Please enable javascript.ಕಸ್ತೂರಿ ರಂಗನ್ ವರದಿ: ರೈತ ಮುಖಂಡರ ಆಕ್ಷೇಪ - ಕಸ್ತೂರಿ ರಂಗನ್ ವರದಿ: ರೈತ ಮುಖಂಡರ ಆಕ್ಷೇಪ - Vijay Karnataka

ಕಸ್ತೂರಿ ರಂಗನ್ ವರದಿ: ರೈತ ಮುಖಂಡರ ಆಕ್ಷೇಪ

ವಿಕ ಸುದ್ದಿಲೋಕ 9 Feb 2014, 5:07 pm
Subscribe

ಕಸ್ತೂರಿ ರಂಗನ್ ವರದಿಯ ಸಾಧಕ ಬಾಧಕಗಳನ್ನು ಚರ್ಚಿಸಲು ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ನಾನಾ ಸಂಘಗಳು ಮತ್ತು ಕುಂದಾಪುರದ ಹುಯ್ಯರು ಪಠೇಲ್ ಚಾರಿಟೇಬಲ್ ಟ್ರಸ್ಟ್ ಜಂಟಿಯಾಗಿ ಹೆಬ್ರಿ ಬಂಟರಭವನದಲ್ಲಿ ಶನಿವಾರ ಕಾರ್ಯಾಗಾರವೊಂದನ್ನು ಆಯೋಜಿಸಿದ್ದವು.

ಕಸ್ತೂರಿ ರಂಗನ್ ವರದಿ: ರೈತ ಮುಖಂಡರ ಆಕ್ಷೇಪ
ಹೆಬ್ರಿ: ಕಸ್ತೂರಿ ರಂಗನ್ ವರದಿಯ ಸಾಧಕ ಬಾಧಕಗಳನ್ನು ಚರ್ಚಿಸಲು ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ನಾನಾ ಸಂಘಗಳು ಮತ್ತು ಕುಂದಾಪುರದ ಹುಯ್ಯರು ಪಠೇಲ್ ಚಾರಿಟೇಬಲ್ ಟ್ರಸ್ಟ್ ಜಂಟಿಯಾಗಿ ಹೆಬ್ರಿ ಬಂಟರಭವನದಲ್ಲಿ ಶನಿವಾರ ಕಾರ್ಯಾಗಾರವೊಂದನ್ನು ಆಯೋಜಿಸಿದ್ದವು. ಕಾರ್ಯಾಗಾರದಲ್ಲಿ ಪಾಲ್ಗೊಂಡ ನಾನಾ ರೈತ ಸಂಘಗಳ ಸದಸ್ಯರು ಕಸ್ತೂರಿ ರಂಗನ್ ವರದಿ ಕುರಿತು ತಮ್ಮ ಅಭಿಪ್ರಾಯ ಮಂಡಿಸಿ ವರದಿಯ ಸಾಧಕ ಬಾಧಕಗಳ ಕುರಿತು ಚರ್ಚಿಸಿದರು. ಚರ್ಚೆಯಲ್ಲಿ ಪಾಲ್ಗೊಂಡ ಅನೇಕ ರೈತ ಮುಖಂಡರು ಕಸ್ತೂರಿ ರಂಗನ್ ವರದಿಯನ್ನು ಸ್ಪಷ್ಟವಾಗಿ ವಿರೋಧಿಸಿದರು. ವರದಿ ವಿರೋಧಿಸಿ ಹಲವಾರು ರೈತ ಮುಖಂಡರು ಸಭೆಯಿಂದ ಹೊರ ನಡೆದರು. ಹೆಬ್ರಿ ಸೇರಿದಂತೆ ಅನೇಕ ಕೈಗಾರಿಕೆ ಪ್ರದೇಶಗಳನ್ನು ವರದಿ ವ್ಯಾಪ್ತಿಯಿಂದ ಕೈಬಿಡಬೇಕು, ಕೃಷಿ ಜಮೀನು ಪರಭಾರೆಗೆ ಅನುಮತಿ ನೀಡಬೇಕು. ಅವನತಿ ಅಂಚಿನಲ್ಲಿರುವ ಹಣ್ಣಿನ ಮತ್ತು ಆಯುರ್ವೇದ ಗಿಡಗಳನ್ನು ಬೆಳಸಿ ಕಾಡು ಪ್ರಾಣಿಗಳಿಗೆ ಆಹಾರ ಒದಗಿಸಬೇಕು ಎಂದು ರೈತರು ಸಭೆಯಲ್ಲಿ ಆಗ್ರಹಿಸಿದರು. ಕಾರ್ಯಾಗಾರದಲ್ಲಿ ಮಾತನಾಡಿದ ಮುಟ್ಲಪಾಡಿ ಸತೀಶ್ ಶೆಟ್ಟಿ, ಹರೀಶ್ ಪೂಜಾರಿ, ಜ್ಞಾನೇಶ್ವರ ಹೆಬ್ಬಾರ್, ಸತೀಶ್ ಕಿಣಿ, ಕೆರೆಬೆಟ್ಟು ಸಂಜೀವ ಶೆಟ್ಟಿ, ಎಚ್.ಕೆ ಶ್ರೀಧರ ಶೆಟ್ಟಿ, ಸಿ.ಎಂ. ಪ್ರಸನ್ನ ಕುಮಾರ್, ವಾದಿರಾಜ ಶೆಟ್ಟಿ, ನವೀನ್ ಅಡ್ಯಂತಾಯ, ರತ್ನಾಕರ ಪೂಜಾರಿ, ಪಿಎನ್ ಜೋಸ್ ಮೊದಲಾದವರು ಅರಣ್ಯ ವ್ಯಾಪ್ತಿಯಲ್ಲಿರುವ ಕೃಷಿ ಪ್ರದೇಶವನ್ನು ಸರಕಾರವೇ ಸೂಕ್ತ ಬೆಲೆಗೆ ಖರೀದಿಸಬೇಕು. ಕಾ ಡು ಪ್ರಾಣಿಗಳ ಹಾವಳಿಯಿಂದ ರೈತರನ್ನು ಹಾಗೂ ಬೆಳೆಯನ್ನು ರಕ್ಷಿಸಬೇಕು, ರೈತರಿಗೆ ಕೋವಿ ಪರವಾನಗಿ ನೀಡಬೇಕು, ವರದಿಯನ್ನು ಉಪಗ್ರಹ ಆಧಾರಿತ ಸರ್ವೆಯ ಬದಲು ಮಾನವಾಧಾರಿತ ಸಂಪನ್ಮೂಲದಿಂದ ಸರ್ವೆ ಮಾಡಬೇಕು ಯಾವುದೇ ಸಂದರ್ಭದಲ್ಲೂ ಕಸ್ತೂರಿರಂಗನ್ ವರದಿ ಜಾರಿಗೆ ನಾವು ಆಸ್ಪದ ನೀಡುವುದಿಲ್ಲ ಎಂದು ರೈತರು ಘೋಷಿಸಿದರು.

ಅಧ್ಯಯನ ಬಳಿಕ ಗೊಂದಲ ನಿವಾರಣೆ: ಜಿಲ್ಲೆಯ ರೈತರ ಬಹುತೇಕ ಸಮಸ್ಯೆಗಳ ಬಗ್ಗೆ ಗಮನಹರಿಸಿ ಕಸ್ತೂರಿ ರಂಗನ್ ವರದಿಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ರೈತರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ತೊಂದರೆಯಾಗದಂತೆ ವರದಿಯ ಬಗ್ಗೆ ಜನರಿಗಿರುವ ಗೊಂದಲ ನಿವಾರಣೆಗೆ ವಿಶೇಷ ಗ್ರಾಮಸಭೆ ನಡೆಸಿ ಇನ್ನಷ್ಟು ಮಾಹಿತಿ ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಸಭೆಯಲ್ಲಿ ತಿಳಿಸಿದರು.

ಕೇಂದ್ರ ಸಚಿವ ಮೊಯ್ಲಿ ಅವರ ಸೂಚನೆಯಂತೆ ಮುಖ್ಯಮಂತ್ರಿಗಳು ವರದಿಯ ಅಧ್ಯಯನಕ್ಕಾಗಿ ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ಈಗಾಗಲೇ ಸಂಪುಟ ಉಪಸಮಿತಿ ರಚಿಸಿದ್ದು, ನಾನೂ ಸಮಿತಿ ಸದಸ್ಯನಾಗಿದ್ದೇನೆ ಎಂದು ತಿಳಿಸಿದರು.

ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ, ಎಂಎಲ್‌ಸಿ ಪ್ರತಾಪ್‌ಚಂದ್ರ ಶೆಟ್ಟಿ, ಪ್ರಸನ್ನ ಬಲ್ಲಾಳ್, ತಾ.ಪಂ. ಅಧ್ಯಕ್ಷೆ ರಶ್ಮಿ ಶೆಟ್ಟಿ, ಜಿ.ಪಂ. ಸದಸ್ಯರಾದ ಎಂ. ಮಂಜುನಾಥ ಪೂಜಾರಿ, ಮಮತಾ ಅಧಿಕಾರಿ, ತಾ.ಪಂ. ಸದಸ್ಯೆ ಪ್ರಮೀಳಾ ಹರೀಶ್ ಮೊದಲಾದವರಿದ್ದರು.

ಯಾವ ತೊಂದರೆಯೂ ಇಲ್ಲ: ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಡಾ. ಎಂ.ಟಿ ರೇಜು ವರದಿಯಿಂದ ಗ್ರಾಮೀಣ ಭಾಗದ ಕೃಷಿಕರಿಗೆ ಯಾವುದೇ ತೊಂದರೆ ಇಲ್ಲ. ವರದಿ ಅನುಷ್ಠಾನದಿಂದ ಗಣಿಗಾರಿಕೆ, ಉಷ್ಣವಿದ್ಯುತ್ ಸ್ಥಾವರ, ಟೌನ್‌ಶಿಪ್ ನಿರ್ಮಾಣ, ಅಪಾಯಕಾರಿ ಕಾರ್ಖಾನೆಗಳಿಗೆ ಮಾತ್ರ ತೊಂದರೆಯಾಗಲಿದೆ ಎಂದು ಸಮಜಾಯಿಷಿಕೆ ನೀಡಿದರು. ಜೀವ ಪರಿಸರದ ಸೂಕ್ಷ್ಮ ಪ್ರದೇಶದಲ್ಲಿ ಭೂಮಿಯ ಅನುಭೋಗವನ್ನು ಮುಂದುವರಿಸಲು ಯಾವುದೇ ನಿರ್ಬಂದ ಇಲ್ಲ ಎಂದು ಅವರು ಹೇಳಿದರು.

ಹುಲಿ ಯೋಜನೆ ಇಲ್ಲ : ಕೆಲವು ಯೋಜನೆಗಳ ಬಗ್ಗೆ ಹಳ್ಳಿಯ ಮುಗ್ಧ ಜನತೆ ಮಾಹಿತಿಯ ಕೊರತೆಯಿಂದ ತಪ್ಪು ಕಲ್ಪನೆ ಹೊಂದಿರುತ್ತಾರೆ. ಹುಲಿಗಳನ್ನು ತಂದು ಗ್ರಾಮಗಳಿಗೆ ಬಿಡುತ್ತಾರೆ ಎಂಬ ವದಂತಿ ಸುಳ್ಳು. ಹುಲಿ ಯೋಜನೆ ಜಾರಿಗೆ ಬರುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಮಾಹಿತಿ ನೀಡಿದರು. ಕೆ.ಸಿ. ರಾಜೇಶ್ ಕಾರ್ಯಕ್ರಮ ನಿರೂಪಿಸಿ, ಚೋರಾಡಿ ಅಶೋಕ ಕುಮಾರ್ ಶೆಟ್ಟಿ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ