Please enable javascript.ಚರಂಡಿ ನೀರು ಶುದ್ಧೀಕರಣಕ್ಕೆ 2,500 ಕೋಟಿ: ಸಿಎಂ // ಮಹತ್ವದ ವರದಿ - ಚರಂಡಿ ನೀರು ಶುದ್ಧೀಕರಣಕ್ಕೆ 2,500 ಕೋಟಿ: ಸಿಎಂ // ಮಹತ್ವದ ವರದಿ - Vijay Karnataka

ಚರಂಡಿ ನೀರು ಶುದ್ಧೀಕರಣಕ್ಕೆ 2,500 ಕೋಟಿ: ಸಿಎಂ // ಮಹತ್ವದ ವರದಿ

ವಿಕ ಸುದ್ದಿಲೋಕ 19 Aug 2017, 8:43 pm
Subscribe

ವಿಜಯಪುರ: ಬೆಂಗಳೂರು ನಗರದ ಚರಂಡಿಯಿಂದ 20 ಟಿಎಂಸಿಗೂ ಅಧಿಕ ನೀರು ವ್ಯರ್ಥ ಹರಿದು ತಮಿಳುನಾಡು ಪಾಲಾಗುತ್ತಿದೆ. ಇದೇ ಚರಂಡಿ ನೀರನ್ನು ಶುದ್ಧೀಕರಿಸಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಮಹತ್ವಾಕಾಂಕ್ಷಿಯ ಕೆರೆಗಳನ್ನು ತುಂಬಿಸಲು ಬಳಕೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಚರಂಡಿ ನೀರು ಶುದ್ಧೀಕರಣಕ್ಕೆ 2,500 ಕೋಟಿ: ಸಿಎಂ // ಮಹತ್ವದ ವರದಿ


ವಿಜಯಪುರ: ಬೆಂಗಳೂರು ನಗರದ ಚರಂಡಿಯಿಂದ 20 ಟಿಎಂಸಿಗೂ ಅಧಿಕ ನೀರು ವ್ಯರ್ಥ ಹರಿದು ತಮಿಳುನಾಡು ಪಾಲಾಗುತ್ತಿದೆ. ಇದೇ ಚರಂಡಿ ನೀರನ್ನು ಶುದ್ಧೀಕರಿಸಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಮಹತ್ವಾಕಾಂಕ್ಷಿಯ ಕೆರೆಗಳನ್ನು ತುಂಬಿಸಲು ಬಳಕೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ಬಿಎಲ್‌ಡಿಇ ಸಂಸ್ಥೆಯ ಆವರಣದಲ್ಲಿ ಶುಕ್ರವಾರ ಬರಮುಕ್ತ ಭಾರತಕ್ಕಾಗಿ ಮೂರು ದಿನಗಳಿಂದ ನಡೆದ ರಾಷ್ಟ್ರೀಯ ಜಲ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಅಂತರ್ಜಲ ಪಾತಾಳಕ್ಕಿಳಿದಿದೆ. ಇದನ್ನು ಹೆಚ್ಚಿಸುವ ಪ್ರಯತ್ನವಾಗಿ ತಮಿಳುನಾಡು ಪಾಲಾಗುತ್ತಿರುವ ಚರಂಡಿ ನೀರು ಶುದ್ಧೀಕರಿಸಿ ಕೃಷಿ ಕಾರ್ಯಕ್ಕೆ ಬಳಕೆ ಹಾಗೂ ಕೆರೆಗಳ ತುಂಬಿಸಲಾಗುವುದು. ಇದಕ್ಕಾಗಿ 2500 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದರು.

ಕೆರೆ ಡಿನೋಟಿಫೈ ಮಾಡಲ್ಲ:

ರಾಜ್ಯ ಸರಕಾರ ಕೆರೆಗಳನ್ನು ಡಿನೋಟಿಫೈ ಮಾಡಲು ಮುಂದಾಗಿದೆ ಎಂಬ ವದಂತಿ ಹರಡಿದೆ. ಇದು ಶುದ್ಧ ಸುಳ್ಳು ಮತ್ತು ಆಧಾರರಹಿತವಾದದ್ದು. ಕೆರೆ ಡಿನೋಟಿಫೈ ಮಾಡುವ ಪ್ರಸ್ತಾವ ಸರಕಾರದ ಮುಂದಿಲ್ಲ. ಯಾವುದೇ ಕೆರೆಯನ್ನು ಡಿನೋಟಿಫೈ ಮಾಡಲ್ಲ ಎಂದರಲ್ಲದೆ, ನಾವು ಕೆರೆಗಳನ್ನು ಉಳಿಸ್ತೀವಿ. ಅಭಿವೃದ್ಧಿಗೊಳಿಸಿ ನೀರು ತುಂಬಿಸುವ ಕೆಲಸ ಮಾಡುತ್ತೇವೆ. ಈಗಾಗಲೇ ಮಳೆ ನೀರನ್ನು ಸಂಗ್ರಹಿಸಿ ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲು ರಾಜ್ಯದಲ್ಲಿ 1.5 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಇವು ರೈತರಿಗೆ ವರದನಾವಾಗಿದೆ ಎಂದು ತಿಳಿಸಿದರು.

----

ನೀರು ನಿರ್ವಹಣೆ ವಿಫಲ

ಆಧುನಿಕ ನೀರಾವರಿ ಪದ್ಧತಿಯ ತಂತ್ರಜ್ಞಾನ ಸಾಕಷ್ಟು ಬೆಳೆದಿದ್ದರೂ ಸಮರ್ಪಕ ಬಳಕೆಯಲ್ಲಿ ನಾವು ಸಫಲರಾಗಿಲ್ಲ. ನೀರು ನಿರ್ವಹಣೆ ವಿಷಯದಲ್ಲಿ ಹಿಂದುಳಿದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕಳೆದ ಏಳು ವರ್ಷಗಳಿಂದ ಭೀಕರ ಬರವನ್ನು ಎದುರಿಸುತ್ತಿದ್ದೇವೆ. ಇದಕ್ಕೆಲ್ಲ ಕಾಡು ನಾಶ ಕಾರಣ. ಪರಿಸರ ಸಮತೋಲನ ಕಾಪಾಡಿಕೊಳ್ಳಲು 1/3 ಭಾಗದಷ್ಟು ಕಾಡು ಇರಬೇಕು. ಇದಕ್ಕೆಂದೇ ನೀರಾವರಿ ವಿಷಯದಲ್ಲಿ ನಾವು ಕೆರೆ ತುಂಬುವುದು, ಹನಿ ಮತ್ತು ತುಂತುರು ನೀರಾವರಿ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ನೀರಾವರಿಗೆ ಹೆಚ್ಚು ಒತ್ತು ನೀಡಿದ್ದೇವೆ. ಮಳೆಯಾಶ್ರಿತ ಬೆಳೆ ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿದೆ. ರಾಜಸ್ತಾನ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ 2ನೇ ಸ್ಥಾನದಲ್ಲಿದೆ ಎಂದರು.

---

ಸಮಾವೇಶ ಪ್ರಶಂಶಿಸಿದ ಸಿಎಂ

ವಿಜಯಪುರ ಕೇವಲ ಐತಿಹಾಸಿಕ ನಗರವಲ್ಲ. ಸಾಮಾಜಿಕ ಕ್ರಾಂತಿ ಪುರುಷನ ಈ ನಾಡಿನಲ್ಲಿ ರಾಷ್ಟ್ರಮಟ್ಟದ ಜಲ ಸಮ್ಮೇಳನ ನಡೆದಿರುವುದು ಚರಿತ್ರೆಯ ಪುಟಗಳಲ್ಲಿ ದಾಖಲಾಯಿತು. ದೇಶದ 101 ಜಲಾನಯನ ಪ್ರದೇಶಗಳ ಜನತೆ ಭಾಗವಹಿಸುವ ಮೂಲಕ ಸಮ್ಮೇಳನ ಯಶ ಕಂಡಿದ್ದು ಸಂತಸದ ತಂದಿದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಸಮ್ಮೇಳನದಲ್ಲಿ ಚರ್ಚೆಯಾದ ವಿಷಯಗಳು, ನಿರ್ಣಯಗಳನ್ನು 'ವಿಜಯಪುರ ಘೋಷಣೆ- 2017' ಎಂದೇ ಕರೆಯಬೇಕು. ಈ ಘೋಷಣೆಯಲ್ಲಿ ಅಡಕವಾಗಿರುವ ನಿರ್ಣಯಗಳು ನೀತಿ ಆಯೋಗದಲ್ಲಿ ಚರ್ಚೆಯಾಗಬೇಕು, ಸಂಸತ್‌ ಮತ್ತು ಆಯಾ ರಾಜ್ಯದ ವಿಧಾನಪರಿಷತ್‌ ಹಾಗೂ ವಿಧಾನಸಭೆಗಳಲ್ಲಿ ಚರ್ಚೆಯಾಗಬೇಕು. ತನ್ಮೂಲಕ ನೀತಿ ಆಯೋಗದ ಉದ್ದೇಶ ಈಡೇರಬೇಕೆಂದು ಸಿಎಂ ತಿಳಿಸಿದರು.

---

ಸಾಲಮನ್ನಾ; ಕೇಂದ್ರಕ್ಕೆ ಒತ್ತಾಯ

ಸತತ ಬರದಿಂದಾಗಿ ರಾಜ್ಯದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದನ್ನು ಮನಗಂಡು, 52,000 ಕೋಟಿ ರೂ. ಸಾಲವನ್ನು ಮನ್ನಾ ಮಾಡಿದೆ. ಇದೇ ಮಾದರಿಯಲ್ಲಿ ರಾಷ್ಟ್ರೀಕೃತ ಹಾಗೂ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರ ಸಾಲವನ್ನು ಮನ್ನಾ ಮಾಡಬೇಕೆಂದು ಕೇಂದ್ರ ಸರಕಾರವನ್ನು ಸಿದ್ದರಾಮಯ್ಯ ಒತ್ತಾಯಿಸಿದರು.

---

ಐ ಡೋಂಟ್‌ ಟಾಕ್‌ ಇನ್‌ ಇಂಗ್ಲಿಷ್‌..

'ರಾಷ್ಟ್ರೀಯ ಜಲ ಸಮ್ಮೇಳನಕ್ಕೆ ದೇಶದ ಮೂಲೆ ಮೂಲೆಗಳಿಂದ ಜಲ ತಜ್ಞರು, ಪ್ರತಿನಿಧಿಗಳು ಆಗಮಿಸಿದ್ದಾರೆ. ಹಾಗಾಗಿ ಇಂಗ್ಲಿಷ್‌ನಲ್ಲಿ ಮಾತನಾಡಿ' ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಧ್ವನಿವರ್ಧಕ ಮುಂದೆ ನಿಂತಿದ್ದ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು. ಆಗ, ಸಿಎಂ ವೇದಿಕೆಯಲ್ಲಿದ್ದ ಸಚಿವ ಎಂ.ಬಿ.ಪಾಟೀಲ ಕಡೆಗೆ ಮುಖ ಮಾಡಿ, 'ಇಲ್ಲಪಾ, ನೀನು ವಿಜಯಪುರ ಘೋಷಣೆ-2017ನ್ನು ಇಂಗ್ಲಿಷ್‌ನಲ್ಲಿ ಹೇಳಿದಿಯಲ್ಲ. ನಾನೇಕೆ ಮತ್ತೆ ಇಂಗ್ಲಿಷ್‌ನಲ್ಲಿ ಮಾತನಾಡಲಿ' ಎಂದು ಮರು ಪ್ರಶ್ನಿಸಿದರು. ಅಲ್ಲದೆ, ನಾನು ಕನ್ನಡದಲ್ಲಿಯೇ ಮಾತನಾಡುತ್ತೇನೆ, ಐ ಡೋಂಟ್‌ ಟಾಕ್‌ ಇನ್‌ ಇಂಗ್ಲಿಷ್‌ ಎಂದಾಗ ನೆರೆದ ಜನತೆ ಮುಕ್ತಕಂಠದಿಂದ ಶ್ಲಾಘಿಸಿದರು.

--------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ