Please enable javascript.10.95ಕೋಟಿ ವಿದ್ಯುತ್‌ ಬಾಕಿ, ಕುಡಿಯುವ ನೀರಿಗೆ ಖೋತಾ - 10.95 ಕೋಟಿ ವಿದ್ಯುತ್ ಬಾಕಿ, ಕುಡಿಯುವ ನೀರಿಗೆ ಖೋತಾ - Vijay Karnataka

10.95ಕೋಟಿ ವಿದ್ಯುತ್‌ ಬಾಕಿ, ಕುಡಿಯುವ ನೀರಿಗೆ ಖೋತಾ

Vijaya Karnataka Web 25 Mar 2017, 4:10 am
Subscribe

ಟಿಕೆ ಹಳ್ಳಿಯಿಂದ ರಾಮನಗರ ಮತ್ತು ಚನ್ನಪಟ್ಟಣ ನಗರಗಳಿಗೆ ಹೆಚ್ಚುವರಿ 8 ಎಂಎಲ್‌ಡಿ ಕುಡಿಯುವ ನೀರನ್ನು ಪೂರೈಕೆ ಮಾಡುವ ಯೋಜನೆಗೆ 20 ಕೋಟಿ ಖರ್ಚಾದರೂ ವಿದ್ಯುತ್‌ ಪೂರೈಕೆ ಇಲ್ಲದೆ ಈವರೆಗೆ ಒಂದು ಹನಿ ಹೆಚ್ಚುವರಿ ನೀರನ್ನೂ ತರಲು ಸಾಧ್ಯವಾಗಿಲ್ಲ.

10 95
10.95ಕೋಟಿ ವಿದ್ಯುತ್‌ ಬಾಕಿ, ಕುಡಿಯುವ ನೀರಿಗೆ ಖೋತಾ

ರಾಮನಗರ: ಟಿಕೆ ಹಳ್ಳಿಯಿಂದ ರಾಮನಗರ ಮತ್ತು ಚನ್ನಪಟ್ಟಣ ನಗರಗಳಿಗೆ ಹೆಚ್ಚುವರಿ 8 ಎಂಎಲ್‌ಡಿ ಕುಡಿಯುವ ನೀರನ್ನು ಪೂರೈಕೆ ಮಾಡುವ ಯೋಜನೆಗೆ 20 ಕೋಟಿ ಖರ್ಚಾದರೂ ವಿದ್ಯುತ್‌ ಪೂರೈಕೆ ಇಲ್ಲದೆ ಈವರೆಗೆ ಒಂದು ಹನಿ ಹೆಚ್ಚುವರಿ ನೀರನ್ನೂ ತರಲು ಸಾಧ್ಯವಾಗಿಲ್ಲ.

5 ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿದ್ದ ಯೋಜನೆ ಇದೀಗ ಶೇ.95ರಷ್ಟು ಪೂರ್ಣಗೊಂಡಿದೆ. ಪ್ರಾಯೋಗಿಕ ಚಾಲನೆಯನ್ನೂ ನೀಡಲಾಗಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಚಾಲನೆ ನೀಡಲು ವಿದ್ಯುತ್‌ ಸಮಸ್ಯೆ ಎದುರಾಗಿದ್ದು, 10.95 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಇರುವ ಹಿನ್ನೆಲೆಯಲ್ಲಿ ಯೋಜನೆಗೆ ಸಂಪರ್ಕ ನೀಡಲು ವಿದ್ಯುತ್‌ ಕಂಪನಿ ಷರತ್ತು ವಿಧಿಸಿದೆ.

ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಿಂದ ಬೆಸ್ಕಾಂ ಮತ್ತು ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದು, ಬರಗಾಲದಲ್ಲಿ ಎರಡೂ ನಗರಗಳಲ್ಲಿ ನೀರಿನ ಸಮಸ್ಯೆ ಇದೆ. ನಗರಸಭೆಗಳ ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಸದ್ಯ ಬಿಲ್‌ ಪಾವತಿಸಲು ಕಷ್ಟವಾಗಿರುತ್ತದೆ. ಸರಕಾರ ಅನುದಾನ ಬಿಡುಗಡೆ ಮಾಡಿದ ನಂತರ ಬಾಕಿ ಬಿಲ್‌ ಪಾವತಿ ಮಾಡಲಾಗುವುದು. ಯೋಜನೆಗೆ ಬೇಕಾದ ವಿದ್ಯುತ್‌ ಸಂಪರ್ಕ ವ್ಯವಸ್ಥೆಗೆ ಅನುಮತಿ ನೀಡಲು ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಲು ಕೋರಲಾಗಿದೆ.

ಮಂದಗತಿಯಲ್ಲಿ ಆರಂಭವಾದ ಕಾಮಗಾರಿ ಇನ್ನೇನು ಮುಕ್ತಾಯಗೊಂಡು ಯೋಜನೆಗೆ ಚಾಲನೆ ನೀಡಿ ಅವಳಿ ನಗರಗಳ ನೀರಿನ ಅಭಾವ ಬಗೆಹರಿಯಲಿದೆ ಎನ್ನುವಷ್ಟರಲ್ಲಿ ಯೋಜನೆಗೆ ವಿದ್ಯುತ್‌ ಶಾಕ್‌ ಹೊಡೆದಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ 10.95 ಕೋಟಿ ಬಿಲ್‌ ಬಾಕಿ ಇದ್ದು, ವಿದ್ಯುತ್‌ ಸಂಪರ್ಕ ದೊರೆಯದ ಹಿನ್ನೆಲೆಯಲ್ಲಿ ಹೆಚ್ಚುವರಿ 8 ಎಂಎಲ್‌ಡಿ ನೀರನ್ನು ತರಲು ಸಾಧ್ಯವಾಗಿಲ್ಲ. ಇದರಿಂದ ಎರಡೂ ನಗರಗಳಲ್ಲಿ ನೀರಿನ ಕೊರತೆ ಕಾಡುತ್ತಿದೆ.

10.95 ಕೋಟಿ ಬಾಕಿ ವಿದ್ಯುತ್‌ ಬಿಲ್‌: ರಾಮನಗರ ಮತ್ತು ಚನ್ನಪಟ್ಟಣ ನಗರಗಳ ಕುಡಿಯುವ ನೀರು ಸರಬರಾಜಿನ ವಿದ್ಯುತ್‌ ಸ್ಥಾವರಗಳ ವಿದ್ಯುತ್‌ ಬಿಲ್‌ ಬಾಕಿ ಮೊತ್ತ ರೂ. 10.95 ಕೋಟಿಯನ್ನು ಬೆಸ್ಕಾಂ ಮತ್ತು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿಗೆ ಪಾವತಿಸಬೇಕಾಗಿರುತ್ತದೆ. ಇದೀಗ ಹೆಚ್ಚುವರಿಯಾಗಿ 8 ಎಂಎಲ್‌ಡಿ ನೀರು ಸರಬರಾಜಿಗೆ ಅವಶ್ಯವಿರುವ 400 ಕೆವಿಎ ವಿದ್ಯುತ್‌ ಸ್ಥಾವರಕ್ಕೆ ವಿದ್ಯುತ್‌ ಸಂಪರ್ಕ ನೀಡಲು ಬಾಕಿ ಬಿಲ್‌ ಪಾವತಿಸುವಂತೆ ವಿದ್ಯುತ್‌ ಸರಬರಾಜು ಕಂಪನಿ ಷರತ್ತು ವಿಧಿಸಿದೆ. ಹೀಗಾಗಿ ಬಾಕಿ ಬಿಲ್‌ ಪಾವತಿ ಮಾಡಲು ಅನುಕೂಲವಾಗುವಂತೆ ಚನ್ನಪಟ್ಟಣ ನಗರಸಭೆಗೆ 9.94 ಕೋಟಿ ಹಾಗೂ ರಾಮನಗರಕ್ಕೆ 1 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಪೌರಾಡಳಿತ ನಿರ್ದೇಶನಾಲಯ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ