Please enable javascript.3.19 ಲಕ್ಷ ಹೆಕ್ಟೇರ್‌ನಲ್ಲಿ ಮುಂಗಾರು ಬಿತ್ತನೆ ತೊಗರಿಗಿದೆ ಅವಕಾಶ : ಮತ್ತೆ ಮಳೆಯಾದರೆ ಬೆಳೆ - 3.19 ಲಕ್ಷ ಹೆಕ್ಟೇರ್ನಲ್ಲಿ ಮುಂಗಾರು ಬಿತ್ತನೆ ತೊಗರಿಗಿದೆ ಅವಕಾಶ: ಮತ್ತೆ ಮಳೆಯಾದರೆ ಬೆಳೆ - Vijay Karnataka

3.19 ಲಕ್ಷ ಹೆಕ್ಟೇರ್‌ನಲ್ಲಿ ಮುಂಗಾರು ಬಿತ್ತನೆ ತೊಗರಿಗಿದೆ ಅವಕಾಶ : ಮತ್ತೆ ಮಳೆಯಾದರೆ ಬೆಳೆ

ವಿಕ ಸುದ್ದಿಲೋಕ 15 Jul 2017, 9:00 am
Subscribe

ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ ವರುಣನ ಮುನಿಸಿನಿಂದ ಮುಂಗಾರು ಬೆಳೆ ಕೈಗೂಡದ ಅನ್ನದಾತರಿಗೆ ಈ ಸಲ ಹದ ಮಳೆಯಾಗಿದ್ದು ಉತ್ತಮ ಮುಂಗಾರು ಆರಂಭದ ಆಶಾಭಾವ ಮೂಡಿಸಿದೆ.

3 19
3.19 ಲಕ್ಷ ಹೆಕ್ಟೇರ್‌ನಲ್ಲಿ ಮುಂಗಾರು ಬಿತ್ತನೆ ತೊಗರಿಗಿದೆ ಅವಕಾಶ : ಮತ್ತೆ ಮಳೆಯಾದರೆ ಬೆಳೆ

ಮಂಜುನಾಥ ಕೊಣಸೂರು ವಿಜಯಪುರ: ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ ವರುಣನ ಮುನಿಸಿನಿಂದ ಮುಂಗಾರು ಬೆಳೆ ಕೈಗೂಡದ ಅನ್ನದಾತರಿಗೆ ಈ ಸಲ ಹದ ಮಳೆಯಾಗಿದ್ದು ಉತ್ತಮ ಮುಂಗಾರು ಆರಂಭದ ಆಶಾಭಾವ ಮೂಡಿಸಿದೆ.

ಇದುವರೆಗೂ 3,19,625 ಹೆಕ್ಟೇರ್‌ ಪ್ರದೇಶದಲ್ಲಿ ನಾನಾ ಬೆಳೆಗಳ ಬಿತ್ತನೆಯಾಗಿದೆ. ಅಂದರೆ ಒಟ್ಟು ಬಿತ್ತನೆ ಗುರಿಯಲ್ಲಿ ಶೇ.74ರಷ್ಟು ಸಾಧನೆಯಾಗಿದೆ. ಕಳೆದ ವಾರ ಮತ್ತೆ ಮಳೆಯಾಗಿದ್ದರಿಂದ ಬಿತ್ತನೆಯಾಗಿದ್ದ ಬೆಳೆಗಳಿಗೆ ಅನುಕೂಲವಾಗಿದ್ದರೆ, ಹಾಗೆ ಉಳಿದ ಪ್ರದೇಶಕ್ಕೆ ಬಿತ್ತನೆಗೆ ಉಪಯುಕ್ತವಾಗಿದೆ.

ಜಿಲ್ಲೆಯಲ್ಲಿ ಜೂನ್‌ನಲ್ಲಿ 161.4 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ 151 ಮಿ.ಮೀ.ಮಳೆಯಾಗಿದ್ದು , 10.4 ಮಿ.ಮೀ. ಕೊರತೆಯಾಗಿತ್ತು. ಜುಲೈನಲ್ಲಿ 86.6 ಮಿ.ಮೀ.ವಾಡಿಕೆ ಮಳೆಯ ಎದುರು ಇದುವರೆಗೂ 13.8 ಮಿ.ಮೀ.ಮಳೆಯಾಗಿದೆ. ಇನ್ನೂ 15 ದಿನಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಜುಲೈ ಮೊದಲ ವಾರದಲ್ಲಿ ಮಳೆಯಾಗದೆ ಗಾಳಿಗೆ ತೇವಾಂಶ ಆರತೊಡಗಿತ್ತು. ಜು.9 ಹಾಗೂ 10ರಂದು ಎಲ್ಲೆಡೆ ಒಳ್ಳೆಯ ಮಳೆಯಾಗಿದ್ದರಿಂದ ಜೂನ್‌ನಲ್ಲಿ ಬಿತ್ತನೆಯಾಗಿ ಬೆಳೆಯುವ ಸ್ಥಿತಿಯಲ್ಲಿದ್ದ ಬೆಳೆಗಳಿಗೆ ತೇವಾಂಶ ಲಭ್ಯವಾಗಿದೆ. ಅದೇ ರೀತಿ ಬಿತ್ತನೆಯಾಗದೆ ಉಳಿದಿದ್ದ ಪ್ರದೇಶದಲ್ಲಿ ಮತ್ತೆ ಬಿತ್ತನೆ ಕಾರ್ಯ ನಡೆದಿದೆ. ಸದ್ಯಕ್ಕೆ ಬೆಳೆಗಳಿಗೆ ಹಾಗೂ ಬಿತ್ತನೆಗೆ ತೇವಾಂಶದ ಕೊರತೆ ಇಲ್ಲದಿದ್ದರೂ ಕೆಲ ದಿನಗಳ ನಂತರ ಮಳೆಯಾದರೆ ಬೆಳೆಗಳಿಗೆ ಅನುಕೂಲವಾಗುತ್ತದೆ ಎಂದು ಕೃಷಿ ಇಲಾಖಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಬಿತ್ತನೆ ಸಾಧನೆ:

ಜಿಲ್ಲೆಯಲ್ಲಿ 4.30ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಬಿತ್ತನೆಯ ಗುರಿಯನ್ನು ಹೊಂದಲಾಗಿದ್ದು, ಇದುವರೆಗೂ 3,19,625 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ.74ರಷ್ಟು ಗುರಿ ಸಾಧನೆಯಾಗಿದೆ. ಕೆಲ ಧಾನ್ಯಗಳ ಬೆಳೆಗಳು 2 ತಿಂಗಳ ಅವಧಿಯವಾಗಿದ್ದು , ಇನ್ನೊಂದು ಬಾರಿಯಾದರೂ ಹದ ಮಳೆಯಾದರೆ ಫಸಲು ಬರುವ ನಿರೀಕ್ಷೆ ಮೂಡಿಸಿದೆ.

ಈ ಬಾರಿಯೂ ತೊಗರಿ ಬೆಳೆ ಹೆಚ್ಚಿನ ಕ್ಷೇತ್ರವನ್ನು ಆವರಿಸಲಿದೆ. ತೊಗರಿ ಬಿತ್ತನೆಗೆ ಜುಲೈ ಅಂತ್ಯದ ತನಕವೂ ಕಾಲಾವಕಾಶ ಇದೆ. ಇದುವರೆಗೂ ಬಿತ್ತನೆಯಾದ ಒಟ್ಟು ಪ್ರದೇಶದಲ್ಲಿ 1,81,838 ಹೆಕ್ಟೇರ್‌ನಲ್ಲಿ ತೊಗರಿ, 34,217 ಹೆಕ್ಟೇರ್‌ ಮುಸುಕಿನ ಜೋಳ, 23,441 ಹೆಕ್ಟೇರ್‌ ತೊಗರಿ, 8131 ಹೆಕ್ಟೇರ್‌ ಹೆಸರು, 18,687 ಹೆಕ್ಟೇರ್‌ ಉದ್ದು , 16,892 ಹೆಕ್ಟೇರ್‌ ಶೇಂಗಾ, 15,131 ಹೆಕ್ಟೇರ್‌ ಸೂರ್ಯಕಾಂತಿ, 3775 ಹೆಕ್ಟೇರ್‌ ಹತ್ತಿ ಬಿತ್ತನೆಯಾಗಿದೆ. 23,673 ಹೆಕ್ಟೇರ್‌ನಲ್ಲಿ ಕಬ್ಬಿನ ಬೆಳೆಯಿದೆ ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್‌ ತಿಳಿಸಿದ್ದಾರೆ.

ತೊಗರಿ 6 ತಿಂಗಳ ಬೆಳೆಯಾಗಿದ್ದು , ಮುಂಗಾರು-ಹಿಂಗಾರು ಅವಧಿಯನ್ನು ತೊಗರಿ ತೆಗೆದುಕೊಳ್ಳುತ್ತದೆ. ಹೀಗಾಗಿ ತೊಗರಿ ಬಿತ್ತನೆಗೆ ಇನ್ನೂ 15 ದಿನಗಳ ಕಾಲಾವಕಾಶ ಇದೆ. ತೊಗರಿ ಕ್ಷೇತ್ರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಶೇ.74ರಷ್ಟು ಮುಂಗಾರು ಬಿತ್ತನೆಯಾಗಿದೆ. ಕಳೆದ ವಾರ 2 ದಿನ ಮಳೆಯಾಗಿದ್ದರಿಂದ ಭೂಮಿಯಲ್ಲಿ ಮತ್ತೆ ತೇವಾಂಶ ಇದೆ. ಬಿತ್ತನೆಯಾಗಿದ್ದ ಬೆಳೆಗಳಿಗೆ ಅನುಕೂಲವಾಗಿದ್ದರೆ, ಉಳಿದ ಕ್ಷೇತ್ರದಲ್ಲಿ ಬಿತ್ತನೆಗೆ ಅವಕಾಶ ಸಿಕ್ಕಿದೆ. ತೊಗರಿ ಬಿತ್ತನೆಗೆ ಇನ್ನೂ 15 ದಿನಗಳ ಅವಕಾಶ ಇದೆ.

-ಎ.ಪಿ.ಬಿರಾದಾರ, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ.

----

ಕಳೆದ ವಾರ 2 ದಿನ ಒಳ್ಳೆಯ ಮಳೆಯಾಗಿದ್ದರಿಂದ ಬೆಳೆಗಳಿಗೆ ಅನುಕೂಲವಾಗಿದೆ. ಇನ್ನೂ 2-3 ಸಲ ಮಳೆಯಾದರೆ ಅಲ್ಪಾವಧಿ ಬೆಳೆಗಳು ಕೈಗೆ ಸಿಗುತ್ತವೆ. ಇನ್ನುಳಿದ ಬೆಳೆಗಳಿಗೂ ಅನುಕೂಲವಾಗುತ್ತದೆ.

-ಸುರೇಶ, ಕೃಷಿಕ, ಖತಿಜಾಪುರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ