ಆ್ಯಪ್ನಗರ

ಬೆಳಧಡಿಯ ಶ್ರೀರಾಮ ಮಂದಿರ

ಸೆಪ್ಟೆಂಬರ್‌ 28, ಮಹಾಲಯ ಅಮಾವಾಸ್ಯೆ ಸದ್ಗುರು ಬ್ರಹ್ಮಾನಂದ ಮಹಾರಾಜರ 101ನೇ ವರ್ಷದ ಆರಾಧನೆಯ ಸಂದರ್ಭದಲ್ಲಿ ಸಾವಿರಾರು ಗುರು ಭಕ್ತರು ಬೆಳಧಡಿಯತ್ತ ಧಾವಿಸುತ್ತಿದ್ದಾರೆ...

Vijaya Karnataka 21 Sep 2019, 12:00 am
- ಸಮರ್ಥ ಎಂ. ಕಾಂತಾವರ
Vijaya Karnataka Web beladadi1


ಗದಗ ಪ್ರಮುಖ ದೇಗುಲಗಳ ಬೀಡು. ಗದುಗಿನ ವೀರನಾರಾಯಣ ಮತ್ತು ತ್ರಿಕೂಟೇಶ್ವರ ದೇಗುಲಗಳಿಗೆ ನೀಡುವ ಭೇಟಿ ಅತ್ಯಂತ ವಿಶಿಷ್ಠವೆನಿಸುತ್ತದೆ. ಅಂತೆಯೇ ಗಮನ ಸೆಳೆಯುವ ಮತ್ತೆರಡು ಪ್ರಮುಖ ಗುರುಸ್ಥಾನಗಳೆಂದರೆ ವೆಂಕಟಾಪುರ ಮತ್ತು ಬೆಳಧಡಿ. ಬೆಳಧಡಿ ಗದಗದಿಂದ 10 ಕಿ.ಮೀ. ದೂರದಲ್ಲಿದೆ.

ಬೆಳಧಡಿಯಲ್ಲಿ ಬ್ರಹ್ಮಾನಂದ ಮಹಾರಾಜರಿಂದ ನಿರ್ಮಿಸಲ್ಪಟ್ಟ ರಾಮ ಮಂದಿರ, ರಾಮತೀರ್ಥ ಹೆಸರುವಾಸಿ. ಇದೀಗ ಹೆಬ್ಬಳ್ಳಿ ಅವಧೂತರಿಂದ ಪುನರುತ್ಥಾನಗೊಳ್ಳುತ್ತಿದೆ. ರಾಮ ಮಂದಿರದ ಸಮೀಪದಲ್ಲೇ ಕರಿಯಮ್ಮನ ಗುಡಿಯಿದೆ. ಬ್ರಹ್ಮಾನಂದ ಮಹಾರಾಜರು ಈ ಸ್ಥಳವನ್ನೇ ತಮ್ಮ ಧ್ಯಾನ ಕುಟೀರ, ಸಾಧನಾ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು.

ರಾಮ ಮಂದಿರದಲ್ಲಿನಯನ ಮನೋಹರವಾದ ಶ್ರೀರಾಮ, ಸೀತಾ, ಲಕ್ಷ್ಮಣರ ವಿಗ್ರಹ ನೋಡುಗರ ಗಮನ ಸೆಳೆಯುತ್ತದೆ.ಯುಗಾದಿ ಮತ್ತು ರಾಮನವಮಿ ಆಚರಣೆ ವಿಶೇಷ.

ವೆಂಕಟಾಪುರ ಗದಗದಿಂದ 15 ಕಿ.ಮೀ. ದೂರದಲ್ಲಿದೆ. ಬೆಳದಡಿ ಮಹಾರಾಜರೆಂದೇ ಹೆಸರಾಗಿದ್ದ ಬ್ರಹ್ಮಾನಂದರಿಂದ ಪೂಜಿಸಲ್ಪಟ್ಟ ವೆಂಕಟೇಶ್ವರ ಸ್ವಾಮಿಯ ಆಲಯವಿಲ್ಲಿದೆ.

ವೆಂಕಟಾಪುರದ ವೆಂಕಟೇಶ್ವರ ಸ್ವಾಮಿಯ ಆಲಯವನ್ನು ಬೆಳಧಡಿ ಮಹಾರಾಜರ ತಪೋಭೂಮಿ ಎಂತಲೂ ಗುರುತಿಸಲಾಗುತ್ತದೆ. ಪ್ರಸ್ತುತ ಮಹಾರಾಜರು ಕುಳಿತುಕೊಳ್ಳುತ್ತಿದ್ದ ಧ್ಯಾನ ಮಂದಿರದಲ್ಲಿ ಮಹಾರಾಜರು ಧರಿಸುತ್ತಿದ್ದ ಪಾದುಕೆಗಳನ್ನು ಇಡಲಾಗಿದೆ.

ಯಾರೀ ಬ್ರಹ್ಮಾನಂದರು?

ಬ್ರಹ್ಮಾನಂದ ಮಹಾರಾಜರ ಪೂರ್ವನಾಮ ಅನಂತಶಾಸ್ತ್ರಿ. ಬಾದಾಮಿ ಬನಶಂಕರಿ ಸಮೀಪದ ಜಾಲಿಹಾಳದಲ್ಲಿ ಜನಿಸಿದರು. ಗೋಂದಾವಳಿ ಬ್ರಹ್ಮಚೈತನ್ಯ ಮಹಾರಾಜರ ಶಿಷ್ಯರು. ಗೋಂದಾವಳಿ ಮಹಾರಾಜರ ಸೂಚನೆಯಂತೆ ಬೆಳಧಡಿಯಲ್ಲಿ ಬಂದು ನೆಲೆಸಿದರು. ರಾಮ ಮಂದಿರ ಸ್ಥಾಪಿಸಿ ರಾಮ ನಾಮದ ಪ್ರಸಾರ ಮಾಡಲು ಶುರು ಮಾಡಿದರು. ಇವರ ಗುರುಭಕ್ತಿ ಎಷ್ಟಿತ್ತೆಂಬುದಕ್ಕೆ ನಿದರ್ಶನವೊಂದಿದೆ. ಒಮ್ಮೆ ಬ್ರಹ್ಮಚೈತನ್ಯ ಮಹಾರಾಜರು ಗೋಂದಾವಲೆ ಗ್ರಾಮದಿಂದ ಸ್ವಲ್ಪ ದೂರದಲ್ಲಿಹಳ್ಳಿಗೆ ಹೋಗಲು ತಯಾರಾದರು. ಮಹಾರಾಜರ ಜೊತೆಗೆ ದಾಮಲೆಯವರು, ಕೇತಕರ್‌ ಮಹಾರಾಜರು ಮತ್ತು ಬ್ರಹ್ಮಾನಂದ ಮಹಾರಾಜರು ಜೊತೆಯಲ್ಲಿದ್ದರು. ಬ್ರಹ್ಮಾನಂದರು ಬರಿಗಾಲಲ್ಲಿನಡೆದುಕೊಂಡು ಬರುವುದನ್ನು ಗಮನಿಸಿದ ಬ್ರಹ್ಮಚೈತನ್ಯರು ತಮ್ಮ ಪಾದುಕೆಗಳನ್ನು ಅವರತ್ತ ಎಸೆದು ಹಾಕಿಕೊಂಡು ಬರುವಂತೆ ಸೂಚಿಸಿದರು. ಆದರೆ ಬ್ರಹ್ಮಾನಂದರ ಆ ಪಾದುಕೆಗಳನ್ನು ತಲೆಯ ಮೇಲೆ ಹೊತ್ತು ನಡೆದರು. ಇದೇನು ನಿನ್ನ ವರ್ತನೆ ಎಂದು ಗುರುಗಳು ಕೇಳಿದಾಗ, ಗುರು ಕೊಟ್ಟಿದ್ದನ್ನು ತಲೆಯ ಮೇಲಿಟ್ಟುಕೊಂಡು ಕಾಪಾಡುವುದು ಶಿಷ್ಯನ ಧರ್ಮ ಎಂದು ಮರು ಉತ್ತರ ಕೊಟ್ಟರು. ಮುಂದೆ ಬ್ರಹ್ಮಾನಂದರು ಬೆಳಧಡಿಯಲ್ಲಿ ರಾಮ ಮಂದಿರ ಸ್ಥಾಪಿಸಿದ ನಂತರ ಗುರು ಪಾದುಕಾ ಮಂದಿರವನ್ನು ಪ್ರತಿಷ್ಠಾಪಿಸಿದರು. ಗುರು ಪಾದುಕಾ ಮಂದಿರದಲ್ಲಿಇಂದಿಗೂ ಬ್ರಹ್ಮಚೈತನ್ಯರು ನೀಡಿದ ಪಾದುಕೆಗಳನ್ನು ನೋಡಬಹುದು.

ಬ್ರಹ್ಮಾನಂದರು ಬೆಳಧಡಿಯಲ್ಲಿ ತೇರಾಕೋಟಿ ರಾಮ ನಾಮ ಜಪವನ್ನು ನಡೆಸಿದ್ದಾರೆ.ಲಿಂಗ, ಮತ ಬೇಧವಿಲ್ಲದೇ ಎಲ್ಲರಿಗೂ ರಾಮ ನಾಮ ಜಪದೀಕ್ಷೆ ಕೊಟ್ಟು ಸಲಹಿದ್ದಾರೆ. ಕರ್ನಾಟಕದಾದ್ಯಂತ ಅನೇಕ ಸ್ಥಳಗಳಲ್ಲಿ ಬ್ರಹ್ಮಚೈತನ್ಯ ಮಂದಿರವನ್ನು ಸ್ಥಾಪಿಸಿದ್ದಾರೆ. 1918ನೇ ಅಕ್ಟೋಬರ್‌ 4ರಂದು ತಮ್ಮ ದೇಹವನ್ನು ಕೃಷ್ಣಾ ನದಿಗೆ ಅರ್ಪಿಸಿದ್ದಾರೆ. ಇದೀಗ ಬ್ರಹ್ಮಾನಂದ ಮಹಾರಾಜರ 101ನೇ ವರ್ಷದ ಆರಾಧನಾ ಮಹೋತ್ಸವ ಮಹಾಲಯ ಅಮಾವಾಸ್ಯೆಯಂದು ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ