Please enable javascript.ಬರ ಅವಲೋಕನ: ಮಂತ್ರಿಗಳ ಗಡಣದಿಂದಲೂ ರಾಜ್ಯ ಪ್ರವಾಸ - ಬರ ಅವಲೋಕನ: ಮಂತ್ರಿಗಳ ಗಡಣದಿಂದಲೂ ರಾಜ್ಯ ಪ್ರವಾಸ - Vijay Karnataka

ಬರ ಅವಲೋಕನ: ಮಂತ್ರಿಗಳ ಗಡಣದಿಂದಲೂ ರಾಜ್ಯ ಪ್ರವಾಸ

ವಿಕ ಸುದ್ದಿಲೋಕ 8 Apr 2012, 8:57 pm
Subscribe

ಬರದಿಂದ ತೀವ್ರ ಸಂಕಷ್ಟಕ್ಕೆ ತುತ್ತಾಗಿರುವ ಜಿಲ್ಲೆಗಳ ಪರಿಸ್ಥಿತಿ ಅವಲೋಕಿಸಲು ಸಚಿವರ ನೇತೃತ್ವದ ತಂಡ ಸೋಮವಾರದಿಂದ ರಾಜ್ಯ ಪ್ರವಾಸ ಕೈಗೊಳ್ಳಲಿದೆ.

ಬರ ಅವಲೋಕನ: ಮಂತ್ರಿಗಳ ಗಡಣದಿಂದಲೂ ರಾಜ್ಯ ಪ್ರವಾಸ
ಬೆಂಗಳೂರು: ಬರದಿಂದ ತೀವ್ರ ಸಂಕಷ್ಟಕ್ಕೆ ತುತ್ತಾಗಿರುವ ಜಿಲ್ಲೆಗಳ ಪರಿಸ್ಥಿತಿ ಅವಲೋಕಿಸಲು ಸಚಿವರ ನೇತೃತ್ವದ ತಂಡ ಸೋಮವಾರದಿಂದ ರಾಜ್ಯ ಪ್ರವಾಸ ಕೈಗೊಳ್ಳಲಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬರ ಅಧ್ಯಯನಕ್ಕಾಗಿ ದಿಢೀರ್ ಪ್ರವಾಸ ಕೈಗೊಂಡ ಬೆನ್ನಲ್ಲೇ, ಮುಖ್ಯಮಂತ್ರಿ ಸದಾನಂದ ಗೌಡರೂ ಬರ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ, ತುರ್ತು ಕ್ರಮಕ್ಕೆ ಆದೇಶ ನೀಡಿದ್ದಾರೆ.

ಶನಿವಾರ ಮೈಸೂರಿಗೆ ಭೇಟಿ ನೀಡಿದ್ದ ಸದಾನಂದ ಗೌಡ, ಬೆಳಗಾವಿಗೆ ಸರಕಾರಿ ಕಾರ್ಯಕ್ರಮಕ್ಕೆ ಭೇಟಿ ನೀಡಿದಾಗ ಸಾಂಬ್ರಾ ವಿಮಾನ ನಿಲ್ದಾಣದಲ್ಲೇ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಬಳಿಕ ಚಿತ್ರದುರ್ಗ ಜಿಲ್ಲೆಯ ನಾನಾ ತಾಲೂಕಿಗೆ ಭೇಟಿ ನೀಡಿ, ಕುಡಿಯುವ ನೀರಿನ ಕಾಮಗಾರಿ, ಗೋಶಾಲೆ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.

ಸಚಿವರ ತಂಡ:

ಬರ ಜಿಲ್ಲೆಗಳ ಅಧ್ಯಯನಕ್ಕೆ ಮುಖ್ಯಮಂತ್ರಿ ಮೂವರು ಸಚಿವರ ನೇತೃತ್ವದಲ್ಲಿ ಮೂರು ತಂಡ ರಚಿಸಿದ್ದಾರೆ. ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗೂ ಮೈಸೂರು ಕರ್ನಾಟಕದಲ್ಲಿ ಸಚಿವರ ತಂಡ ಏ.9ರಿಂದ ಪ್ರವಾಸ ಕೈಗೊಳ್ಳಲಿದೆ. ಏ.12ರವರೆಗೆ ಜಿಲ್ಲೆ ಹಾಗೂ ತಾಲೂಕುಗಳಿಗೆ ಭೇಟಿ ನೀಡಿ, ಬರ ನಿರ್ವಹಣೆಗೆ ಕೈಗೊಂಡ ಕಾಮಗಾರಿ, ಬರ ಪರಿಸ್ಥಿತಿಯ ತೀವ್ರತೆ ಕುರಿತು ಸರಕಾರಕ್ಕೆ ತಂಡಗಳು ವರದಿ ಸಲ್ಲಿಸಲಿವೆ.

ವಿಜಾಪುರ, ಬಾಗಲಕೋಟ ಜಿಲ್ಲೆಗಳಿಗೆ ತಕ್ಷಣ ಕುಡಿಯುವ ನೀರು ವ್ಯವಸ್ಥೆ ಮಾಡಲು ಮಹಾರಾಷ್ಟ್ರ ಕೊಯ್ನಾ ಅಣೆಕಟ್ಟಿನಿಂದ ಭಾನು ವಾರ ರಾತ್ರಿಯೇ ನೀರು ಬಿಡದಿದ್ದರೆ, ಬಸವರಾಜ ಬೊಮ್ಮಾಯಿ ನೇತೃತ್ವದ ತಂಡದ ಪ್ರವಾಸ ಸೋಮವಾರ ಮಧ್ಯಾಹ್ನ ನಂತರ ಆರಂಭವಾಗಲಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರು ಕಲ್ಪಿಸುವುದು ಮೊದಲ ಆದ್ಯತೆಯಾಗಿದ್ದು, ಮುಂಬಯಿಗೆ ತೆರಳಿ, ಮಹಾರಾಷ್ಟ್ರ ಸರಕಾರ ಜತೆ ಮಾತುಕತೆ ಆಡಬೇಕಿರುವುದರಿಂದ ಪ್ರವಾಸ ವಿಳಂಬವಾಗಬಹುದು ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ತಂಡ 1: ಜಗದೀಶ್ ಶೆಟ್ಟರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಸಿ.ಎಂ. ಉದಾಸಿ, ಗೋವಿಂದ ಕಾರಜೋಳ ಅವರಿರುವ ತಂಡ ಏ.9ರಿಂದ ವಿಜಾಪುರ, ಬಾಗಲಕೋಟ, ಧಾರವಾಡ, ಗದಗ, ಹಾವೇರಿ, ಬೆಳಗಾವಿ, ದಾವಣಗೆರೆ.

ತಂಡ 2: ಸುರೇಶ್ ಕುಮಾರ್, ಆರ್. ಅಶೋಕ್, ರವೀಂದ್ರನಾಥ್, ಬಚ್ಚೇಗೌಡ ಅವರ ತಂಡ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜಪೇಟೆ, ಮೈಸೂರು, ಮಂಡ್ಯ.

ತಂಡ 3: ಬಸವರಾಜ ಬೊಮ್ಮಾಯಿ, ರೇವೂನಾಯಕ ಬೆಳಮಗಿ, ರಾಜುಗೌಡ, ರಾಮದಾಸ್ ಅವರ ತಂಡ ಗುಲ್ಬರ್ಗ, ಕೊಪ್ಪಳ, ರಾಯಚೂರು, ಬಳ್ಳಾರಿ, ಬೀದರ್, ಚಿತ್ರದುರ್ಗ, ಯಾದಗಿರಿ.

ಬಿಎಸ್‌ವೈ ಪತ್ರ ಉತ್ತರ ಕರ್ನಾಟಕದ ಬರಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿ ಬಂದಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಅಲ್ಲಿನ ಪರಿಸ್ಥಿತಿ ಹಾಗೂ ಸರಕಾರ ತಕ್ಷಣ ಕೈಗೊಳ್ಳಬೇಕಾಗಿರುವ ಕ್ರಮದ ಕುರಿತು ಮುಖ್ಯಮಂತ್ರಿ ಸದಾನಂದ ಗೌಡರಿಗೆ ಪತ್ರ ಬರೆದಿದ್ದಾರೆ. - ಉಮೇಶ್ ಕತ್ತಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ