ಆ್ಯಪ್ನಗರ

ನಾನೆಂಬ ಅಹಂಕಾರಕ್ಕೆ ಉಳಿವಿಲ್ಲ

ಆತ್ಮ ವಿಶ್ವಾಸ ಮತ್ತು ಅಹಂಕಾರಕ್ಕೆ ಹೆಚ್ಚಿನ ವ್ಯತ್ಯಾಸವಿಲ್ಲ. ಆತ್ಮವಿಶ್ವಾಸ ನಾನು ಮಾಡಬಲ್ಲೆ ಎನ್ನುತ್ತದೆ, ಅಹಂಕಾರ ನನಗೊಬ್ಬನಿಗೇ ಸಾಧ್ಯ ಎನ್ನುತ್ತದೆ. ಆದರೆ, ಎರಡು ಪದಗಳ ನಡುವೆ ಅಗಾಧವಾದ ಅಂತರವಿದೆ. ಗೆಲುವು ಮತ್ತು ಸೋಲಿನ ಮೆಟ್ಟಿಲುಗಳು ಇವೆ.

Vijaya Karnataka 15 Jun 2019, 12:00 am
* ಕೃಷ್ಣ ಭಟ್‌ ಅಳದಂಗಡಿ
Vijaya Karnataka Web ego




ರಾವಣ ಪರಮ ಧರ್ಮಭೀರು. ಸರ್ವ ವೇದ ಪಾರಂಗತ. ಶಿವನನ್ನೇ ಒಲಿಸಿಕೊಂಡ ಭಕ್ತಶ್ರೇಷ್ಠ. ಸಮರದಲ್ಲಿ ಸರ್ವರನ್ನೂ ಗೆಲ್ಲಬಲ್ಲ ಶಕ್ತಿಶಾಲಿ. ಬ್ರಾಹ್ಮಣ್ಯದ ಶಕ್ತಿಯ ಜತೆ ಕ್ಷಾತ್ರ ತೇಜವನ್ನೂ ಕಣಕಣದಲ್ಲಿ ತುಂಬಿಕೊಂಡವನು ದಶಕಂಠ. ಅಷ್ಟಾದರೂ ಅವನು ಜಗತ್ತಿನಲ್ಲಿ ಒಬ್ಬ ಖಳನಾಯಕನಾಗಿ ಗುರುತಿಸಿಕೊಂಡ.

ಶ್ರೀಕೃಷ್ಣ ಒಬ್ಬ ಸಾಮಾನ್ಯ ಗೋವಳ. ಬಾಲ್ಯದಿಂದಲೂ ಸಾವನ್ನು ಎದುರಿಸುತ್ತಲೇ ಬೆಳೆದು ನಿಂತವನು. ಅವನಿಗೊಂದು ರಾಜ್ಯವಿಲ್ಲ. ಸೈನ್ಯ ಬಲವಿಲ್ಲ. ಹೆಣ್ಣು ಮಕ್ಕಳ ಸಲಿಗೆಕೋರ ಎಂದೇ ಕರೆಸಿಕೊಂಡವನು. ಆದರೆ, ಪ್ರಪಂಚಕ್ಕೆ ಶ್ರೀಕೃಷ್ಣ ಸರ್ವ ಕಾಲಕ್ಕೂ ಹೀರೊ. ಅವನ ಸರ್ವ ಗುಣಗಳಲ್ಲೂ ಒಳಿತನ್ನೇ ಹುಡುಕುತ್ತಾರೆ ಜನ.

ರಾವಣ ಹಂಗ್ಯಾಕಾದ? ಕೃಷ್ಣ ಹಿಂಗ್ಯಾಕಾದ?

ಇವರ ನಡುವಿನ ಅಂತರ ಅಹಂಕಾರ!

ರಾವಣನಿಗೆ ತನ್ನ ಸಾಮರ್ಥ್ಯ‌ದ ಬಗ್ಗೆ ಇದ್ದ ಅಹಂಕಾರವೇ ಅವನಿಗೆ ಮುಳುವಾಯಿತು. ಭಕ್ತಿಯ ಶಕ್ತಿಯಿಂದ ಕೈಲಾಸದಿಂದ ಶಿವನ ಆತ್ಮಲಿಂಗವನ್ನು ತಂದಿದ್ದು ಹೌದಾದರೂ ಅದರ ಹಿಂದಿದ್ದದ್ದು ಏನು ಬೇಕಾದರೂ ಮಾಡಬಲ್ಲೆ ಎಂಬ ದುರಂಹಾರ. ರಾಮನ ಮಡದಿ ಸೀತೆಯನ್ನು ಅಪಹರಿಸುವಲ್ಲೂ ಅವನ ಮತಿಗೆ ಅಡ್ಡಲಾಗಿ ನಿಂತದ್ದು ಯಾರನ್ನು ಬೇಕಾದರೂ ತಡವಿಕೊಳ್ಳಬಲ್ಲೆ, ಕೆಡವಬಲ್ಲೆ ಎಂಬ ಅಹಂ. ಅದಕ್ಕೆ ಪ್ರತಿಫಲ ಸಿಕ್ಕಿದ್ದು ರಣರಂಗದಲ್ಲಿ ಮತ್ತು ಇತಿಹಾಸದ ಪುಟಗಳಲ್ಲಿ.

ಕೃಷ್ಣನಿಗೆ ತಾನು ದೈವಾಂಶ ಸಂಭೂತ ಎನ್ನುವುದು ಗೊತ್ತಿತ್ತೋ ಇಲ್ಲವೋ, ಆದರೆ, ಸಕಲ ಶಕ್ತಿ ಸಾಮರ್ಥ್ಯ‌ಗಳನ್ನು ಆತ ಬಾಲ್ಯದಲ್ಲೇ ತೋರಿಸಿಕೊಂಡಿದ್ದ. ಮಾವ ಕಂಸನನ್ನು, ಮಗಧದ ಮಾಗಧನನ್ನು ಕೊಂದು ಕೆಡವಿದ ಕೃಷ್ಣನ ತಾಕತ್ತು ಸರ್ವವಿದಿತ. ಆದರೆ, ಮುಂದಿನ ಯಾವ ಕಾಲದಲ್ಲೂ ಕೃಷ್ಣ ಅದನ್ನು ಅಹಂಕಾರವಾಗಿ ಪರಿವರ್ತಿಸಿಕೊಳ್ಳಲಿಲ್ಲ. ಗೆದ್ದ ಸಾಮ್ರಾಜ್ಯಗಳನ್ನೂ ಬಿಟ್ಟುಕೊಟ್ಟು ಕಿಂಗ್‌ ಮೇಕರ್‌ ಆದ.

ಇತಿಹಾಸ, ಪುರಾಣ, ಭಗವದ್ಗೀತೆ.. ಯಾವುದನ್ನು ನೋಡಿದರೂ ಅಹಂಕಾರಕ್ಕೆ ಬದುಕಿಲ್ಲ ಎನ್ನುವುದನ್ನೇ ಸಾರುತ್ತದೆ.

ಹಾಗಿದ್ದರೆ, ಅಹಂ ಯಾಕೆ ಅಷ್ಟೊಂದು ಅಪಾಯಕಾರಿ?

ನಿಜವಾಗಿ ಅಹಂಕಾರ ಕೆಟ್ಟದಲ್ಲ. ಪ್ರತಿಯೊಬ್ಬರಿಗೂ ತಮ್ಮ ತಮ್ಮ ಶಕ್ತಿ, ಸಾಮರ್ಥ್ಯ‌ಗಳ ಮೇಲೆ ನಂಬಿಕೆ ಇದ್ದಾಗಲೇ ಬದುಕಿನಲ್ಲಿ ಸಾಧನೆ ಮಾಡಲು ಸಾಧ್ಯವಾಗುವುದು. 'ನಾನಿದನ್ನು ಮಾಡಬಲ್ಲೆ' ಎಂದು ಅನಿಸಿದಾಗಲೇ ಅವನೊಳಗಿನ ಸ್ಫೂರ್ತಿ ಉಕ್ಕುವುದು. ಆದರೆ, ಈ ಅಹಂನಲ್ಲಿ ಸಾತ್ವಿಕ ಮತ್ತು ದುರಹಂಕಾರ ಎನ್ನುವ ವ್ಯತ್ಯಾಸವಿದೆ.

ಸಾತ್ವಿಕವಾದ ಅಹಂನ್ನು ನಾವು ಆತ್ಮವಿಶ್ವಾಸ ಎಂದು ಹೇಳಬಹುದೇನೊ? ನಾನು ಮಾಡಬಲ್ಲೆ ಎನ್ನುವುದು ಆತ್ಮವಿಶ್ವಾಸ. ಆದರೆ, ನಾನು ಮಾತ್ರ ಮಾಡಬಲ್ಲೆ ಎನ್ನುವುದು, ನಾನು ಏನು ಬೇಕಾದರೂ ಮಾಡಬಲ್ಲೆ ಎನ್ನುವುದು ದುರಹಂಕಾರವಾಗುತ್ತದೆ.

ಆತ್ಮವಿಶ್ವಾಸ ನಮ್ಮ ಆಂತರ್ಯದ ದರ್ಶನ. ನಾನು ಏನು ಮಾಡಬಲ್ಲೆ, ನನ್ನ ಶಕ್ತಿಯೇನು ಎನ್ನುವುದರ ಅರಿವು. ನನಗೇನು ತಿಳಿದಿದೆ, ಏನನ್ನು ಸಾಧಿಸಬಹುದು ಎನ್ನುವ ಆತ್ಮಿಕ ತಿಳುವಳಿಕೆಯದು. ಅಹಂಕಾರ ನಮ್ಮನ್ನು ಬೇರೆಯವರ ಜತೆ ಹೋಲಿಕೆ ಮಾಡುತ್ತದೆ. 'ನಾನು ಅವನಿಗಿಂತ ಶಕ್ತಿಶಾಲಿ, ಅವನಿಗಿಂತ ಹೆಚ್ಚು ಅಂಕ ತೆಗೆಯಬಲ್ಲೆ, ಅವನನ್ನು ಸೋಲಿಸಬಲ್ಲೆ' ಎಂಬ ತಾಮಸಿಕ ನಿಲುವದು. ಅಪಾಯಕಾರಿಯಾಗಿರುವುದು ಎರಡನೆಯದು. ಅಹಂನ ಜತೆಗೆ ಮಮತೆ ಇದ್ದರೆ ಅದು ಸತ್‌ ಅನಿಸಿಕೊಳ್ಳುತ್ತದೆ. ಅಹಂನ ಜತೆ ದ್ವೇಷ ಸೇರಿದರೆ ಅದು ದಾಷ್ಟ್ರ್ಯವಾಗುತ್ತದೆ.

ಅಹಂಕಾರದ ಪ್ರಭಾವವೇನು?

ನಾನೆಂಬ ಅಹಂಕಾರ ತಲೆದೋರಿದಲ್ಲಿ

ಅಟಮಟ ಕುಟಿಲ ಕುಹಕವೆಂಬ ಬಿರುಗಾಳಿ ಹುಟ್ಟಿತು

ಆ ಬಿರುಗಾಳಿ ಹುಟ್ಟಲೊಡನೆ ಜ್ಞಾನಜ್ಯೋತಿ ಕೆಟ್ಟಿತು

ಜ್ಞಾನಜ್ಯೋಗಿ ಕೆಡಲೊಡನೆ ನಾಬಲ್ಲೆ

-ಬಲ್ಲಿದರೆಂಬ ಅರುಹಿರಿಯರೆಲ್ಲರು ತಾಮಸಕ್ಕೊಳಗಾಗಿ

ಸೀಮೆದಪ್ಪಿ ಕೆಟ್ಟರು ಕಾಣಾ ಗುಹೇಶ್ವರಾ

- ಇದು ಅಲ್ಲಮ ಪ್ರಭುಗಳು ಕೊಟ್ಟ ಸಮರ್ಥ ವಿವರಣೆ.

ಅಹಂಕಾರ ತಲೆಗೇರಿದರೆ ಬುದ್ಧಿ ಕೈಕೊಡುತ್ತದೆ, ಜ್ಞಾನಜ್ಯೋತಿ ಆರುತ್ತದೆ. ಆಗ ಹಿರಿಯರು-ಕಿರಿಯರು ಎನ್ನುವ ಪ್ರಜ್ಞೆಯೇ ಕಳೆದುಹೋಗಿ, ಮೇರೆಗಳನ್ನು ಮೀರುತ್ತದೆ. ಇದಕ್ಕೆ ಸಾಮಾಜಿಕವಾಗಿ ನಾನಾ ಉದಾಹರಣೆಗಳು ಕಾಲ ಕಾಲಕ್ಕೆ ಕಾಣಿಸಿಕೊಳ್ಳುತ್ತವೆ.

ಅಚ್ಚರಿ ಎಂದರೆ ಪ್ರತಿಯೊಬ್ಬರಿಗೂ ಅಹಂಕಾರ ಒಳ್ಳೆಯದಲ್ಲ ಎನ್ನುವುದು ಗೊತ್ತಿರುತ್ತದೆ. ಅದರ ಫಲಾಫಲಗಳನ್ನು ಸೋದಾಹರಣವಾಗಿ ಕಾಲ ತೋರಿಸಿರುತ್ತದೆ. ಆದರೆ, ಜನ ಅವರ ಅರಿವಿಗೇ ಬಾರದಂತೆ ಅಹಂಕಾರಿಗಳಾಗುತ್ತಾರೆ.

ಹಾಗಿದ್ದರೆ ಮೆಟ್ಟಿ ನಿಲ್ಲುವುದು ಹೇಗೆ?

ನಾನು ನಾನು ಎಂದು ಮೆರೆಯಬೇಡ ಮೂಢ

ನಾನು ಎಂಬುದು ಮಣ್ಣು, ಮರೆತುಹೋಗಬೇಡ

ದ್ವೇಷವೆಂಬ ವಿಷವ ಸುರಿಯಬೇಡ ಮೂಢ

ಪ್ರೀತಿ ಅಮೃತವ ಒಮ್ಮೆ ಸವಿದು ನೋಡ

ರಿಷಿ ಎಂಬವರು ಬರೆದ ಒಳಿತು ಮಾಡು ಮನುಷ ಎಂಬ ಹಾಡಿನ ಸಾಲುಗಳಲ್ಲಿ ಅಹಂನ ವ್ಯರ್ಥತೆ ಸ್ಪಷ್ಟವಾಗಿದೆ. ನಾನು ನನ್ನದು, ನನ್ನಿಂದಲೇ ಎಲ್ಲ ಎನ್ನುವ ಅಹಂಕಾರವನ್ನು ಮರೆಯಲು ಭೇಕಾಗಿರುವುದು ಜಾಗತಿಕ ಪ್ರಜ್ಞೆ. ನಾನು ಇಲ್ಲದೆಯೇ ಜಗತ್ತು ಇರುತ್ತದೆ ಎನ್ನುವುದರ ಅರಿವು. ಅದಕ್ಕಿಂತಲೂ ಹೆಚ್ಚಾಗಿ ಈ ಮಹಾನ್‌ ಬ್ರಹ್ಮಾಂಡದಲ್ಲಿ ನಾನೊಂದು ತೃಣ ಎನ್ನುವ ಸತ್ಯದ ತಿಳಿವು. ದೇವರೋ, ಪ್ರಕೃತಿಯೋ, ದಿವ್ಯಶಕ್ತಿಯೋ ಒಂದು ಈ ಜಗತ್ತನ್ನು ಪೊರೆಯುತ್ತದೆ, ಅದನ್ನು ಮರೆತರೆ ನಾನು ಏನೂ ಅಲ್ಲ ಎನ್ನುವ ದರ್ಶನವಿದ್ದರೆ ಅಹಂಕಾರಕ್ಕೆ ಎಡೆಯಿರುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ