Please enable javascript.ಹದಿನಾರು ವಯಸ್ಸಿಗೆ ತಾಯ್ತನದ ಭಾಗ್ಯ ! - young mother - Vijay Karnataka

ಹದಿನಾರು ವಯಸ್ಸಿಗೆ ತಾಯ್ತನದ ಭಾಗ್ಯ !

ವಿಕ ಸುದ್ದಿಲೋಕ 23 Mar 2017, 11:53 am
Subscribe

16 ವರ್ಷದಲ್ಲಿಯೇ ತಾಯ್ತತನ ಭಾಗ್ಯ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ

young mother
ಹದಿನಾರು ವಯಸ್ಸಿಗೆ ತಾಯ್ತನದ ಭಾಗ್ಯ !

ಕಲಬುರಗಿ: ಹೆಣ್ಣು ಮಕ್ಕಳಿಗೆ ಅಪ್ರಾಪ್ತ ವಯಸ್ಸಿನಲ್ಲಿಯೇ ಬಾಲಕಿಯರು ದಾಂಪತ್ಯಕ್ಕೆ ಕಾಲಿಡುತ್ತಿರುವುದರಿಂದ ಜಿಲ್ಲೆಯಲ್ಲಿ 16 ವರ್ಷದಲ್ಲಿಯೇ ತಾಯ್ತತನ ಭಾಗ್ಯ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಅಲ್ಲದೆ ಬಾಲ್ಯ ವಿವಾಹ ತಡೆದಿದ್ದೇವೆ ಎಂದು ಹೇಳಿಕೊಳ್ಳುವ ಅಧಿಕಾರಿಗಳಿಗೂ ಸವಾಲಾಗಿದೆ.

ಜಿಲ್ಲೆಯಲ್ಲಿ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ನಿಗದಿತ ವಯಸ್ಸಿಗೂ ಮುನ್ನವೇ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿರುವ ಪರಿಣಾಮ ಹದಿನಾರು ವಯಸ್ಸಿಗೆ ತಾಯಿ ಆಗುತ್ತಿದ್ದಾರೆ. 15 ವರ್ಷದೊಳಗೆ ಮದುವೆಯಾಗಿ 16 ನೇ ವರ್ಷಕ್ಕೆ ತಾಯಿ ಆಗುತ್ತಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆಯ ಅಂಕಿ-ಸಂಖ್ಯೆಗಳು ವಾಸ್ತಕ್ಕೆ ಹಿಡಿದ ಕನ್ನಡಿಯಾಗಿವೆ. ಸುರಪುರ ತಾಲೂಕಿನಲ್ಲಿ ಪ್ರಮಾಣ ಹೆಚ್ಚಳವಾಗಿದೆ.

ಯಾದಗಿರಿ ಜಿಲ್ಲೆಯಲ್ಲಿ 2016-17ನೇ ಸಾಲಿನಲ್ಲಿ ಆರೋಗ್ಯ ಇಲಾಖೆಯ ವಾರ್ಷಿಕ ವರದಿ (ಏಪ್ರಿಲ್‌ 2015ರಿಂದ ಮಾರ್ಚ್‌ 2017)ಯಲ್ಲಿ ನೀಡಿರುವ ಪ್ರಕಾರ ಶಹಾಪುರ ತಾಲೂಕಿನಲ್ಲಿ 16ನೇ ವಯಸ್ಸಿಗೆ ಇಬ್ಬರು, 17ನೇ ವಯಸ್ಸಿಗೆ 4 ಮಂದಿ, 18ನೇ ವಯಸ್ಸಿಗೆ 51 ಮತ್ತು 19ನೇ ವಯಸ್ಸಿಗೆ 219 ಹೆಣ್ಣು ಮಕ್ಕಳು ತಾಯಿ ಆಗಿದ್ದಾರೆ.

ಸುರಪುರ ತಾಲೂಕಿನಲ್ಲಿ 16ನೇ ವಯಸ್ಸಿಗೆ 17 ಬಾಲೆಯರು, 17ನೇ ವಯಸ್ಸಿಗೆ 16 ಹುಡುಗಿಯರು, 18ನೇ ವಯಸ್ಸಿಗೆ 211 ಹಾಗೂ 19 ವರ್ಷಕ್ಕೆ 565 ಮಂದಿ ತಾಯಿಯಾಗಿದ್ದಾರೆ. ಈ ತಾಲೂಕಿನಲ್ಲಿಯೇ ಹೆಚ್ಚಿರುವುದು ಬೆಳಕಿಗೆ ಬಂದಿದೆ.

ಯಾದಗಿರಿ ತಾಲೂಕಿನಲ್ಲಿ 16ನೇ ವಯಸ್ಸಿಗೆ ಒಬ್ಬ ಬಾಲಕಿ, 17ನೇ ವಯಸ್ಸಿಗೆ 1 ಮತ್ತು 18ನೇ ವಯಸ್ಸಿಗೆ 53 ಹಾಗೂ 19ನೇ ವಯಸ್ಸಿಗೆ 219 ತಾಯಿಯಾಗಿದ್ದಾರೆ. ಈ ಅಂಕಿ ಸಂಖ್ಯೆ ಆಘಾತ ಮೂಡಿಸುತ್ತವೆ.

ಜಿಲ್ಲೆ ಸೇರಿದಂತೆ ಹಿಂದುಳಿದ ಪ್ರದೇಶಗಳಲ್ಲಿ ಮಗಳು ಋುತುಮತಿಯಾದ ಬೆನ್ನಲ್ಲಿಯೇ ಮದುವೆ ಪ್ರಯತ್ನ ಶುರುವಿಡುತ್ತಾರೆ. ಕಾನೂನು ನಿಯಮ ಪ್ರಕಾರ ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದ ಬಳಿಕ,ಯುವಕನಿಗೆ 21 ವರ್ಷ ಆಗಿದ್ದರೆ ಮಾತ್ರ ಮದುವೆ ಮಾಡಬೇಕು. ಆದರೆ, ಜಿಲ್ಲೆಯಲ್ಲಿ ಎಲ್ಲರಂತೆ ಆಡಿ ಬೆಳೆದು ಸಾಧನೆ ಮಾಡಬೇಕಾದ ಹೆಣ್ಣು ಮಕ್ಕಳು ಮದುವೆ ಬಂಧನಲ್ಲಿ ಸಿಲುಕಿ ಸಂಸಾರದ ನೊಗ ಹೊರುತ್ತಿದ್ದಾರೆ. ಈ ಚಿತ್ರಣವನ್ನು ಬದಲಿಸಲು ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಮುಂದಾಗಬೇಕಾಗಿದೆ.

ಹೆಣ್ಣ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡುತ್ತಿರುವದರಿಂದಲೇ ಅಪ್ರಾಪ್ತ ವಯಸ್ಕರು ತಾಯಿಯಾಗುವಂತಾಗಿದೆ. ಅದನ್ನು ನಿಯಂತ್ರಣ ಮಾಡಲು ಶಿಕ್ಷಣದ ಮೂಲಕ ಅರಿವು ಮೂಡಿಸುವುದೊಂದೆ ಒಂದೇ ಮಾರ್ಗ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುವುದು. ಅಲ್ಲದೆ ಪಾಲಕರು ತಮ್ಮ ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು.

-ಡಾ. ದಿವಾಕರ ಮಾಳಗೆ ಡಿಎಚ್‌ಒ ಯಾದಗಿರಿ

ಹೆಣ್ಣು ಮಕ್ಕಳು ಬರೀ 16ನೇ ವಯಸ್ಸಿಗೆ ತಾಯಿ ಆಗುತ್ತಿರುವುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ. ಅಪ್ರಾಪ್ತರಿಗೆ ಬಲವಂತವಾಗಿ ಮದುವೆ ಮಾಡುವ ಮೂಲಕ ಅವರನ್ನು ಸಂಸಾರ ಲೋಕದಲ್ಲಿ ಸಿಲುಕಿಸಲಾಗುತ್ತಿದೆ. ಪಾಲಕರು ಮದುವೆ ಯೋಚನೆ ಬಿಟ್ಟು ಹೆಣ್ಣು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವತ್ತ ಗಮನ ಹರಿಸಬೇಕು.

-ಎಸ್‌. ಶಾಂತಲಾ ಉಪನ್ಯಾಸಕಿ ಯಾದಗಿರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ