ಆ್ಯಪ್ನಗರ

ಅರಣ್ಯ ಇಲಾಖೆಯ ವಶಕ್ಕೆ ಉತ್ತರಕ್ರಿಯೆ ಕಾಗೆ

ಮೂರು ತಿಂಗಳಿಂದ ಕಾಗೆಯನ್ನುಸಾಕಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಾಪು ಮೂಲದ ಕಾಗೆಯ ಮಾಲೀಕ ಪ್ರಶಾಂತ್‌ ಪೂಜಾರಿಗೆ ಅರಣ್ಯಾಧಿಕಾರಿಗಳು ಶಾಕ್‌ ಕೊಟ್ಟಿದ್ದಾರೆ.

Vijaya Karnataka 19 Jul 2019, 2:49 pm
ಕಟಪಾಡಿ: ಉತ್ತರ ಕ್ರಿಯೆಯಲ್ಲಿ ಸ್ವರ್ಗಸ್ಥರಾದವರಿಗೆಂದು ಬಲಿ ಬಾಳೆಯಲ್ಲಿಡುವ ಅನ್ನವನ್ನು ತಿನ್ನಲು ಕಾಗೆ ಇಲ್ಲವೇ?, ಸಂಪರ್ಕಿಸಿ ಎಂಬ ಫೇಸ್‌ಬುಕ್‌ ಪೋಸ್ಟ್‌ ಮೂಲಕ ಸುದ್ದಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಾಪು ಮೂಲದ ಕಾಗೆಯ ಮಾಲೀಕ ಪ್ರಶಾಂತ್‌ ಪೂಜಾರಿಗೆ ಅರಣ್ಯಾಧಿಕಾರಿಗಳು ಶಾಕ್‌ ಕೊಟ್ಟಿದ್ದಾರೆ.
Vijaya Karnataka Web Crow


ಮೂರು ತಿಂಗಳಿಂದ ಸಾಕಿದ್ದ ಕಾಗೆಯನ್ನು ಕಾಪು ವಲಯ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲಧಿಕಾರಿಗಳ ಆದೇಶದ ಮೇರೆಗೆ ಬಿಡಿಸಿಕೊಂಡು ದೂರದ ಶಿರ್ವ ಪಿಲಾರು ಕಾಡಿಗೆ ಬಿಟ್ಟು ಬಂದಿದ್ದಾರೆ. ಕಾಗೆಯಿಂದಲೇ ದಿನ ಬೆಳಗಾಗುವಷ್ಟರಲ್ಲಿ ಫೇಮಸ್‌ ಆಗಿದ್ದ ಕಾಗೆ ಮಾಲೀಕ, ಈಗ ಅದೇ ಥಂಡಾ ಹೊಡೆದು ಕುಳಿತಿದ್ದಾರೆ.

ತಮ್ಮಲ್ಲಿ ತರಬೇತಿ ನೀಡಿರುವ ಕಾಗೆ ಇದೆ. ಇದು ಶ್ರಾದ್ಧ ಕಾರ್ಯಕ್ರಮದಲ್ಲಿ ಸ್ವರ್ಗಸ್ಥರಾದವರಿಗೆ ಇಟ್ಟ ಅನ್ನ ತಿನ್ನುವ ಮೂಲಕ ಕ್ರಿಯೆ ಪೂರ್ಣಗೊಳಿಸಲು ಲಭ್ಯವಿದೆ ಎಂದು ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟ್‌ ವೈರಲ್‌ ಆಗಿದೆ. ಇದು ಸುದ್ದಿಯಾಗುತ್ತಲೇ ಕೆಲವು ವೆಬ್‌ಪೋರ್ಟ್‌ಗಳು ಮತ್ತು ಪತ್ರಿಕೆಗಳು ವರದಿ ಪ್ರಕಟಿಸಿ ಮತ್ತಷ್ಟು ಕುತೂಹಲ ಮೂಡಿಸಿದವು.

ಈತ ಈಗಾಗಲೇ ಈ ಉದ್ಯಮ ಆರಂಭಿಸಿದ್ದಾಗಿಯೂ, ಭರ್ಜರಿ ವ್ಯಾಪಾರ ನಡೆಯುತ್ತಿರುವುದಾಗಿಯೂ ಸುದ್ದಿ ಹಬ್ಬಿತು. ಸಾಮಾಜಿಕ ಜಾಲತಾಣದ ಹುಚ್ಚು ಹೊಳೆಯಲ್ಲಿ ತಿರುವು ಪಡೆಯುತ್ತಾ ಸಾಗಿದ ಸುದ್ದಿ, ಒಂದು ಹಂತದಲ್ಲಿ ಕಾಗೆಯ ಮಾಲೀಕನು ಗಿರಾಕಿಗಳೊಡನೆ ಸಂಭಾಷಣೆ ನಡೆಸುವ ವಾಯ್ಸ್‌ ಪೋಸ್ಟ್‌ ಕೂಡ ಹರಿದಾಡಲು ಶುರುವಾಯಿತು. ಒಂದು ಶ್ರಾದ್ಧಕ್ಕೆ ಇಂತಿಷ್ಟು,, ಎರಡು ಇದ್ದರೆ ಇನ್ನೊಂದು ಫ್ರೀ ಎಂದು ಮಾಲೀಕ ವ್ಯವಹಾರ ಕುದುರಿಸುವ ಮಟ್ಟಿಗೆ ತಮಾಷೆ ಹಬ್ಬಿತು.

ಈ ಮಧ್ಯೆ ಪ್ರಾಣಿ ದಯಾ ಸಂಘಟನೆ ಕಾರ್ಯಕರ್ತರು ಕ್ಯಾತೆ ತೆಗೆದು ಅರಣ್ಯಾಧಿಕಾರಿಗಳಿಗೆ ಒತ್ತಡ ತಂದರು. ಇದೆಲ್ಲದರ ಪರಿಣಾಮ ವಲಯ ಅರಣ್ಯ ಸಂರಕ್ಷ ಣಾಧಿಕಾರಿ ಕ್ಲಿಪರ್ಡ್‌ ಲೋಬೋ ಅದೇಶದ ಮೇರೆಗೆ ಕಾಪು ಮತ್ತು ಪಡುಬಿದ್ರಿಯ ಅರಣ್ಯ ರಕ್ಷ ಕರಾದ ಮಂಜುನಾಥ್‌ ಮತ್ತು ಅಭಿಷೇಕ್‌ ಎಂಬುವರು ಮನೆಯ ಗೂಡಿನಲ್ಲಿ ಕೂಡಿ ಹಾಕಿಟ್ಟಿದ್ದ ಕಾಗೆಯನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಆದರೆ ಬಡಪಾಯಿ ಕಾಗೆ ಸಂರಕ್ಷಿತ ಪ್ರಾಣಿ ಪಕ್ಷಿಗಳ ಪಟ್ಟಿಯಲ್ಲಿ ಬರದಿರುವ ಕಾರಣ ಕಾಗೆ ಮಾಲೀಕ ಯಾವುದೇ ಕಾನೂನು ಪ್ರಕ್ರಿಯೆಗೆ ಒಳಪಡದೆ ಬಚಾವಾಗಿದ್ದಾರೆ.


ಮುಳುವಾದ ಕುತೂಹಲ

ವಾಸ್ತವದಲ್ಲಿ ಪ್ರಶಾಂತ್‌ ಪೂಜಾರಿ ಅವರು ಅಂತಹ ವ್ಯವಹಾರವೇನೂ ನಡೆಸಿಯೇ ಇರಲಿಲ್ಲ. ವೃತ್ತಿಯಲ್ಲಿ ಟೈಲರ್‌ ಆಗಿರುವ ಅವರ ಮನೆ ಬಳಿ ಮೂರು ತಿಂಗಳ ಹಿಂದೆ 3 ಕಾಗೆ ಮರಿಗಳು ಮರದಿಂದ ನೆಲಕ್ಕೆ ಬಿದ್ದಿದ್ದವು. ಅವುಗಳ ಪೈಕಿ ಎರಡು ಸತ್ತಿದ್ದು, ಒಂದನ್ನು ಈ ಯುವಕ ಜೋಪಾನವಾಗಿ ಸಾಕಿದ್ದ. ಈಗ ಶ್ರಾದ್ಧಕ್ಕೂ ಕಾಗೆ ಸಿಗುತ್ತಿಲ್ಲ, ಇದರ ಬಿಸ್ನೆಸ್‌ ಮಾಡಬಹುದು ಎಂದು ಯಾರೋ ತಮಾಷೆಗೆ ಹೇಳಿದ್ದಕ್ಕೆ ಈತ ಜನರ ಪ್ರತಿಕ್ರಿಯೆ ತಿಳಿಯುವ ಕುತೂಹಲಕ್ಕೆ ಪೋಸ್ಟ್‌ ಹಾಕಿದ್ದ ಅಷ್ಟೇ.

ಅಲ್ಲಿ ಇಲ್ಲಿ ವರದಿಯಾದಂತೆ ಈತ ಎಲ್ಲೂ ಇದನ್ನು ಶ್ರಾದ್ಧಕ್ಕೆ ಬಳಸಿಯೇ ಇಲ್ಲ. ವೈರಲ್‌ ಆದ ಈತನ ಪೋಸ್ಟ್‌ನ ಬೆನ್ನಿಗೆ ಯಾರೋ ಈತನೇ ವ್ಯವಹಾರದ ಬಗ್ಗೆ ಮಾತನಾಡುತ್ತಾ ದರ ನಿಗದಿಪಡಿಸುವಂತೆ ಬಿಂಬಿಸಿ ಧ್ವನಿಮುದ್ರಿಕೆಯನ್ನು ವೈರಲ್‌ ಮಾಡಿದ್ದು ಎಲ್ಲರ ಗಮನ ಸೆಳೆದ ಪರಿಣಾಮ ಈಗ ತಾವು ಸಾಕಿದ ಕಾಗೆಯನ್ನೂ ಕಳಕೊಳ್ಳುವಂತಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ