Please enable javascript.ಕಿಡ್ನಾಪ್‌ ಕೇಸ್‌: ಮಾಜಿ ಸಂಸದರ ಪುತ್ರಿ ಚೆನ್ನೈನಲ್ಲಿ ಪತ್ತೆ - ಕಿಡ್ನಾಪ್‌ ಕೇಸ್‌: ಮಾಜಿ ಸಂಸದರ ಪುತ್ರಿ ಚೆನ್ನೈನಲ್ಲಿ ಪತ್ತೆ - Vijay Karnataka

ಕಿಡ್ನಾಪ್‌ ಕೇಸ್‌: ಮಾಜಿ ಸಂಸದರ ಪುತ್ರಿ ಚೆನ್ನೈನಲ್ಲಿ ಪತ್ತೆ

ವಿಕ ಸುದ್ದಿಲೋಕ 20 Jun 2012, 11:29 am
Subscribe

ಅಪಹರಣಕ್ಕೊಳಗಾಗಿದ್ದ ಕೊಪ್ಪಳದ ಮಾಜಿ ಸಂಸದ ಎಚ್.ಜಿ. ರಾಮುಲು ಎಂಬುವರ ಪುತ್ರಿ ವಿಷ್ಣುವಂದನಾ ಚೆನ್ನೈನಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದ್ದಾರೆ.

ಕಿಡ್ನಾಪ್‌ ಕೇಸ್‌: ಮಾಜಿ ಸಂಸದರ ಪುತ್ರಿ ಚೆನ್ನೈನಲ್ಲಿ ಪತ್ತೆ
ಬೆಂಗಳೂರು : ಅಪಹರಣಕ್ಕೊಳಗಾಗಿದ್ದ ಕೊಪ್ಪಳದ ಮಾಜಿ ಸಂಸದ ಎಚ್.ಜಿ. ರಾಮುಲು ಎಂಬುವರ ಪುತ್ರಿ ವಿಷ್ಣುವಂದನಾ ಚೆನ್ನೈನಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದ್ದಾರೆ.

ವಿಷ್ಣುವಂದನಾ ಅಪಹರಣ ಪ್ರಕರಣದಲ್ಲಿ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಪೊಲೀಸರು ವಿಚಾರಣೆ ನಡೆಸಿದ ನಂತರವಷ್ಟೇ ಸತ್ಯ ಸಂಗತಿ ಹೊರಬರಲಿದೆ.

ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಪ್ರಣಬ್ ಮೊಹಂತಿ, ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಒಂದು ತಂಡ ಹೈದರಾಬಾದ್‌ಗೆ ತೆರಳಿದ್ದರೆ, ಮತ್ತೊಂದು ತಂಡ ನಗರದಲ್ಲೇ ತನಿಖೆ ನಡೆಸುತಿತ್ತು. ವಿಷ್ಣುವಂದನಾ ಪತಿ ರವಿಕುಮಾರ್ ಹಾಗೂ ತಂದೆ ಎಚ್.ಜಿ. ರಾಮುಲು ಅವರು ನೀಡಿದ ಮಾಹಿತಿ ಆಧರಿಸಿ ಚೆನ್ನೈಗೆ ತೆರಳಿದ್ದ ಇನ್ನೊಂದು ತಂಡ ವಿಷ್ಣುವಂದನಾ ಅವರನ್ನು ಚೆನ್ನೈನ ರೈಲ್ವೆ ನಿಲ್ದಾಣದ ಬಳಿ ಪತ್ತೆ ಮಾಡಿದೆ. ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ, ಅಪಹರಣಕಾರರು ಸಿಕ್ಕಿದರೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಬಹಿರಂಗಪಡಿಸಿಲ್ಲ.

ಚೆನ್ನೈನಿಂದ ವಿಷ್ಣುವಂದನಾ ಅವರನ್ನು ಬೆಂಗಳೂರಿಗೆ ಕರೆತರಲಾಗುತ್ತಿದ್ದು, ವಿಚಾರಣೆ ನಡೆಸಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿ ನೆಲೆಸಿರುವ ವಿಷ್ಣುವಂದನಾ ಹಾಗೂ ಪತಿ, ಹೋಟೆಲ್ ಉದ್ಯಮಿ ರವಿಕುಮಾರ್ ಸಂಬಂಧಿಕರ ಮದುವೆಗೆಂದು ಬೆಂಗಳೂರಿಗೆ ಬಂದಿದ್ದರು. ಸೋಮವಾರ ರಾತ್ರಿ ಅವರು ಹೈದರಾಬಾದ್‌ಗೆ ವಾಪಸಾಗಬೇಕಿತ್ತು.

ಜಯನಗರ 4ನೇ ಬ್ಲಾಕ್‌ಗೆ ರಾತ್ರಿ ತೆರಳಿದ್ದ ವಿಷ್ಣುವಂದನಾ, ಪತಿ ಹಾಗೂ ಸಹೋದರಿ ಕಾಂಪ್ಲೆಕ್ಸ್‌ನಲ್ಲಿ ಶಾಪಿಂಗ್ ಮಾಡುತ್ತಿದ್ದರು. ಸಹೋದರಿ ಮೆಡಿಕಲ್ ಸ್ಟೋರ್ ಹೋಗಿದ್ದ ಸಂದರ್ಭದಲ್ಲಿ ಮಹಿಳೆ ಸೇರಿ ಮೂವರು ವಿಷ್ಣುವಂದನಾ ಬಳಿ ಬಮದು ‘ಮಾಜಿ ಸಂಸದರ ಪುತ್ರಿಯೇ ’ ಎಂದು ಕೇಳಿ ನಿಮ್ಮೊಂದಿಗೆ ಮಾತನಾಡಬೇಕೆಂದು ಹೇಳಿ ಕಾರಿನಲ್ಲಿ ಕರೆದೊಯ್ದಿದ್ದಾರೆ.

ಈ ಮಧ್ಯೆ ವಿಷ್ಣುವಂದನಾ ಪತಿಗೆ ಕರೆ ಮಾಡಿ ತನ್ನನ್ನು ಅಪಹರಿಸಿರುವ ಸುದ್ದಿ ತಿಳಿಸಿದ್ದು, ಆ ವೇಳೆಗೆ ಅಪಹರಣಕಾರರು ಮೊಬೈಲ್ ಕಸಿದು ಸ್ವಿಚ್ ಆಫ್ ಮಾಡಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಪತಿಗೆ ಆಂಧ್ರದ ಮೊಬೈಲ್ ಸಂಖ್ಯೆಯ ಮೊಬೈಲ್‌ನಿಂದ ಕರೆ ಮಾಡಿ 30 ಲಕ್ಷ ರೂ. ಒತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದ ಅಪಹರಣಕಾರರು ನಂತರ ಕರೆ ಮಾಡಿರಲಿಲ್ಲ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜಯನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ