Please enable javascript.ನಿರಾಶ್ರಿತನ ಓಟ ನೋಡಲು 50 ಕಿ.ಮೀ. ನಡೆದ ಬಂಧುಗಳು - ನಿರಾಶ್ರಿತನ ಓಟ ನೋಡಲು 50 ಕಿ.ಮೀ. ನಡೆದ ಬಂಧುಗಳು - Vijay Karnataka

ನಿರಾಶ್ರಿತನ ಓಟ ನೋಡಲು 50 ಕಿ.ಮೀ. ನಡೆದ ಬಂಧುಗಳು

ಏಜೆನ್ಸೀಸ್ 12 Aug 2012, 3:32 am
Subscribe

ಅಮೆರಿಕದಲ್ಲಿದ್ದು, ಯಾವುದೇ ದೇಶದ ಧ್ವಜ ಹಿಡಿದು ಪಂಥ ಸಂಚಲನದಲ್ಲಿ ಪಾಲ್ಗೊಳ್ಳದೆ, ಸ್ವತಂತ್ರ ಸ್ಪರ್ಧಿಯಾಗಿ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುತ್ತಿರುವ ಸೂಡಾನ್‌ನ ನಿರಾಶ್ರಿತ ಗೌರ್ ಮಾರಿಯಲ್ ಲಂಡನ್ ಒಲಿಂಪಿಕ್ಸ್‌ನ ವಿಶೇಷ ಆಕರ್ಷಣೆ.

 50
ನಿರಾಶ್ರಿತನ ಓಟ ನೋಡಲು 50 ಕಿ.ಮೀ. ನಡೆದ ಬಂಧುಗಳು
ಲಂಡನ್: ಅಮೆರಿಕದಲ್ಲಿದ್ದು, ಯಾವುದೇ ದೇಶದ ಧ್ವಜ ಹಿಡಿದು ಪಂಥ ಸಂಚಲನದಲ್ಲಿ ಪಾಲ್ಗೊಳ್ಳದೆ, ಸ್ವತಂತ್ರ ಸ್ಪರ್ಧಿಯಾಗಿ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುತ್ತಿರುವ ಸೂಡಾನ್‌ನ ನಿರಾಶ್ರಿತ ಗೌರ್ ಮಾರಿಯಲ್ ಲಂಡನ್ ಒಲಿಂಪಿಕ್ಸ್‌ನ ವಿಶೇಷ ಆಕರ್ಷಣೆ.

ಎಲ್ಲಕ್ಕಿಂತ ಮುಖ್ಯವಾಗಿ ದಕ್ಷಿಣ ಸೂಡಾನ್‌ನ ನಿರಾಶ್ರಿತರ ದಾಣದಲ್ಲಿದ್ದ ಮಾರಿಯಲ್ ಅವರ ಓಟದ ನೇರ ಪ್ರಸಾರ ನೋಡಲು ಟೀವಿ ಹುಡುಕುತ್ತ 50 ಕಿಲೋ ಮೀಟರ್ ನಡೆದಿದ್ದಾರೆ.

28 ವರ್ಷದ ಮಾರಿಯಲ್, 1993ರಿಂದ ತನ್ನ ಬಂಧುಗಳನ್ನು ನೋಡಿರಲಿಲ್ಲ. ಸಾವಿನಿಂದ ತಪ್ಪಿಸಿಕೊಳ್ಳಲು ಪಲಾಯನ ಗೈದು ಅಮೆರಿಕವನ್ನು ತಲುಪಿ ಅಲ್ಲಿಯೂ ನಿರಾಶ್ರಿತ ತಾಣದಲ್ಲಿದ್ದರು.

ಆದರೆ ತಮ್ಮ ಕುಟುಂಬದ ಹೆಮ್ಮೆಯ ಮಾರಿಯಲ್, 109 ಇತರ ಸ್ಪರ್ದಿಗಳ ನಡುವೆ ಓಡುತ್ತಿರುವ ಐತಿಹಾಸಿಕ ದೃಶ್ಯವನ್ನು ನೋಡಲು ಆತನ ಮನೆಯವರಿಗೆ ಅಸಾಧ್ಯ. ಯಾವ ಊರನಲ್ಲಿ ನೇರ ಪ್ರಸಾರ ಸಿಗಬಹುದು ಎಂದು ನಡೆದು ಬಂದ ಅವರ ಕುಟುಂಬ ಸುಮಾರು 50 ಕಿ.ಮೀ. ದೂರ ಸಾಗಿದೆ.

ಅಂದು ಯುದ್ಧದ ಕೇಂದ್ರವಾಗಿದ್ದ ಸೂಡಾನ್‌ನಲ್ಲಿ ಜನಿಸಿದ ಮಾರಿಯಲ್, ಕುಟುಂಬದ 28 ಮಂದಿ ಸದ್ಯರು ಸಾವಿಗೀಡಾದ ನಂತರ ಈಜಿಪ್ಟ್‌ಗೆ ಪಲಾಯನ ಮಾಡಿದ. ನಂತರ ಅಮೆರಿಕ ಸೇರಿದ ಮಾರಿಯಲ್ ಅವರಲ್ಲಿ ಪಾಸ್‌ಪೋರ್ಟ್ ಇಲ್ಲದಿದ್ದರೂ ಉಳಿದುಕೊಳ್ಳುವ ಅವಕಾಶ ಸಿಕ್ಕಿತು.

ಕಳೆದ ವರ್ಷ ದಕ್ಷಿಣ ಸೂಡಾನ್ ಸ್ವಾತಂತ್ರ್ಯಪಡೆದರೂ, ರಾಷ್ಟ್ರೀಯ ಒಲಿಂಪಿಕ್ ಸಮಿತಿ ಆ ದೇಶದಲ್ಲಿಲ್ಲ. ಇದರಿಂದಾಗಿ ಮಾರಿಯಲ್ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಹೆಸರಿನಲ್ಲಿ ಸ್ಪರ್ಧಿಸಬೇಕಾಯಿತು. ಅಮೆರಿಕವನ್ನು ಪ್ರತಿನಿಧಿಸಬೇಕಾದರೆ ಅವರಲ್ಲಿ ಅಧಿಕೃತ ಪಾಸ್‌ಪೋರ್ಟ್ ಇರಬೇಕಾಗಿದೆ. ಲಂಡನ್ ಒಲಿಂಪಿಕ್ಸ್‌ಗೆ ಇನ್ನು ಒಂದು ವಾರ ಬಾಕಿ ಇರುವಾಗ ಐಒಸಿ ಹೆಸರಿನಲ್ಲಿ ಸ್ಪರ್ಧಿಸಬಹುದು ಎಂದು ಮಾರಿಯಲ್‌ಗೆ ತಿಳಿಸಲಾಯಿತು. ಅವರು ಸ್ವತಂತ್ರ ಒಲಿಂಪಿಕ್ ಕ್ರೀಡಾಪಟುವಾಗಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.

ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಜಗತ್ತಿನಾದ್ಯಂತ ಇರುವ ನಿರಾಶ್ರಿತರು ಹಾಗೂ ದೇಶವಿಲ್ಲದವರಲ್ಲಿ ಅರಿವು ಮೂಡಿಸಲು ಈ ಅವಕಾಶವನ್ನು ನಾನು ಉಪಯೋಗಿಸಿಕೊಳ್ಳುತ್ತೇನೆ. ವಿಶೇಷವಾಗಿ ದಕ್ಷಿಣ ಸೂಡಾನ್ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುತ್ತೇನೆ ಎಂದು ಮಾರಿಯಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಒಲಿಂಪಿಕ್ಸ್ ಧ್ವಜದಡಿಯಲ್ಲಿ ಓಡಲು ಹೆಮ್ಮೆ ಅನಿಸುತ್ತಿದೆ. ಒಲಿಂಪಿಕ್ಸ್ ನಲ್ಲಿ ಒಲಿಂಪಿಕ್ಸ್ ಅನ್ನು ಪ್ರತಿನಿಧಿಸುವುದೇ ಶ್ರೇಷ್ಠ. ಆದ್ದರಿಂದ ನಾನು ಇಡೀ ವಿಶ್ವವನ್ನೇ ಪ್ರತಿನಿಧಿಸುತ್ತಿದ್ದೇನೆ ಎಂದು ಮಾರಿಯಲ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

2001, ಜುಲೈ 19ರಂದು ಅಮೆರಿಕಕ್ಕೆ ಆಗಮಿಸಿದ ಮಾರಿಯಲ್ ಆರಂಭದಲ್ಲಿ ನ್ಯೂ ಹ್ಯಾಂಪ್‌ಷೈರ್‌ನಲ್ಲಿದ್ದರು. ಈಗ ಅರಿಜೊನಾನದಲ್ಲಿರುವ ಫ್ಲ್ಯಾಗ್‌ಸ್ಟಾಫ್‌ನಲ್ಲಿ ನೆಲೆಸಿದ್ದಾರೆ. ಅಲ್ಲಿಯೇ ಒಂಟಿಯಾಗಿ ತರಬೇತಿ ನಡೆಸುತ್ತಿದ್ದಾರೆ.

ವಿದ್ಯುತ್ ಇಲ್ಲದ ಮನೆ
ದಕ್ಷಿಣ ಸೂಡಾನ್‌ನಲ್ಲಿ ನೆಲೆಸಿರುವ ಮಾರಿಯಲ್ ಬಂಧುಗಳ ಮನೆಯಲ್ಲಿ ವಿದ್ಯುತ್ ಇಲ್ಲ. ಮಾರಿಯಲ್ ಓಡುವುದನ್ನು ಟಿವಿಯಲ್ಲಿ ನೋಡಲು ಕುಟುಂಬದ ಸದಸ್ಯರು 50 ಕಿಮೀ ದೂರದಲ್ಲಿರುವ ಪಾನ್‌ರೆಂಗ್ ನಗರಕ್ಕೆ ನಡೆದು ಬಂದಿದ್ದಾರೆ.

ಅವರು ನನ್ನನ್ನು ಟಿವಿಯಲ್ಲಿ ನೋಡುತ್ತಾರೆ. ಹತ್ತಿರದ ನಗರ 30 ಮೈಲಿ ದೂರದಲ್ಲಿದೆ. ಈಗ ಅಲ್ಲಿ ಮಳೆಗಾಲ. ನಗರಕ್ಕೆ ಹೋಗಲು ಯಾವುದೇ ವಾಹನದ ವ್ಯವಸ್ಥೆಯೂ ಇಲ್ಲ’ ಎಂದು ಮಾರಿಯಲ್ ಹೇಳುವ ಮಾತಿನಲ್ಲಿ ದಕ್ಷಿಣ ಸೂಡಾನ್‌ನ ನಿರಾಶ್ರಿತರ ಬದುಕಿನ ಚಿತ್ರಣ ಸ್ಪಷ್ಟವಾಗುತ್ತದೆ.

’ವಾಹನದಲ್ಲಿ ಹೋಗಲು ಅಲ್ಲಿ ರಸ್ತೆಗಳೇ ಇಲ್ಲ, ಈ ಕಾರಣಕ್ಕಾಗಿ ಅವರು ನಡೆದೇ ಬರುತ್ತಾರೆ, ಅವರ ಬಗ್ಗೆ ನನಗೆ ಅಪಾರ ಪ್ರೀತಿ ಇದೆ. ಅವರಿಗಾಗಿಯೇ ನಾನಿಲ್ಲಿದ್ದೇನೆ. ದಕ್ಷಿಣ ಸೂಡಾನಿನ ಹೊಸ ಪೀಳಿಗೆ ನನ್ನನ್ನು ನೋಡಬಹುದು. ಅವರು ಇದರಿಂದಾಗಿ ಕನಸು ಕಾಣಬಹುದು. ತಮಗೂ ಒಲಿಂಪಿಕ್ಸ್‌ನಲ್ಲಿ ಅವಕಾಶ ಸಿಗಬಹುದೆಂದು ಅವರು ಕಠಿಣ ಶ್ರಮ ಪಡಬಹುದು’ ಎಂದು ಮಾರಿಯಲ್ ಹೇಳಿದ್ದಾರೆ.

ಬಹಮಾಸ್‌ಗೆ 4*400 ಮೀ. ರಿಲೇ ಚಿನ್ನ
ಪುರುಷರ 4*400 ಮೀ. ರಿಲೇಯಲ್ಲಿ ದಶಕಗಳಿಗಿಂತ ಹಿಂದಿನಿಂದಲೂ ಅಮೆರಿಕನ್ನರ ಪ್ರಾಬಲ್ಯವನ್ನು ಯಶಸ್ವಿಯಾಗಿ ಹತ್ತಿಕ್ಕಿದ ಬಹಮಾಸ್ ಶೂರರು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ಶುಕ್ರವಾರ ಐತಿಹಾಸಿಕ ಸಾಧನೆ ಮಾಡಿದರು.

ಒಲಿಂಪಿಕ್ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಅಮೆರಿಕ ಹೈದರಿಗೆ ತೀವ್ರ ಸವಾಲೊಡ್ಡಿದ ಬಹಮಾಸ್ ವೀರರು ಗುರಿಯನ್ನು 2:56.72 ಸೆಕೆಂಡ್‌ಗಳಲ್ಲಿ ತಲುಪಿ ಕೆರಿಬಿಯನ್ ರಾಷ್ಟ್ರಕ್ಕೆ ಚೊಚ್ಚಲ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದುಕೊಟ್ಟರು.

ಅಮೆರಿಕದ ವಿಶ್ವಖ್ಯಾತ ಪ್ರತಿಭೆ ಏಂಜೆಲೊ ಟೇಲರ್ ಅವರನ್ನು ಹಿಂದಿಕ್ಕಿ ಸಾಗಿದ ಬಹಮಾಸ್‌ನ ರಮೋನ್ ಮಿಲ್ಲರ್ ಮೊದಲಿಗರಾಗಿ ಗುರಿ ಮುಟ್ಟುತ್ತಿದ್ದಂತೆ ಕ್ರೀಡಾಂಗಣದಲ್ಲಿದ್ದ ಬಹಮಾಸ್ ಪ್ರೇಕ್ಷಕರ ಕೇಕೆ ಮುಗಿಲು ಮುಟ್ಟಿತು.

1972ರ ಮ್ಯೂನಿಚ್ ಕೂಟದ ಬಳಿಕ ಪುರುಷರ 4*400 ಮೀ. ರಿಲೇಯಲ್ಲಿ ಅಮೆರಿಕ ಸೋತಿರುವುದು ಇದೇ ಮೊದಲು !

2:57.05 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ ಅಮೆರಿಕ ಬೆಳ್ಳಿಗೆ ಸಮಾಧಾನ ಪಟ್ಟರೆ, 2:59.40 ಸೆಕೆಂಡ್‌ಗಳ ರಾಷ್ಟ್ರೀಯ ದಾಖಲೆಯೊಂದಿಗೆ ಗೆಲುವಿನ ಗೆರೆ ದಾಟಿದ ಟ್ರಿನಿಡಾಡ್ ಮತ್ತು ಟೊಬಾಗೋ ಕಂಚಿಗೆ ಮುತ್ತಿಟ್ಟಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ