ಆ್ಯಪ್ನಗರ

ಉದ್ಯೋಗಿಗಳಿಗೆ ಹೆಚ್ಚಿನ ಪಿಂಚಣಿಗೆ ಈಗ ಇಪಿಎಸ್‌ ಆಯ್ಕೆ!

ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿನ ಪರಿಣಾಮ ಖಾಸಗಿ ವಲಯದ ಉದ್ಯೋಗಿಗಳು, ಉದ್ಯೋಗಿಗಳ ಪಿಂಚಣಿ ಯೋಜನೆಯ (ಇಪಿಎಸ್‌) ಅಡಿಯಲ್ಲಿಯೇ ದೊಡ್ಡ ಮೊತ್ತದ ಪಿಂಚಣಿ ಪಡೆಯಲು ಹಾದಿ ಸುಗಮವಾಗಿದೆ. ಇದರ ಜತೆಗೆ, ದೊಡ್ಡ ಪಿಂಚಣಿಯು ನಿಮ್ಮ ಸ್ವಂತ ಜೇಬಿನಿಂದಲೇ ಬರುತ್ತದೆ ಎಂಬುದನ್ನು ಮರೆಯದಿರಿ. ಹಾಗಾದರೆ ಹೇಗೆ ಪಡೆಯಬಹುದು? ಇಲ್ಲಿದೆ ವಿವರ

Vijaya Karnataka Web 9 Apr 2019, 5:00 am
ಇತ್ತೀಚೆಗೆ ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟವಾಗುವವರೆಗೂ, ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್‌) ಅಡಿಯಲ್ಲಿ ಮಾಸಿಕ ಗರಿಷ್ಠ 7,500 ರೂ. ಪಿಂಚಣಿ ಪಡೆಯುವ ಅವಕಾಶ ಇತ್ತು. ಆದರೆ ಸುಪ್ರೀಂ ಆದೇಶದ ಪರಿಣಾಮ ಈ ಮಿತಿ ರದ್ದಾಗಿದೆ. ಇನ್ನು ಮುಂದೆ ನಿಮ್ಮ ಪಿಂಚಣಿಯು ನೀವು ಕೊನೆಯದಾಗಿ ತೆಗೆದುಕೊಳ್ಳುವ ಪಿಂಚಣಿಗೆ ಅರ್ಹ ವೇತನವನ್ನು (ಮೂಲ ವೇತನ ಮತ್ತು ತುಟ್ಟಿ ಭತ್ಯೆ) ಅವಲಂಬಿಸಿ ನಿರ್ಧಾರವಾಗುತ್ತದೆ.
Vijaya Karnataka Web factors you should consider before opting for higher pension under eps scheme
ಉದ್ಯೋಗಿಗಳಿಗೆ ಹೆಚ್ಚಿನ ಪಿಂಚಣಿಗೆ ಈಗ ಇಪಿಎಸ್‌ ಆಯ್ಕೆ!


ಸುಪ್ರೀಂಕೋರ್ಟ್‌ ತೀರ್ಮಾನದಿಂದ ಕಾರ್ಮಿಕರ ವಲಯಕ್ಕೆ ಸಂತಸವಾಗಿದೆ. ಎಲ್ಲ ಗೊಂದಲಗಳು ಬಗೆಹರಿದಿವೆ. ಪ್ರತಿಯೊಬ್ಬರೂ ಈಗ ತಮ್ಮ ವೃತ್ತಿಯ ಕೊನೆಯಲ್ಲಿ ತೆಗೆದುಕೊಳ್ಳುವ ವೇತನದ ಮಟ್ಟವನ್ನು ಆಧರಿಸಿ ಪಿಂಚಣಿ ನಿರ್ಣಯವಾಗಲಿದೆ. ಉದ್ಯೋಗಿಗಳು ಪೂರ್ಣ ಪ್ರಮಾಣದ ಪಿಂಚಣಿ ಪಡೆಯುವ ಆಯ್ಕೆಯನ್ನು ಬಳಸಿಕೊಳ್ಳಬೇಕು ಎನ್ನುತ್ತಾರೆ ಭಾರತೀಯ ಮಜ್ದೂರ್‌ ಸಂಘದ ಪ್ರಧಾನ ಕಾರ್ಯದರ್ಶಿ ವೃಜೇಶ್‌ ಉಪಾಧ್ಯಾಯ.ಹೀಗಿದ್ದರೂ, ಈ ಹೆಚ್ಚಿನ ಮೊತ್ತದ ಪಿಂಚಣಿಯು ನಿಮ್ಮ ಸ್ವಂತ ಜೇಬಿನಿಂದಲೇ ಬರುತ್ತದೆ ಎಂಬುದನ್ನು ಮರೆಯಬಾರದು.



ಈಗ ಹೇಗೆ?


ಸದ್ಯಕ್ಕೆ ನಿಮ್ಮ ಪಿಂಚಣಿಗೆ ಅರ್ಹ ವೇತನದ (ಬೇಸಿಕ್‌ ಪೇ) ಶೇ.12ರಷ್ಟು ಮೊತ್ತವು ಉದ್ಯೋಗಿಗಳ ಭವಿಷ್ಯನಿಧಿ (ಇಪಿಎಫ್‌) ಖಾತೆಗೆ ಸೇರ್ಪಡೆಯಾಗುತ್ತದೆ. ಇದಕ್ಕೆ ಸಮನಾಗಿ ನಿಮ್ಮ ಕಂಪನಿ ನೀಡುವ ಶೇ.12 ಮೊತ್ತದಲ್ಲಿ ಶೇ.8.33 ಪಾಲು ಅಥವಾ ಮಾಸಿಕ 1,250 ರೂ. ಇವೆರಡರಲ್ಲಿ ಗರಿಷ್ಠ ಯಾವುದೋ, ಅದು ಉದ್ಯೋಗಿಗಳ ಪಿಂಚಣಿ ಯೋಜನೆಗೆ (ಇಪಿಎಸ್‌) ಹಾಗೂ ಉಳಿದ ಶೇ.3.67 ಮೊತ್ತ ಇಪಿಎಫ್‌ಗೆ ಜಮೆಯಾಗುತ್ತದೆ. ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ ಪಿಂಚಣಿಗೆ ಅರ್ಹ ವೇತನದ ಇಡೀ ಶೇ.8.33 ಮೊತ್ತ ಇಪಿಎಸ್‌ಗೆ ವರ್ಗಾವಣೆಯಾಗಲಿದೆ. ಮಾಸಿಕ 1,250 ರೂ.ಗಳ ಮಿತಿ ಇರುವುದಿಲ್ಲ. ಇದು ಪಿಂಚಣಿಯ ಗಣನೀಯ ಏರಿಕೆಗೆ ಕಾರಣವಾಗುತ್ತದೆ. ಆದರೆ ನೆನಪಿರಲಿ, ಇಪಿಎಸ್‌ಗೆ ಸಲ್ಲಿಕೆಯಾಗುವ ಮೊತ್ತ ಏರಿಕೆಯಾದರೆ, ಕಂಪನಿಯ ಕಡೆಯಿಂದ ಇಪಿಎಫ್‌ಗೆ ಜಮೆಯಾಗುತ್ತಿದ್ದ ಮೊತ್ತ ಇಳಿಕೆಯಾಗಲಿದೆ. ಆಯ್ಕೆ ನಿಮ್ಮದು.

=========

ಮಾಸಿಕ 45,000 ರೂ. ಪಿಂಚಣಿ ಹೇಗೆ ಸಾಧ್ಯ?

ನೀವು 35 ವರ್ಷಗಳ ಸೇವಾವಧಿಯ ನಂತರ ನಿವೃತ್ತಿಯ ಅಂಚಿನಲ್ಲಿದ್ದು, 58 ವರ್ಷ ವಯಸ್ಸಾಗಿದೆ ಎಂದಿಟ್ಟುಕೊಳ್ಳಿ. ನೀವು ಪೂರ್ಣ ಪಿಂಚಣಿ ಬಯಸುತ್ತಿದ್ದರೆ, ನಿಮ್ಮ ಕಂಪನಿಯು ಸೇವಾವಧಿಯಲ್ಲಿ ಇಪಿಎಫ್‌ನಿಂದ ಇಪಿಎಸ್‌ಗೆ ಸಲ್ಲಿಸುತ್ತಿದ್ದ ಶೇ.8.33ರ ಇಡೀ ಮೊತ್ತವನ್ನು ಇಪಿಎಸ್‌ಗೆ ವರ್ಗಾಯಿಸಬೇಕು. ನಿಮ್ಮ ವೇತನ ವಾರ್ಷಿಕ ಶೇ.7ರ ಸರಾಸರಿಯಲ್ಲಿ ಏರಿಕೆಯಾಗಿದ್ದು, ಸದ್ಯಕ್ಕೆ ಮಾಸಿಕ 90,000 ರೂ. ಪಡೆಯುತ್ತಿದ್ದರೆ, ಕಳೆದ 35 ವರ್ಷಗಳಲ್ಲಿ ಹೆಚ್ಚುವರಿ ಕಾಂಟ್ರಿಬ್ಯೂಷನ್‌ 10.35 ಲಕ್ಷ ರೂ. ಮತ್ತು ಬಡ್ಡಿ ಸೇರುತ್ತದೆ. ಈ ಬಡ್ಡಿಯನ್ನು ಸೇರಿಸಿದಾಗ ಹೆಚ್ಚುವರಿ ಕಾಂಟ್ರಿಬ್ಯೂಷನ್‌ ಮೊತ್ತ ಬರೋಬ್ಬರಿ 45.15 ಲಕ್ಷ ರೂ.ಗಳಾಗುತ್ತದೆ. ಈ ಮೊತ್ತವನ್ನು ನೀವು ಇಪಿಎಫ್‌ನಿಂದ ಇಪಿಎಸ್‌ಗೆ ವರ್ಗಾಯಿಸಿದಾಗ ಪೂರ್ಣ ಪಿಂಚಣಿಗೆ ಅರ್ಹರಾಗುತ್ತೀರಿ. ಆಗ ಮಾಸಿಕ 45,000 ರೂ. ಪಿಂಚಣಿ ನಿಮ್ಮದಾಗುತ್ತದೆ.

=========

ಮಾಸಿಕ ಇಪಿಎಸ್‌ ಕಾಂಟ್ರಿಬ್ಯೂಷನ್‌ ಭಾರಿ ಜಿಗಿತ:

ಸುಪ್ರೀಂ ಕೋಟ್‌ ಆದೇಶದ ಪ್ರಕಾರ ನಿಮ್ಮ ಪಿಂಚಣಿಗೆ ಅರ್ಹ ವೇತನದಲ್ಲಿ ಶೇ.8.33 ಇಪಿಎಸ್‌ಗೆ ಜಮೆಯಾಗಲಿದೆ. ಈ ಹಿಂದೆ ಹಳೆಯ ಪದ್ಧತಿಯಲ್ಲಿ ಪಿಂಚಣಿಗೆ ಅರ್ಹ ವೇತನದ ಮಿತಿ ಮಾಸಿಕ 15,000 ರೂ.ಗಳಾಗಿತ್ತು. ಅದಕ್ಕಿಂತ ಹೆಚ್ಚು ಸಂಬಳ ಇದ್ದರೂ, 15,000 ರೂ.ಗಳನ್ನು ಮಾತ್ರ ಪಿಂಚಣಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತಿತ್ತು. ಈಗ ಮಿತಿ ರದ್ದಾಗಿರುವುದರಿಂದ ಇಪಿಎಸ್‌ಗೆ ಕಾಂಟ್ರಿಬ್ಯೂಷನ್‌ ಜಿಗಿಯಲಿದೆ.

==============

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ