ಆ್ಯಪ್ನಗರ

ಅಪಾಯಕಾರಿ ಹೆಜ್ಜೆ ತುಳಿದ ಚಾಣಾಕ್ಷ ಮುಖ್ಯಮಂತ್ರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಭಾವಂತ, ಚಾಣಾಕ್ಷ ‘ರಾಜಕಾರಣಿ’ ಎಂಬುದನ್ನು ದೃಢಪಡಿಸಿದ್ದರೂ, ಹಣಕಾಸು ಸಚಿವರಾಗಿ ರಾಜ್ಯವನ್ನು ಮುನ್ನಡೆಸುವ ಬದ್ಧತೆಯಲ್ಲಿ ವಿಫಲರಾಗಿದ್ದಾರೆ.

Vijaya Karnataka Web 16 Mar 2017, 9:01 am
***ಅರವಿಂದ ಬೆಲ್ಲದ, ಶಾಸಕರು, ಹುಬ್ಬಳ್ಳಿ -ಧಾರವಾಡ ಪಶ್ಚಿಮ
Vijaya Karnataka Web analysis on state budget 2017
ಅಪಾಯಕಾರಿ ಹೆಜ್ಜೆ ತುಳಿದ ಚಾಣಾಕ್ಷ ಮುಖ್ಯಮಂತ್ರಿ


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಭಾವಂತ, ಚಾಣಾಕ್ಷ ‘ರಾಜಕಾರಣಿ’ ಎಂಬುದನ್ನು ದೃಢಪಡಿಸಿದ್ದರೂ, ಹಣಕಾಸು ಸಚಿವರಾಗಿ ರಾಜ್ಯವನ್ನು ಮುನ್ನಡೆಸುವ ಬದ್ಧತೆಯಲ್ಲಿ ವಿಫಲರಾಗಿದ್ದಾರೆ.

ಚುನಾವಣಾ ವರ್ಷದಲ್ಲಿ ಅವರು ಮಂಡಿಸಿರುವ ಬಜೆಟ್‌ ಎಲ್ಲ ವರ್ಗದ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಇದೊಂದು ಸಾಲ ಶೂಲದ ಬಜೆಟ್‌. ದೇಶದ ತುಂಬೆಲ್ಲಾ ಹರಡಿರುವ ‘ಮೋದಿ ಅಲೆ’ಗೆ ತಡೆಯೊಡ್ಡುವ ದಿಶೆಯಲ್ಲಿ ಬುದ್ಧಿವಂತ ಮುಖ್ಯಮಂತ್ರಿಯಾಗಿ ಉತ್ತಮ ಬಜೆಟ್‌ ನೀಡಲಿದ್ದಾರೆ ಎಂಬ ಆಶಾಗೋಪುರ ಕುಸಿದಿದೆ.

ಸಾಮಾನ್ಯ ಕಾಂಗ್ರೆಸ್‌ ಕಾರ್ಯಕರ್ತರಿಗೂ ಬಜೆಟ್‌ ಸಮಾಧಾನ ತಂದಿಲ್ಲ. ದೇಶದ ಜಿಡಿಪಿ ಶೆ.5.5 ಬೆಳವಣಿಗೆ ಇದ್ದ 2013 -14ನೇ ಸಾಲಿನಲ್ಲಿ ರಾಜ್ಯದ ಜಿಡಿಪಿ ಶೇ.6.2 ಇತ್ತು. ಈಗ ದೇಶದ ಜಿಡಿಪಿ ಶೇ.7.1 ಇದ್ದರೆ ರಾಜ್ಯದ್ದು ಶೇ.6.9ಕ್ಕೆ ಇಳಿದಿದೆ. ಕಳೆದ ನಾಲ್ಕು ವರ್ಷಗಳ ಸಿದ್ದರಾಮಯ್ಯ ಸರಕಾರದ ಆಡಳಿತದಲ್ಲಿ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ.

ಇದೊಂದೇ ವರ್ಷದಲ್ಲಿ ಸಾಲದ ಮೊತ್ತದಲ್ಲಿ 37 ಸಾವಿರ ಕೋಟಿ ರೂ. ಹೆಚ್ಚಳವಾಗಿದೆ. ಬಿಜೆಪಿ ಸರಕಾರದಲ್ಲಿ ಜಗದೀಶ ಶೆಟ್ಟರ್‌ 2013 -14ನೇ ಸಾಲಿನ ಬಜೆಟ್‌ ಮಂಡನೆ ವೇಳೆ 80 ಸಾವಿರ ಕೋಟಿ ರೂ. ಇದ್ದ ರಾಜ್ಯದ ಸಾಲದ ಮೊತ್ತ ಪ್ರಸ್ತುತ 2.42 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.

ಬೇರೆ ಪಕ್ಷದಿಂದ ಕಾಂಗ್ರೆಸ್‌ಗೆ ಬಂದು ಮುಖ್ಯಮಂತ್ರಿಯಾಗಿ ಇಡೀ ಕಾಂಗ್ರೆಸ್ಸಿಗರನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಪೂರ್ಣಾವಧಿ ಅಧಿಕಾರ ಅನುಭವಿಸುವ ಮೂಲಕ ಸಿದ್ದರಾಮಯ್ಯ ಅವರು ತಾವು ಚಾಣಾಕ್ಷ ರಾಜಕಾರಣಿ ಎಂಬುದನ್ನು ಸಮರ್ಥಿಸಿದ್ದಾರೆ. ಅಂತೆಯೇ, 12ನೇ ಬಾರಿಗೆ ಮುಂಗಡಪತ್ರ ಮಂಡಿಸುವ ಅವಕಾಶ ಪಡೆದರೂ, ದೂರದೃಷ್ಟಿಯೊಂದಿಗೆ ರಾಜ್ಯದ ಅಭಿವೃದ್ಧಿಯ ಆದ್ಯತೆಗಳನ್ನು ಅವರು ಗುರುತಿಸಲು ಸಾಧ್ಯವಾಗದೇ ಇರುವುದು ದುರದೃಷ್ಟಕರ. ಈ ಬಜೆಟ್‌ ಬಡವರ, ಯುವಜನರ, ಮಹಿಳೆಯರ, ರೈತರು ಸೇರಿ ಯಾರೊಬ್ಬರ ಪರವೂ ಇಲ್ಲ.

ಅಭಿವೃದ್ಧಿ ಪರವು ಅಲ್ಲ. ಯೋಜನೆ ಮತ್ತು ಯೋಜನೇತರ ವೆಚ್ಚಗಳನ್ನು ಒಟ್ಟುಗೂಡಿಸಿ ಅಪಾಯಕಾರಿ ಹೆಜ್ಜೆ ತುಳಿದಿದ್ದಾರೆ. ಬಂಡವಾಳ ವೆಚ್ಚದ ನಿರ್ವಹಣೆಯಲ್ಲಿ ನಿರಾಸಕ್ತಿ ಎದ್ದುಕಾಣುತ್ತಿದೆ.

ಬಂಡವಾಳ ಹೂಡಿಕೆ ಆಕರ್ಷಣೆಗೆ ದೇಶದ ತುಂಬೆಲ್ಲಾ ಪೈಪೋಟಿ ನಡೆದಿರುವ ಸಂದರ್ಭದಲ್ಲಿ ರಾಜ್ಯವನ್ನು ಹೂಡಿಕೆ ಸ್ನೇಹಿಯಾಗಿ ರೂಪಿಸುವ ಆಸಕ್ತಿ ಹಾಗೂ ಇಚ್ಛಾಶಕ್ತಿ ಪ್ರದರ್ಶನ ಆಗಿಲ್ಲ. ರಾಜ್ಯದಲ್ಲಿ 3500ಕ್ಕೂ ಮಾಹಿತಿ ತಂತ್ರಜ್ಞಾನ ಕಂಪನಿಗಳಿವೆ. ಸರಿಸುಮಾರು 2.2 ಲಕ್ಷ ಕೋಟಿ ರೂ. ರಫ್ತು ವಹಿವಾಟು ನಡೆಸುತ್ತಿವೆ. ರಾಜ್ಯದಲ್ಲಿ 10 ಲಕ್ಷ ಮಂದಿಗೆ ನೇರವಾಗಿ ಹಾಗೂ 30 ಲಕ್ಷ ಪರೋಕ್ಷವಾಗಿ ಉದ್ಯೋಗವಕಾಶ ಒದಗಿಸಿವೆ. ಆದರೆ, ಈ ವಲಯಕ್ಕೆ ಬಜೆಟ್‌ನಲ್ಲಿ ಕೇವಲ 299 ಕೋಟಿ ಮೀಸಲಿಡಲಾಗಿದೆ. ಇದು ಒಟ್ಟಾರೆ ಬಜೆಟ್‌ನಲ್ಲಿ ಶೇಕಡಾ .16 ಮಾತ್ರ. ಕೈಗಾರಿಕೆಗಳ ಬಗ್ಗೆ ಈ ಸರಕಾರದ ಧೋರಣೆಯನ್ನು ಇದು ಸ್ಪಷ್ಟಪಡಿಸುತ್ತದೆ. ರಾಜ್ಯದಲ್ಲಿ ಶೇ. 55 ದುಡಿಯುವ ವರ್ಗದ ಜನರಿದ್ದು, ಕಾರ್ಮಿಕ ಇಲಾಖೆಗೆ ಮೀಸಲಿಟ್ಟಿರುವ ಹಣ 469 ಕೊಟಿ ರೂ.ಗಳು ಮಾತ್ರ.

ಐಟಿ ಹಾಗೂ ಕೈಗಾರಿಕೆ ವಲಯಗಳ ಬಗ್ಗೆ ಉದಾಸೀನ ಧೋರಣೆ ತೋರಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ನಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೂ ಒತ್ತು ನೀಡಿಲ್ಲ. ಐಟಿ ವಲಯದ ನಂತರ ಹೆಚ್ಚು ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಈ ವಲಯವನ್ನು ಸಂಪೂರ್ಣ ಮರೆತಿದ್ದಾರೆ. ಕರಾವಳಿ ತೀರ ಪ್ರದೇಶ, ಪಶ್ಚಿಮ ಘಟ್ಟ, ಪಾರಂಪರಿಕ ತಾಣಗಳು, ಸಾಹಸ ಪ್ರವಾಸೋದ್ಯಮಕ್ಕೆ ರಾಜ್ಯದಲ್ಲಿ ವಿಫುಲ ಅವಕಾಶಗಳಿದ್ದರೂ, ಪ್ರವಾಸಿ ಆಕರ್ಷಣೆ ಹಾಗೂ ಮೂಲಸೌಕರ್ಯ ಬಲಪಡಿಸುವ ಬಗ್ಗೆ ಬಜೆಟ್‌ನಲ್ಲಿ ಗಮನವನ್ನೇ ನೀಡಿಲ್ಲ.

ಉದ್ದಿಮೆ ಸ್ನೇಹಿ ಅಲ್ಲವಾದರೂ, ಬಜೆಟ್‌ನಲ್ಲಿ ರೈತ ಸ್ನೇಹಿ ಕ್ರಮಗಳೂ ಇಲ್ಲ. ಹಿಂದೆಂದೂ ಕಾಣದ ಭೀಕರ ಬರಗಾಲ ಎದುರಾಗಿರುವ ಕಾರಣ ರೈತರ ಸಾಲ ಮನ್ನಾ ನಿರೀಕ್ಷೆ ಎಲ್ಲರಲ್ಲಿತ್ತು. ಈ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ. ರೈತರ ಬದುಕಿನ ಭರವಸೆ ಬತ್ತಿದೆ. ಚುನಾವಣಾಪೂರ್ವದಲ್ಲಿ ‘ಕಾಂಗ್ರೆಸ್‌ ನಡಿಗೆ- ಕೃಷ್ಣೆ ಕಡೆಗೆ’ ಮಾಡಿ ಕೃಷ್ಣಾ ನದಿ ನೀರಿನ ಬಳಕೆ ಉದ್ದೇಶದ ಕಾಮಗಾರಿಗಳಿಗೆ ವರ್ಷಕ್ಕೆ 10 ಸಾವಿರ ಕೋಟಿ ರೂ. ಮೀಸಲಿಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದರು. 5ನೇ ಬಜೆಟ್‌ನಲ್ಲೂ ಈ ಬಗ್ಗೆ ಚಕಾರ ಎತ್ತಿಲ್ಲ.

ದೆಹಲಿಯಲ್ಲಿ ಆಪ್‌ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಮಹಿಳೆಯರ ನಡೆಯುತ್ತಿದ್ದ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಈಗ ರಾಜ್ಯದಲ್ಲಿ ನಡೆಯುತ್ತಿವೆ. ಹೀಗಾಗಿ, ಪೊಲೀಸ್‌ ಸಿಬ್ಬಂದಿ ಹೆಚ್ಚಳ, ಹೊಸ ಪೊಲೀಸ್‌ ಠಾಣೆಗಳ ಆರಂಭ, ಸಿ.ಸಿ ಟಿವಿ ಅಳವಡಿಕೆಯಂತಹ ಯಾವ ಭದ್ರತಾ ಕ್ರಮಗಳಿಗೂ ಬಜೆಟ್‌ನಲ್ಲಿ ಒತ್ತು ನೀಡಿಲ್ಲ. ಕುಸಿಯುತ್ತಿರುವ ಕಾನೂನು- ಸುವ್ಯವಸ್ಥೆಯನ್ನು ಸರಿಪಡಿಸುವ ದಿಶೆಯಲ್ಲಿ ಪೊಲೀಸ್‌ ಇಲಾಖೆಗೆ ಕಾಯಕಲ್ಪ ನೀಡುವ ಅನಿವಾರ್ಯತೆಯನ್ನು ಬಜೆಟ್‌ನಲ್ಲಿ ಸಂಪೂರ್ಣ ಮರೆಯಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ