ಭಿಕ ಚಿತ್ರ
ಚಂದ್ರಶೇಖರ ಬೆನ್ನೂರು
ಸಿಂಧನೂರು (ರಾಯಚೂರು):
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುವ ವೇಳೆ ಆಕಸ್ಮಿಕವಾಗಿ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ನೀಡಲು ರಾಜ್ಯ ಸರಕಾರ ಮುಂದಾಗಿದೆ.
ನರೇಗಾ ಕೆಲಸ ಮಾಡುವ ವೇಳೆ ಮೃತಪಟ್ಟ ಕಾರ್ಮಿಕರಿಗೆ ಪರಿಹಾರ ಹಾಗೂ ಗಾಯಗೊಂಡವರಿಗೆ ಚಿಕಿತ್ಸೆ ನೀಡುವಲ್ಲಿ ಗೊಂದಲವೇರ್ಪಟ್ಟು ಚರ್ಚೆಗಳು ನಡೆದಿದ್ದವು. ಆದರೀಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಆಯುಕ್ತರು ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಸರಕಾರವೇ ಕಾರ್ಮಿಕರ ನೆರವಿಗೆ ಧಾವಿಸಿದಂತಾಗಿದೆ. ಕಾರ್ಮಿಕರು ಕೆಲಸ ಮಾಡುವ ವೇಳೆ ಮತ್ತು ಕೆಲಸದ ಕಾರಣದಿಂದಾಗಿ ಗಾಯಗೊಂಡಲ್ಲಿ ಉಚಿತ ಚಿಕಿತ್ಸೆ ನೀಡಲು ಮುಂದಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್‌ನಲ್ಲಿ ನರೇಗಾ ಯೋಜನೆಯಡಿ ಉದ್ಯೋಗಾವಕಾಶ
ಗಾಯಗೊಂಡರೆ ಚಿಕಿತ್ಸೆ ವೆಚ್ಚ: ನರೇಗಾ ಕಾಮಗಾರಿ ಮಾಡುವ ಸಮಯದಲ್ಲಿ ಗಾಯಗೊಂಡ ಕಾರ್ಮಿಕರಿಗೆ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದು. ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೆ ಚಿಕಿತ್ಸೆ ವೆಚ್ಚವನ್ನು ಯೋಜನೆಯ ಆಡಳಿತಾತ್ಮಕ ವೆಚ್ಚದಲ್ಲಿ ಪಾವತಿಸಲು ತಿಳಿಸಲಾಗಿದೆ. ಗಾಯಗೊಂಡ ಕೂಲಿಕಾರರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕೂಲಿಕಾರರಿಗೆ ಅರ್ಧದಷ್ಟು ಕೂಲಿ ಪಾವತಿಸಬೇಕಾಗಿದೆ. ಇದು ನರೇಗಾ ಯೋಜನೆಯ ಕಾರ್ಯಾಚರಣೆ ಮಾರ್ಗಸೂಚಿ 2013ರಲ್ಲಿದೆ.

ಪರಿಹಾರಕ್ಕೆ ಹಲವು ನಿಯಮ: ನರೇಗಾ ಯೋಜನೆಯಡಿ ಕೆಲಸ ಮಾಡುವ ವೇಳೆಯಲ್ಲಿ ಆಕಸ್ಮಿಕವಾಗಿ ಕಾರ್ಮಿಕರು ಮೃತಪಟ್ಟರೆ ಅಥವಾ ಶಾಶ್ವತವಾಗಿ ಅಂಗವಿಕಲರಾಗಿದ್ದಲ್ಲಿ ಅಂತಹ ಕಾರ್ಮಿಕರಿಗೆ ಅಥವಾ ಅವರ ಅಧಿಕೃತ ವಾರಸುದಾರರಿಗೆ 2 ಲಕ್ಷ ರೂ. ಪರಿಹಾರ ವಿತರಿಸಲು ಸೂಚಿಸಲಾಗಿದೆ. ಮೃತ ಕಾರ್ಮಿಕರಿಗೆ ಪರಿಹಾರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ನಿಯಮ ರೂಪಿಸಲಾಗಿದೆ.

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 'ದುಡಿಯೋಣ ಬಾ ಅಭಿಯಾನ'! ಅರ್ಹರಿಗೆ ಸತತ ಮೂರು ತಿಂಗಳು ಕೂಲಿ ಕೆಲಸ!
ನಿಯಮಗಳೇನು?: ಕಾರ್ಮಿಕ ಆಕಸ್ಮಿಕವಾಗಿ ಮೃತಪಟ್ಟರೆ ಆತ ನರೇಗಾ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಿದ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಥಳ ಮಹಜರ್‌ ನಡೆಸಿ, ಆತನೊಂದಿಗೆ ಕೆಲಸ ಮಾಡಿದ ಕೂಲಿಕಾರರ ಸಹಿ ಪಡೆಯುವುದು. ಕೂಲಿಕಾರರು ಕಾಮಗಾರಿ ಸ್ಥಳಕ್ಕೆ ಪ್ರಯಾಣಿಸುವಾಗ ಅಥವಾ ಕಾಮಗಾರಿ ಸ್ಥಳದಿಂದ ಮನೆಗೆ ವಾಪಸ್‌ ಆಗುವ ವೇಳೆಯಲ್ಲಿ ಅಪಘಾತದಿಂದಾಗಿ ಸಾವು ಸಂಭವಿಸಿದ್ದಲ್ಲಿ 24 ಗಂಟೆಯೊಳಗೆ ಕೂಲಿಕಾರನೊಂದಿಗೆ ಇದ್ದ ಕೂಲಿಕಾರರ ಹೇಳಿಕೆ ದಾಖಲಿಸಿಕೊಳ್ಳುವುದು. ಪೊಲೀಸ್‌ ವರದಿ ಮತ್ತು ವೈದ್ಯಕೀಯ ವರದಿಗಳನ್ನು ಪಡೆದುಕೊಳ್ಳುವುದು. ಮೃತ ಕೂಲಿಕಾರನ ಮರಣೋತ್ತರ ಪರೀಕ್ಷಾ ವರದಿ ಪಡೆದುಕೊಳ್ಳುವುದು. ಜಿ.ಪಂ. ಸಿಇಒ, ಉಪ ಕಾರ್ಯದರ್ಶಿ, ಜಿಲ್ಲಾ ವೈದ್ಯಾಧಿಕಾರಿ ಮತ್ತು ಸಂಬಂಧಪಟ್ಟ ತಾ. ಪಂ. ಇಒ ಅವರನ್ನೊಳಗೊಂಡ ಸಮಿತಿಯು ದಾಖಲೆ ಪರಿಶೀಲಿಸಿ ಘಟನೆ ನಡೆದ ಒಂದು ವಾರದೊಳಗೆ ಮೃತ ಕೂಲಿ ಕಾರ್ಮಿಕನ ವಾರಸುದಾರರಿಗೆ ಪಾವತಿಸುವ ಪರಿಹಾರದ ಬಗ್ಗೆ ತೀರ್ಮಾನಿಸುವುದು ಮತ್ತು ಪರಿಹಾರ ಪಾವತಿಸಬೇಕಾಗಿದೆ. ಪ್ರತಿಯೊಂದು ಪ್ರಕರಣದಲ್ಲಿಯೂ ಆಯುಕ್ತಾಲಯದಿಂದ ಪ್ರತ್ಯೇಕ ಅನುಮತಿ ಅಗತ್ಯವಿಲ್ಲವೆಂದು ಆದೇಶದಲ್ಲಿ ತಿಳಿಸಲಾಗಿದೆ.

'ನರೇಗಾ ಕೆಲಸ ಮಾಡುವ ವೇಳೆ ಗಾಯಗೊಂಡವರಿಗೆ, ಮೃತಪಟ್ಟವರಿಗೆ ಪರಿಹಾರ ಹಾಗೂ ಚಿಕಿತ್ಸೆ ನೀಡಿದ್ದು ಅಪರೂಪ. ಸರಕಾರದಿಂದ ಪರಿಹಾರ ನೀಡುವ ಕುರಿತಂತೆ ಆದೇಶಿಸಲಾಗಿದೆ. ಆದರೆ ಕೆಲಸದ ಸಮಯದಲ್ಲಿ ಮೃತಪಟ್ಟ ಕಾರ್ಮಿಕರಿಗೆ 2 ಲಕ್ಷ ರೂ. ಪರಿಹಾರ ನೀಡಿದರೆ ಸಾಲುವುದಿಲ್ಲ. ಸರಕಾರ ಕನಿಷ್ಟ 10 ಲಕ್ಷ ರೂ. ಪರಿಹಾರ ನೀಡಬೇಕು' ಎಂದು ಸಿಂಧನೂರು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ವೀರೇಶ ಸೋಮಲಾಪುರ ಆಗ್ರಹಿಸಿದ್ದಾರೆ.
ದಿಲೀಪ್ ಡಿ. ಆರ್.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ