ಆ್ಯಪ್ನಗರ

ಜಿಎಸ್‌ಟಿ ನಂತರ ಕಸ್ಟಮ್ಸ್‌ ಸುಂಕದಲ್ಲಿ ಕ್ರಾಂತಿ

ಭಾರತದ ವ್ಯಾಪಾರ, ವಾಣಿಜ್ಯ ಮತ್ತು ಬಿಸಿನೆಸ್‌ ವಲಯದ ಸುಧಾರಣೆಯನ್ನು ಚುರುಕಾಗಿಸುವುದು ಇದರ ಉದ್ದೇಶ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಅಧ್ಯಕ್ಷ ಎಸ್‌ ರಮೇಶ್‌ ತಿಳಿಸಿದ್ದಾರೆ.

Vijaya Karnataka 4 Dec 2018, 5:30 am
ಹೊಸದಿಲ್ಲಿ : ಸ್ವತಂತ್ರ ಭಾರತದ ಅತಿ ದೊಡ್ಡ ಪರೋಕ್ಷ ತೆರಿಗೆ ಸುಧಾರಣೆ ಎನ್ನಿಸಿಕೊಂಡಿರುವ ನೂತನ ಸರಕು ಮತ್ತು ಸೇವಾ ತೆರಿಗೆಯ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ, ಇದೀಗ ಕಸ್ಟಮ್ಸ್‌ ಸುಂಕದ ಸ್ವರೂಪದಲ್ಲಿ ಆಮೂಲಾಗ್ರ ಸುಧಾರಣೆಗೆ ಮುಂದಾಗಿದೆ.
Vijaya Karnataka Web ರೂಪಾಯಿ
ರೂಪಾಯಿ


ಭಾರತದ ವ್ಯಾಪಾರ, ವಾಣಿಜ್ಯ ಮತ್ತು ಬಿಸಿನೆಸ್‌ ವಲಯದ ಸುಧಾರಣೆಯನ್ನು ಚುರುಕಾಗಿಸುವುದು ಇದರ ಉದ್ದೇಶ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಅಧ್ಯಕ್ಷ ಎಸ್‌ ರಮೇಶ್‌ ತಿಳಿಸಿದ್ದಾರೆ.

ತೆರಿಗೆ ಅಧಿಕಾರಿಗಳ ಜತೆ ಮುಖಾಮುಖಿ ಇಲ್ಲ:

ನೂತನ ಬದಲಾವಣೆಯ ಪ್ರಕಾರ ಉದ್ದಿಮೆದಾರರಿಗೆ, ವರ್ತಕರಿಗೆ ತೆರಿಗೆ ಅಧಿಕಾರಿಗಳ ಜತೆಗೆ ಮುಖಾಮುಖಿಯಾಗಬೇಕಾದ ಅಗತ್ಯ ಇರುವುದಿಲ್ಲ. ಸರಕು ಸಾಗಣೆಯ ಆನ್‌ಲೈನ್‌ ದೃಢೀಕರಣ ವ್ಯವಸ್ಥೆಯ ಪರಿಣಾಮ ತೆರಿಗೆ ಅಧಿಕಾರಿಗಳ ಮುಖಾಮುಖಿಯಾಗುವುದು ತಪ್ಪುತ್ತದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು. ಜತೆಗೆ ಸರಕುಗಳ ಸಾಗಣೆಯ ವೇಗ ಹೆಚ್ಚಲಿದೆ ಎಂದು ಅವರು ತಿಳಿಸಿದ್ದಾರೆ.

'' ಕಸ್ಟಮ್ಸ್‌ ಸುಂಕ ವ್ಯವಸ್ಥೆಯ ಮುಂದಿನ ಬದಲಾವಣೆ ಕ್ರಾಂತಿಕಾರಕವಾಗಲಿದ್ದು, ಸರಕುಗಳ ಸಾಗಣೆಯಲ್ಲಿ ಮುಖಾಮುಖಿ ಭೇಟಿ ರಹಿತವಾದ ಹೊಸ ವ್ಯವಸ್ಥೆ ಜಾರಿಯಾಗಲಿದೆ. ತಿಂಗಳೊಳಗೆ ಪ್ರಾಯೋಗಿಕವಾಗಿ ಇದು ಜಾರಿಯಾಗಲಿದೆ'' ಎಂದು ವಿವರಿಸಿದ್ದಾರೆ.

ವಿಶ್ವಬ್ಯಾಂಕ್‌ನ ಉದ್ಯಮಸ್ನೇಹಿ ಪಟ್ಟಿಯಲ್ಲಿ ಭಾರತ ಟಾಪ್‌ 50ರೊಳಗೆ ತರಲು ಈ ಸುಧಾರಣೆ ನೆರವಾಗಲಿದೆ. ಭಾರತ 77ನೇ ಸ್ಥಾನಕ್ಕೆ ಜಿಗಿದಿದೆ. ಕಳೆದ ಜೂನ್‌ನಿಂದ ಸಿಬಿಐಟಿಸಿಯ ಅಧ್ಯಕ್ಷರಾಗಿರುವ ಎಸ್‌. ರಮೇಶ್‌ ಈ ಸುಧಾರಣೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪರಿಣಾಮವೇನು?

ಉದ್ಯಮಿಗಳು, ವರ್ತಕರಿಗೆ ಸರಕುಗಳ ಸಾಗಣೆ ಮತ್ತಷ್ಟು ಸುಗಮವಾಗುತ್ತದೆ. ಹಲವಾರು ತೆರಿಗೆ ತೊಡಕುಗಳು ಬಗೆಹರಿಯುತ್ತದೆ. ಉದಾಹರಣೆಗೆ ಒಬ್ಬ ಆಮದುದಾರ ಚೆನ್ನೈನ ಬಂದರಿಗೆ ಬಂದಿರುವ ಸರಕುಗಳ ಮೌಲ್ಯಮಾಪನಕ್ಕೆ ಸ್ಥಳೀಯ ಕಸ್ಟಮ್ಸ್‌ ಅಧಿಕಾರಿಗಳನ್ನು ಮುಖತಃ ಭೇಟಿಯಾಗಬೇಕಿಲ್ಲ. ದಿಲ್ಲಿಯಲ್ಲಿದ್ದುಕೊಂಡೇ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳಿಸಿ ತನ್ನ ಸರಕುಗಳ ಸಾಗಣೆ ಮಾಡಬಹುದು. ಆಟೊಮ್ಯಾಟಿಕ್‌ ಆಗಿ ಸರಕುಗಳ ತಪಾಸಣೆ, ಮಾಪನ ನಡೆಯುತ್ತದೆ. ಇ-ಮೇಲ್‌, ಎಸ್ಸೆಮ್ಮೆಸ್‌ ಅಲರ್ಟ್‌ ಮೂಲಕ ಉದ್ಯಮಿಗೆ ತನ್ನ ಸರಕುಗಳು ಬಂದರಿನಿಂದ ಬಿಡುಗಡೆಗೆ ಸಿದ್ಧವಾಗಿರುವುದು ಗೊತ್ತಾಗುತ್ತದೆ.

ದಾಖಲೆಗಳು ಆನ್‌ಲೈನ್‌ನಲ್ಲಿ ಲಭ್ಯ

ಇ-ಸಂಚಿತ್‌ ಸೌಲಭ್ಯ ವಿಸ್ತರಣೆಯಾಗಲಿದ್ದು, ಆಮದುದಾರರು ಮತ್ತು ರಫ್ತುದಾರರು ಆನ್‌ಲೈನ್‌ಲ್ಲಿ ಎಲ್ಲ ದಾಖಲೆಗಳನ್ನು ಅಪ್‌ಲೋಡ್‌ ಮಾಡಬಹುದು. ಕಸ್ಟಮ್ಸ್‌ ಸುಂಕ ವ್ಯವಸ್ಥೆ ಪೇಪರ್‌ಲೆಸ್‌ ಆಗಲಿದೆ.

ತೆರಿಗೆ ಸಂಗ್ರಹದ ಗುರಿ, ರಿಫಂಡ್‌

ಪ್ರಸಕ್ತ ಸಾಲಿನ ಜಿಎಸ್‌ಟಿ ತೆರಿಗೆ ಸಂಗ್ರಹದ ಗುರಿ ಸಾಧನೆಗೆ ಎಲ್ಲ ಪ್ರಯತ್ನ ನಡೆಯುತ್ತಿದೆ. ಹಲ ರಾಜ್ಯಗಳಲ್ಲಿ ತೆರಿಗೆ ಸಂಗ್ರಹ ಸುಧಾರಿಸಿದೆ.ಶೇ.85ರಷ್ಟು ಜಿಎಸ್‌ಟಿ ರಿಫಂಡ್‌ ಆಗಿದ್ದು, ಇದರ ಮೊತ್ತ 47,161 ಕೋಟಿ ರೂ.ಗೆ ಏರಿಕೆಯಾಗಿದೆ. ಒಟ್ಟು 24,788 ಕೋಟಿ ರೂ.ಗಳಷ್ಟು ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ರಿಫಂಡ್‌ ಆಗಿದೆ ಎಂದು ಸಿಬಿಡಿಟಿ ತಿಳಿಸಿದೆ.

ಕಸ್ಟಮ್ಸ್‌ ಸುಂಕದಲ್ಲಿ ಸುಧಾರಣೆ ಹೀಗೆ
ತೆರಿಗೆ ಅಧಿಕಾರಿಗಳ ಜತೆ ಮುಖಾಮುಖಿ ಭೇಟಿ ಅನಗತ್ಯ
ಒಂದು ಬಂದರಿನಲ್ಲಿರುವ ಸರಕುಗಳನ್ನು ಇನ್ನೊಂದು ಸ್ಥಳದಲ್ಲಿ ಆನ್‌ಲೈನ್‌ ಮೂಲಕ ಮೌಲ್ಯಮಾಪನ ಮಾಡಬಹುದು.
ಒಂದು ವರ್ಗದ ಸರಕುಗಳನ್ನು ಒಂದು ಸ್ಥಳದಲ್ಲೇ ಮೌಲ್ಯಮಾಪನ ಮಾಡಬಹುದು.
ಸರಕುಗಳ ತ್ವರಿತ ಬಿಡುಗಡೆ, ಸಾಗಣೆ ಸಾಧ್ಯ
ರಫ್ತುದಾರರಿಗೆ ಇ-ಸಂಚಿತ್‌ ಸೌಲಭ್ಯ
ರಫ್ತುದಾರರಿಗೆ ಸೀಮಾತೀತ, ಪೇಪರ್‌ಲೆಸ್‌ ಅನುಭವ
ಬಂದರುಗಳ ಐಟಿ ಸಿಸ್ಟಮ್‌ಗೆ ಕಸ್ಟಮ್ಸ್‌ ವೆಬ್‌ ಪೋರ್ಟಲ್‌
ಜಿಎಸ್‌ಟಿ ವಂಚನೆ ತಡೆಗೆ ಡೇಟಾ ಅನಾಲಿಟಿಕ್ಸ್‌ ತಂತ್ರಜ್ಞಾನ ಬಳಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ