ಆ್ಯಪ್ನಗರ

ಮೊಹರಂ ಹಬ್ಬದ ಮಹತ್ವ, ಆಚರಣೆ ಮತ್ತು ಹಿನ್ನೆಲೆ

ಮೊಹರಂ ಎಂದರೆ ಮಹಮದಿಯರ ಮೊದಲ ತಿಂಗಳು. ಇಲ್ಲಿಂದ ಇಸ್ಲಾಂ ವರ್ಷ ಆರಂಭವಾಗುತ್ತದೆ. ಈ ಹಬ್ಬಕ್ಕೆ ಚಾರಿತ್ರಿಕ ಮತ್ತು ಧಾರ್ಮಿಕ ಹಿನ್ನೆಲೆಯೂ ಇದೆ. ಇಸ್ಲಾಂ ಸಂಸ್ಥಾಪಕರಾದ ಮಹಮ್ಮದ್ ಪೈಗಂಬರ್ ಕೊನೆಯ ಪುತ್ರಿ ಫಾತಿಮಾ ಬೇಬಿ ಪತಿ ಹಜರತ್ ಆಲಿ ನಾಲ್ಕನೇ ಖಲೀಫರಾಗಿದ್ದರು.

Vijaya Karnataka Web 21 Sep 2018, 7:14 am
ಇದು ಹಿಂದೂ ಮುಸ್ಲಿಮರ ಭಾವೈಕ್ಯತೆಯ ಹಬ್ಬಗಳಲ್ಲಿ ಪ್ರಮುಖವಾದದ್ದು ಮೊಹರಂ. ಯಾವುದೇ ತಾರತಮ್ಯ ಇಲ್ಲದಂತೆ ಈ ಹಬ್ಬದಲ್ಲಿ ಹಿಂದೂಗಳು ಪಾಲ್ಗೊಳ್ಳುತ್ತಾರೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಮೊಹರಂ ಹಬ್ಬವನ್ನು ಬಾಬಯ್ಯ ಹಬ್ಬ ಎಂದು ಕರೆಯುತ್ತಾರೆ.
Vijaya Karnataka Web moharam1


ಮೊಹರಂ ಎಂದರೆ ಮಹಮದಿಯರ ಮೊದಲ ತಿಂಗಳು. ಇಲ್ಲಿಂದ ಇಸ್ಲಾಂ ವರ್ಷ ಆರಂಭವಾಗುತ್ತದೆ. ಈ ಹಬ್ಬಕ್ಕೆ ಚಾರಿತ್ರಿಕ ಮತ್ತು ಧಾರ್ಮಿಕ ಹಿನ್ನೆಲೆಯೂ ಇದೆ. ಇಸ್ಲಾಂ ಸಂಸ್ಥಾಪಕರಾದ ಮಹಮ್ಮದ್ ಪೈಗಂಬರ್ ಕೊನೆಯ ಪುತ್ರಿ ಫಾತಿಮಾ ಬೇಬಿ ಪತಿ ಹಜರತ್ ಆಲಿ ನಾಲ್ಕನೇ ಖಲೀಫರಾಗಿದ್ದರು. ಆಗ ದಮಾಸ್ಕಸ್‌ನಲ್ಲಿ ಮುಅವಿಯ ಎಂಬ ಸರ್ದಾರನು ತಾನೇ ಖಲೀಫನೆಂದು ಸಾರಿಕೊಂಡು ಜನರ ಮೇಲೆ ಧರ್ಮ ಪ್ರಭುತ್ವ ಹೇರಿದನು.

ಹಜರತ್ ಅಲಿ ಬಳಿಕ ಅವರ ಮಗ ಪೈಗಂಬರರ ಎರಡನೇ ಮೊಮ್ಮಗ ಇಮಾಮ್ ಹುಸೇನ್ ಖಲೀಫ್ ಪಟ್ಟ ಅಲಂಕರಿಸಬೇಕಾಗಿತ್ತು. ಆದರೆ ಮುಅವಿಯಾನ್ ಮಗ ಯಜೀದನು ತಾನೇ ಖಲೀಫನೆಂದು ಘೋಷಿಸಿಕೊಂಡನು. ಈ ಅನ್ಯಾಯವನ್ನು ಇಮಾನ್ ಹುಸೇನರು ಪ್ರತಿಭಟಿಸಿದರು.

ಸತ್ಯ ನ್ಯಾಯವನ್ನು ಕಾಪಾಡಲು ಇಮಾಮ್ ಹುಸೇನರು 72 ಅನುಯಾಯಿಗಳೊಡನೆ ಯುದ್ಧ ಸಾರಿದರು. ಮೊಹರಂ ತಿಂಗಳ ಹತ್ತನೇ ದಿನ ಕರುಬಲಾ ಎಂಬ ಮರುಭೂಮಿಯಲ್ಲಿ ನಡೆದ ತುಮುಲ ಯುದ್ಧದಲ್ಲಿ ಇಮಾಮ್ ಹುಸೇನ್ ಹುತಾತ್ಮರಾದರು. ಶಾಂತಿ ಮತ್ತು ಧರ್ಮಕ್ಕಾಗಿ ತಮ್ಮನ್ನೆ ಸಮರ್ಪಿಸಿಕೊಂಡು ಹಜರತ್ ಹಸನ್ ಮತ್ತು ಹುಸೇನರ ಪುಣ್ಯ ಸ್ಮರಣೆಯ ನಿಮಿತ್ತ ಈ ಹಬ್ಬ ನಡೆಯುತ್ತದೆ.

ಹತ್ತು ದಿನಗಳವರೆಗೆ ನಡೆಯುವ ಈ ಹಬ್ಬದ ಆಚರಣೆಯು ಹಿಂದೂ ಮುಸ್ಲಿಂ ಬೇಧವಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ. ಈ ಹಬ್ಬದಲ್ಲಿ ಬರುವ ಹೆಜ್ಜೆ ಕುಣಿತ, ಮುಳ್ತಾ ಹೆಜ್ಜೆ ಕುಣಿತ, ಮಟಕಿ ಹೆಜ್ಜೆ ಕುಣಿತ, ಮರಗಾಲು ಕುಣಿತ ಮುಂತಾದ ಪ್ರಕಾರದಲ್ಲಿ ಕುಣಿಯುತ್ತಾರೆ. ಇದನ್ನು ಜಾನಪದ ಕಲೆಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಹಳ್ಳಿಗಳಲ್ಲಿ ಈ ಕುಣಿತಕ್ಕೆ ಅಲಾಯಿ ಹೆಜ್ಜೆ ಕುಣಿತ ಎಂದು ಕರೆಯಲಾಗುತ್ತದೆ.


ಕರ್ನಾಟಕದಲ್ಲಿ ಮೊಹರಂ ಎಲ್ಲೆಲ್ಲಿ ಜನಪ್ರಿಯ
ಕರ್ನಾಟಕ ರಾಜ್ಯದ ರಾಯಚೂರ ಜಿಲ್ಲೆಯ ಮುದಗಲ್ಲ ಗ್ರಾಮದಲ್ಲಿ ಮೊಹರಂ ಆಚರಣೆಯಲ್ಲಿ ಮುಸ್ಲಿಮೇತರರೇ ಹೆಚ್ಚಾಗಿ ಭಾಗವಹಿಸುತ್ತಾರೆ. ಹರಕೆ ಹೊತ್ತ ಹಿಂದೂ- ಮುಸ್ಲಿಮರು ಹುಲಿ ವೇಷ, ಅಳ್ಳಳ್ಳಿ ಬಪ್ಪಾ ವೇಷ ಹಾಕಿ ಕುಣಿದು ಕುಪ್ಪಳಿಸುತ್ತಾರೆ. ಕಂದೂರಿ ಮಾಡಿ ಎಡೆ ನೀಡಿ ಮನಸ್ಸಿಗೆ ನೆಮ್ಮದಿ
ತಂದುಕೊಳ್ಳುತ್ತಾರೆ. ದೀರ್ಘ ದಂಡ ನಮಸ್ಕಾರ ಹಾಕಿ ಧನ್ಯರಾಗುತ್ತಾರೆ. ಹತ್ತನೆಯ ದಿನ ಹೊರಡುವ ಕಾಸೀಮ ಅಲಂ ಮತ್ತು ಹಸನ ಅಲಂ ಒಂದಕ್ಕೊಂದು ಭೇಟಿಯಾದಾಗ ನೆರೆದ ಜನ ಸಾಮೂಹ ತೇರಿನ ಮೇಲೆ ಹಣ್ಣುಕಾಯಿ ಎಸೆಯುವಂತೆ ಸೂರ ಮಾಡಿ ಭಯ ಭಕ್ತಿಯಿಂದ ಕೈಮುಗಿದು ತೃಪ್ತರಾಗುತ್ತಾರೆ. ಹಿಂದುಗಳ ಜಾತ್ರೆಯ ಸಂಭ್ರಮವನ್ನು ನೆನಪಿಸುವ ಮುದಗಲ್ಲ ಮೊಹರಂ ಪ್ರಚಲಿತವಾಗಿದೆ.

ಹೊಸಪೇಟೆಯ ರಾಮುಲಸ್ವಾಮಿ
ಇಂದಿಗೂ ಸರ್ವರ ಇಷ್ಟಾರ್ಥಗಳನ್ನು ಪೂರೈಸುವ ಪುಣ್ಯಕ್ಷೇತ್ರೋತ್ಸವವೆಂದೇ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಕೂಡಿಸುವ ಮೌಲಾಲಿ ಅಲಮ್ ಗಳಿಗೆ ಹಿಂದೂ ಮುಸ್ಲಿಮರು ರಾಮುಲಸ್ವಾಮಿ ಎಂದೇ ಕರೆಯುತ್ತಾರೆ. ಒಂಬತ್ತನೆಯ ದಿನ ರಾತ್ರಿ ಎಡೆ ಕೊಡುವಾಗ ಉಪ್ಪನ್ನು ಒಯ್ದು ಅಲಾವಿಯಲ್ಲಿ ಚೆಲ್ಲಿ ಹುರುಕು ಕಜ್ಜಿಗಳನ್ನು ವಾಸಿ ಮಾಡಿಕೊಳ್ಳುತ್ತಾರೆ.

ಕೋಲಾರ ನಾಗಸಂದ್ರದ ಬಾಬಯ್ಯ ಹಬ್ಬ
ಕೋಲಾರ ಜಿಲ್ಲೆಯ ನಾಗಸಂದ್ರದ ಮೊಹರಂ ಬಾಬಯ್ಯನ ಹಬ್ಬವೆಂದೇ ಪ್ರಸಿದ್ದಿ ಪಡೆದಿದೆ. ಧಾರವಾಡ ಜಿಲ್ಲೆಯ ಯರಗುಪ್ಪಿ ಗ್ರಾಮದ ಮೊಹರಂ ಸುತ್ತ ಹತ್ತು ಹಳ್ಳಿಗಳಲ್ಲಿ ಮೊಹರಂ ಜಾತ್ರೆಯೆಂದೇ ಹೆಸರಾಗಿದೆ. ಊರಿನ ಹಿಂದೂ- ಮುಸ್ಲಿಮರು ವಿಶೇಷವಾಗಿ ಬ್ರಾಹ್ಮಣರು ತಮ್ಮ ಶಕ್ತಾನುಸಾರ ದೇವರ ಚಾಕರಿ ಮಾಡುತ್ತಾರೆ. ಹರಕೆ ತೀರಿಸುತ್ತಾರೆ.

ಬೆಟಗೇರಿಯ ಜನಪ್ರಿಯ ಮೊಹರಂ ಮೆರವಣಿಗೆ
ಗದಗ ಬೆಟಗೇರಿಯಲ್ಲಿ ನಡೆಯುವ ಮೊಹರಂ ಮೆರವಣಿಗೆಯಲ್ಲಿ ಹಿಂದೂ- ಮುಸ್ಲಿಂ ಭಕ್ತರು ಪಾಲ್ಗೊಂಡು ಮೈ ತುಂಬಿದ ದೇವರಿಂದ ಮಳೆ ಬೆಳೆ ಕುರಿತು ಹೇಳಿಕೆ- ಕೇಳಿಕೆ ಮಾಡುತ್ತಾರೆ. ಸೊಟಕನ ಹಾಳದ ಡೋಲಿ ಮತ್ತು ಕೈ ದೇವರು ದ್ಯಾಮವ್ವನ ಗುಡಿಗೆ ಭೇಟಿಯಿತ್ತಾಗ ಊರ ಜನ ಇಮಾಮ ಹುಸೇನರು ತಂಗಿ ದ್ಯಾಮವ್ವನ ದರ್ಶನಕ್ಕೆ ಬಂದಿದ್ದಾರೆಂದೇ ತಿಳಿಯುತ್ತಾರೆ.

ಅಲಾವಿ ಹೆಜ್ಜೆ ಕುಣಿತ ಆಚರಣೆ ಹಿನ್ನೆಲೆ

ಆವಾಲಾ ಎಂಬ ಅರಬ್ಬಿ ಶಬ್ದದಿಂದ ಅಲಾವಿ ಪದ ಹುಟ್ಟಿದೆ. ಆವಾಲಾ ಎಂದರೆ ತಗ್ಗು ಅಥವಾ ಗುಂಡಿ ಎಂದರ್ಥ. ಆವಾಲಾ ಅಲಾವಿಯಾಗಿದೆ. ಅಲಾವಿಗೂ ಮೂಲ ಮೊಹರಂ ಆಚರಣೆಗೂ ಸಂಬಂಧವಿದೆ. ಕ್ರಿ.ಶ. 680ರಲ್ಲಿ ಕರ್ಬಲಾ ಮರುಭೂಮಿಯಲ್ಲಿ ಹುಸೇನ ಮತ್ತು ಯಜೀದನ ಅನುಯಾಯಿಗಳ ಮಧ್ಯೆ ನಡೆದ ಯುದ್ಧದಲ್ಲಿ ಹುಸೇನರು ತಮ್ಮ ವೈರಿಗಳ ಆಕ್ರಮಣಕ್ಕೆ ಒಂದು ಬಗೆಯ ತಡೆಯುಂಟು ಮಾಡಲು ತಾವಿದ್ದ ಗುಡಿಸಲುಗಳ ಸುತ್ತ ತಗ್ಗು ತೋಡಿದ್ದರು. ಅದರ ಸಂಕೇತವಾಗಿ ಮೊಹರಂ ಆಚರಣೆಯ ಸಂದರ್ಭದಲ್ಲಿ ಅಶೋರ ಖಾನೆ ಎದುರು ಆಳವಾದ ತಗ್ಗು ತೋಡುತ್ತಾರೆ. ಇದೇ ಆಲಾವಿ. ಮೊಹರಂ ತಿಂಗಳ ಒಂಬತ್ತನೆಯ ರಾತ್ರಿ ಅಲಾವಿಯಲ್ಲಿ ಕಟ್ಟಿಗೆ ಹಾಕಿ ಅಗ್ನಿ ಹೊತ್ತಿಸುತ್ತಾರೆ. ಮೊಹರಂ ಘಟನೆಗೆ ಸಂಬಂಧಿಸಿದ ಪದಗಳನ್ನು ಹೇಳುತ್ತ ಅದರ ಸುತ್ತ ತಿರುಗುತ್ತಾರೆ. ಈ ಪದಗಳನ್ನು ಅಲಾವಿ ಪದಗಳೆಂದು ಕರೆಯುತ್ತಾರೆ. ಕೆಲ ಊರುಗಳಲ್ಲಿ ಹೆಜ್ಜೆ ಹಾಕುತ್ತ ಸುತ್ತುತ್ತಾರೆ. ಇದಕ್ಕೆ ಅಲಾವಿ ಹೆಜ್ಜೆ ಕುಣಿತವೆನ್ನುತ್ತಾರೆ. (ಕೃಪೆ: ಮೊಹರಂ ಪದಗಳು-ಡಾ.ದಸ್ತಗೀರ್ ಅಲ್ಲೀಭಾಯಿ)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ