Please enable javascript.Arjun Tendulkar,ನಿಕೋಲಸ್ ಪೂರನ್‌ ಸಿಕ್ಸರ್‌ಗೆ ಹೆದರಿ ಪೆವಿಲಿಯನ್‌ಗೆ ಓಡಿದ ಮರಿ ತೆಂಡೂಲ್ಕರ್‌! - ipl 2024: arjun tendulkar leaves the over midway after consecutive sixes from nicholas pooran - Vijay Karnataka

ನಿಕೋಲಸ್ ಪೂರನ್‌ ಸಿಕ್ಸರ್‌ಗೆ ಹೆದರಿ ಪೆವಿಲಿಯನ್‌ಗೆ ಓಡಿದ ಮರಿ ತೆಂಡೂಲ್ಕರ್‌!

Authored byವಿಜೇತ್ ಕುಮಾರ್‌ ಡಿ.ಎನ್ | Vijaya Karnataka Web 18 May 2024, 12:32 am
Subscribe

Arjun Tendulkar vs Nicholas Pooran: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಲಖನೌ ಸೂಪರ್ ಜಯಂಟ್ಸ್‌ ಎದುರು ಮುಂಬೈ ಇಂಡಿಯನ್ಸ್‌ ತಂಡ ತನ್ನ ಕೊನೇ ಲೀಗ್‌ ಪಂದ್ಯವನ್ನು ಆಡಿತು. ತನ್ನ ಪಾಲಿಗೆ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದ ಪಂದ್ಯದಲ್ಲಿ ಪ್ರತಿಷ್ಠಗಾಗಿ ಹೋರಾಟ ನಡೆಸಿದ ಮುಂಬೈ ಇಂಡಿಯನ್ಸ್ ತಂಡ ತನ್ನ ಆಡುವ 11ರ ಬಳಗದಲ್ಲಿ ಅನುಭವಿ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಅವರನ್ನು ಹೊರಗಿದ್ದು, ಅವರ ಜಾಗದಲ್ಲಿ ಯುವ ವೇಗದ ಬೌಲರ್ ಅರ್ಜುನ್‌ ತೆಂಡೂಲ್ಕರ್‌ಗೆ ಆಡುವ ಅವಕಾಶ ಮಾಡಿಕೊಟ್ಟಿತ್ತು.

ಹೈಲೈಟ್ಸ್‌:

  • ಹದಿನೇಳನೆ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿ.
  • ಲಖನೌ ಸೂಪರ್‌ ಜಯಂಟ್ಸ್‌ ಎದುರು ಕಡೇ ಲೀಗ್ ಪಂದ್ಯ ಆಡಿದ ಮುಂಬೈ ಇಂಡಿಯನ್ಸ್‌.
  • ಮುಂಬೈ ಎಡಗೈ ವೇಗಿ ಅರ್ಜುನ್ ತೆಂಡೂಲ್ಕರ್‌ ಎದುರು ಅಬ್ಬರಿಸಿದ ನಿಕೋಲಸ್‌ ಪೂರನ್‌.
Arjun Tendulkar in MI vs LSG Match
ಸಿಕ್ಸರ್‌ಗೆ ಹೆದರಿ ಪೆವಿಲಿಯನ್ ಸೇರಿದ ಅರ್ಜುನ್ ತೆಂಡೂಲ್ಕರ್‌ (ಚಿತ್ರ: ಬಿಸಿಸಿಐ).
ಮುಂಬೈ: ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ತೆಂಡೂಲ್ಕರ್‌ 17ನೆ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಸಲ್ಲದ ಕಾರಣಕ್ಕೆ ಭಾರಿ ಸುದ್ದಿಯಾಗಿದ್ದಾರೆ.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ (ಮೇ 17) ರಂದು ಐಪಿಎಲ್‌ 2024 ಟೂರ್ನಿಯ 67ನೇ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಅನುಭವಿ ವೇಗಿ ಜಸ್‌ಪ್ರೀತ್‌ ಬುಮ್ರಾ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಆಡುವ 11ರ ಬಳಗ ಸೇರಿದ್ದ ಯುವ ಎಡಗೈ ವೇಗಿ ಅರ್ಜುನ್‌ ತೆಂಡೂಲ್ಕರ್‌, ಎದುರಾಳಿ ತಂಡದ ಬ್ಯಾಟರ್‌ ನಿಕೋಲಸ್‌ ಪೂರನ್‌ ಎದುರು ಸತತ ಸಿಕ್ಸರ್‌ ಹೊಡೆಸಿಕೊಂಡ ಬಳಿಕ ಬೌಲಿಂಗ್‌ ಅರ್ಧಕ್ಕೆ ಬಿಟ್ಟು ಪೆವಿಲಿಯನ್‌ಗೆ ದೌಡಾಯಿಸಿದ ಘಟನೆ ನಡೆಯಿತು.

ಪಂದ್ಯದಲ್ಲಿ ಎಸೆದ ಮೊದಲ 2 ಓವರ್‌ನಲ್ಲಿ ಕೇವಲ 10 ರನ್‌ ಮಾತ್ರವೇ ಕೊಟ್ಟ ಅರ್ಜುನ್‌ ತೆಂಡೂಲ್ಕರ್‌ ಉತ್ತಮ ಆರಂಭ ಪಡೆದುಕೊಂಡಿದ್ದರು. ಆದರೆ, ಇನಿಂಗ್ಸ್‌ ಮಧ್ಯದಲ್ಲಿ ಎಡಗೈ ಬ್ಯಾಟರ್‌ ನಿಕೋಲಸ್‌ ಪೂರನ್‌ ಎದುರು ಬೌಲಿಂಗ್‌ ಮಾಡಲು ಬಂದು ಮೊದಲ 2 ಎಸೆತಗಳಲ್ಲಿ ಸತತ ಸಿಕ್ಸರ್‌ ಹೊಡೆಸಿಕೊಂಡ ಬಳಿಕ ಅಚ್ಚರಿ ಎನ್ನುವ ಹಾಗೆ ಅರ್ಜುನ್ ಪೆವಿಲಿಯನ್‌ಗೆ ದೌಡಾಯಿಸಿದರು. ಅರ್ಜುನ್‌ಗೆ ಎದುರಾದ ಸಮಸ್ಯೆಯಾದರೂ ಏನು? ಎಂಬುದರ ಬಗ್ಗೆ ಇನ್ನು ಅಧಿಕೃತ ಮಾಹಿತಿ ಸಿಕ್ಕಿಲ್ಲ. ವರದಿಗಳ ಪ್ರಕಾರ ಅರ್ಜುನ್‌ ಸ್ನಾಯು ಸೆಳೆತದ ಸಮಸ್ಯೆ ಎದುರಿಸಿದರು ಎನ್ನಲ್ಲಾಗಿದೆ. ಅರ್ಜುನ್‌ ಅರ್ಧಕ್ಕೆ ಬಿಟ್ಟ ಇನಿಂಗ್ಸ್‌ನ 15ನೇ ಓವರ್‌ನಲ್ಲಿ ಬಾಕಿ ಉಳಿದ 4 ಎಸೆತಗಳನ್ನು ಬೌಲ್ ಮಾಡಿದ ಪಾರ್ಟ್‌ ಟೈಮ್‌ ಸ್ಪಿನ್ನರ್‌ ನಮ್‌ ಧೀರ್‌ 17 ರನ್‌ಗಳನ್ನು ಹೊಡೆಸಿಕೊಂಡರು.

ಸೂರ್ಯಕುಮಾರ್‌ ಯಾದವ್‌ ವೀಕ್ನೆಸ್‌ ಬಹಿರಂಗ ಪಡಿಸಿದ ಅಂಬಾಟಿ ರಾಯುಡು!

ಇದರ ಬೆನ್ನಲ್ಲೇ ಮರಿ ತೆಂಡೂಲ್ಕರ್‌ನ ಸೋಷಿಯಲ್‌ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೇ ಟ್ರೋಲ್‌ ಮಾಡಲಾಗಿದೆ. ಅರ್ಜುನ್‌ ತೆಂಡೂಲ್ಕರ್‌ಗಿಂತಲೂ ಸಚಿನ್‌ ತೆಂಡೂಲ್ಕರ್‌ ಅತ್ಯುತ್ತಮ ಬೌಲರ್‌ ಎಂದೆಲ್ಲಾ ಕಾಲೆಳೆಯಲಾಗಿದೆ. ಕೇವಲ ಎರಡೂವರೆ ಓವರ್‌ ಬೌಲಿಂಗ್‌ ಮಾಡಿ ಫಿಟ್ನೆಸ್‌ ಸಮಸ್ಯೆ ಎಂದು ದೌಡಾಯಿಸಿದರೆ ಹೇಗೆ? ಎಂದು ಮರಿ ತೆಂಡೂಲ್ಕರ್‌ನ ಸಾಮರ್ಥ್ಯದ ಬಗ್ಗೆ ನೆಟ್ಟಿಗರು ಬೊಟ್ಟು ಮಾಡಿದ್ದಾರೆ.


ಇನ್ನು ಇನಿಂಗ್ಸ್‌ ಆರಂಭದಲ್ಲಿ ಚೆಂಡನ್ನು ಅತ್ಯುತ್ತಮವಾಗಿ ಸ್ವಿಂಗ್‌ ಮಾಡುತ್ತಿದ್ದ ಅರ್ಜುನ್‌ ತೆಂಡೂಲ್ಕರ್ ಎಲ್‌ಎಸ್‌ಜಿ ತಂಡದ ದೈತ್ಯ ಬ್ಯಾಟರ್‌ ಮಾರ್ಕಸ್‌ ಸ್ಟೋಯ್ನಿಸ್‌ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ್ದರು. ಆದರೆ, ಮೂರನೇ ಅಂಪೈರ್‌ ಅದನ್ನು ನಾಟ್‌ಔಟ್‌ ಎಂದು ಘೋಷಿಸಿದ ಪರಿಣಾಮ ಅರ್ಜುನ್‌ಗೆ ವಿಕೆಟ್‌ ಲಭ್ಯವಾಗಲಿಲ್ಲ.

ರೋಹಿತ್ ಶರ್ಮಾ ಫಾರ್ಮ್‌ ಬಗ್ಗೆ ಚಿಂತೆ ಬೇಡ - ಸೌರವ್‌ ಗಂಗೂಲಿ ಭರವಸೆ!

ಎಲ್‌ಎಸ್‌ಜಿಗೆ 18 ರನ್‌ಗಳ ಗೆಲುವು

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಲಖನೌ ಸೂಪರ್‌ ಜಯಂಟ್ಸ್‌ ತಂಡ ಆರಂಭಿಕ ಆಘಾತದಿಂದ ಚೇತರಿಸಿ ತನ್ನ ಪಾಲಿನ 20 ಓವರ್‌ಗಳಲ್ಲಿ 214/6 ರನ್‌ಗಳ ಬೃಹತ್‌ ಮೊತ್ತವನ್ನೇ ದಾಖಲಿಸಿತು. ನಾಯಕ ಕೆಎಲ್‌ ರಾಹುಲ್‌ (55) ಮತ್ತು ನಿಕೋಲಸ್‌ ಪೂರನ್‌ (75) ಸ್ಪೋಟಕ ಅರ್ಧಶತಕ ಬಾರಿಸಿ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು ಮುಂಬೈ ಪರ ವೇಗಿ ನುವಾನ್‌ ತುಶಾರ ಮತ್ತು ಲೆಗ್‌ ಸ್ಪಿನ್ನರ್‌ ಪಿಯೂಶ್‌ ಚಾವ್ಲಾ ತಲಾ 3 ವಿಕೆಟ್‌ ಪಡೆದು ಎಲ್‌ಎಸ್‌ಜಿ ಬ್ಯಾಟರ್‌ಗಳ ಅಬ್ಬರಕ್ಕೆ ಕೊಂಚ ಕಡಿವಾಣ ಹಾಕಿದರು.

ಬಳಿಕ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ಮಾಜಿ ನಾಯಕ ರೋಹಿತ್‌ ಶರ್ಮಾ 38 ಎಸೆತಗಳಲ್ಲಿ 68 ರನ್‌ ಮತ್ತು ಯುವ ಆಟಗಾರ ನಮನ್‌ ಧೀರ್‌ 28 ಎಸೆತಗಳಲ್ಲಿ 62* ರನ್‌ ಸಿಡಿಸಿದರೂ ತಂಡ 20 ಓವರ್‌ಗಳಲ್ಲಿ 196/6 ರನ್‌ ಮಾತ್ರವೇ ಗಳಿಸಲು ಶಕ್ತವಾಗಿ 18 ರನ್‌ಗಳ ಅಂತರದ ಸೋಲುಂಡಿತು.
ವಿಜೇತ್ ಕುಮಾರ್‌ ಡಿ.ಎನ್
ಲೇಖಕರ ಬಗ್ಗೆ
ವಿಜೇತ್ ಕುಮಾರ್‌ ಡಿ.ಎನ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ