ಆ್ಯಪ್ನಗರ

2ನೇ ಲೋಕಸಭೆ ಚುನಾವಣೆಯ ಇತಿಹಾಸ: 1957ರಲ್ಲೂ ತಾಪಮಾನ, 68 ಹಂತದಲ್ಲಿ ಮತದಾನ !

History of Lok Sabha Elections in 1957: ಲೋಕಸಭೆ ಚುನಾವಣೆಗೆ ಬಿಸಿಲ ಝಳ ಕಾಟ ಕೊಡುತ್ತಿದೆ. ಈ ತಾಪಮಾನದ ವಾತಾವರಣದ ನಡುವೆ 7 ಹಂತಗಳಲ್ಲಿ ಎರಡು ತಿಂಗಳು ಚುನಾವಣೆಗಳು ನಡೆಯಲಿವೆ. 1957ರಲ್ಲಿ ನಡೆದ ದೇಶದ ಎರಡನೇ ಸಾರ್ವತ್ರಿಕ ಚುನಾವಣೆ ವೇಳೆ ಕೂಡ ಬಿಸಿಲಿನ ಅಬ್ಬರ ತೀವ್ರವಾಗಿತ್ತು. ಆಗ 68 ಹಂತಗಳಲ್ಲಿ ಚುನಾವಣೆ ನಡೆದಿತ್ತು.

Edited byಅಮಿತ್ ಎಂ.ಎಸ್ | Vijaya Karnataka 1 Apr 2024, 12:20 pm

ಹೈಲೈಟ್ಸ್‌:

  • ಮಾಜಿ ಪ್ರಧಾನಿ ವಾಜಪೇಯಿ ಮೊದಲ ಬಾರಿಗೆ ಸಂಸತ್‌ ಪ್ರವೇಶ ಮಾಡಿದ ಚುನಾವಣೆ
  • ಪ್ರಧಾನಿ ಜವಾಹರಲಾಲ್ ನೆಹರು ನಾಯಕತ್ವದಲ್ಲಿ ಕಾಂಗ್ರೆಸ್‌ ಭರ್ಜರಿ ಜಯಭೇರಿ
  • 1957ರಲ್ಲೂ ಇತ್ತು ವಿಪರೀತ ತಾಪಮಾನ, 68 ಹಂತದಲ್ಲಿ ಮತದಾನ !
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web 1957 Elections
ಎಐ ಚಿತ್ರ
-ಬಿ. ಎಲ್‌. ಗೌಡ

ದೇಶದ ಎರಡನೇ ಸಾರ್ವತ್ರಿಕ ಚುನಾವಣೆ 1957ರ ಫೆಬ್ರವರಿ-ಜೂನ್‌ ತಿಂಗಳ ಮಧ್ಯೆ ನಡೆಯಿತು. ಅತ್ಯುತ್ತಮ ಆಡಳಿತ, ಸ್ಥಿರ ಸರಕಾರ, ದೂರದೃಷ್ಟಿ ಯೋಜನೆಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಿತವಾದ ಉತ್ತಮ ಬಾಂಧವ್ಯಗಳು, ಪ್ರಧಾನಿ ಜವಾಹರ್‌ಲಾಲ್‌ ನೆಹರು ಅವರ ನಾಯಕತ್ವ ಸೇರಿದಂತೆ ಅನೇಕ ಸಂಗತಿಗಳು ಕಾಂಗ್ರೆಸ್‌ಗೆ ಎರಡನೇ ಬಾರಿ ದೊಡ್ಡ ಗೆಲುವು ತಂದುಕೊಟ್ಟವು.
1951ರ ಮೊದಲ ಚುನಾವಣೆಯಂತೆ 1957ರಲ್ಲೂ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡುವಲ್ಲಿ ಪ್ರತಿಪಕ್ಷಗಳು ವಿಫಲವಾದವು ಅಥವಾ ಜನರ ಕಣ್ಣಲ್ಲಿ ವಿಶ್ವಾಸಾರ್ಹ ಹಾಗೂ ಯೋಗ್ಯ ಎನಿಸುವ ನಾಯಕತ್ವ ಎದುರಾಳಿ ಕೂಟದಲ್ಲಿ ಕಾಣದೇ ಹೋಯಿತು. ಇದು ಕಾಂಗ್ರೆಸ್‌ಗೆ
ಮತ್ತಷ್ಟು ಶಕ್ತಿ ತಂದುಕೊಟ್ಟಿತು. ಪರಿಣಾಮ 1957ರ ಮೊದಲ ಚುನಾವಣೆಯಲ್ಲಿ ಗೆದ್ದಿದ್ದಕ್ಕಿಂತ 10 ಹೆಚ್ಚು ಸ್ಥಾನಗಳನ್ನೇ ಕಾಂಗ್ರೆಸ್‌ ಪಡೆಯಿತು.
Lok Sabha Election 2024 : ಮತ್ತಷ್ಟು ಬೆಳೆದ ನಿಂತ ಕರ್ನಾಟಕ ಕುಟುಂಬ ರಾಜಕಾರಣದ ’ವಂಶವೃಕ್ಷ’

ಚುನಾವಣೆ ನಡೆದ ಸಮಯ

1951ರಂತೆ 1957ರಲ್ಲೂ ಸುದೀರ್ಘ ಚುನಾವಣೆ ನಡೆಯಿತು. ಫೆ 24 ರಿಂದ ಜೂನ್‌ 9 ರವರೆಗೂ ನಡೆಯಿತು. ಸತತ ಎರಡನೇ ಬಾರಿಗೂ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಏಕಕಾಲದಲ್ಲೇ ಚುನಾವಣೆ ನಡೆಸಲಾಯಿತು. ಸುಮಾರು 105 ದಿನಗಳ ಕಾಲ ಚುನಾವಣೆ ಪ್ರಕ್ರಿಯೆ ನಡೆಯಿತು. ಆಗಲೂ ಬಿರು ಬಿಸಿಲು. ಉಗ್ರ ತಾಪಮಾನ.

ಕಾಂಗ್ರೆಸ್‌ ಗೆಲುವಿನ ನಾಲ್ಕು ಕಾರಣ

  1. 1954 : ಭಾರತ-ಚೀನಾ ನಡುವಿನ ಪಂಚಶೀಲತತ್ತ್ವ ಒಪ್ಪಂದ
  2. 1954 : ಪರಮಾಣು ಶಕ್ತಿ ಕಾರ್ಯಕ್ರಮದಿಂದ ಆತ್ಮಾಭಿಮಾನ ವೃದ್ಧಿ
  3. 1956 : ಭಾಷಾವಾರು ಆಧಾರದ ಮೇಲೆ ರಾಜ್ಯಗಳ ಪುನರ್‌ವಿಂಗಡಣೆ
  4. 1956 : ದೇಶದ ಅಭಿವೃದ್ಧಿಗೆ ವೇಗ ನೀಡಲು ಪಂಚವಾರ್ಷಿಕ ಯೋಜನೆ ಜಾರಿ

ತಟಸ್ಥ ಭಾರತ

ಎರಡನೇ ಮಹಾಯುದ್ಧದ ಬಳಿಕ ಅಮೆರಿಕ ಹಾಗೂ ರಷ್ಯಾ ನೇತೃತ್ವದಲ್ಲಿ ಜಗತ್ತು ಇಬ್ಬಾಗವಾಗಿತ್ತು. ಯಾವುದೇ ಬಣಕ್ಕೆ ಸೇರದೆ ತಟಸ್ಥವಾಗಿ ಉಳಿದ ಭಾರತದ ವಿದೇಶಾಂಗ ನೀತಿ, ದೇಶದ ಅಭಿವೃದ್ಧಿಗೆ ಅಡಿಪಾಯವಾಯಿತು.

ಅಮೆರಿಕ ಹಾಗೂ ರಷ್ಯಾ ಜತೆ ಸಮಾನ ಬಾಂಧವ್ಯ ರೂಪಿಸಿಕೊಂಡ ನೆಹರು ಅವರ ದೂರದೃಷ್ಟಿ ನಾಯಕತ್ವ, ಸ್ವಾತಂತ್ರ್ಯಗೊಂಡು ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದ ಭಾರತ ಉಭಯ ದೇಶಗಳಿಂದಲೂ ನೆರವು ಪಡೆದುಕೊಂಡಿತು. ಅಲಿಪ್ತ ನೀತಿಯಡಿ ದೇಶ ಮುಂದುವರಿಯಿತು.
ರಾಜ್ಯದ ದೊಡ್ಡ ಕ್ಷೇತ್ರವಾಗಿದ್ದ ಕನಕಪುರ ಲೋಕಸಭೆಯ ರೋಚಕ ಇತಿಹಾಸ

ಚುನಾವಣೆ ವಿಶೇಷಗಳು

  • 1951ರಂತೆ 1957ರಲ್ಲೂ 403 ಏಕಸದಸ್ಯ, 93 ದ್ವಿಸದಸ್ಯ ಕ್ಷೇತ್ರಗಳಿಗೆ ಚುನಾವಣೆ
  • ತೀವ್ರ ತಾಪಮಾನ, ಸಾರಿಗೆ ಸೌಲಭ್ಯದ ಅಲಭ್ಯತೆಯಿಂದ 68 ಹಂತದಲ್ಲಿ ಮತದಾನ
  • 36.10 ಕೋಟಿ ಜನಸಂಖ್ಯೆಯಲ್ಲಿ 17.32 ಕೋಟಿ ಮತದಾರರಿಗೆ ಹಕ್ಕು
  • ಎರಡನೇ ಸಾರ್ವತ್ರಿಕ ಚುನಾವಣೆಯಲ್ಲಿ12 ಕೋಟಿ ಜನರಿಂದ ಮತದಾನ
  • 1951ರಲ್ಲಿ ಶೇ 45.44ರಷ್ಟು ಮತದಾನವಾಗಿದ್ದರೆ, 1957ರಲ್ಲಿ ಶೇ 44.87ರಷ್ಟು ಮತ ಚಲಾವಣೆ.
  • ಶೇ 19ರಷ್ಟು ಮತ ಪಡೆದುಕೊಂಡ ಪಕ್ಷೇತರ ಅಭ್ಯರ್ಥಿಗಳು
  • ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ 1957ರಲ್ಲಿ ಗೆಲುವು ಕಂಡರು
  • ಮೊದಲ ಆಯ್ಕೆಯಲ್ಲಿ ನೆಹರು ಅವರ ಹೊಗಳಿಕೆ ಪಡೆದ ವಾಜಪೇಯಿ
  • ಕಾಂಗ್ರೆಸ್‌ನಿಂದ ಜಯಗಳಿಸಿದ ವಿ.ಕೆ.ಕೃಷ್ಣ ಮೆನನ್‌ ರಕ್ಷಣಾ ಸಚಿವರಾದರು.
  • ಎಂ. ಅನಂತ ನಾರಾಯಣಂ ಐಯ್ಯಂಗಾರ್‌ 2ನೇ ಲೋಕಸಭೆಯ ಸ್ಪೀಕರ್‌
  • ನೆಹರು ಅಳಿಯ ಫಿರೋಜ್‌ ಗಾಂಧಿ (ಇಂದಿರಾ ಪತಿ) ರಾಯ್‌ಬರೇಲಿ ಕ್ಷೇತ್ರದಿಂದ ಆಯ್ಕೆ

ರಾಜಕೀಯ ಪಕ್ಷಗಳುಪಡೆದ ಮತ ಗೆದ್ದ ಸ್ಥಾನ (1952ಕ್ಕೆ ಹೋಲಿಸಿದರೆ)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌47.78%371 (+10)
ಪ್ರಜಾ ಸೋಶಿಯಲಿಸ್ಟ್‌ ಪಕ್ಷ10.41%019 (-02)
ಕಮ್ಯುನಿಸ್ಟ್‌ ಪಾರ್ಟಿ 8.92%027 (+11)
ಭಾರತೀಯ ಜನಸಂಘ 5.97%004 (+01)
ಪರಿಶಿಷ್ಟ ಜಾತಿಗಳ ಒಕ್ಕೂಟ1.69%006 (+04)
ಗಣತಂತ್ರ ಪರಿಷತ್‌1.07%007 (+01)
ಪಕ್ಷೇತರ19.32%042 (+05)

371 ಸ್ಥಾನ ಬಾಚಿಕೊಂಡ ಕಾಂಗ್ರೆಸ್‌

ನೆಹರು ಅವರ ಆಡಳಿತಕ್ಕೆ ಎರಡನೇ ಚುನಾವಣೆಯಲ್ಲಿ ಭರಪೂರ ಫಸಲು ಲಭಿಸಿತು. 371 ಸ್ಥಾನ ಗೆದ್ದ ಕಾಂಗ್ರೆಸ್‌ ಅಧಿಕಾರ ಉಳಿಸಿಕೊಂಡಿತು. ನೆಹರು ಪ್ರಧಾನಿಯಾಗಿ ಮುಂದುವರಿದರು. 1951ರಲ್ಲಿ ಶೇ 45ರಷ್ಟು ಮತ ಪಡೆದಿದ್ದ ಕಾಂಗ್ರೆಸ್‌ 1957ರಲ್ಲಿ ಶೇ 47ರಷ್ಟು ಮತ ಗಳಿಸಿಕೊಂಡಿತು.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ