ಆ್ಯಪ್ನಗರ

ಫೇಸ್‌ಬುಕ್‌ ಇಂಡಿಯಾ ನೀತಿ ನಿರೂಪಣೆ ಮುಖ್ಯಸ್ಥೆ ಅಂಖಿ ದಾಸ್‌ ರಾಜೀನಾಮೆ

ಕೆಲವು ದಿನಗಳ ಹಿಂದೆ ಸಂಸದೆ ಮೀನಾಕ್ಷಿ ಲೇಖಿ ನೇತೃತ್ವದ ಸಂಸದೀಯ ಸಮಿತಿ ಮುಂದೆ ಹಾಜರಾಗಿದ್ದ ಅಂಖಿ ದಾಸ್‌ ಡೇಟಾ ಸುರಕ್ಷತೆ ಸಂಬಂಧ 2 ಗಂಟೆಗೂ ಹೆಚ್ಚು ಕಾಲ ವಿಚಾರಣೆ ಎದುರಿಸಿದ್ದರು.

Agencies 27 Oct 2020, 11:04 pm
ಹೊಸದಿಲ್ಲಿ: ದ್ವೇಷ ಭಾಷಣದ ಪೋಸ್ಟ್‌ಗಳ ನಿರ್ವಹಣೆ ವಿಚಾರದಲ್ಲಿ ಪಕ್ಷಪಾತಿ ಧೋರಣೆ ಅನುಸರಿಸಲಾಗುತ್ತಿದೆ ಎಂಬ ಆರೋಪಗಳ ಕೇಂದ್ರ ಬಿಂದು ಎನಿಸಿಕೊಂಡ ಫೇಸ್‌ಬುಕ್‌ನ ಭಾರತದ ನೀತಿ ನಿರೂಪಣೆ ವಿಭಾಗದ ಮುಖ್ಯಸ್ಥೆ ಅಂಖಿ ದಾಸ್‌ ಅವರು ತಮ್ಮ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.
Vijaya Karnataka Web Ankhi Das


ದ್ವೇಷ ಭಾಷಣದ ಪೋಸ್ಟ್‌ಗಳ ವಿಚಾರದಲ್ಲಿ ಫೇಸ್‌ಬುಕ್‌ ಇಂಡಿಯಾ ಬಿಜೆಪಿ ನಾಯಕರ ಬಗ್ಗೆ ಮೃದು ಧೋರಣೆ ತಾಳಿದೆ ಎಂದು ಆರೋಪಿಸಿ ವಾಲ್‌ಸ್ಟ್ರೀಟ್‌ ಜರ್ನಲ್‌ ಹಾಗೂ ಟೈಮ್‌ ನಿಯತಕಾಲಿಕೆಯಲ್ಲಿ ಆಗಸ್ಟ್‌ನಲ್ಲಿ ವರದಿಗಳು ಬಂದಿದ್ದವು. ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಸೇರಿ ಪ್ರತಿಪಕ್ಷಗಳ ನಾಯಕರು ಸಾಮಾಜಿಕ ಜಾಲತಾಣಗಳನ್ನು ಕೇಂದ್ರ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ ಎಂದು ಕಿಡಿಕಾರಿದ್ದರು. ಇವೆಲ್ಲದರ ನಡುವೆ ಬಳಕೆದಾರರ ಡೇಟಾ ಸುರಕ್ಷತೆ ವಿಚಾರದಲ್ಲೂ ಅನುಮಾನಗಳು ಎದ್ದಿದ್ದವು.

ಕೆಲವು ದಿನಗಳ ಹಿಂದಷ್ಟೇ ಸಂಸದೆ ಮೀನಾಕ್ಷಿ ಲೇಖಿ ನೇತೃತ್ವದ ಸಂಸದೀಯ ಸಮಿತಿ ಮುಂದೆ ಹಾಜರಾಗಿ ಡೇಟಾ ಸುರಕ್ಷತೆ ಸಂಬಂಧ 2 ಗಂಟೆಗೂ ಹೆಚ್ಚು ಕಾಲ ಅಂಖಿ ದಾಸ್‌ ವಿಚಾರಣೆ ಎದುರಿಸಿದ್ದರು. ಇದರ ಬೆನ್ನಲ್ಲೇ ಅವರು ತಮ್ಮ ಹುದ್ದೆ ತೊರೆದಿದ್ದಾರೆ.

"ಅಂಖಿ ದಾಸ್‌ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯುವ ನಿರ್ಧಾರ ಕೈಗೊಂಡಿದ್ದಾರೆ. ಫೇಸ್‌ಬುಕ್‌ ಇಂಡಿಯಾ, ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಾರ್ವಜನಿಕ ನೀತಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದ ದಾಸ್‌ ಸಾರ್ವಜನಿಕ ಸೇವೆಯಲ್ಲಿ ತಮ್ಮ ಕಾಳಜಿಯನ್ನು ಮುಂದುವರಿಸಲು ಕಂಪನಿಯನ್ನು ತೊರೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ಅವರ ಸೇವೆಯನ್ನು ಫೇಸ್‌ಬುಕ್‌ ಸ್ಮರಿಸುತ್ತದೆ," ಎಂದು ಫೇಸ್‌ಬುಕ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿತ್‌ ಮೋಹನ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ