ಆ್ಯಪ್ನಗರ

₹2000 ನೋಟುಗಳ ಸಂಖ್ಯೆ ಭಾರೀ ಇಳಿಕೆ! 'ATM'ನಲ್ಲೂ ಸಿಗ್ತಿಲ್ಲ ಈ ನೋಟು! ಆರ್‌ಬಿಐ ವರದಿ ಹೇಳುವುದೇನು?

₹2000 currency notes drop in circulation: ₹2,000 ಮುಖಬೆಲೆಯ ನೋಟುಗಳ ಸಂಖ್ಯೆಯಲ್ಲಿ ನಿರಂತರ ಕುಸಿತ ಕಂಡಿದೆ. ಎಟಿಎಂ ನಲ್ಲೂ ಸಿಗ್ತಿಲ್ಲ ₹2000ದ ನೋಟು. ನೋಟಿನ ವಾಸ್ತವತೆ ಕುರಿತು ಆರ್‌ಬಿಐ ಹೇಳುವುದೇನು? ಇಲ್ಲಿದೆ ಪೂರ್ಣ ವಿವರ.

Authored byಬಾನುಪ್ರಸಾದ ಕೆ.ಎನ್\u200c. | Vijaya Karnataka Web 27 May 2022, 7:42 pm

ಹೈಲೈಟ್ಸ್‌:

  • ₹2,000 ಮುಖಬೆಲೆಯ ನೋಟುಗಳ ಸಂಖ್ಯೆಯಲ್ಲಿ ನಿರಂತರ ಕುಸಿತ
  • ಎಟಿಎಂ ನಲ್ಲೂ ಸಿಗ್ತಿಲ್ಲ ₹2000ದ ನೋಟು
  • 500 ರೂ ಮುಖಬೆಲೆಯ ನೋಟುಗಳ ಸಂಖ್ಯೆಯಲ್ಲಿ ಏರಿಕೆ
  • ನೋಟಿನ ವಾಸ್ತವತೆ ಕುರಿತು ಆರ್‌ಬಿಐ ಹೇಳುವುದೇನು? ಇಲ್ಲಿದೆ ಪೂರ್ಣ ವಿವರ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web demonetisation
ಹೊಸದಿಲ್ಲಿ: ಕಳೆದ ಕೆಲ ವರ್ಷಗಳಿಂದ ₹2,000 ಮುಖಬೆಲೆಯ ನೋಟುಗಳ ಸಂಖ್ಯೆಯಲ್ಲಿ ನಿರಂತರ ಕುಸಿತ ಕಂಡುಬಂದಿದೆ. ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ, ಒಟ್ಟು ಕರೆನ್ಸಿ ನೋಟುಗಳಲ್ಲಿ ₹2000 ಮುಖಬೆಲೆಯ ಪಾಲು ಶೇ.1.6 ಕ್ಕೆ ಇಳಿದಿದೆ. ಅಂದರೆ 2 ಸಾವಿರ ಮುಖಬೆಲೆಯ 214 ಕೋಟಿ ನೋಟುಗಳು ಚಲಾವಣೆಯಲ್ಲಿವೆ. ಇತ್ತೀಚೆಗೆ ಬಿಡುಗಡೆಯಾದ ಆರ್‌ಬಿಐ ವಾರ್ಷಿಕ ವರದಿಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ.
ನೋಟುಗಳ ಅಂಕಿ-ಸಂಖ್ಯೆ
2022ರ ಮಾರ್ಚ್‌ವರೆಗೆ ಎಲ್ಲಾ ಮುಖಬೆಲೆಯ ನೋಟುಗಳ ಒಟ್ಟು ಸಂಖ್ಯೆ 13,053 ಕೋಟಿಯಷ್ಟಿದೆ. ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಈ ನೋಟುಗಳ ಪ್ರಮಾಣ 12,437 ಕೋಟಿಯಷ್ಟಿತ್ತು. ಆರ್‌ಬಿಐ ವಾರ್ಷಿಕ ವರದಿಯ ಪ್ರಕಾರ, ಮಾರ್ಚ್ 2020 ರ ಅಂತ್ಯದ ವೇಳೆಗೆ ಚಲಾವಣೆಯಲ್ಲಿರುವ 2000 ರೂಪಾಯಿ ಮುಖಬೆಲೆಯ ನೋಟುಗಳ ಸಂಖ್ಯೆ 274 ಕೋಟಿಯಷ್ಟಿದೆ. ಈ ಅಂಕಿ ಅಂಶವು ಚಲಾವಣೆಯಲ್ಲಿರುವ ಒಟ್ಟು ಕರೆನ್ಸಿ ನೋಟುಗಳ ಶೇಕಡಾ 2.4 ರಷ್ಟಿತ್ತು.

ನೋಟು ಅಮಾನ್ಯೀಕರಣಕ್ಕೆ 5 ವರ್ಷ: ಜನರ ಬಳಿ ನಗದು ಪ್ರಮಾಣ ಶೇ.57ಕ್ಕೆ ಹೆಚ್ಚಳ!

2021ರ ಮಾರ್ಚ್ ವೇಳೆಗೆ, ಚಲಾವಣೆಯಲ್ಲಿರುವ ₹2000 ಮುಖಬೆಲೆಯ ನೋಟುಗಳ ಸಂಖ್ಯೆ 245 ಕೋಟಿಗೆ ಇಳಿಕೆಯಾಯಿತು. ಅಂದರೆ ಒಟ್ಟು ನೋಟುಗಳ ಸಂಖ್ಯೆಯಲ್ಲಿ ಶೇ.2ಕ್ಕೆ ಇಳಿಕೆಯಾಯಿತು. ಕಳೆದ ಹಣಕಾಸು ವರ್ಷದ ಅಂತ್ಯಕ್ಕೆ ಈ ಸಂಖ್ಯೆ ಮತ್ತಷ್ಟು ಕುಸಿದು 214 ಕೋಟಿಗೆ (ಶೇ.1.6ಕ್ಕೆ) ಇಳಿದಿದೆ.

ಮೇಲಿನ ಅಂಕಿ-ಅಂಶಗಳು ನೋಟುಗಳ ಶೇಕಡಾವಾರು ಪ್ರಮಾಣದಲ್ಲಿವೆ. ಆಯಾ ನೋಟುಗಳ ಒಟ್ಟು ಮೌಲ್ಯದ ಕುರಿತು ಹೇಳುವುದಾದರೆ, 2020ರ ಮಾರ್ಚ್‌ನಲ್ಲಿ ₹2000 ಮುಖಬೆಲೆಯ ನೋಟಿನ ಒಟ್ಟು ಮೌಲ್ಯವು ಎಲ್ಲಾ ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯದ ಶೇ. 22.6ರಷ್ಟಿತ್ತು. ಆದರೆ, ಇದು 2021ರ ಮಾರ್ಚ್ ವೇಳೆಗೆ ಶೇ.17.3ಕ್ಕೆ ಮತ್ತು 2022ರ ಮಾರ್ಚ್ ವೇಳೆಗೆ ಶೇ.13.8ಕ್ಕೆ ಇಳಿಕೆಯಾಗಿದೆ.

₹2000 ಮುಖಬೆಲೆಯ ನೋಟು ಮುದ್ರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ ಆರ್‌ಬಿಐ!

500 ರೂ. ಮುಖಬೆಲೆಯ ನೋಟುಗಳ ಹೆಚ್ಚಳ
ಆರ್‌ಬಿಐ ವರದಿಯ ಪ್ರಕಾರ, 500 ರೂ. ಮುಖಬೆಲೆಯ ನೋಟುಗಳ ಸಂಖ್ಯೆಯು ಈ ವರ್ಷದ ಮಾರ್ಚ್ ಅಂತ್ಯಕ್ಕೆ 4,554.68 ಕೋಟಿಗೆ ಏರಿಕೆಯಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹500 ಮುಖಬೆಲೆಯ ನೋಟುಗಳ ಸಂಖ್ಯೆ 3,867.90 ಕೋಟಿಯಷ್ಟಿತ್ತು. ಚಲಾವಣೆಯಲ್ಲಿರುವ ಒಟ್ಟು ನೋಟುಗಳ ಪೈಕಿ ₹500ರ ನೋಟುಗಳ ಪಾಲು ಶೇ 34.9ರಷ್ಟಿದೆ. ಅಂದರೆ, ಚಲಾವಣೆಯಲ್ಲಿರುವ ನೋಟುಗಳ ಪೈಕಿ ₹500ರ ನೋಟುಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಇದರ ನಂತರದ ಸ್ಥಾನದಲ್ಲಿ ₹10 ಮುಖಬೆಲೆಯ ನೋಟುಗಳಿವೆ. ಇವು ಒಟ್ಟು ನೋಟುಗಳ ಪೈಕಿ ಶೇ.21.3 ರಷ್ಟಿವೆ. ಒಟ್ಟಾರೆ ಹೇಳುವುದಾದರೆ, ₹2000 ಮುಖಬೆಲೆಯ ನೋಟುಗಳಲ್ಲಿ ಗಣನೀಯ ಕುಸಿತ ಆಗಿದ್ದು, ಸರ್ಕಾರದ ಮುಂದಿನ ನಡೆ ಏನಾಗಿರಬಹುದು ಎಂಬ ಪ್ರಶ್ನೆ ಮೂಡುತ್ತದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ವರದಿಯ ಪ್ರಕಾರ, ಎಲ್ಲಾ ಮುಖಬೆಲೆಯ ಚಲಾವಣೆಯಲ್ಲಿರುವ ಕರೆನ್ಸಿಯ ಒಟ್ಟು ಮೌಲ್ಯವು ಮಾರ್ಚ್ 2021 ರಲ್ಲಿ 28.27 ಲಕ್ಷ ಕೋಟಿ ರೂಪಾಯಿ ಇತ್ತು. ಇದು ಈ ವರ್ಷದ (2022) ಮಾರ್ಚ್‌ನಲ್ಲಿ 31.05 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಲೇಖಕರ ಬಗ್ಗೆ
ಬಾನುಪ್ರಸಾದ ಕೆ.ಎನ್\u200c.
ವಿಜಯ ಕರ್ನಾಟಕ ಡಿಜಿಟಲ್\u200c ಪತ್ರಕರ್ತ. ವಿಜ್ಞಾನ ತಂತ್ರಜ್ಞಾನ, ರಾಷ್ಟ್ರೀಯ- ಅಂತಾರಾಷ್ಟ್ರೀಯ, ಸಾಹಿತ್ಯ-ಕಲೆ, ಶಿಕ್ಷಣ, ಆಸಕ್ತಿಯ ವಿಷಯಗಳು... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ