Please enable javascript.40 ಅಡಿ ಆಳದ ಬಾವಿಗೆ ಇಳಿದು ಬೆಕ್ಕಿನ ಮರಿಯನ್ನು ರಕ್ಷಿಸಿದ ಪೇಜಾವರ ಶ್ರೀ! ವಿಡಿಯೋ ವೈರಲ್‌ - vishwaprasanna theertha swamiji of pejawar mutt rescued a cat by falling into a 40 feet well - Vijay Karnataka

40 ಅಡಿ ಆಳದ ಬಾವಿಗೆ ಇಳಿದು ಬೆಕ್ಕಿನ ಮರಿಯನ್ನು ರಕ್ಷಿಸಿದ ಪೇಜಾವರ ಶ್ರೀ! ವಿಡಿಯೋ ವೈರಲ್‌

Authored byಅವಿನಾಶ ವಗರನಾಳ | Vijaya Karnataka Web 19 Jun 2023, 12:49 pm
Subscribe

Pejawar Seer Rescued A Cat : ಉಡುಪಿಯ ಪೇಜಾವರ ಮಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಧಾರ್ಮಿಕ ಕಾರ್ಯಕ್ಕೂ ಸೈ, ಸಾಮಾಜಿಕ ಕಾರ್ಯಕ್ಕೂ ಸೈ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ 40 ಅಡಿ ಆಳದ ಬಾವಿಯಲ್ಲಿ ಬಿದ್ದಿದ್ದ ಬೆಕ್ಕಿನ ಮರಿಯನ್ನು ರಕ್ಷಿಸುವ ಮೂಲಕ ಪೇಜಾವರ ಶ್ರೀ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸ್ವತಃ ತಾವೇ ಬಾವಿಗಿಳಿದು ಬೆಕ್ಕನ್ನು ಪೇಜಾವರ ಶ್ರೀಗಳು ರಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಹೈಲೈಟ್ಸ್‌:


  • ಬೆಕ್ಕಿನ ಮರಿಯನ್ನು ರಕ್ಷಿಸಿದ ಉಡುಪಿಯ ಪೇಜಾವರ ಮಠದ ಶ್ರೀಗಳು
  • ಸ್ವತಃ ತಾವೇ ಬಾವಿಗಿಳಿದು ಬೆಕ್ಕು ರಕ್ಷಿಸಿದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
  • ಬೆಕ್ಕಿನ ರಕ್ಷಣೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌
Pejawar Mutt Seer Rescued Cat
ಬಾವಿಗಿಳಿದು ಬೆಕ್ಕನ್ನು ರಕ್ಷಿಸಿದ ಪೇಜಾವರ ಶ್ರೀ
ಉಡುಪಿ : ಉಡುಪಿಯ ಪೇಜಾವರ ಮಠಾಧಿಪತಿ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳು ಬಾವಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಬೆಕ್ಕಿನ ಮರಿಯನ್ನು ರಕ್ಷಣೆ ಮಾಡಿದ್ದಾರೆ. ಸ್ವತಃ ತಾವೇ 40 ಅಡಿ ಬಾವಿಗೆ ಇಳಿದು ಬೆಕ್ಕಿನ ಮರಿಯನ್ನು ರಕ್ಷಣೆ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಉಡುಪಿಯ ಮುಚ್ಚುಕೋಡು ಸುಬ್ರಹ್ಮಣ್ಯ ದೇವಾಲಯದಲ್ಲಿನ 40 ಅಡಿ ಆಳದ ಬಾವಿಗೆ ಬಿದ್ದು ಅಸಹಾಯಕ ಸ್ಥಿತಿಯಲ್ಲಿ ಬೆಕ್ಕು ಚೀರಾಟ ನಡೆಸುತ್ತಿತ್ತು. ಬಾವಿಗೆ ಬಿದ್ದ ಬೆಕ್ಕಿನ ಆಕ್ರಂದನ ಕೇಳಿ ಪೇಜಾವರ ಶ್ರೀಗಳು ತಾವೇ ಬಾವಿಗಿಳಿದು ಬೆಕ್ಕಿನ ಮರಿಯನ್ನು ರಕ್ಷಿಸಿದ್ದಾರೆ. ದೇವಾಲಯಕ್ಕೆ ಬಂದ ವೇಳೆ ಬಾವಿಗೆ ಬೆಕ್ಕು ಬಿದ್ದಿರುವ ಮಾಹಿತಿಯನ್ನು ದೇವಾಲಯದ ಸಿಬ್ಬಂದಿ ನೀಡಿದ್ದಾರೆ. ಕೂಡಲೇ ಶ್ರೀಗಳು ಹಿಂದು ಮುಂದು ನೋಡದೆ ಹಗ್ಗದ ಸಹಾಯದಿಂದ ಬಾವಿಗಿಳಿದು ಬೆಕ್ಕನ್ನು ರಕ್ಷಣೆ ಮಾಡಿದ್ದಾರೆ.

ಇನ್ನು, ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಧಾರ್ಮಿಕ ಕಾರ್ಯಕ್ಕೂ ಸೈ, ಸಾಮಾಜಿಕ ಕಾರ್ಯಕ್ಕೂ ಸೈ ಎನಿಸಿಕೊಂಡಿದ್ದಾರೆ. ದಿವಂಗತ ವಿಶ್ವೇಶರತೀರ್ಥ ಸ್ವಾಮೀಜಿಗಳ ಶಿಷ್ಯರಾಗಿರುವ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಸದಾ ಕ್ರಿಯಾಶೀಲರಾಗಿ ಕಾಣಿಸಿಕೊಳ್ಳುತ್ತಾರೆ. ತಮ್ಮ ಬಿಡುವಿನ ವೇಳೆಯನ್ನು ಪೇಜಾವರ ಶ್ರೀಗಳು ನೀಲಾವರದ ಗೋಶಾಲೆಯಲ್ಲಿ ಕಳೆಯುತ್ತಾರೆ. ಅಲ್ಲಿ ಕೂಡ ಜನರು ಅಚ್ಚರಿಪಡುವ ಕೆಲಸಗಳನ್ನು ಶ್ರೀಗಳು ಮಾಡುತ್ತಾರೆ.
Pejavara Seer: ಬ್ರಾಹ್ಮಣರು ಏಕೆ ಮುಖ್ಯಮಂತ್ರಿ ಆಗಬಾರದು? ಅವರು ಭಾರತದ ಪ್ರಜೆಗಳಲ್ಲವೇ: ಪೇಜಾವರ ಶ್ರೀ ಪ್ರಶ್ನೆ

ಹಲಸಿನ ಮರ ಏರಿದ್ದ ಶ್ರೀಗಳು!

ಇದೇ ಜೂನ್‌ 14ರಂದು ಪೇಜಾವರ ಶ್ರೀಗಳು ಮಠದ ಗೋಶಾಲೆಯಲ್ಲಿ ಹಲಸಿನ ಮರ ಏರಿದ್ದರು. ಗೋಶಾಲೆಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲೇ ಇದ್ದ ಹಲಸಿನ ಮರವನ್ನು ಶ್ರೀಗಳು ನೋಡಿದ್ದಾರೆ. ಮರದಲ್ಲಿ ಹಲಸಿನ ಹಣ್ಣುಗಳನ್ನು ಕಂಡ ಅವರು, ತಲೆಗೆ ಶಲ್ಯ ಸುತ್ತಿ, ಕೈಯಲ್ಲೊಂದು ಕತ್ತಿ ಹಿಡಿದು ಮೂವತ್ತು ಅಡಿ ಎತ್ತರವಿರುವ ಮರವನ್ನು ನಿರಾಯಾಸವಾಗಿ ಏರಿದ್ದರು. ಜೊತೆಗೆ 10ಕ್ಕೂ ಹೆಚ್ಚು ಹಲಸಿನ ಹಣ್ಣುಗಳನ್ನು ಕೊಯ್ದು, ಹಸುಗಳಿಗೆ ನೀಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದ್ದವು.

ಅಯೋಧ್ಯಾ ಶ್ರೀರಾಮ ಮಂದಿರದಲ್ಲಿ 2024ರಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ: ಪೇಜಾವರ ಶ್ರೀ

ಸರಳವಾಗಿ ಹಾವು ಹಿಡಿದಿದ್ದ ಪೇಜಾವರ ಶ್ರೀ!

ಇನ್ನು, ಕೆಲ ವರ್ಷಗಳ ಹಿಂದೆ ನೀಲಾವರ ಗೋಶಾಲೆಯ ಆವರಣದಲ್ಲಿ ಹಾವಿನ ಮರಿಯೊಂದು ಕಾಣಿಸಿಕೊಂಡಿತ್ತು. ಈ ವೇಳೆ ಪೇಜಾವರ ಶ್ರೀಗಳು ಹಾವನ್ನು ಸರಳವಾಗಿ ಹಿಡಿಯುವ ವಿಧಾನವನ್ನು ವಿವರಿಸಿ ಪ್ರಾತ್ಯಕ್ಷಿಕೆ ತೋರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿತ್ತು. ಸರಳವಾಗಿ ತೆಂಗಿನ ಮರದ ಗರಿಯ ಕಡ್ಡಿಯಲ್ಲಿ ಹಾವು ಹಿಡಿಯುವ ಪ್ರಕ್ರಿಯೆಯನ್ನು ತೋರಿಸಿದ್ದ ಪೇಜಾವರ ಶ್ರೀಗಳು ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದರು.
ಅವಿನಾಶ ವಗರನಾಳ
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ