ಆ್ಯಪ್ನಗರ

​ಕರಾವಳಿಯ ಕೀರ್ತಿ ಪತಾಕೆ ಹಾರಿಸಿದ್ದ ಸಿಂಡಿಕೇಟ್‌, ಕೆನರಾ ಮತ್ತು ಕಾರ್ಪೋರೇಷನ್‌ ಬ್ಯಾಂಕ್‌ಗಳು

ಸಿಂಡಿಕೇಟ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ ಮತ್ತು ಕಾರ್ಪೊರೇಷನ್‌ ಬ್ಯಾಂಕುಗಳು ಕರಾವಳಿಯ ಹೂಗಳು. ದೇಶಾದ್ಯಂತ ತಮ್ಮ ಬೇರುಗಳನ್ನು ಪಸರಿಸಿದ್ದವು. ಇದೀಗ ವಿಲೀನ ಪ್ರಕ್ರಿಯೆಯಲ್ಲಿ ಕೆನರಾ ಜತೆ ಸಿಂಡಿಕೇಟ್‌, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಜತೆ ಕಾರ್ಪೋರೇಷನ್‌ ಬ್ಯಾಂಕ್‌ ಸೇರ್ಪಡೆಗೊಳ್ಳಲಿದೆ.

Vijaya Karnataka Web 31 Aug 2019, 10:11 am
ಕರಾವಳಿ ಭಾಗದಲ್ಲಿ ಹುಟ್ಟಿ ಇಡೀ ದೇಶಾದ್ಯಂತ ತಮ್ಮ ಬೇರುಗಳನ್ನು ಪಸರಿಸಿದ್ದ ಸಿಂಡಿಕೇಟ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ ಮತ್ತು ಕಾರ್ಪೊರೇಷನ್‌ ಬ್ಯಾಂಕುಗಳು ಇದೀಗ ವಿಲೀನ ಪ್ರಕ್ರಿಯೆಗೆ ಒಳಪಡಲಿವೆ. ಕೆನರಾ ಜತೆ ಸಿಂಡಿಕೇಟ್‌ ಬ್ಯಾಂಕ್‌ ವಿಲೀನವಾಗುತ್ತಿದ್ದರೆ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಜತೆ ಕಾರ್ಪೊರೇಷನ್‌ ಬ್ಯಾಂಕ್‌ ಒಂದಾಗಲಿದೆ. ಈ ಬ್ಯಾಂಕುಗಳ ಕಿರು ಇತಿಹಾಸ ಇಲ್ಲಿದೆ.
Vijaya Karnataka Web coastal karnataka banks canara bank syndicate bank and corporation bank which involve in bank merger process
​ಕರಾವಳಿಯ ಕೀರ್ತಿ ಪತಾಕೆ ಹಾರಿಸಿದ್ದ ಸಿಂಡಿಕೇಟ್‌, ಕೆನರಾ ಮತ್ತು ಕಾರ್ಪೋರೇಷನ್‌ ಬ್ಯಾಂಕ್‌ಗಳು


ಬಡಜನರ ಶಕ್ತಿ ಸಿಂಡಿಕೇಟ್‌
ಉದ್ಯಮಿ ಉಪೇಂದ್ರ ಅನಂತ ಪೈ, ಎಂಜಿನಿಯರ್‌ ವಾಮನ್‌ ಕುಡ್ವ, ವೈದ್ಯ ಡಾ. ಟಿಎಂಎ ಪೈ ಸೇರಿ ಕೇವಲ 8 ಸಾವಿರ ರೂ. ಬಂಡವಾಳದಿಂದ 1925ರಲ್ಲಿ 'ಕೆನರಾ ಇಂಡಸ್ಟ್ರಿಯಲ್‌ ಆ್ಯಂಡ್‌ ಬ್ಯಾಂಕಿಂಗ್‌ ಸಿಂಡಿಕೇಟ್‌' ಸ್ಥಾಪಿಸಿದರು. ಮುಂದೆ ಅದು ಸಿಂಡಿಕೇಟ್‌ ಬ್ಯಾಂಕ್‌ ಆಯಿತು. ಸಂಕಷ್ಟಕ್ಕೆ ಸಿಲುಕಿದ ಬಡ ಜನರು ಮತ್ತು ನೇಕಾರರ ಅಭ್ಯುದಯವೇ ಈ ಬ್ಯಾಂಕಿನ ಉದ್ದೇಶ. ಡಾ. ಟಿಎಂಎ ಪೈ ಬಡವರಲ್ಲಿ ಉಳಿತಾಯ ಮನೋಭಾವ ಬೆಳೆಸಲು ಜನರ ಮನೆ ಬಾಗಿಲಿನಿಂದ ಏಜೆಂಟರ ಮೂಲಕ ದಿನಕ್ಕೆ ಎರಡಾಣೆ ಸಂಗ್ರಹಿಸಲು ಬಿತ್ತಿದ ಪಿಗ್ಮಿ ಯೋಜನೆಯ ಬೀಜ ಮೊಳಕೆಯೊಡೆದು ದೇಶಾದ್ಯಂತ ವಿಸ್ತರಣೆಗೊಂಡಿತು. ಪಿಗ್ಮಿ ಮೂಲಕವೇ ಅಂದಿನ ಕಾಲದಲ್ಲಿ 2 ಕೋಟಿ ರೂ. ಠೇವಣಿ ಸಂಗ್ರಹಿಸಲಾಗುತ್ತಿತ್ತು. ಈಗ ಶತಮಾನದ ಹೊಸ್ತಿಲಿನಲ್ಲಿರುವ ಸಿಂಡಿಕೇಟ್‌ ಬ್ಯಾಂಕ್‌, ಕೃಷಿ ಸಾಲ ವಿತರಣೆಗೆಂದೇ ಪ್ರತ್ಯೇಕ ವಿಭಾಗ ತೆಗೆದು ಗ್ರಾಮೀಣ ಬ್ಯಾಂಕ್‌ ಪರಿಕಲ್ಪನೆಯ ಬೀಜ ಬಿತ್ತಿತ್ತು.

ವಿಲೀನಗೊಳ್ಳಲಿರುವ ಬ್ಯಾಂಕ್‌ಗಳ ಗ್ರಾಹಕರು ಏನು ಮಾಡಬೇಕು? ಇಲ್ಲಿದೆ ಮಾಹಿತಿ

ಹಿಂದೂ ಶಾಶ್ವತ ನಿಧಿಯೇ ಕೆನರಾ
1906ರಲ್ಲಿ ಅಮ್ಮೆಂಬಳ ಸುಬ್ಬರಾವ್‌ ಪೈ ನೇತೃತ್ವದಲ್ಲಿ ಹಿಂದೂ ಶಾಶ್ವತ ನಿಧಿ ಹೆಸರಿನಿಂದ ಮಂಗಳೂರಿನಲ್ಲಿ ಕೆನರಾ ಬ್ಯಾಂಕ್‌ ಸ್ಥಾಪನೆಯಾಯಿತು. 1910ರಲ್ಲಿ ಕೆನರಾ ಬ್ಯಾಂಕ್‌ ಲಿ. ಹೆಸರಿನಲ್ಲಿ ಮರುನಾಮಕರಣಗೊಂಡಿತು. ಮಂಗಳೂರಿನ ಡೊಂಗರಕೇರಿಯಲ್ಲಿ ಸ್ಥಾಪನೆಯಾದ ಬ್ಯಾಂಕ್‌ನ ಪ್ರಧಾನ ಕಚೇರಿ ಬಹಳ ವರ್ಷದವರೆಗೂ ಮಂಗಳೂರಿನಲ್ಲೇ ಇತ್ತು. ಆದರೆ ರಾಷ್ಟ್ರೀಕರಣವಾದ ಬಳಿಕ ಆಡಳಿತ ದೃಷ್ಟಿಯಿಂದ ಬ್ಯಾಂಕ್‌ನ ಪ್ರಧಾನ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. ಈ ಬ್ಯಾಂಕ್‌ ಕೂಡ ರಾಷ್ಟ್ರೀಕರಣವಾಗಿದ್ದರೂ ಕರಾವಳಿಯ ಮಂದಿ ನಮ್ಮ ಬ್ಯಾಂಕ್‌ ಎಂದೇ ಪರಿಗಣಿಸಿ ಆರ್ಥಿಕ ವ್ಯವಹಾರ ನಡೆಸಿ ಬ್ಯಾಂಕ್‌ನ್ನು ಬೆಳೆಸಿದ್ದರು. ಶಿಕ್ಷಣ ಸಂಶ್ಥೆಗಳ ಜತೆಯಲ್ಲೇ ಬೆಳೆದ ಕೆನರಾ ಬ್ಯಾಂಕ್‌ ಕರಾವಳಿಯ ಅಸ್ಮಿತೆಯಾಗಿತ್ತು. ವಿಜಯಾ ಬ್ಯಾಂಕ್‌ ವಿಲೀನದ ಸಂದರ್ಭದಲ್ಲೇ ಕೆನರಾ ಬ್ಯಾಂಕ್‌ನ ಹೆಸರೂ ಕೇಳಿ ಬಂದಿದ್ದು, ಅಮದೇ ಈ ಬ್ಯಾಂಕ್‌ನ್ನು ಉಳಿಸುವ ಬಗ್ಗೆಯೂ ದನಿ ಕೇಳಿ ಬಂದಿತ್ತು.

ಜಿಡಿಪಿ ಪಾತಾಳಕ್ಕಿಳಿಯಲು ಪ್ರಮುಖ ಕಾರಣಗಳ ಪೈಕಿ ನೋಟು ಅಮಾನ್ಯೀಕರಣವೂ ಒಂದು!

ಇತಿಹಾಸ ಸೇರಲಿದೆ ಕಾರ್ಪ್‌
ಕರಾವಳಿಯಲ್ಲೇ ಹುಟ್ಟಿ ಬೆಳೆದ ಕಾರ್ಪೊರೇಷನ್‌ ಬ್ಯಾಂಕ್‌ನ ಹೆಸರು ಕೂಡ ಅಳಿಸಿ ಹೋಗಲಿದೆ. ಈ ಬ್ಯಾಂಕ್‌ ಯೂನಿಯನ್‌ ಬ್ಯಾಂಕ್‌ ಜತೆಯಲ್ಲಿ ವಿಲೀನವಾಗಲಿದೆ. ಕಾರ್ಪೊರೇಷನ್‌ ಬ್ಯಾಂಕ್‌ ಮದ್ರಾಸ್‌ ಪ್ರಾಂತ್ಯದ ಹಿಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಳೆಯ ಬ್ಯಾಂಕಿಂಗ್‌ ಸಂಸ್ಥೆಗಳಲ್ಲೊಂದು. 1906ರ ಮಾ.12ರಂದು ಖಾನ್‌ ಬಹದ್ದೂರ್‌ ಅಬ್ದುಲ್ಲಾ ಹಾಜಿ ಕಾಸಿಂ ಸಾಹೇಬ್‌ ನೇತೃತ್ವದಲ್ಲಿ ಉಡುಪಿಯಲ್ಲಿ ಈ ಬ್ಯಾಂಕ್‌ ಸ್ಥಾಪನೆಯಾಗಿದ್ದು, ಈಗ ದೇಶದ ಅಗ್ರಗಣ್ಯ ಬ್ಯಾಂಕ್‌ಗಳಲ್ಲೊಂದಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದರೂ ಇಲ್ಲಿ ವ್ಯಾಪಾರ ಉದ್ದಿಮೆಗೆ ಒಂದು ಆರ್ಥಿಕ ವ್ಯವಸ್ಥೆ ಇರಲಿಲ್ಲ. ಇದನ್ನು ಮನಗಂಡು ಕಾರ್ಪೊರೇಶನ್‌ ಬ್ಯಾಂಕ್‌ನ ಸ್ಥಾಪನೆಗೆ ಬುನಾದಿ ಹಾಕಲಾಯಿತು. ಈ ಬ್ಯಾಂಕ್‌ 1980ರಲ್ಲಿ ಇತರ 5 ಖಾಸಗಿ ಬ್ಯಾಂಕ್‌ಗಳ ಜತೆಗೆ ರಾಷ್ಟ್ರೀಕೃತವಾಗಿತ್ತು. ಕಾರ್ಪೊರೇಶನ್‌ ಬ್ಯಾಂಕ್‌ ಆರಂಭಗೊಂಡು 114 ವರ್ಷಗಳು ಪೂರೈಸಿವೆ. ಕಾರ್ಪೊರೇಶನ್‌ ಬ್ಯಾಂಕ್‌ ಮೊದಲ ಸಾರ್ವಜನಿಕ ವಲಯದ ಬ್ಯಾಂಕ್‌ ಎಂದು ಈ ಭಾಗದಲ್ಲಿ ಚಿರಪರಿಚಿತಗೊಂಡಿತ್ತು.
(ಮಾಹಿತಿ: ಆರ್‌.ಸಿ. ಭಟ್‌, ಮಂಗಳೂರು)

ವಿಜಯ ಬ್ಯಾಂಕ್‌ ವಿಲೀನ ಪೂರ್ಣಕ್ಕೆ 2 ವರ್ಷ ಬೇಕು

ಜಗತ್ತಿನ ಟಾಪ್‌ 10 ಬ್ಯಾಂಕ್‌ಗಳು
1. ಇಂಡಸ್ಟ್ರೀಯಲ್‌ ಆ್ಯಂಡ್‌ ಕಮರ್ಷಿಯಲ್‌ ಬ್ಯಾಂಕ್‌ ಆಫ್‌ ಚೀನಾ
2. ಚೀನಾ ಕನ್ಸಟ್ರಕ್ಷ ನ್‌ ಬ್ಯಾಂಕ್‌ ಕಾರ್ಪೊರೇಷನ್‌
3. ಅಗ್ರಿಕಲ್ಚರಲ್‌ ಬ್ಯಾಂಕ್‌ ಆಫ್‌ ಚೀನಾ
4. ಮಿತ್ಸುಬಿಷಿ ಯುಎಫ್‌ಜೆ ಫೈನಾನ್ಷಿಯಲ್‌ ಗ್ರೂಪ್‌, ಜಪಾನ್‌
5. ಬ್ಯಾಂಕ್‌ ಆಫ್‌ ಚೀನಾ
6. ಜೆಪಿ ಮಾರ್ಗೊನ್‌ ಚೇಸ್‌, ಅಮೆರಿಕ
7. ಎಚ್‌ಎಸ್‌ಬಿಸಿ ಹೋಲ್ಡಿಂಗ್ಸ್‌, ಬ್ರಿಟನ್‌
8. ಬಿಎನ್‌ಪಿ ಪರಿಬಾಸ್‌, ಫ್ರಾನ್ಸ್‌
9. ಬ್ಯಾಂಕ್‌ ಆಫ್‌ ಅಮೆರಿಕ
10. ವೆಲ್ಸ್‌ ಫಾರ್ಗೊ, ಅಮೆರಿಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ