ಆ್ಯಪ್ನಗರ

ರಾಜ್ಯದಲ್ಲಿ ಚಿನ್ನದ ಮಾರಾಟ ಶೇ.80ರಷ್ಟು ಕುಸಿತ

ನೋಟುಗಳ ಅಮಾನ್ಯತೆ ಪರಿಣಾಮ ಚಿನ್ನದ ಆಭರಣಗಳ ಬೇಡಿಕೆ ಇಳಿಕೆಯಾಗಿದೆ. ಚೆಕ್‌ ಮತ್ತು ಆನ್‌ಲೈನ್‌ ಮೂಲಕ ಚಿನ್ನ ಖರೀದಿಗೆ ಕೆಲವು ಗ್ರಾಹಕರು ಆತಂಕ ಹೊಂದಿದ್ದು, ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಿದೆ.

Vijaya Karnataka Web 26 Nov 2016, 4:00 am

ಮದುವೆ ಸೀಸನ್‌ ಇದ್ದರೂ ಬಂಗಾರ ಕೇಳೋರು ಇಲ್ಲ | ಬಿಕೊ ಎನ್ನುತ್ತಿರುವ ಜ್ಯುವೆಲ್ಲರಿ ಶಾಪ್‌ಗಳು

* ನಟೇಶ್‌ ಬೆಂಗಳೂರು

ನೋಟುಗಳ ಅಮಾನ್ಯತೆ ಪರಿಣಾಮ ಚಿನ್ನದ ಆಭರಣಗಳ ಬೇಡಿಕೆ ಇಳಿಕೆಯಾಗಿದೆ. ಚೆಕ್‌ ಮತ್ತು ಆನ್‌ಲೈನ್‌ ಮೂಲಕ ಚಿನ್ನ ಖರೀದಿಗೆ ಕೆಲವು ಗ್ರಾಹಕರು ಆತಂಕ ಹೊಂದಿದ್ದು, ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಿದೆ.

ರಾಜ್ಯದಲ್ಲಿ ವಹಿವಾಟು ತೀವ್ರ ಕುಸಿತ ಕಂಡಿದೆ. ಕರ್ನಾಟಕ ಜ್ಯುವೆಲರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಟಿ.ಎ.ಶರವಣ ಪ್ರಕಾರ, ಮಾರಾಟ ಶೇ.80ರಷ್ಟು ಕುಸಿತವಾಗಿದೆ. ''ಮಾರಾಟವಿಲ್ಲದೇ ಉದ್ಯಮದಲ್ಲಿ ಬರದ ಛಾಯೆ ಉಂಟಾಗಿದೆ. ಉದ್ಯಮವನ್ನೇ ನಂಬಿದ್ದ ಲಕ್ಷಾಂತರ ಕೆಲಸಗಾರರು, ಕುಶಲ ಕರ್ಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೇರೆ ಉದ್ಯೋಗಗಳತ್ತ ಮುಖ ಮಾಡುತ್ತಿದ್ದಾರೆ,'' ಎಂದು ಕರ್ನಾಟಕ ಸ್ಟೇಟ್‌ ಜ್ಯುವೆಲ್ಲರಿ ಟ್ರೇಡರ್ಸ್‌ ಆಂಡ್‌ ವರ್ಕರ್ಸ್‌ ಅಸೋಸಿಯೇಷನ್‌ ಫೆಡರೇಷನ್‌ ಅಧ್ಯಕ್ಷ ಬಿ. ರಾಮಚಾರಿ ಹೇಳಿದ್ದಾರೆ.

500, 1000 ರೂ. ಹಳೆಯ ನೋಟುಗಳ ರದ್ಧತಿ ನಂತರ ಜನರ ಕೈಯಲ್ಲಿ ಹಣವಿಲ್ಲ. ''ಮದುವೆ ಸೀಸನ್‌ ಇದ್ದರೂ ಬಿಸಿನೆಸ್‌ ಆಗುತ್ತಿಲ್ಲ. ಅನಿವಾರ್ಯವಾಗಿ ಖರೀದಿ ಮಾಡಬೇಕಾದವರು ಮಾತ್ರ ಅಂಗಡಿಗಳಿಗೆ ಬರುತ್ತಿದ್ದಾರೆ. ಇನ್ನು ಸಣ್ಣಪುಟ್ಟ ಆರ್ಡರ್‌ಗಳಷ್ಟೇ ಸಿಗುತ್ತಿವೆ. ಆಭರಣಕ್ಕೆ ಆರ್ಡರ್‌ ಕೊಟ್ಟವರೂ ಹಣದ ಸಮಸ್ಯೆಯಿಂದ ಅಂಗಡಿ ಕಡೆ ಸುಳಿಯುತ್ತಿಲ್ಲ,'' ಎಂದು ಜ್ಯುವೆಲರಿ ಶಾಪ್‌ನ ಮಾಲೀಕರೊಬ್ಬರು ಹೇಳಿದ್ದಾರೆ.

ಚೆಕ್‌ ಅಥವಾ ಆನ್‌ಲೈನ್‌ನಲ್ಲಿ ಹಣ ಪಾವತಿ ಮಾಡಿದರೆ, ಮುಂದೆ ತೆರಿಗೆ ಅಧಿಕಾರಿಗಳಿಂದ ತೊಡಕಾಗಬಹುದೆಂದು ಕೆಲವು ಗ್ರಾಹಕರು ಹಿಂದೆಮುಂದೆ ನೋಡುತ್ತಿದ್ದಾರೆ. ''ಬಿಲ್‌ರಹಿತವಾಗಿಯೇ ಈ ಉದ್ಯಮದಲ್ಲಿ ಬಹುತೇಕ ವ್ಯವಹಾರಗಳು ಮೊದಲು ನಡೆಯುತ್ತಿದ್ದವು. ಈಗ ಆದಾಯ ತೆರಿಗೆ ಅಧಿಕಾರಿಗಳ ತೀವ್ರ ನಿಗಾ ಪರಿಣಾಮ ವ್ಯವಹಾರಕ್ಕೆ ಪೆಟ್ಟು ಬಿದ್ದಿದೆ. ಯಾವಾಗ ಯಾರು ಬರುವರೋ ಎನ್ನುವ ಆತಂಕ ಆಭರಣ ಮಾರಾಟಗಾರರಲ್ಲಿದೆ,'' ಎನ್ನುತ್ತಾರೆ ಉದ್ಯಮ ತಜ್ಞರು.

-----

Vijaya Karnataka Web gold sales 80 decline in state
ರಾಜ್ಯದಲ್ಲಿ ಚಿನ್ನದ ಮಾರಾಟ ಶೇ.80ರಷ್ಟು ಕುಸಿತ

ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಮತ್ತು ಚೆಕ್‌ ಇದ್ದವರು ಮಾತ್ರ ಚಿನ್ನ ಖರೀದಿ ಮಾಡುತ್ತಿದ್ದಾರೆ. ಚಿನ್ನದ ದರ ಕಡಿಮೆಯಾಗುತ್ತೆ ಎನ್ನುವ ವದಂತಿಯಿದ್ದು, ಜನರು ಕಾಯುತ್ತಾ ಕೂತಿದ್ದಾರೆ. ಈ ಮಧ್ಯೆ, ಜ್ಯುವೆಲರ್‌ಗಳಿಗೆ ಅಧಿಕಾರಿಗಳ ಅನಾವಶ್ಯಕ ಕಿರಿಕಿರಿ ಬೇರೆ ಜಾಸ್ತಿಯಾಗಿದೆ. ಒಟ್ಟಾರೆ ಮಾರಾಟ ತೀವ್ರ ಕುಸಿದಿದೆ.

- ಬಿ. ರಾಮಚಾರಿ, ಅಧ್ಯಕ್ಷರು, ಕರ್ನಾಟಕ ಸ್ಟೇಟ್‌ ಜ್ಯುವೆಲ್ಲರಿ ಟ್ರೇಡರ್ಸ್‌ ಆಂಡ್‌ ವರ್ಕರ್ಸ್‌ ಅಸೋಸಿಯೇಷನ್‌ ಫೆಡರೇಷನ್‌

ರಾಜ್ಯದಲ್ಲಿ 25,500 ಮತ್ತು ಬೆಂಗಳೂರು ನಗರವೊಂದರಲ್ಲೇ 8,500 ಜ್ಯುವೆಲ್ಲರಿ ಶಾಪ್‌ಗಳಿವೆ. ದಿನಕ್ಕೆ 20 ಸಾವಿರ ಕೋಟಿ ರೂ. ವಹಿವಾಟು ಮೊದಲು ನಡೆಯುತ್ತಿತ್ತು. ಈಗ 5 ಸಾವಿರ ಕೋಟಿ ಸಹ ಆಗುತ್ತಿಲ್ಲ.

- ಟಿ.ಎ.ಶರವಣ, ಕರ್ನಾಟಕ ಜ್ಯುವೆಲರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ

**

ಬಿಕೊ ಎನ್ನುತ್ತಿದೆ ದೇಶದ ಚಿನ್ನವಹಿವಾಟಿನ ರಾಜಧಾನಿ

ಮುಂಬಯಿ: ಚಿನ್ನ, ಬೆಳ್ಳಿ ಮತ್ತು ಆಭರಣಗಳ ಮಾರುಕಟ್ಟೆಯಲ್ಲಿ ದೇಶದ ರಾಜಧಾನಿ ಎನ್ನಲಾದ ಮುಂಬಯಿನ ಜವೇರಿ ಬಜಾರ್‌ ಬಿಕೋ ಎನ್ನುತ್ತಿದೆ. 5,000ಕ್ಕೂ ಅಧಿಕ ಅಭರಣದ ಅಂಗಡಿಗಳು ಮತ್ತು ಶೋರೂಮ್‌ಗಳು ಇಲ್ಲಿದ್ದು, ಇತರೆ 27,000 ಅಂಗಡಿಗಳು ಮುಂಬಯಿ ನಗರ ಮತ್ತು ಉಪನಗರಗಳಲ್ಲಿವೆ.

ಮುಂಬಯಿನಲ್ಲಿ ಮೇ-ಜೂನ್‌ ಅವಧಿಯಲ್ಲಿ ಪ್ರತಿ ತಿಂಗಳೂ ಸರಾಸರಿ 15,000 ಮದುವೆಗಳು ನಡೆಯುತ್ತವೆ. ಆದರೆ, ನೋಟುಗಳ ಅಮಾನ್ಯತೆಯಿಂದ ಅಂಗಡಿಗಳಲ್ಲಿ ವ್ಯಾಪಾರ ಇಲ್ಲದಂತಾಗಿದೆ. ದೇಶದಲ್ಲಿ ಸಾವಿರಾರು ದೊಡ್ಡ ಮತ್ತು ಚಿಕ್ಕ ಜ್ಯುವೆಲರಿ ಶಾಪ್‌ಗಳು ಗ್ರಾಹಕರಿಗಾಗಿ ಕಾದು ಕುಳಿತಿವೆ.

''ಮದುವೆ ಸೀಸನ್‌ನಲ್ಲಿಯೇ ದೇಶದ ಚಿನ್ನದ ಮಾರಾಟ ಒಟ್ಟಾರೆ ಶೇ.90ರಷ್ಟು ಇಳಿಕೆಯಾಗಿದೆ,'' ಎಂದು ಮುಂಬಯಿ ಆಭರಣ ಮಾರಾಟಗಾರರ ಸಂಘದ ಉಪಾಧ್ಯಕ್ಷ ಸುರೀಂದರ್‌ ಕುಮಾರ್‌ ಜೈನ್‌ ಹೇಳಿದ್ದಾರೆ.

ಮುಂಬಯಿನಲ್ಲಿ 3.4ರಿಂದ 4 ಟನ್‌ಗಳ ತನಕ ಚಿನ್ನ, ಬೆಳ್ಳಿ ಮತ್ತಿತರ ಆಭರಣಗಳ ಮಾರಾಟ ನಡೆಯುತ್ತದೆ. ಇದರ ಅಂದಾಜು ಮೌಲ್ಯ 125 ಕೋಟಿ ರೂ. ಆದರೆ ನೋಟುಗಳ ಅಮಾನ್ಯದ ನಂತರ ಪ್ರತಿದಿನ ಶೇ.10ರಷ್ಟು ಕುಸಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ