ಆ್ಯಪ್ನಗರ

‘ಬಂಡವಾಳಶಾಹಿಗಳ ಒತ್ತಡ ಮಧ್ಯೆ ಬದ್ಧತೆ ಮರೆತಿಲ್ಲ’

ಉದ್ಯಮವಾಗಿ ಮಾರ್ಪಾಟಾಗಿರುವ ಪತ್ರಿಕೆಗಳು ಇನ್ನೂ ಬದ್ಧತೆ ಮತ್ತು ನೈತಿಕತೆಯನ್ನು ಉಳಿಸಿಕೊಂಡಿವೆ ಎಂದು ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕ ಮಲ್ಲಿಕಾರ್ಜುನ್‌ ಮೇಟಿ ಅಭಿಪ್ರಾಯವ್ಯಕ್ತಪಡಿಸಿದರು.

Vijaya Karnataka 14 Dec 2018, 5:00 am
Vijaya Karnataka Web commitment maintain between capitalist pressure
‘ಬಂಡವಾಳಶಾಹಿಗಳ ಒತ್ತಡ ಮಧ್ಯೆ ಬದ್ಧತೆ ಮರೆತಿಲ್ಲ’

ಶಿವಮೊಗ್ಗ: ಉದ್ಯಮವಾಗಿ ಮಾರ್ಪಾಟಾಗಿರುವ ಪತ್ರಿಕೆಗಳು ಇನ್ನೂ ಬದ್ಧತೆ ಮತ್ತು ನೈತಿಕತೆಯನ್ನು ಉಳಿಸಿಕೊಂಡಿವೆ ಎಂದು ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕ ಮಲ್ಲಿಕಾರ್ಜುನ್‌ ಮೇಟಿ ಅಭಿಪ್ರಾಯವ್ಯಕ್ತಪಡಿಸಿದರು.

'ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ' ವಿಷಯ ಕುರಿತು 9ನೇ ಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಹಿರಿಯರು ಆರಂಭಿಸಿದ್ದ ಹಲವು ಪತ್ರಿಕೆಗಳು ಸಮುದಾಯದಲ್ಲಿ ಜಾಗೃತಿ ಮತ್ತು ಸಾಹಿತ್ಯವನ್ನು ಆಂದೋಲನವಾಗಿ ರೂಪಿಸುವ ಕೆಲಸ ಮಾಡಿದ್ದವು. ಆದರೀಗ, ಆಧುನಿಕತೆ ಭರಾಟೆಗೆ ಸಿಕ್ಕಿರುವ ಪತ್ರಿಕೆಗಳು ಬಂಡವಾಳಶಾಹಿಗಳ ಒತ್ತಡಕ್ಕೆ ಸಿಲುಕಿವೆ. ಆದರೂ ಲಭ್ಯ ಸ್ವಾತಂತ್ರ್ಯದಲ್ಲೇ ಕನ್ನಡ ಕಟ್ಟುವ ಮತ್ತು ಬೆಳೆಸುವ ಕೆಲಸದಲ್ಲಿ ಸಕ್ರಿಯವಾಗಿವೆ ಎಂದು ಹೇಳಿದರು.

1950, 60 ಮತ್ತು 70ರ ದಶಕದಲ್ಲಿ ಪತ್ರಿಕೆಗಳು ಹಲವು ಗಂಭೀರ ವಿಷಯಗಳ ಚರ್ಚೆಗೆ ಸೂಕ್ತ ವೇದಿಕೆ ಕಲ್ಪಿಸಿವೆ. ಆದರೆ, ಸ್ವಾತಂತ್ರ್ಯನಂತರದಲ್ಲಿ ಉದ್ಯಮವಾದ ನಂತರ ಪತ್ರಿಕೆಗಳ ಕಾರ್ಯವೈಖರಿ ಸ್ವರೂಪ ಮತ್ತು ಪಾತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇವೆಲ್ಲವುಗಳ ನಡುವೆ ಓದುಗರಿಗೆ ವಿವೇಕ ಮತ್ತು ಆಲೋಚಿಸಲು ಬೇಕಾದ ಜಾಗ ನೀಡುತ್ತಿವೆ ಎಂದರು.

ಕಥೆ, ಕಾದಂಬರಿ, ಕಾವ್ಯ, ನಾಟಕ, ರಂಗಭೂಮಿಗಳ ಬೆಳವಣಿಗೆಗೂ ಪತ್ರಿಕೆಗಳು ಪುಷ್ಟಿ ನೀಡಿವೆ. ಈಗಲೂ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ನಿರ್ವಹಿಸಬೇಕಾದ ಕಾರ್ಯಗಳನ್ನು ನಿಭಾಯಿಸುತ್ತಿದೆ. ಪ್ರಜಾಸತ್ತಾತ್ಮವಾಗಿ ಕೆಲಸ ಮಾಡುತ್ತಿದೆ ಎಂದರು.

'ಸಾಹಿತ್ಯ ಮತ್ತು ಪತ್ರಿಕೆ' ವಿಷಯ ಮಂಡನೆ ಮಾಡಿದ ಡಿವಿಎಸ್‌ ಸಂಯುಕ್ತ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಡಾ.ರಣಧೀರ್‌ ಮಾತನಾಡಿ, ಸಾಹಿತ್ಯ ಪುರಾತನ ಮಾಧ್ಯಮವಾಗಿದೆ. ರಾಜರ ಕಾಲದಲ್ಲಿ ಶಾಸನಗಳೂ ಸಂವಹನ ಮಾಧ್ಯಮವಾಗಿದ್ದವು. ಸಾಹಿತ್ಯಕ್ಕೆ ಯಾವುದೇ ಚೌಕಟ್ಟು ಇಲ್ಲ. ಪತ್ರಿಕೆಗಳು ಚಲನಶೀಲವಾಗಿರುವುದರಿಂದ ವಸ್ತು ಬದಲಾಗುತ್ತಲೇ ಇರುತ್ತದೆ. ಸಾಹಿತ್ಯದಲ್ಲಿ ಹಾಗಾಗುವುದಿಲ್ಲ. ಇವೆರಡರ ಮೂಲ ಒಂದೇ ಆದರೂ ಸೌಂದರ್ಯ ಮಾತ್ರ ಬೇರೆಯಾಗಿದೆ. ದಿನಪತ್ರಿಕೆಗಳು ಸಾಹಿತ್ಯವನ್ನು ಕಡೆಗಣಿಸಲು ಆರಂಭಿಸಿದಾಗ ಇದಕ್ಕೋಸ್ಕರವೇ ಕೆಲವು ಸಾಹಿತ್ಯಿಕ ಪತ್ರಿಕೆಗಳು ಹುಟ್ಟಿಕೊಂಡವು. ಕವಿ, ಲೇಖಕರು ಲೋಕಕ್ಕೆ ಪರಿಚಯವಾಗಲು ಪತ್ರಿಕೆಗಳ ಪಾತ್ರ ಹಿರಿದಾಗಿದೆ ಎಂದು ಬಣ್ಣಿಸಿದರು.

ಆದರೀಗ, ಲಾಭ ನಷ್ಟ ಲೆಕ್ಕಾಚಾರದಿಂದಾಗಿ ಸಾಹಿತ್ಯ ಮತ್ತು ಪತ್ರಿಕೆಗಳ ನಡುವೆ ಬಿರುಕುಂಟಾಗಿದೆ. ಒಂದುವೇಳೆ, ಒಂದು ಮತ್ತೊಂದಕ್ಕೆ ನಿರಾಕರಿಸುವ ಮನೋಭಾವ ಹುಟ್ಟಿಕೊಂಡಲ್ಲಿ ಅದರ ಅಳಿವು ಶುರುವಾಗುತ್ತದೆ ಎಂದು ಎಚ್ಚರಿಸಿದರು.

'ಕನ್ನಡ ಭಾಷಾ ಚಳವಳಿಗಳಲ್ಲಿ ಪತ್ರಿಕೆಗಳು' ಕುರಿತು ಪತ್ರಕರ್ತ ಪಿ.ಎಂ.ವೀರೇಂದ್ರ, 'ಪತ್ರಿಕೆ ಮತ್ತು ಜನಜಾಗೃತಿ' ಬಗ್ಗೆ ಕೊಡಗು ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್‌ ಸಾಗರ, 'ಪರಿಸರ ಮತ್ತು ಪತ್ರಿಕೆ' ಡಾ.ಐ.ಎಫ್‌.ಮಳಗಿ ವಿಷಯ ಮಂಡಿಸಿದರು. ಕಸಾಪ ಜಿಲ್ಲಾಧ್ಯಕ್ಷ ಡಿ.ಬಿ.ಶಂಕರಪ್ಪ, ಸಮ್ಮೇಳನ ಸರ್ವಾಧ್ಯಕ್ಷ ಡಾ.ಜಯಪ್ರಕಾಶ್‌ ಮಾವಿನಕುಳಿ ಉಪಸ್ಥಿತರಿದ್ದರು. ಶ್ರೀರಂಜನಿ ದತ್ತಾತ್ರಿ ನಿರೂಪಿಸಿದರು. ಚಂದ್ರಕಲಾ ಅರಸ್‌ ಸ್ವಾಗತಿಸಿದರು. ಕೆ.ಕುಬೇರಪ್ಪ ವಂದಿಸಿದರು.


ಪತ್ರಿಕೆ ಮತ್ತು ಸಾಹಿತ್ಯದ ನಡುವೆ ಅವಿನಾಭಾವ ಸಂಬಂಧವಿದೆ. ಪತ್ರಿಕೆಗಳು ಓದುಗವರ್ಗವನ್ನು ಸೃಷ್ಟಿಸುವ ಮೂಲಕ ಸಾಹಿತ್ಯಲೋಕ ಬೆಳೆಸುವ ಕೆಲಸ ಮಾಡುತ್ತಿವೆ. ಪತ್ರಿಕೆ ಬರಹಗಾರರು, ಓದುಗರು ಮತ್ತು ಸಾಹಿತ್ಯಾಸಕ್ತರನ್ನು ಹುಟ್ಟುಹಾಕುವ ಕೆಲಸದಲ್ಲಿ ಸಕ್ರಿಯವಾಗಿದೆ. ಹೀಗಾಗಿ, ಸಾಹಿತ್ಯ ಮತ್ತು ಪತ್ರಿಕೆಯನ್ನು ಬೇರ್ಪಡಿಸಲಾಗದು.

- ಮಲ್ಲಿಕಾರ್ಜುನ್‌ ಮೇಟಿ, ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕ

===============

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ