ಸರ್ಕಾರದಿಂದ ಈಡಿಗ ಸಮುದಾಯದ ಕಡೆಗಣನೆ, ಮುಂಬರುವ ಚುನಾವಣೆಯಲ್ಲಿ ತಕ್ಕಶಾಸ್ತಿ: ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ

ಶಿವಮೊಗ್ಗ: ಸರ್ಕಾರದಲ್ಲಿ ಏಳು ಶಾಸಕರು, ಓರ್ವ ಮಂತ್ರಿಯಿದ್ದರೂ ಈಡಿಗ ಸಮುದಾಯವನ್ನ ಕಡೆಗಣಿಸಲಾಗಿದೆ. ಚುನಾವಣೆ ಸಂದರ್ಭ ಯಡಿಯೂರಪ್ಪ ಹಾಗೂ ಮಗ ವಿಜಯೇಂದ್ರ ಆರ್ಯ ಈಡಿಗ ನಿಗಮ ಸ್ಥಾಪನೆ ಮಾಡುವುದಾಗಿ ಭರವಸೆ ನೀಡಿದ್ದರು.

ಈಗ ಮಾತು ಮರೆತಿದ್ದು ಮುಂದಿನ ಚುನಾವಣೆಯಲ್ಲಿ ನಮ್ಮ ಶಕ್ತಿ ಏನೆಂದು ತೋರಿಸುತ್ತೇವೆ ಎಂದು ಆರ್ಯ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜ್ಯದಲ್ಲಿ ಈಡಿಗ ಸಮುದಾಯಕ್ಕೆ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಅನ್ಯಾಯವಾಗಿದೆ. ಹಾಗಾಗಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸದೇ ಹೋದರೆ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಏಳು ಜನ ಈಡಿಗ ಸಮುದಾಯದ ಶಾಸಕರಿದ್ದರೂ ಕೇವಲ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ನಾಮಕಾವಸ್ಥೆ ಸಚಿವ ಸ್ಥಾನ ನೀಡಲಾಗಿದೆ. ನಮ್ಮ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ ಎಂದರು.
ಹಿಂದುತ್ವ ಬಿಜೆಪಿ, ಆರ್‌ಎಸ್‌ಎಸ್‌ನವರದ್ದು ಮಾತ್ರವಲ್ಲ.

ನಮ್ಮ ಜೀವನ ಪದ್ಧತಿಯೇ ಹಿಂದುತ್ವ. ಸರ್ಕಾರ ಕೂಡಲೇ ಆರ್ಯ ಈಡಿಗ ನಿಗಮ ಮಂಡಳಿ ಸ್ಥಾಪಿಸುವ ಮೂಲಕ ಹಿಂದುಳಿದ ಸಮುದಾಯಕ್ಕೆ ಸಹಾಯ ಮಾಡಬೇಕು ಎಂದರು. ಇದೇ ವೇಳೆ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಹೆಸರಿಡಬೇಕು ಎಂದು ಒತ್ತಾಯಿಸಿದರು.

Vijaya Karnataka Web 14 Jul 2021, 9:07 pm
Loading ...