Please enable javascript.ನಾಡಕಚೇರಿ ಇದ್ದರೂ ವ್ಯರ್ಥ: ಅಲೆದಾಟ ಖಚಿತ - While nadakaceri waste: Wandering guaranteed - Vijay Karnataka

ನಾಡಕಚೇರಿ ಇದ್ದರೂ ವ್ಯರ್ಥ: ಅಲೆದಾಟ ಖಚಿತ

ವಿಕ ಸುದ್ದಿಲೋಕ 4 Mar 2015, 7:37 am
Subscribe

ಅಟಲ್‌ಜೀ ಜನಸ್ನೇಹಿ ಕೇಂದ್ರ ಆರಂಭದ ಬಳಿಕ ನಿಟ್ಟುಸಿರು ಬಿಟ್ಟಿದ್ದ ತಾಲೂಕಿನ ಕಟ್ಟ ಕಡೆಯ ಹಳ್ಳಿಗರು ಕೆಲವೇ ತಿಂಗಳಲ್ಲಿ ನಿರಾಸೆ ಅನುಭವಿಸಿದರು. ಸಿಕ್ಕ ಸೌಲಭ್ಯ ತಾಂತ್ರಿಕ ಕಾರಣದಿಂದ ಕೈಗೆಟುಕದಾಗಿದ್ದು, ನೆರೆ ಸಂತ್ರಸ್ತ ಹಳ್ಳಿಗರ ಅಲೆದಾಟಕ್ಕೆ ಮುಕ್ತಿ ಇಲ್ಲದಂತಾಗಿದೆ. ಇದು ಹೆಡಗಿನಾಳ ಗ್ರಾಮದ ನಾಡಕಚೇರಿ ಸ್ಥಿತಿ-ಗತಿ.

while nadakaceri waste wandering guaranteed
ನಾಡಕಚೇರಿ ಇದ್ದರೂ ವ್ಯರ್ಥ: ಅಲೆದಾಟ ಖಚಿತ
ಸಿಂಧನೂರು; ಅಟಲ್‌ಜೀ ಜನಸ್ನೇಹಿ ಕೇಂದ್ರ ಆರಂಭದ ಬಳಿಕ ನಿಟ್ಟುಸಿರು ಬಿಟ್ಟಿದ್ದ ತಾಲೂಕಿನ ಕಟ್ಟ ಕಡೆಯ ಹಳ್ಳಿಗರು ಕೆಲವೇ ತಿಂಗಳಲ್ಲಿ ನಿರಾಸೆ ಅನುಭವಿಸಿದರು. ಸಿಕ್ಕ ಸೌಲಭ್ಯ ತಾಂತ್ರಿಕ ಕಾರಣದಿಂದ ಕೈಗೆಟುಕದಾಗಿದ್ದು, ನೆರೆ ಸಂತ್ರಸ್ತ ಹಳ್ಳಿಗರ ಅಲೆದಾಟಕ್ಕೆ ಮುಕ್ತಿ ಇಲ್ಲದಂತಾಗಿದೆ. ಇದು ಹೆಡಗಿನಾಳ ಗ್ರಾಮದ ನಾಡಕಚೇರಿ ಸ್ಥಿತಿ-ಗತಿ.

1992, 2009ರಲ್ಲಿ ಸತತ ನೆರೆ ಹಾನಿಗೆ ಒಳಗಾದ ಇಲ್ಲಿನ ಹಳ್ಳಿಗಳು ಕಂದಾಯ ಸೇವೆ ಪಡೆಯಲು ಇನ್ನೂ ಅಂಡಲೆಯುತ್ತಿದ್ದಾರೆ. ಸಕಾಲಕ್ಕೆ ಸೌಕರ್ಯ ಸಿಗದೆ ಬಸವಳಿದ್ದು, ಊರಲ್ಲಿ ಇರುವ ನಾಡಕಚೇರಿ ಪಾಳುಗೆಡವಿ ಸಿಂಧನೂರಿನಲ್ಲಿಯೇ ಇಲ್ಲಿನ ಅಧಿಕಾರಿಗಳು ಕಾರ್ಯಸ್ಥಾನ ಮಾಡಿಕೊಂಡಿದ್ದಾರೆ.

ಮೂರು ಸಾವಿರ ರೂ. ಬಾಡಿಗೆ : ಮಾಸಿಕ 3ಸಾವಿರ ರೂ. ಬಾಡಿಗೆ ನಿಗದಿ ಇರುವ ಬಂಗಲೆ ಅನಾಥವಾಗಿದ್ದು, ಕನಿಷ್ಠ ಒಂದು ಅರ್ಜಿ ಸ್ವೀಕರಿಸುವವರೂ ಇಲ್ಲಿನ ಕೇಂದ್ರದಲ್ಲಿ ಇರದ ಕಾರಣ ‘ನೆಮ್ಮದಿ ಕೇಂದ್ರ’ ಭೂತ ಬಂಗಲೆಯಾಗಿದೆ.

ಕೆಎಸ್-1 ಸ್ಥಾನ: ತುಂಗಭದ್ರಾ ದಂಡೆಗೆ ಹೊಂದಿಕೊಂಡಿರುವ ಹೆಡಗಿನಾಳ ವಳಬಳ್ಳಾರಿ, ಗಿಣಿವಾರ, ಪುಲಮೇಶ್ವರದಿನ್ನಿ, ಚಿತ್ರಾಲಿ, ಚಿಂತಮಾನದೊಡ್ಡಿ, ಆಯನೂರು, ಯದ್ದಲದೊಡ್ಡಿ, ಹುಲಗುಂಚಿ ಗ್ರಾಮಗಳು ಈ ನಾಡ ಕಚೇರಿ ವ್ಯಾಪ್ತಿಗೆ ಬರುತ್ತಿದ್ದು, 8ಜನ ಗ್ರಾಮ ಲೆಕ್ಕಿಗರಲ್ಲಿ ಎರಡು ಹುದ್ದೆ ಖಾಲಿ ಇದೆ. ಮತ್ತೊಬ್ಬರು ದೀರ್ಘ ರಜೆ ಮೇಲೆ ತೆರಳಿದ್ದಾರೆ.

ಈಗ ಐವರೇ ಗ್ರಾಮ ಲೆಕ್ಕಿಗರಿದ್ದು, ಕಂದಾಯ ನಿರೀಕ್ಷಕ ಶಿವರಾಮರೆಡ್ಡಿಯರೇ ಪ್ರಭಾರ ನಾಡ ತಹಸೀಲ್ದಾರರು. ಇನ್ನು ಆಪರೇಟರ್ ಕಾಶಿಪತಿ ಕೆಲಸ ಬಿಟ್ಟು ವರ್ಷಗಳೇ ಉರುಳಿದ್ದು, ಬೇರೆ ಆಪರೇಟರ್ ವ್ಯವಸ್ಥೆ ಮಾಡಿಲ್ಲ. ಗ್ರಾಮ ಲೆಕ್ಕಿಗ, ವಿಷಯ ನಿರ್ವಾಹಕರೂ ಆದ ಅಮರೇಶ ಜನರ ಪಾಲಿಗೆ ನೆಮ್ಮದಿ ನೀಡುವಾತ. ಇಂಟರ್‌ನೆಟ್ ಸೌಲಭ್ಯ ಇರದ ಕಾರಣ ಸಿಂಧನೂರು ನಗರದ ತಹಸಿಲ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಮರೇಶ, ಶಿವರಾಮರೆಡ್ಡಿ ಕೆಎಸ್-1 ಕಟ್ಟಡ ಕಾರ್ಯಸ್ಥಾನ ವಾಗಿಸಿಕೊಂಡಿದ್ದಾರೆ.

ಏನೊಂದೂ ಇಲ್ಲ: ಮೂಲೆ ಸೇರಿದ ಒಂದು ಕಂಪ್ಯೂಟರ್, ಗಾಳಿ ಬೆಳಕು ಏನೊಂದೂ ಇಲ್ಲದ ಕೆಎಸ್-1 ಕಟ್ಟಡದಲ್ಲಿ ವಲ್ಕಂದಿನ್ನಿ ಹೋಬಳಿ ಸಿಬ್ಬಂದಿ ಜತೆಗೂಡಿ ಕೆಲಸ ಮಾಡುತ್ತಿರುವ ಇವರಿಗೆ ಏನೊಂದು ಸವಲತ್ತು ಇಲ್ಲ.

ಪ್ರಿಂಟರ್ ಹಾಳೆ, ಕಾಟ್ರೇಜ್, ಇಂಟರ್‌ನೆಟ್ ಬಿಲ್ ಇತರೆ ಖರ್ಚು-ವೆಚ್ಚ ತಾವೇ ನಿಭಾಯಿಸಿಕೊಳ್ಳುತ್ತಿದ್ದಾರೆ. ಇನ್ನೊಂದು ದುರಂತವೆಂದರೆ ನಾಡ ಕಚೇರಿಯಲ್ಲಿ ವಿದ್ಯುತ್ ಇಲ್ಲದಾಗ ಸೋಲಾರ್, ಯುಪಿಎಸ್ ಮೂಲಕ ಕೆಲಸ ಮಾಡಬಹುದು. ಆದರೆ ಇಲ್ಲಿನ ಕೆಎಸ್-1ನಲ್ಲಿ ಕರೆಂಟ್ ಇಲ್ಲದಿದ್ದರೆ ಕೆಲಸವೇ ಇಲ್ಲ. ಹೀಗಾಗಿ ಇಲ್ಲಿನ ಸಿಬ್ಬಂದಿಗಳು ಹಳ್ಳಿಗಳಿಂದ ಆಗಮಿಸುವ ಜನರಿಗೆ ಕೆಲಸ ಮಾಡಿಕೊಡಲು ಹಿಂದೇಟು ಹಾಕುವಂತಾಗಿದೆ.

ಅಲೆದಾಟ: ಹೆಡಗಿನಾಳ ಗ್ರಾಮದ ನಾಡ ಕಚೇರಿಯಲ್ಲಿ ಕನಿಷ್ಠ ಅರ್ಜಿಯನ್ನಾದರೂ ಸ್ವೀಕರಿಸುತ್ತಿಲ್ಲ. ಇಲ್ಲಿನ 9ಹಳ್ಳಿಗಳ ಜನರು ಯಾವುದೇ ಕೆಲಸ ಮಾಡಿಸಿಕೊಳ್ಳಬೇಕಾದರೆ ಸಿಂಧನೂರಿಗೆ ಬರಲೇ ಬೇಕು. ವಾಸಸ್ಥಳ, ಆದಾಯ, ಜಾತಿ ಪ್ರಮಾಣ ಪತ್ರ, ಸಾಮಾಜಿಕ ಭದ್ರತಾ ಯೋಜನೆಗಳ ಪ್ರಮಾಣ ಪತ್ರ ಪಡೆದುಕೊಳ್ಳಲು ಕನಿಷ್ಠ ಒಂದು ತಿಂಗಳು ಅಲೆದಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಗ್ರಾಮ ಲೆಕ್ಕಿಗರೂ, ಕಂದಾಯ ನಿರೀಕ್ಷಕರು ಕೈಗೆ ಸಿಗದ ಕಾರಣ ಜನ ತತ್ತರಿಸಿದ್ದು, ಇಲ್ಲಿನ ಜನರ ಗೋಳನ್ನು ಯಾರೂ ಕೇಳದಂತಾಗಿದೆ. ನೆರೆ ಪೀಡಿತ ಪ್ರದೇಶಗಳನ್ನು ನಿರ್ಲಕ್ಷ್ಯ ಮಾಡಿದ ತಾಲೂಕು ಆಡಳಿತ ಕನಿಷ್ಠ ಸೇವೆಗಳನ್ನು ಈ ಭಾಗದ ಜನರಿಗೆ ನೀಡದಿರುವುದು ವಿಪರ್ಯಾಸ ಎನಿಸಿದೆ.

--- ಕೆಲವು ದಿನ ಮಾತ್ರ...

2012ರ ಅಕ್ಟೋಬರ್‌ನಲ್ಲಿ ಆರಂಭವಾದ ಇಲ್ಲಿನ ಅಟಲ್‌ಜೀ ಜನಸ್ನೇಹಿ ಕೇಂದ್ರಕ್ಕೆ ವೈಮ್ಯಾಕ್ಸ್ ಸಂಪರ್ಕ ನೀಡಲಾಗಿತ್ತು. ಆರಂಭದ ಕೆಲವು ತಿಂಗಳು ಕೆಲಸ ನಿರ್ವಹಿಸಿದ್ದು, ಬಿಟ್ಟರೇ ಬರೋಬ್ಬರಿ ಒಂದೂವರೆ ವರ್ಷದಿಂದ ಇಲ್ಲಿನ ನಾಡ ಕಚೇರಿಗೆ ಒಬ್ಬರೂ ಕಾಲಿಟ್ಟಿಲ್ಲ.

ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಸಂಪರ್ಕ ಈ ಮಾರ್ಗದಲ್ಲಿ ಇಲ್ಲವಾಗಿದ್ದು, ಇತರೆ ಕಂಪನಿ ಸಿಮ್‌ಗಳಿಗೂ ನೆಟ್‌ವರ್ಕ್ ಸಿಗುವುದಿಲ್ಲ. ಕೆಲವು ಸಿಕ್ಕರೂ ಪಕ್ಕದಲ್ಲಿಯೇ ಆಂಧ್ರ ಇರುವುದರಿಂದ ರೋಮಿಂಗ್ ಚಾರ್ಜ್ ಬೀಳುತ್ತದೆ. ಇದರಿಂದ ಇಂಟರ್‌ನೆಟ್‌ನ ಹೊರೆ ಜಾಸ್ತಿಯಾಗಲಿದ್ದು, ಅಂತರ್ಜಾಲ ಸೇವೆ ಬಲು ವಿಳಂಬವಾಗುತ್ತಿದೆ. ಒಂದು ಅರ್ಜಿ ಸ್ವೀಕರಿಸಲು ಕನಿಷ್ಠ ಅರ್ಧತಾಸು ಸಮಯ ಹಿಡಿಯುತ್ತಿದೆ. ಹೀಗಾಗಿ ಇಲ್ಲಿನ ಅಧಿಕಾರಿಗಳು ಹೆಡಗಿನಾಳ ಗ್ರಾಮದಲ್ಲಿ ಕೆಲಸವೇ ಮಾಡುವುದಿಲ್ಲ.

---

ಒಂದೂವರೆ ವರ್ಷ ಆಯ್ತು ಸಾರ್. ನಾಡ ತಹಸೀಲ್ದಾರ್, ಕಂದಾಯ ನಿರೀಕ್ಷಕ ಎರಡು ಹುದ್ದೆ ಮಾಡುತ್ತಿದ್ದೇನೆ. ದೊಡ್ಡ ಹೋಬಳಿ ಹೆಚ್ಚಿನ ಕೆಲಸ, ಸಿಬ್ಬಂದಿ ಕಡಿಮೆ ಇದ್ದಾರೆ. ಸ್ವಂತ ಒಬ್ಬ ಆಪರೇಟರ್ ಇಲ್ಲದ ನಾಡ ಕಚೇರಿಯಾಗಿದೆ. ಇಂಟರ್‌ನೆಟ್ ಇಲ್ಲ, ಆದ್ರೂ ಏನೋ ಮಾಡಿ ಜನರ ಕೆಲಸ ನಿಲ್ಲಿಸದೆ ಮಾಡ್ತಾ ಇದ್ದೇವೆ.

-ಶಿವರಾಮರೆಡ್ಡಿ, ಪ್ರಭಾರಿ ನಾಡ ತಹಸೀಲ್ದಾರ್, ಸಿಂಧನೂರು. ---

ನಾಡಕಚೇರಿ ಸ್ಥಿತಿ ಬಗ್ಗೆ ಹೇಳೋಕೆ ನಮ್ಗೆ ನಾಚಿಕೆ ಆಗ್ತದ ಸಾರ್. ಊರಗ 3 ಸಾವಿರ ರೂ. ಬಾಡಿಗೆ ಇರುವ ಕಟ್ಟಡ ಹಿಡಿದು ಸಿಂಧನೂರಾಗ ಕೆಲಸ ಮಾಡ್ತಾರ. ಇಲ್ಲಿ ಎಲ್ಲ ಸೌಲಭ್ಯವಿದೆ. ಆದರೆ ಒಂದು ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲು ತಾಲೂಕು ಆಡಳಿತ ನಿರ್ಲಕ್ಷ್ಯ ಮಾಡಿದೆ. ಗಡಿ ಭಾಗದ ಹಳ್ಳಿಗಳು ಎಂದರೆ ಅಧಿಕಾರಿ ವರ್ಗಕ್ಕೆ ಎಷ್ಟು ತಾತ್ಸಾರ ಎನ್ನುವುದಕ್ಕೆ ಇದೊಂದೇ ಉದಾಹರಣೆ ಸಾಕಲ್ವಾ ಸಾರ್.

-ಷಣ್ಮುಖಪ್ಪ, ವಳಬಳ್ಳಾರಿ ನಿವಾಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ