ಆ್ಯಪ್ನಗರ

ಶಿವಮೊಗ್ಗದ ಫೌಂಡ್ರಿ ಉದ್ಯಮಕ್ಕೆ ಸಾರಿಗೆ ಸಂಕಟ, ಗೂಡ್ಸ್‌ ರೈಲುಗಳಿದ್ದರೂ ಪ್ರಯೋಜನ ಶೂನ್ಯ

ಶಿವಮೊಗ್ಗದ ಫೌಂಡ್ರಿ ಉದ್ದಿಮೆಗಳಲ್ಲಿ ಉತ್ಪಾದಿಸುವ ಕೆಲವೊಂದು ಉತ್ಪನ್ನಗಳ ಸಾಗಣೆಗೆ ಸೂಕ್ತ ರೈಲ್ವೆ ವ್ಯವಸ್ಥೆಯೇ ಇಲ್ಲವಾಗಿದೆ. ಇದರಿಂದ ಉದ್ಯಮಿಗಳು ಸಾರಿಗೆ ಸಂಕಟವನ್ನು ಎದುರಿಸುತ್ತಿದ್ದು, ಸಾಗಣೆ ವೆಚ್ಚದ ಹೊರೆಯನ್ನು ಅನುಭವಿಸುವಂತಾಗಿದೆ.

Curated byಎನ್‌. ಸಚ್ಚಿದಾನಂದ | Vijaya Karnataka Web 31 Mar 2023, 9:13 am

ಹೈಲೈಟ್ಸ್‌:

  • ಉತ್ಪನ್ನಗಳನ್ನು ಸಾಗಿಲು ಗೂಡ್ಸ್‌ ರೈಲುಗಳಿದ್ದರೂ ಪ್ರಯೋಜನ ಶೂನ್ಯ
  • ಶಿವಮೊಗ್ಗದ ಫೌಂಡ್ರಿ ಉದ್ಯಮಕ್ಕೆ ಟ್ರಕ್‌ಗಳಿಂದಾಗಿ ಸಾಗಣೆ ವೆಚ್ಚ ಅಧಿಕ
  • ಫೌಂಡ್ರಿ ಉದ್ಯಮ ವಿಸ್ತರಣೆಗೆ ಸಂಪರ್ಕ ಸಾಧನಗಳ ಸವಾಲು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Foundry
  • ಆತೀಶ್‌ ಬಿ.ಕನ್ನಾಳೆ ಶಿವಮೊಗ್ಗ
ಕೇಂದ್ರ ಸರಕಾರ ಮೇಕ್‌ ಇನ್‌ ಇಂಡಿಯಾ, ವೋಕಲ್‌ ಫಾರ್‌ ಲೋಕಲ್‌, ಹೊಸ ಸ್ಟಾರ್ಟ್‌ ಅಪ್‌ಗಳ ಆರಂಭ ಇಂತಹವುಗಳ ಮೂಲಕ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತಿದೆ. ಆದರೆ, ಫೌಂಡ್ರಿ ಉದ್ದಿಮೆಗಳಲ್ಲಿ ಉತ್ಪಾದಿಸುವ ಕೆಲವೊಂದು ಉತ್ಪನ್ನ ಸಾಗಣೆಗೆ ಸೂಕ್ತ ರೈಲ್ವೆ ವ್ಯವಸ್ಥೆಯೇ ಇಲ್ಲ.
ರಾಜ್ಯದಲ್ಲಿಯೇ ಅತಿ ಹೆಚ್ಚು ಫೌಂಡ್ರಿ ಉದ್ದಿಮೆಗಳನ್ನು ಹೊಂದಿರುವ ಶಿವಮೊಗ್ಗ ಜಿಲ್ಲೆಯಿಂದ ಗೂಡ್ಸ್‌ ರೈಲಿನ ವ್ಯವಸ್ಥೆ ಇದ್ದರೂ ಅದರ ಪ್ರಯೋಜನ ಉದ್ದಿಮೆಗಳಿಗೆ ಲಭ್ಯವಾಗುತ್ತಿಲ್ಲ. ಪರಿಣಾಮ ಅವರು ಅನಿವಾರ್ಯವಾಗಿ ರಸ್ತೆ ಮಾರ್ಗವನ್ನೇ ಅವಲಂಬಿಸಬೇಕಾಗಿದೆ.

ಶಿವಮೊಗ್ಗದ ಫೌಂಡ್ರಿಯಲ್ಲಿ ಸ್ವರೂಪ ತಾಳುವ ಉತ್ಪನ್ನಗಳನ್ನು ಅಗತ್ಯ ಇರುವ ಕಡೆಗಳಿಗೆ ಸಾಗಿಸುವುದಕ್ಕೆ ರೈಲ್ವೆ 'ಉದ್ಯಮಿ ಸ್ನೇಹಿ'ಯಾಗಿಲ್ಲ. ಪ್ಯಾಸೆಂಜರ್‌ ರೈಲುಗಳಲ್ಲಿ ಯಾವ ರೀತಿಯಲ್ಲಿ ಆಸನಗಳನ್ನು ಬುಕಿಂಗ್‌ ಮಾಡುವ ವ್ಯವಸ್ಥೆ ಇದೆಯೋ ಆ ರೀತಿಯಲ್ಲಿ ಗೂಡ್ಸ್‌ ರೈಲುಗಳಿಗೂ ಬರಬೇಕು. ರೈಲಿನಲ್ಲಿ ಫೌಂಡ್ರಿ ಮತ್ತಿತರ ಉತ್ಪನ್ನಗಳನ್ನು ಸಾಗಿಸಲು ಅನುವು ಮಾಡಿಕೊಟ್ಟರೆ ಉದ್ದಿಮೆದಾರರಿಗೆ ಇನ್ನಷ್ಟು ಪುಷ್ಠಿ ನೀಡಿದಂತಾಗಲಿದೆ.

ಫೌಂಡ್ರಿ ಉದ್ಯಮಕ್ಕೆ ತಗ್ಗದ ಸಂಕಟ: ಉತ್ಪಾದಕರಿಗೆ ಹೆಚ್ಚಿದ ಹೊರೆ, ಖರೀದಿಗೆ ಗ್ರಾಹಕರ ಹಿಂಜರಿತ!
* ವಾರಣಾಸಿಯಲ್ಲಿ ಮಾತ್ರ ಹನಿಕ್ರೋಮ್‌ ಪ್ಲೇಟಿಂಗ್‌ ತಯಾರಿಕೆ: ರೈಲ್ವೆ ಎಂಜಿನ್‌ ತಯಾರಿಸಲು ಬೇಕಾದ ಸಿಲಿಂಡರ್‌ಗಳನ್ನು ಶಿವಮೊಗ್ಗದಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಆದರೆ, ಅದರಲ್ಲಿ ಬಳಸಲಾಗುವ 'ಹನಿಕ್ರೋಮ್‌ ಪ್ಲೇಟಿಂಗ್‌' ಎಂಬ ಸಾಮಗ್ರಿ ವಾರಣಾಸಿಯಲ್ಲಿ ಮಾತ್ರ ಉತ್ಪಾದನೆ ಮಾಡಲಾಗುತ್ತದೆ. ಹೀಗಾಗಿ, ಶಿವಮೊಗ್ಗದಲ್ಲಿ ಸಿದ್ಧಪಡಿಸುವ ಸಿಲಿಂಡರ್‌ಗಳನ್ನು ಅಲ್ಲಿಗೆ ಕಳುಹಿಸಿ ಅಳವಡಿಸುವ ಪ್ರಕ್ರಿಯೆ ಮಾಡಬೇಕಾಗಿದೆ. ಇದಕ್ಕೆ ಸಾಗಣೆ ವೆಚ್ಚ ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿದೆ ಎನ್ನುವುದು ಫೌಂಡ್ರಿ ಉದ್ದಿಮೆದಾರರ ಅಳಲಾಗಿದೆ.

ಅದೇ ರೀತಿ ಬೆಮುಲ್‌ಗೆ ಲೈನರ್‌ಗಳನ್ನು ಶಿವಮೊಗ್ಗ ಫೌಂಡ್ರಿಯಿಂದಲೇ ಪೂರೈಸಲಾಗುತ್ತಿದೆ. ನಗರದಿಂದಲೇ ರೈಲ್ವೆ ಸೌಲಭ್ಯವಿದ್ದರೂ ಟ್ರಕ್‌ಗಳ ಮೇಲೆ ಅವಲಂಬಿಸಬೇಕಾಗಿದೆ.

Foundry Industry | ಫೌಂಡ್ರಿ ಉದ್ಯಮಕ್ಕೆ ಶುಕ್ರದೆಸೆ: ವಾಹನಗಳ ಬಿಡಿಭಾಗ ಉತ್ಪಾದನೆಯಲ್ಲಿ ಬೆಳಗಾವಿ, ಶಿವಮೊಗ್ಗ ಬೆಂಗಳೂರು ನಂ.1
ಶೇ. 30-40ರಷ್ಟು ಉಳಿತಾಯ

ಫೌಂಡ್ರಿ ಬಿಡಿಭಾಗಗಳನ್ನು ಸಾಗಿಸುವುದಕ್ಕೆ ಗೂಡ್ಸ್‌ ರೈಲು ಸೇವೆ ಸಿಕ್ಕರೆ ಶೇ. 30-40ರಷ್ಟು ಸಾಗಣೆ ವೆಚ್ಚವನ್ನು ಉಳಿತಾಯ ಮಾಡಬಹುದು. ಪ್ರಸ್ತುತ ಟ್ರಕ್‌ ಮತ್ತು ಏರ್‌ಲಿಫ್ಟ್‌ ಮೂಲಕ ಫೌಂಡ್ರಿ ಉತ್ಪನ್ನಗಳನ್ನು ದೇಶಾದ್ಯಂತ ಮತ್ತು ಹೊರದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ದೇಶದ ವಿವಿಧ ರಾಜ್ಯಗಳಿಗೆ ರಫ್ತು ಮಾಡಬೇಕಾದ ಪರಿಕರಗಳಿಗೆ ರೈಲ್ವೆ ಸೇವೆ ಸಿಕ್ಕರೆ ಭಾರಿ ಪ್ರಯೋಜನವಾಗಲಿದೆ. ಇದರೆಡೆಗೆ ಕೇಂದ್ರ ಸರಕಾರ ಗಮನಹರಿಸಬೇಕು ಎಂಬುದು ಫೌಂಡ್ರಿ ಉದ್ದಿಮೆದಾರರ ಆಗ್ರಹವಾಗಿದೆ.

ಆಗಬೇಕಿರುವ ಸುಧಾರಣೆ

* ಬೆಳಗಾವಿ, ಶಿವಮೊಗ್ಗದಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ಪನ್ನಗಳ ಬೇಡಿಕೆ ಇರುವ ಕಡೆಗಳಲ್ಲಿ ನೇರ ರೈಲುಗಳಿಲ್ಲ. ಇದ್ದರೂ ಪ್ರಕ್ರಿಯೆಯಲ್ಲಿ ಲೋಪಗಳಿವೆ.

* ಒಂದು ಉತ್ಪನ್ನ ಗ್ರಾಹಕರಿಗೆ ಕಳುಹಿಸಬೇಕಾದರೆ ರೈಲಿನಲ್ಲಿ ತಗಲುವ ಕಾಲಾವಧಿ ಅಧಿಕ. ಇದರಲ್ಲಿ ಸುಧಾರಣೆಯಾಗಬೇಕು.

* ಗೂಡ್ಸ್‌ ರೈಲಿನಲ್ಲಿ ಸಾಮಗ್ರಿಗಳನ್ನು ಕಳುಹಿಸುವುದಕ್ಕೆ ಆನ್‌ಲೈನ್‌ ವ್ಯವಸ್ಥೆ ಕಲ್ಪಿಸಬೇಕು. ಅದು ಗ್ರಾಹಕ ಸ್ನೇಹಿಯಾಗಿರಬೇಕು.

* ಅಪರೂಪದ ಪರಿಕರ ತಯಾರಿಸುವ ವಾರಣಾಸಿಯಂತಹ ಕಡೆಗಳಿಗಾದರೂ ಗೂಡ್ಸ್‌ ರೈಲು ಸೌಲಭ್ಯ ನೀಡಬೇಕು.

ಫೌಂಡ್ರಿ 'ಉತ್ಪನ್ನ'ವಾರು ಬೇಡಿಕೆ

ಆಟೊ ಶೇ.32, ಕೃಷಿ ಶೇ.6, ಅರ್ಥ್‌ ಮೂವಿಂಗ್‌ ಶೇ.2, ಪಂಪ್ಸ್‌ ಆ್ಯಂಡ್‌ ಕಂಪ್ರೆಸರ್‌ ಶೇ.5, ವಾಲ್ವ್‌ ಶೇ.5, ಡೀಸೆಲ್‌ ಎಂಜಿನ್ಸ್‌ ಶೇ.3, ಎಲೆಕ್ಟ್ರಿಕಲ್‌ ಇಕ್ವಿಪ್‌ಮೆಂಟ್‌ ಶೇ.3, ಮೆಷಿನ್‌ ಟೂಲ್ಸ್‌ ಶೇ.2, ಇಂಡಸ್ಟ್ರಿಯಲ್‌ ಶೇ.6, ಪೈಪ್ಸ್‌ ಆ್ಯಂಡ್‌ ಫಿಟ್ಟಿಂಗ್‌ ಶೇ.8, ರೈಲ್ವೆ ಶೇ.6, ಪವರ್‌ ಶೇ.5 ಹಾಗೂ ಇತರೆ ಶೇ.10, ಸ್ಯಾನಿಟರಿ ಶೇ.8ರಷ್ಟು ಫೌಂಡ್ರಿ ಉತ್ಪನ್ನಗಳನ್ನು ದೇಶದಲ್ಲಿ ಪೂರೈಕೆ ಮಾಡಲಾಗುತ್ತಿದೆ.

ಶಿವಮೊಗ್ಗದಲ್ಲಿ ಸಿದ್ಧಪಡಿಸಲಾಗುವ ಕೆಲವು ಫೌಂಡ್ರಿ ಉತ್ಪನ್ನಗಳನ್ನು ಬೇರೆಡೆಗೆ ರಫ್ತು ಮಾಡುವುದಕ್ಕೆ ರೈಲ್ವೆ ಸೌಲಭ್ಯ ಕಲ್ಪಿಸಬೇಕು. ಈ ಎಲ್ಲ ತೊಡಕುಗಳನ್ನು ನಿವಾರಿಸಬೇಕು. ಇದರಿಂದ ಉದ್ದಿಮೆಗಳಿಗೆ ಶೇ. 30-40ರಷ್ಟು ಸಾಗಣೆ ವೆಚ್ಚ ಉಳಿಯಲಿದೆ.
ಅಂಕಿತ್‌ ದಿವೇಕರ್‌, ನಿರ್ದೇಶಕ, ಪಿಯರ್‌ಲೈಟ್‌ ಲೈನರ್ಸ್ ಪ್ರೈ.ಲಿ., ಶಿವಮೊಗ್ಗ
ಲೇಖಕರ ಬಗ್ಗೆ
ಎನ್‌. ಸಚ್ಚಿದಾನಂದ
2019ರಿಂದ ವಿಜಯ ಕರ್ನಾಟಕ ವೆಬ್‌ನಲ್ಲಿ ಉಪಸಂಪಾದಕರಾಗಿದ್ದಾರೆ. 2015ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಇವರು ಸದ್ಯ ‘ವಿಕ’ ವೆಬ್‌ನ ವಾಣಿಜ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ ಇವರ ಆಸಕ್ತಿಯ ಕ್ಷೇತ್ರಗಳಾಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ