ಆ್ಯಪ್ನಗರ

ಆಪರೇಷನ್‌ ಹಸ್ತದ ಚರ್ಚೆ ನಡುವೆಯೇ ಬಿಜೆಪಿ ನಾಯಕರ ವಿರುದ್ಧ ಶಿವರಾಮ್‌ ಹೆಬ್ಬಾರ್‌ ಕಿಡಿ!

Shivaram Hebbar On BJP Leaders : ಕಾಂಗ್ರೆಸ್‌ಗೆ ಘರ್‌ ವಾಪಸಿ ಮಾಡ್ತಾರೆ ಎನ್ನುವ ಮಾತುಗಳ ನಡುವೆಯೇ ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ್‌ ಹೆಬ್ಬಾರ್‌ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಚುನಾವಣೆ ವೇಳೆ ನನ್ನನ್ನು ಸೋಲಿಸಲು ಪಕ್ಷದಲ್ಲಿದ್ದ ಪ್ರಮುಖ ನಾಯಕರೇ ಪ್ರಯತ್ನಿಸಿದ್ದರು. ಈಗ ಲೋಕಸಭಾ ಚುನಾವಣೆಯಲ್ಲಿಯೂ ಪಕ್ಷ ವಿರೋಧಿ ಚಟುವಟಿಕೆ ಮಾಡ್ತಾರೆ. ಈ ಬಗ್ಗೆ ದೂರು ನೀಡಿದರು ಕೂಡ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Edited byಅವಿನಾಶ ವಗರನಾಳ | Lipi 18 Aug 2023, 4:27 pm

ಹೈಲೈಟ್ಸ್‌:


  • ರಾಜ್ಯದಲ್ಲಿ ಜೋರಾದ ಕಾಂಗ್ರೆಸ್‌ಗೆ ಘರ್‌ ವಾಪಸಿ ಚರ್ಚೆ
  • ಇದರ ನಡುವೆಯೇ ಬಿಜೆಪಿ ನಾಯಕರ ವಿರುದ್ಧ ಶಿವರಾಮ್‌ ಹೆಬ್ಬಾರ್‌ ಕಿಡಿ!
  • "ನನ್ನನ್ನು ಸೋಲಿಸಲು ಪ್ರಯತ್ನಿಸಿದ ನಾಯಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ"
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಉತ್ತರ ಕನ್ನಡ : ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಆಪರೇಷನ್‌ ಹಸ್ತದ ಸದ್ದು ಬಹಳ ಜೋರಾಗಿ ಕೇಳಿಬರುತ್ತಿದೆ. ಬಿಜೆಪಿಯ ಶಾಸಕರು ಕಾಂಗ್ರೆಸ್‌ಗೆ ಬರುತ್ತಾರೆ ಎಂದು ಹೇಳಲಾಗುತ್ತಿದೆ. ಇದರ ನಡುವೆಯೇ ಬಿಜೆಪಿ ನಾಯಕರ ವಿರುದ್ಧ ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ್‌ ಹೆಬ್ಬಾರ್‌ ಕಿಡಿಕಾರಿರುವುದು ಕುತೂಹಲ ಮೂಡಿಸಿದೆ. ಪಕ್ಷದಲ್ಲಿದ್ದ ಪ್ರಮುಖ ನಾಯಕರೇ ನನ್ನನ್ನು ಸೋಲಿಸಬೇಕು ಎಂದು ಪ್ರಯತ್ನಿಸಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.
ಯಲ್ಲಾಪುರದಲ್ಲಿ ಮಾತನಾಡಿರುವ ಅವರು, ನಾನು ಪಕ್ಷ ಬಿಡುವ ಬಗ್ಗೆ ಯಾವ ಮುಖಂಡರ ಜೊತೆಯೂ ಚರ್ಚೆ ಮಾಡಿಲ್ಲ. ನನಗಿರುವ ನೋವು ಏನೆಂದರೆ ಪಕ್ಷದಲ್ಲಿ ಜವಾಬ್ದಾರಿ ಸ್ಥಾನದಲ್ಲಿದ್ದವರು ನನ್ನನ್ನು ಸೋಲಿಸಲೇಬೇಕು ಎಂದು ಪ್ರಯತ್ನ ಮಾಡಿದ್ದಾರೆ. ಇದನ್ನು ಪಕ್ಷದ ನಾಯಕರ ಗಮನಕ್ಕೆ ತಂದಿದ್ದೇನೆ. ಆದರೆ, ಈವರೆಗೆ ಅವರ ವಿರುದ್ಧ ವರಿಷ್ಠರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಈ ಬಾರಿ ನನ್ನ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ಕ್ರಮ ಕೈಗೊಳ್ಳದೇ ಇದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಪಕ್ಷ ವಿರೋಧಿ ನಡೆ ಅನುಸರಿಸುತ್ತಾರೆ. ನಾನು ಗೆದ್ದಿರುವುದಕ್ಕೆ ಎಲ್ಲರೂ ಈಗ ನನ್ನನ್ನು ಮಾತನಾಡಿಸುತ್ತಾರೆ. ಒಂದೊಮ್ಮೆ ಇವರ ಪಕ್ಷ ವಿರೋಧಿ ಚಟುವಟಿಕೆಯಿಂದ ಯಲ್ಲಾಪುರದಲ್ಲಿ ನಾನು ಸೋಲು ಅನುಭವಿಸಿದ್ದರೆ, ನನ್ನನ್ನು ಯಾರು ಮಾತನಾಡಿಸುತ್ತಿರಲಿಲ್ಲ ಎಂದು ಹೇಳಿದರು.

ನಾನು ಸದ್ಯ ಬಿಜೆಪಿ ಪಕ್ಷದಲ್ಲಿಯೇ ಇದ್ದೇನೆ, ನಾನು ಬಿಜೆಪಿ ಶಾಸಕನಾಗಿದ್ದು, ಬಿಜೆಪಿ ಶಾಸಕನಾಗಿಯೇ ಉಳಿಯುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ನಾನು ಕಾಂಗ್ರೆಸ್‌ಗೆ ವಾಪಸ್‌ ಹೋಗಲ್ಲ ಎಂಬ ಮಾತುಗಳನ್ನು ಆಡಿದ್ದಾರೆ. ಆದರೆ, ಅದರ ಜೊತೆ ಜೊತೆಗೆ ಸ್ಥಳೀಯ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿರುವುದು ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕಾಂಗ್ರೆಸ್‌ ಸೇರ್ಪಡೆ ಸುದ್ದಿ: ಎಸ್‌ಟಿ ಸೋಮಶೇಖರ್‌ ಹೇಳಿದ್ದೇನು? ಬಿಜೆಪಿ ಬಿಡ್ತಾರಾ ಯಶವಂತಪುರ ಶಾಸಕ?

ಬೆಂಬಲಿಗರ ಜೊತೆ ಶಿವರಾಮ್‌ ಹೆಬ್ಬಾರ್‌ ಸಭೆ!

ಇನ್ನು, ಬಿಜೆಪಿ ಶಾಸಕ ಶಿವರಾಮ್‌ ಹೆಬ್ಬಾರ್‌ ಅವರು ತಮ್ಮ ಬೆಂಬಲಿಗರ ಜೊತೆ ಗುರುವಾರ ರಾತ್ರಿ ಮುಂಡಗೋಡಿಯಲ್ಲಿ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಸಭೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುವ ಸಾಧ್ಯತೆಗಳ ಬಗ್ಗೆ ಬೆಂಬಲಿಗರ ಅಭಿಪ್ರಾಯವನ್ನು ಪಡೆದಿರುವ ಶಿವರಾಮ್‌ ಹೆಬ್ಬಾರ್‌ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದೇ ಕುತೂಹಲ ಮೂಡಿಸಿದೆ. ಅದಲ್ಲದೇ ಬೆಂಗಳೂರಿನಲ್ಲಿ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೆಬ್ಬಾರ್‌ ಹೇಳಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

"ಬೇಕಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ, ಕಾಂಗ್ರೆಸ್‌ಗೆ ಹೋಗುವುದಿಲ್ಲ": ಮುನಿರತ್ನ

ಬಿಜೆಪಿ ನಾಯಕರ ವಿರುದ್ಧ ಎಸ್‌ಟಿ ಸೋಮಶೇಖರ್‌ ಕೂಡ ಕಿಡಿ!

ಯಶವಂತಪುರ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್‌ ಕೂಡ ಸ್ಥಳೀಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದರು. ನನ್ನನ್ನು ಸೋಲಿಸಲು ಆಡಿಯೋ ವೈರಲ್‌ ಮಾಡಿದ್ದರು. ಈಗಲೂ ಅವರೇ ನನ್ನನ್ನು ಬಿಜೆಪಿಯಿಂದ ಕಾಂಗ್ರೆಸ್‌ಗೆ ಕಳಿಸುವಂತಿದ್ದಾರೆ. ಡಿಕೆ ಶಿವಕುಮಾರ್‌ ಅವರನ್ನು ಹೊಗಳಿರುವ ವಿಡಿಯೋವನ್ನು ಕೂಡ ಅವರೇ ವೈರಲ್‌ ಮಾಡಿದ್ದಾರೆ ಎಂದು ಬೇಸರ ಹೊರಹಾಕಿದ್ದರು. ಅವರು ಕೂಡ ಬಿಜೆಪಿ ತೊರೆಯುವುದಿಲ್ಲ ಎಂದು ಹೇಳಿದ್ದರು.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ