ಆ್ಯಪ್ನಗರ

ಸ್ವರ್ಣಗೌರಿ ವ್ರತ

ಯಾವುದೇ ವ್ರತ, ಪೂಜೆಗಳನ್ನು ವಿಘ್ನನಿವಾರಕ ಗಣೇಶನ ಸ್ತುತಿಯೊಂದಿಗೆ ಮಾಡುವ ಪದ್ಧತಿಯಿದೆ.

Vijaya Karnataka 31 Aug 2019, 12:00 am
ಯಾವುದೇ ವ್ರತ, ಪೂಜೆಗಳನ್ನು ವಿಘ್ನನಿವಾರಕ ಗಣೇಶನ ಸ್ತುತಿಯೊಂದಿಗೆ ಮಾಡುವ ಪದ್ಧತಿಯಿದೆ. ಅಂತೆಯೇ ಗೌರಿ ಪೂಜೆಯ ಆರಂಭವೂ ಮಹಾಗಣಪತಿಯ ಪಂಚೋಪಚಾರ ಪೂಜೆಯಿಂದಲೇ ಪ್ರಾರಂಭವಾಗುತ್ತದೆ. ನಂತರ ಪೂಜಾ ಕ್ರಮದಲ್ಲಿ ಪೀಠ ಪೂಜೆ, ಅಷ್ಟದಿಕ್ಪಾಲಕರ ಪೂಜೆ, ಮಂಟಪ ಪೂಜೆ ಸಾಮಾನ್ಯವಾದರೂ ಉಳಿದಂತೆ ವ್ರತ ವಿಧಾನಗಳಲ್ಲಿ ಸ್ವಲ್ಪ ಬದಲಾವಣೆಯಿದೆ. ವರಮಹಾಲಕ್ಷ್ಮಿ ವ್ರತದಲ್ಲಿ ಯಮುನಾ ಪೂಜೆ ಮುಖ್ಯಭಾಗವಾದರೆ ಭಾದ್ರಪದ ಮಾಸ ಶುದ್ಧ ತದಿಗೆಯಂದು ಮಾಡುವ ವ್ರತವೇ ಸ್ವರ್ಣಗೌರಿ.
Vijaya Karnataka Web gowri pooja

ಈ ವ್ರತದಲ್ಲಿ ಮನೆಯ ಮಗಳಂತೆ ಕಂಗೊಳಿಸುವ ಗೌರಮ್ಮನಿಗೆ ಸೋಬಲಕ್ಕಿ ಇಡುವುದು, ಮುತ್ತೈದೆಗೆ ಬಾಗಿನ ಕೊಡುವುದಕ್ಕೇ ಹೆಚ್ಚು ಆದ್ಯತೆ. ದೇವಿಗೆ ಸಮರ್ಪಿಸುವ ಗೆಜ್ಜೆ ವಸ್ತ್ರದ ಸಂಖ್ಯೆಯಲ್ಲೂ ವೈವಿಧ್ಯತೆಯಿದೆ. ಪ್ರತಿಯೊಂದು ವ್ರತಕ್ಕೂ ಇಂತದ್ದೇ ಭಕ್ಷ್ಯ ಭೋಜ್ಯಗಳು ನಿವೇದನೆಯಾಗಬೇಕೆಂದು ಹೇಳುತ್ತಾರೆ. ಸ್ವರ್ಣಗೌರಿಗೆ 16 ಎಳೆಯ ಗೆಜ್ಜೆವಸ್ತ್ರ ಸಮರ್ಪಣೆಯಾದರೆ, ನೈವೇದ್ಯಕ್ಕೆ ಒಬ್ಬಟ್ಟು ಹಾಲು ತುಪ್ಪ, ತಂಬಿಟ್ಟು ಇರಲೇ ಬೇಕು.
ಮೊದಲಿಗೆ ಕಂಕಣ ಪೂಜೆ. ಕಂಕಣವೆಂದರೆ ಸುಮಂಗಲಿಯರು ಕೈಗೆ ಕಟ್ಟಿಕೊಳ್ಳುವ ಅರಿಶಿನದ ದಾರ. ಇದೂ ಸಹ ಹದಿನಾರು ಎಳೆಯದ್ದೇ ಆಗಿರಬೇಕು. ಹದಿನಾರು ಎಳೆಗಳನ್ನು ಜತೆಗೂಡಿಸಿ ಹದಿನಾರು ಗಂಟುಗಳನ್ನು ಹಾಕಿ ತಯಾರಿಸಿದ್ದೇ ಕಂಕಣ. ಕಂಕಣದ ಮಧ್ಯದ ಗಂಟಿನಲ್ಲಿ ಹೂವು ಮನೋವಿಕಸನದ ಸಂಕೇತ. ಮೊದಲಿಗೆ ಸಂಕಲ್ಪ ಸಿದ್ಧಿಯಾಗಲೆಂದು ಮಾಡುವುದೇ ದೋರಗ್ರಂಥಿ ಪೂಜೆ. ಪ್ರತಿಯೊಂದು ವ್ರತವೂ ಉಪಾಯನ ದಾನವಿಲ್ಲದೇ ಸಮರ್ಪಣೆಯಾಗುವುದಿಲ್ಲ. ಉಪಾಯನ ದಾನವೆಂದರೆ ತಾನು ಮಾಡಿದ ಪೂಜೆ ಸಂಪನ್ನವಾಗಲಿ ಎಂದು ತ್ಯಾಗಮನೋಭಾವದಿಂದ ಕೊಡುವ ದಾನ. ವ್ರತಾಚರಣೆಯ ನಂತರ ಮುತ್ತೈದೆಯರನ್ನು ಉಪಚರಿಸಬೇಕು. ನಂತರ ವ್ರತಕಥೆಯನ್ನು ಓದಬೇಕು ಎನ್ನುತ್ತದೆ ಸ್ಕಾಂದ ಪುರಾಣ. ಸ್ಕಾಂದ ಪುರಾಣದ ಪ್ರಕಾರ ಸ್ವರ್ಣಗೌರೀ ವ್ರತವನ್ನು ಮಾಡುವ ಸ್ತ್ರೀಯರಿಗೆ ಸಮಸ್ತ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ. ಪುತ್ರಪೌತ್ರಾಭಿವೃದ್ಧಿಯೂ, ಮೋಕ್ಷವೂ ಪ್ರಾಪ್ತಿಯಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ