ಆ್ಯಪ್ನಗರ

ಕೆಲಸ ಬದಲಿಸಿದಾಗ ಪಿಎಫ್‌ ವರ್ಗಾವಣೆ ಈಗ ಸುಲಭ

ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಕೆಲಸ ಬದಲಿಸುವುದು ಈಗಿನ ಟ್ರೆಂಡ್‌...

Vijaya Karnataka Web 24 Sep 2017, 8:15 am

ಹೊಸದಿಲ್ಲಿ: ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಕೆಲಸ ಬದಲಿಸುವುದು ಈಗಿನ ಟ್ರೆಂಡ್‌. ಹೀಗೆ ಕೆಲಸ ಬದಲಿಸಿದಾಗಲೆಲ್ಲ ಹಳೆಯ ಕಂಪನಿಯಲ್ಲಿದ್ದ ಭವಿಷ್ಯ ನಿಧಿ(ಪಿಎಫ್‌) ಖಾತೆ ರದ್ದುಗೊಳಿಸುವುದು ಇಲ್ಲವೇ, ಹೊಸ ಕಂಪನಿಯ ಖಾತೆಗೆ ಅದನ್ನು ವರ್ಗಾಯಿಸುವುದು ಕಿರಿಕಿರಿಯ ವಿಷಯ. ಆದರೆ, ಈ ಪ್ರಕ್ರಿಯೆಯನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ(ಇಪಿಎಫ್‌ಒ) ಈಗ ಸುಲಭಗೊಳಿಸಿದೆ.

ಪ್ರಸ್ತುತ, ಕೆಲಸ ಬದಲಿಸಿದಾಗ ಫಾರ್ಮ್‌-13 ಅನ್ನು ಬಳಸಿ ಪಿಎಫ್‌ ವರ್ಗಾವಣೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು. ಹೊಸ ಪದ್ಧತಿಯಲ್ಲಿ ವರ್ಗಾವಣೆ ಪ್ರಕ್ರಿಯೆ ತನ್ನಷ್ಟಕ್ಕೆ ತಾನೇ ಆಗಲಿದೆ. ''ಹಳೆಯ ಕೆಲಸ ಬಿಟ್ಟು ಹೊಸ ಕಂಪನಿಗೆ ಉದ್ಯೋಗಿಯು ದಾಖಲಾದಾಗ, ಹೊಸ ಉದ್ಯೋಗದಾತರಿಗೆ ತನ್ನ ಹಳೆಯ ಪಿಎಫ್‌ ಖಾತೆಯ ವಿವರಗಳನ್ನು ಎಫ್‌-11 ಎನ್ನುವ ಹೊಸ ಅರ್ಜಿಯಲ್ಲಿ ಬರೆದುಕೊಟ್ಟರೆ ಮುಗಿಯಿತು. ಹಳೆಯ ಖಾತೆಯಲ್ಲಿನ ಹಣ ಅದಾಗಿಯೇ ಹೊಸ ಖಾತೆಗೆ ವರ್ಗವಾಗುತ್ತದೆ,'' ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಖಾತೆ ವರ್ಗಾವಣೆಗೆ ಹಳೆಯ ಫಾರ್ಮ್‌ ನಂ.13ರ ಬದಲಿಗೆ ಕಂಪೋಸಿಟ್‌ ಡಿಕ್ಲರೇಷನ್‌ ಫಾರ್ಮ್‌(ಎಫ್‌-11) ಅನ್ನು ಪರಿಚಯಿಸಲು ಇಪಿಎಫ್‌ಒ ಮುಂದಾಗಿದೆ. ಎಫ್‌-11ರಲ್ಲಿ ಆಧಾರ್‌ ಸಂಖ್ಯೆ, ಬ್ಯಾಂಕ್‌ ಖಾತೆ ಸಂಖ್ಯೆ ಮತ್ತಿತರ ವಿವರಗಳನ್ನು ನೀಡಬೇಕಾಗುತ್ತದೆ.

ಕೆಲಸ ಬದಲಿಸಿದಾಗ, ಆನ್‌ಲೈನ್‌ ಮೂಲಕ ಪಿಎಫ್‌ ಖಾತೆ ವರ್ಗಾವಣೆಗೂ ಇಪಿಎಫ್‌ಒ ಅವಕಾಶ ಕಲ್ಪಿಸಿದೆ. ಯುನಿವರ್ಸಲ್‌ ಅಕೌಂಟ್‌ ನಂಬರ್‌(ಯುಎಎನ್‌) ಅನ್ನು ಇಪಿಎಫ್‌ಒ ಪರಿಚಯಿಸಿದ್ದು, ಪಿಎಫ್‌ ವ್ಯವಹಾರಕ್ಕೆ ಪೂರಕವಾಗಿದೆ.

ನಾಲ್ಕು ಕೋಟಿಗೂ ಅಧಿಕ ಸದಸ್ಯರನ್ನು ಇಪಿಎಫ್‌ಒ ಹೊಂದಿದ್ದು, 10 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಹಣವನ್ನು ನಿಭಾಯಿಸುತ್ತಿದೆ. ಇಪಿಎಫ್‌ ಹಣ ಹಿಂಪಡೆಯುವುದು, ಪಿಂಚಣಿ ನಿಗದಿ, ಡೆಡ್‌ ಕ್ಲೈಮ್‌, ಇಪಿಎಫ್‌ ವರ್ಗಾವಣೆಗೆ ಅರ್ಜಿ ಸೇರಿದಂತೆ ಕೋಟ್ಯಂತರ ಕ್ಲೈಮ್‌ಗಳನ್ನು ಇಪಿಎಫ್‌ಒ ನಿಭಾಯಿಸುತ್ತಿದೆ. ಶೇ.10-15 ಅರ್ಜಿಗಳು ಪಿಎಫ್‌ ವರ್ಗಾವಣೆಗೆ ಸಂಬಂಧಿಸಿದ್ದಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ