Please enable javascript.ಮಕ್ಕಳ ಅಂಗನವಾಡಿಯಲ್ಲಿ ಮಕ್ಕಳಿಗೇ ಜಾಗವಿಲ್ಲ! - ಮಕ್ಕಳ ಅಂಗನವಾಡಿಯಲ್ಲಿ ಮಕ್ಕಳಿಗೇ ಜಾಗವಿಲ್ಲ! - Vijay Karnataka

ಮಕ್ಕಳ ಅಂಗನವಾಡಿಯಲ್ಲಿ ಮಕ್ಕಳಿಗೇ ಜಾಗವಿಲ್ಲ!

ವಿಕ ಸುದ್ದಿಲೋಕ 10 Aug 2014, 5:47 am
Subscribe

ಕುಂದಾಪುರ ತಾಲೂಕಿನ ಕರ್ಕುಂಜೆ ಪಂಚಾಯತ್ ವ್ಯಾಪ್ತಿಯ ಗುಲ್ವಾಡಿ ಗ್ರಾಮದ ಮಾವಿನಕಟ್ಟೆಯಲ್ಲಿ 9 ವರ್ಷಗಳ ಹಿಂದೆ ಆರಂಭವಾದ ಅಂಗನವಾಡಿ ಕೇಂದವು ಕಟ್ಟಡ ಸಮಸ್ಯೆಯಿಂದ ಬಳಲುತ್ತಿದೆ.

ಮಕ್ಕಳ ಅಂಗನವಾಡಿಯಲ್ಲಿ ಮಕ್ಕಳಿಗೇ ಜಾಗವಿಲ್ಲ!
-ಸತೀಶ ಎಂ.ಬಿ. ವಂಡ್ಸೆ ಕುಂದಾಪುರ ತಾಲೂಕಿನ ಕರ್ಕುಂಜೆ ಪಂಚಾಯತ್ ವ್ಯಾಪ್ತಿಯ ಗುಲ್ವಾಡಿ ಗ್ರಾಮದ ಮಾವಿನಕಟ್ಟೆಯಲ್ಲಿ 9 ವರ್ಷಗಳ ಹಿಂದೆ ಆರಂಭವಾದ ಅಂಗನವಾಡಿ ಕೇಂದವು ಕಟ್ಟಡ ಸಮಸ್ಯೆಯಿಂದ ಬಳಲುತ್ತಿದೆ. ಇಲ್ಲಿ 45 ಮಕ್ಕಳಿದ್ದಾರೆ. ಸಮೀಕ್ಷೆ ಸಂದರ್ಭ 60 ಮಕ್ಕಳ ಸಂಖ್ಯೆ ಇದ್ದರೂ ಇಲ್ಲಿನ ಕಟ್ಟಡ ಸಮಸ್ಯೆಯಿಂದಾಗಿ ಪೋಷಕರು ಮಕ್ಕಳನ್ನು ಈ ಅಂಗನವಾಡಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಸಣ್ಣದೊಂದು ಕೋಣೆ ಹೊಂದಿರುವ ಈ ಅಂಗನವಾಡಿ ಕಟ್ಟಡದಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಸರಿಯಾದ ಜಾಗವಿಲ್ಲ. ಅಂಗನವಾಡಿಗೆ ಬರುವ ಧಾನ್ಯ, ಹಾಲು, ಪೌಷ್ಟಿಕ ಅಹಾರಗಳ ದಾಸ್ತಾನು ಮಾಡುವುದಕ್ಕೂ ಪ್ರತ್ಯೇಕ ಜಾಗವಿಲ್ಲ. ಅಡುಗೆ ಕೆಲಸವೂ ಇಲ್ಲೇ ಆಗಬೇಕು. ಅಂಗನವಾಡಿ ಕಾರ್ಯಕರ್ತೆ ಒಂದು ಕಡೆ ಕುಳಿತು ಮಕ್ಕಳಿಗೆ ಏನಾದರೂ ಹೇಳಿಕೊಡಬೇಕೆಂದರೂ ಜಾಗ ಸಾಲದಾಗುತ್ತಿಲ್ಲ. ಇದಕ್ಕಾಗಿ ಅವರು ಮಕ್ಕಳನ್ನು ಹೊರಗಿನ ಜಗುಲಿಯಲ್ಲಿ ಕುಳ್ಳಿರಿಸುವ ಅನಿವಾರ್ಯತೆ ಇದೆ.

ಅಂಗನವಾಡಿ ಕೇಂದ್ರವು ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಇದೆ. ಕಟ್ಟಡಕ್ಕೆ ಆವರಣ ಗೋಡೆಯೂ ಇಲ್ಲ. ಹೀಗಾಗಿ ಮಕ್ಕಳು ಅಪ್ಪಿತಪ್ಪಿ ರಸ್ತೆಗೆ ಬಂದರೆ ಅಪಾಯದ ಸಂಭವವೂ ಇದೆ. ಈ ಪರಿಸ್ಥಿತಿ ಮನಗಂಡು ಪ್ರಸ್ತುತ ಒಂದು ತಾತ್ಕಾಲಿಕ ತಡೆಬೇಲಿ ನಿರ್ಮಿಸಲಾಗಿದೆ.

ಈ ಅಂಗನವಾಡಿ ಕೇಂದ್ರಕ್ಕೆ ಒಂದು ಸುಸಜ್ಜಿತ ಕಟ್ಟಡ ಮತ್ತು ಒಂದು ಸಮರ್ಪಕ ಆವರಣಗೋಡೆ ಬೇಕಾಗಿದೆ. ಶಾಸಕರು ಮತ್ತು ಸಂಬಂಧಪಟ್ಟವರು ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಆಗ್ರಹಿಸಿದ್ದಾರೆ. ಹೊಸ ಕಟ್ಟಡ ನಿರ್ಮಿಸಬೇಕೆಂಬ ಬೇಡಿಕೆ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದೇವೆ. ಇನ್ನೂ ಕೂಡ ಕ್ರಮ ಆಗಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆ ಹೇಳುತ್ತಾರೆ.

*ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಅಂಗನವಾಡಿ ಕೇಂದ್ರಕ್ಕೆ ಕಟ್ಟಡದ ಅವಶ್ಯಕತೆ ಇರುವುದು ನಮ್ಮ ಗಮನದಲ್ಲಿದೆ. ಈ ಬಗ್ಗೆ ಚರ್ಚಿಸಿದ್ದೇನೆ. ಕಟ್ಟಡಗಳಿಗೆ ಅನುದಾನದ ಕೊರತೆ ಇದೆ. ಮುಂದಿನ ದಿನಗಳಲ್ಲಿ ಬರುವ ಅನುದಾನದಲ್ಲಿ ಈ ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಹಣ ಮೀಸಲಿಡುತ್ತೇನೆ. - ಇಂದಿರಾ ಶೆಡ್ತಿ, ಜಿಲ್ಲಾ ಪಂಚಾಯತ್ ಸದಸ್ಯೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ