Please enable javascript.ಒಂದೇ ಮನೆಯಲ್ಲಿ 12ಕ್ಕೂ ಅಧಿಕ ಸರ್ಕಾರಿ ನೌಕರರು,ಅಬ್ಬಬ್ಬ.. ಒಂದೇ ಮನೆಯಲ್ಲಿ 12ಕ್ಕೂ ಹೆಚ್ಚು ಸರ್ಕಾರಿ ನೌಕರರು! ಇದು ಹೂವಿನಹಿಪ್ಪರಗಿಯ ಕಾಶಿಪತಿ ಪತ್ತಾರ ಕುಟುಂಬದ ಯಶೋಗಾಥೆ! - dozen plus government employees in one family in huvin hipparagi vijayapura district - Vijay Karnataka

ಅಬ್ಬಬ್ಬ.. ಒಂದೇ ಮನೆಯಲ್ಲಿ 12ಕ್ಕೂ ಹೆಚ್ಚು ಸರ್ಕಾರಿ ನೌಕರರು! ಇದು ಹೂವಿನಹಿಪ್ಪರಗಿಯ ಕಾಶಿಪತಿ ಪತ್ತಾರ ಕುಟುಂಬದ ಯಶೋಗಾಥೆ!

Edited byಅವಿನಾಶ ವಗರನಾಳ | Vijaya Karnataka Web 16 May 2024, 10:00 am
Subscribe

Dozen Government Employees In One Family : ಬಡತನದ ನಡುವೆಯೂ ವಿಜಯಪುರದ ಹೂವಿನಹಿಪ್ಪರಗಿಯ ಈ ಕುಟುಂಬ ವಿಭಿನ್ನವಾಗಿ ನಿಲ್ಲುತ್ತಿದೆ. ಕಾಶಿಪತಿ ಪತ್ತಾರ ದಂಪತಿಯ ಯಶೋಗಾಥೆಯೇ ಅಂತದ್ದು, ಇವರ ಕುಟುಂಬದಲ್ಲಿ ಬರೋಬ್ಬರಿ ಡಜನ್‌ ಮಂದಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದಾರೆ. ಇದೊಂಥರ ಸರಕಾರಿ ಎಂಪ್ಲಾಯಿಗಳ ಜೇನುಗೂಡು. ಬಡತನದ ನಡುವೆಯೂ ಶಿಕ್ಷಣ ಕೊಡಿಸಿದ ಕಾರಣಕ್ಕೆ ಪತ್ತಾರ ಕುಟುಂಬ ಪ್ರತಿಭಾವಂತರ ನಂದನವನ ಆಗಿದೆ. ಬರೀ ಮಕ್ಕಳಷ್ಟೇ ಅಲ್ಲದೇ ಸೊಸೆಯಂದಿರು ಕೂಡ ಸರ್ಕಾರಿ ಉದ್ಯೋಗದಲ್ಲಿರುವವರೇ ಆಗಿದ್ದಾರೆ.

ಹೈಲೈಟ್ಸ್‌:

  • ಹೂವಿನಹಿಪ್ಪರಗಿಯ ಮನೆಯೊಂದರಲ್ಲಿ ಡಜನ್‌ ಪ್ಲಸ್‌ ಸರ್ಕಾರಿ ನೌಕರರು
  • ಇದು ವಿಜಯಪುರ ಜಿಲ್ಲೆಯ ಕಾಶಿಪತಿ ಪತ್ತಾರ ದಂಪತಿಯ ಯಶೋಗಾಥೆ
  • ಈ ಮನೆ ಸರಕಾರಿ ಎಂಪ್ಲಾಯಿಗಳ ಜೇನುಗೂಡು, ಪ್ರತಿಭಾವಂತರ ನಂದನವನ
Pattar family government employees
* ಸಂಗಮೇಶ ಟಿ ಚೂರಿ, ವಿಜಯಪುರ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಡಜನ್‌ಕ್ಕೂ ಹೆಚ್ಚು ಸರಕಾರಿ ನೌಕರಿ ಅರಸಿ ಬಂದಿದ್ದನ್ನು ಕೇಳಿದ್ದೇವೆ. ಆದರೆ, ಇಲ್ಲೊಂದು ಬಡ ಕುಟುಂಬದ ದಂಪತಿಯ ಡಜನ್‌ ಮಕ್ಕಳು ಸರಕಾರಿ ಸೇವೆಯಲ್ಲಿದ್ದಾರೆ. ಹೀಗಾಗಿ ಈ ಮನೆ ಪ್ರತಿಭಾವಂತರ ಜೇನುಗೂಡು ಎಂದೇ ಹೆಸರಾಗಿದೆ.
ಮೂಲತಃ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರದ ಕಾಶಿಪತಿ ಪತ್ತಾರ ಹಾಗೂ ಭುವನೇಶ್ವರಿ/ಶಾರದಾ ದಂಪತಿ ಹೊಟ್ಟೆ ಪಾಡಿಗೆ ಹಲವು ವರ್ಷಗಳ ಹಿಂದೆ ಹೂವಿನಹಿಪ್ಪರಗಿಗೆ ವಲಸೆ ಬಂದು ನೆಲೆಸಿದ್ದರು. ಪತ್ತಾರಿಕೆ ಮಾಡುತ್ತ ಜೀವನ ನಡೆಸುತ್ತಿದ್ದ ಈ ದಂಪತಿಗೆ ಬರೋಬ್ಬರಿ 12 (ಡಜನ್‌) ಮಕ್ಕಳು. ಈ ಪೈಕಿ 9 ಜನ ಪುರುಷರು ಹಾಗೂ ಮೂವರು ಮಹಿಳೆಯರು.

ಮೊದಲೇ ಕಿತ್ತು ತಿನ್ನುವ ಬಡತನ. ಹೊಟ್ಟೆ ತುಂಬಿಸಿಕೊಳ್ಳುವುದೇ ದುಸ್ತರ. ಅಂಥದ್ದರಲ್ಲಿ ಡಜನ್‌ ಮಕ್ಕಳಿಗೆ ಸಾಲ-ಸೋಲ ಮಾಡಿ, ಶಾಲಾ-ಕಾಲೇಜ್‌ ಶುಲ್ಕ ಕಟ್ಟಿ, ಮಕ್ಕಳನ್ನು ಪ್ರತಿಭಾವಂತರನ್ನಾಗಿಸಿದ ಪರಿಗೆ ಈ ದಂಪತಿಗೆ ಬೇರೆ ಯಾರೂ ಸಾಟಿಯಾಗಲ್ಲ.

ನೌಕರರ ವಿವರ!

ಈ ದಂಪತಿಯ ಚೊಚ್ಚಲು ಪುತ್ರ ಬಾಬುರಾವ್‌ ಹಾಗೂ 4ನೇ ಪುತ್ರ ಆನಂದ ಹೊರತುಪಡಿಸಿದರೆ ಇತರೆ 7 ಜನ ಪುತ್ರರು ಹಾಗೂ ಸೊಸೆಯಂದಿರೆಲ್ಲ ಸರಕಾರಿ ನೌಕರರು. 2ನೇ ಪುತ್ರ ಗೋಪಾಲಕೃಷ್ಣ ಬೊಮ್ಮನಳ್ಳಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕ. ಅವರನ್ನು ಕೈ ಹಿಡಿದ ಪತ್ನಿ ಜಾನಕಿ ತುಂಬಗಿಯಲ್ಲಿ ಸರಕಾರಿ ಶಾಲಾ ಶಿಕ್ಷಕಿ. ತೃತೀಯ ಪುತ್ರ ಅರವಿಂದ ಐನಾಪುರ ಸರಕಾರಿ ಶಾಲಾ ಶಿಕ್ಷಕ. ಅವರ ಪತ್ನಿ ವಿಜಯಲಕ್ಷ್ಮೀ ಕೆಎಸ್‌ಆರ್‌ಟಿಸಿಯಲ್ಲಿ ಸಹಾಯಕ ಸಂಚಾರಿ ಅಧೀಕ್ಷಕಿ. 4ನೇ ಪುತ್ರ ಆನಂದ ಮತ್ತು ಅವರ ಪತ್ನಿ ಸರಕಾರಿ ನೌಕರಲ್ಲದಿದ್ದರೂ, ಖಾಸಗಿ ಸಂಸ್ಥೆ ಉದ್ಯೋಗಿಗಳು.
SSLC Result 2024 - ಹಾಸನ ಜಿಲ್ಲೆಯಲ್ಲಿ ಅಮ್ಮ, ಮಗ ಇಬ್ಬರೂ ಒಟ್ಟಿಗೇ ಉತ್ತೀರ್ಣ!
5ನೇ ಪುತ್ರ ಸುನೀಲ ನಗರದ ಜಿಲ್ಲಾಸ್ಪತ್ರೆಯ ಪ್ರಯೋಗಾಲಯದಲ್ಲಿ ಹಿರಿಯ ತಂತ್ರಜ್ಞ. ಅವರ ಪತ್ನಿ ಬಿಎಸ್‌ಎನ್‌ಎಲ್‌ ಕಚೇರಿಯಲ್ಲಿ ಜೆಟಿಒ. 6ನೇ ಪುತ್ರ ಪ್ರವೀಣ ನಿಡೋಣಿ ಸರಕಾರಿ ಶಾಲೆ ಶಿಕ್ಷಕ. ಅವರ ಪತ್ನಿ ಗಾಯತ್ರಿಯೂ ಶಾಲಾ ಶಿಕ್ಷಕಿ. 7ನೇ ಪುತ್ರ ರಾಜಕುಮಾರ ಧಾರವಾಡದಲ್ಲಿ ಸಿಪಿಐ. ಅವರ ಪತ್ನಿ ಪ್ರತಿಭಾ ಅದೇ ಊರಲ್ಲಿ ಎಕ್ಸಿಕ್ಯೂಟಿವ್‌ ಎಂಜಿನಿಯರ್‌. 8ನೇ ಪುತ್ರ ವಿನಾಯಕ ಬೆಂಗಳೂರಿನ ಜೆಎನ್‌ಸಿಎಸ್ಸಾರ್‌ ವಿಜ್ಞಾನಿ. ಅವರ ಪತ್ನಿ ವೀಣಾ ಬಿಜಿನೆಸ್‌ ವಿಶ್ಲೇಷಕಿ. 9ನೇ ಪುತ್ರ ಪ್ರದೀಪ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಫ್ಲೋರೊಸಿಸ್ಟ್‌. ಅವರ ಪತ್ನಿ ಲಕ್ಷ್ಮೀ ಮೊರಾರ್ಜಿ ವಸತಿ ಶಾಲೆ ಶಿಕ್ಷಕಿ.

ಹೆಣ್ಮಕ್ಕಳು ಸರಕಾರಿ ಸೇವೆ!

ಪತ್ತಾರ ದಂಪತಿಗೆ ಜನಿಸಿದ ಮೂವರು ಪುತ್ರಿಯರೂ ಸರಕಾರಿ ನೌಕರರು. ಹಿರಿಯ ಪುತ್ರಿ ಮೀನಾಕ್ಷಿ ವಿಜಯಪುರ ನಗರದ ಸರಕಾರಿ ಶಾಲೆ ಶಿಕ್ಷಕಿ. ದ್ವಿತೀಯ ಪುತ್ರಿ ಮಹೇಶ್ವರಿ ನಾರಾಯಣಪುರದ ಕೆಬಿಜೆನ್ನೆಲ್‌ ಕಚೇರಿಯಲ್ಲಿ ಸ್ಟೆನೋಗ್ರಾಫರ್‌. ಕೊನೆಯ ಪುತ್ರಿ ರಾಜೇಶ್ವರಿ ಧಾರವಾಡ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿ.

ಸರಕಾರಿ ಶಾಲೆ ಪ್ರತಿಭೆಗಳು!

ಇಷ್ಟೆಲ್ಲ ಸಾಧನೆಗೈದ 12 ಜನರೂ ಓದಿದ್ದು ಸರಕಾರಿ ಶಾಲೆಗಳಲ್ಲಿ ಎಂಬುದು ವಿಶೇಷ. ಆ ಮೂಲಕ ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವವರಿಗೆ ಇವರು ಮೇಲ್ಪಂಕ್ತಿಯಾಗಿದ್ದಾರೆ. ಅದಲ್ಲದೇ ಕಾಶಿಪತಿ ಪತ್ತಾರ ದಂಪತಿ ಮಕ್ಕಳು ನೌಕರಿಗೆಂದು ಓದಿದವರಲ್ಲ. ಜ್ಞಾನ ಸಂಗ್ರಹಿಸುವುದಕ್ಕೋಸ್ಕರ ಓದಿದವರು. ಹೀಗಾಗಿ 12 ಮಕ್ಕಳು ಸ್ನಾತಕೋತ್ತರ ಪದವಿ ಓದಿದ ಪ್ರತಿಭಾವಂತರಾಗಿರುವುದು ವಿಶೇಷ. ಸರಕಾರಿ ಸೇವೆಗಾಗಿ ಬೇರೆ ಬೇರೆ ಊರುಗಳಲ್ಲಿದ್ದರೂ, ಇವರೆಲ್ಲರದ್ದೂ ಕೂಡು ಕುಟುಂಬ. ಹಬ್ಬ ಹರಿದಿನಗಳ ನೆಪದಲ್ಲಿ ಎಲ್ಲರೂ ಒಂದೆಡೆ ಬೆರೆಯುವುದು ವಿಶೇಷ.

ನಮ್ಮನ್ನೆಲ್ಲ ಓದಿಸಲು ನಮ್ಮ ತಂದೆ ಕೇವಲ ಪತ್ತಾರಿಕೆ ಮಾಡಲಿಲ್ಲ. ಗ್ಯಾಸ್‌, ಸ್ಟೌವ್‌ ರಿಪೇರಿಯಂಥ ನಾನಾ ಉದ್ಯೋಗ ಮಾಡುತ್ತಿದ್ದರು. ನಮ್ಮೆಲ್ಲರ ಶಾಲಾ-ಕಾಲೇಜ್‌ ಶುಲ್ಕ ಕಟ್ಟಲು, ಅಂಗಡಿಗಳಲ್ಲಿ ಸಾಲ ಮಾಡಿ, ಬಳಿಕ ದುಡಿದು ತೀರಿಸುತ್ತಿದ್ದರು. ನಮ್ಮನ್ನೆಲ್ಲ ತಂದೆ-ತಾಯಿ ಚೆನ್ನಾಗಿ ಓದಿಸಿದ್ದಕ್ಕೆ ನಾವೆಲ್ಲರೂ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎನ್ನುತ್ತಾರೆ ಶಿಕ್ಷಕ ಪ್ರವೀಣ್‌ ಪತ್ತಾರ.
ಅವಿನಾಶ ವಗರನಾಳ
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ