ವಿಜಯಪುರ ಜಿಲ್ಲೆಯ ತೊರವಿ ಗ್ರಾಮದಲ್ಲಿ ಕೋವಿಡ್‌ ಮಹಾಮಾರಿಗೆ ಒಂದು ತಿಂಗಳಲ್ಲಿ 70 ಬಲಿ!

ವಿಜಯಪುರ: ಹಳ್ಳಿ ಹಳ್ಳಿಯಲ್ಲೂ ಆರ್ಭಟಿಸುತ್ತಿರುವ ಕೊರೊನಾ ಸೋಂಕು ಹಲವರ ಜೀವ ಪಡೆಯುತ್ತಿದೆ. ಇನ್ನು ಮೊದಲನೇ ಅಲೆಗಿಂತ ಎರಡನೇ ಅಲೆ ಸೃಷ್ಟಿಸಿರುವ ಭಯಾನಕತೆ ಅಷ್ಟಿಷ್ಟಲ್ಲ. ಕಳೆದ ಒಂದು ತಿಂಗಳಲ್ಲಿ‌ ಒಂದೇ ಗ್ರಾಮದಲ್ಲಿ ಬರೋಬ್ಬರಿ ಎಪ್ಪತ್ತು ಮಂದಿ ಮೃತಪಟ್ಟಿದ್ದಾರೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ಗ್ರಾಮ ಒಂದರಲ್ಲಿ ಕಳೆದೊಂದು ತಿಂಗಳಲ್ಲಿ 70ಕ್ಕೂ ಹೆಚ್ಚು ಜನ ಅಸುನೀಗಿದ್ದಾರೆ. ಈ ಪೈಕಿ ಸುಮಾರು 40 ಜನರದ್ದು ಪಾಸಿಟಿವ್ ಪತ್ತೆಯಾಗಿದ್ದರೆ, ಇನ್ನುಳಿದವರು ಆಸ್ಪತ್ರೆಯತ್ತ‌ವೇ ಮುಖ ಮಾಡದೇ ಮನೆಯಲ್ಲಿಯೇ ಚಿಕಿತ್ಸೆ ಪಡೆದು ಸಾವನಪ್ಪಿದ್ದಾರೆ. ತೋರವಿ ಗ್ರಾಮ‌ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು 20 ಸಾವಿರ ಜನಸಂಖ್ಯೆ ಇದ್ದು, ಇದರಲ್ಲಿ ತೊರವಿ ಗ್ರಾಮದಲ್ಲೇ 15 ಸಾವಿರ ಜನಸಂಖ್ಯೆ ಇದೆ. ತಿಕೋಟಾ ತಾಲೂಕಿನ‌ ವ್ಯಾಪ್ತಿಗೆ ತೊರವಿ ಗ್ರಾಮ ಬಂದರೂ ಸಹಿತ ಇದು ವಿಜಯಪುರ ನಗರದಿಂದ ಕೇವಲ ಐದು ಕಿಲೋ ಮಿಟರ್ ದೂರದಲ್ಲಿದೆ. ಇನ್ನೂ ತೊರವಿ ಗ್ರಾಮದ ಬಹುತೇಕ ಜನ ಪ್ರತಿಯೊಂದು ವಸ್ತುಗಳ ಖರೀದಿಗೆ ವಿಜಯಪುರ ನಗರವನ್ನೇ ಅವಲಂಬಿಸಿದ್ದು ಹೆಚ್ಚಾಗಿ ನಗರಕ್ಕೆ ಹೋಗಿ ಬಂದವರಿಂದ ಪಾಸಿಟಿವ್ ಬಂದಿದೆ ಎಂಬ ಮಾತು ಕೇಳಿ ಬರುತ್ತಿದೆ.

ಇನ್ನೂ ಗ್ರಾಮದಲ್ಲಿ ಬಹುತೇಕ ಜನರಿಗೆ ಪಾಸಿಟಿವ್ ಇದ್ದರೂ ಸಹಿತ ಅವರು ಸರಿಯಾದ ಚಿಕಿತ್ಸೆ ಪಡೆಯದೇ ಮನೆಯಲ್ಲಿದ್ದು ಸ್ಥಳಿಯ ಮಟ್ಟದ ವೈದ್ಯರು ಕೊಡುವ ಔಷಧಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಕೊರೊನಾ ಕಡಿಮೆಯಾಗುತ್ತಿಲ್ಲ. ಅಷ್ಟೇ ಅಲ್ಲದೇ ಈಗ ಗ್ರಾಮೀಣ ಭಾಗದಲ್ಲೂ ಸಹಿತ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಈಗಾಗಲೇ 100 ಕ್ಕೂ ಅಧಿಕ ಜನ ಹೋಮ್ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅಂತಾರೆ ಮಾಜಿ ಸಚಿವ ಎಂ. ಬಿ. ಪಾಟೀಲ್.

ತೊರವಿ ಗ್ರಾಮದಲ್ಲಿ ಸಾವಿನ‌ಸಂಖ್ಯೆ ಹೆಚ್ಚಾಗುತ್ತಲೇ ಎಚ್ಚೆತ್ತುಕೊಂಡ ಗ್ರಾಮ‌ ಪಂಚಾಯತಿ ಸಿಬ್ಬಂದಿ ಇಡೀ ಗ್ರಾಮಕ್ಕೆ ಸ್ಯಾನಿಟೈಸ್ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಇಡೀ ಗ್ರಾಮದಲ್ಲಿ ಸ್ಮಶಾನ‌ ಮೌನ ಆವರಿಸಿದೆ. ಅನಾರೋಗ್ಯಕ್ಕೆ ತುತ್ತಾದವರು ಯಾರು ಮುಂದೆ ಬಂದು ಹೇಳುತ್ತಿಲ್ಲ, ಅದುವೇ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ. ಮನೆ ಮನೆಗೆ ಆಶಾ ಕಾರ್ಯಕರ್ತೆಯರನ್ನು ಕಳುಹಿಸಿ ಸರ್ವೆ ಮಾಡುವ ಕಾರ್ಯಕ್ಕೆ ಕೂಡಾ ಪಂಚಾಯತಿ ಸಿಬ್ಬಂದಿ ಮುಂದಾಗಿದ್ದಾರೆ. ಗ್ರಾಮದಲ್ಲಿ ಒಂದೇ ಮನೆಯಲ್ಲಿ ಬಹಳಷ್ಟು ಜನ‌ ವಾಸಿಸುವ ಕಾರಣ ಕೊರೊನಾ ಹೆಚ್ಚಾಗಲು ಪ್ರಮುಖ ಕಾರಣ. ಪ್ರತ್ಯೇಕವಾದ ಕೋವಿಡ್ ಕೇರ್ ಸೆಂಟರ್ ಒಂದನ್ನು ಗ್ರಾಮದಲ್ಲಿ ಪ್ರಾರಂಭಿಸಬೇಕು‌ ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.

Vijaya Karnataka Web 18 May 2021, 11:31 am
Loading ...