ಆ್ಯಪ್ನಗರ

ಸುರಕ್ಷಿತ ಹೂಡಿಕೆಗೆ 'ಸಾವರಿನ್‌ ಗೋಲ್ಡ್‌ ಬಾಂಡ್‌': ಬಡ್ಡಿ ಎಷ್ಟು? ಖರೀದಿ ಹೇಗೆ?

ಜೂನ್ 8ರಂದು 2020-21ನೇ ಸಾಲಿನ ಮೂರನೇ ಸರಣಿಯ ಸಾವರಿನ್‌ ಗೋಲ್ಡ್‌ ಬಾಂಡ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಗೋಲ್ಡ್ ಬಾಂಡ್‌ಗಳನ್ನು ಪಡೆಯುವುದು ಹೇಗೆ? ಅದರಿಂದ ದೊರೆಯುವ ಬಡ್ಡಿ ಎಷ್ಟು? ಯಾರು ವಿತರಿಸುತ್ತಾರೆ? ಮೊದಲಾದಂತೆ ಗೋಲ್ಡ್‌ ಬಾಂಡ್‌ಗಳ ಕುರಿತ ಸಮಗ್ರ ಮಾಹಿತಿ ಇಲ್ಲಿದೆ.

Vijaya Karnataka Web 8 Jun 2020, 5:05 pm
ಬೆಂಗಳೂರು: ಕೊರೊನಾ ವೈರಸ್‌ ಕಾರಣದಿಂದಾಗಿ ಮಾರುಕಟ್ಟೆ ಪೂರ್ಣ ಕುಸಿದಿದೆ. ಹೂಡಿಕೆದಾರರಿಗೆ ತಾವು ಎಲ್ಲಿ ಬಂಡವಾಳ ಹಾಕಬೇಕು ಎಂಬ ಗೊಂದಲ ಉಂಟಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಸರಕಾರ ಆರಂಭಿಸಿರುವ 'ಸಾವರಿನ್‌ ಗೋಲ್ಡ್‌ ಬಾಂಡ್‌' (ಎಸ್‌ಜಿಬಿ) ಮೇಲೆ ಹೂಡಿಕೆ ಮಾಡುವುದೇ ಸುರಕ್ಷಿತ ಎಂದು ಜನ ಭಾವಿಸುತ್ತಿದ್ದಾರೆ. ಸರಕಾರವು ಜೂನ್ 8 ರ ಸೋಮವಾರದಿಂದ 'ಸಾವರಿನ್ ಗೋಲ್ಡ್ ಬಾಂಡ್' ಗಳನ್ನು ಕೊಳ್ಳಲು ಗ್ರಾಹಕರಿಕೆ ಅವಕಾಶ ನೀಡಿದೆ.
Vijaya Karnataka Web how to invest in sovereign gold bond heres all you need to know
ಸುರಕ್ಷಿತ ಹೂಡಿಕೆಗೆ 'ಸಾವರಿನ್‌ ಗೋಲ್ಡ್‌ ಬಾಂಡ್‌': ಬಡ್ಡಿ ಎಷ್ಟು? ಖರೀದಿ ಹೇಗೆ?


ವರ್ಷದಲ್ಲಿ ಒಟ್ಟು 6 ಬಾರಿ ಎಸ್‌ಜಿಬಿ ಬಾಂಡ್‌ಗಳನ್ನು ವಿತರಿಸುತ್ತದೆ. ಆರ್ಥಿಕ ವರ್ಷದಲ್ಲಿ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಪ್ರತಿ ತಿಂಗಳು ನಿರ್ದಿಷ್ಟ ದಿನಾಂಕದಂದು ಗೋಲ್ಡ್‌ ಬಾಂಡ್‌ಗಳನ್ನು ವಿತರಣೆ ಮಾಡುತ್ತದೆ. ಇದೀಗ ಮೂರನೇ ಸರಣಿಯ ಬಾಂಡ್‌ಗಳನ್ನು ಸೋಮವಾರ (ಜೂನ್‌ 8ರಿಂದ) ಬಿಡುಗಡೆ ಮಾಡಿದೆ. ಈ ಬಾಂಡ್‌ಗಳನ್ನು ಕೊಳ್ಳಬಯಸುವ ಗ್ರಾಹಕರು ಜೂನ್‌ 12ರವರೆಗೆ ಬಾಂಡ್‌ಗಳಿಗಾಗಿ ನೋಂದಣಿ ಮಾಡಿಕೊಳ್ಳಬಹುದು. ಜೂನ್‌ 16ರಂದು ಬಾಂಡ್‌ಗಳನ್ನು ವಿತರಿಸಲಾಗುತ್ತದೆ.

ಗೋಲ್ಡ್ ಬಾಂಡ್‌ಗಳನ್ನು ಹೇಗೆ ಪಡೆಯಬಹುದು. ಅದರಿಂದ ದೊರೆಯುವ ಬಡ್ಡಿ ಎಷ್ಟು. ಯಾರು ವಿತರಿಸುತ್ತಾರೆ? ಮೊದಲಾದಂತೆ ಸಾವರಿನ್‌ ಗೋಲ್ಡ್‌ ಬಾಂಡ್‌ಗಳ ಕುರಿತ ಸಮಗ್ರ ಮಾಹಿತಿ ಇಲ್ಲಿದೆ.

ಆರ್‌ಬಿಐ ವಿತರಿಸುತ್ತದೆ

ಸಾವರಿನ್‌ ಗೋಲ್ಡ್‌ ಬಾಂಡ್‌ಗಳನ್ನು ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವಿತರಿಸುತ್ತದೆ. ಇದರಲ್ಲಿ ಪ್ರತಿ ಬಾಂಡ್ ಒಂದು ಗ್ರಾಂ ಚಿನ್ನಕ್ಕೆ ಸಮಾನವಾದ ಮೌಲ್ಯವನ್ನು ಪ್ರತಿನಿಧಿಸುತ್ತದೆ. 2020-21ನೇ ಸಾಲಿನ ಮೂರನೇ ಹಂತದ ವಿತರಣೆಯಯಲ್ಲಿ ಪ್ರತಿ ಗ್ರಾಂ ಚಿನ್ನದ ಮೌಲ್ಯವನ್ನು 4,677 ರೂಪಾಯಿಗೆ ನಿಗದಿಪಡಿಸಿದೆ. ಕೊರೊನಾ ವೈರಸ್‌ನಿಂದಾಗಿ ಎಲ್ಲ ಕ್ಷೇತ್ರಗಳೂ ನಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿವಾಗಿದೆ.

ವಾರ್ಷಿಕ ಶೇ.2.5 ಬಡ್ಡಿ

ಸಾವರಿನ್‌ ಗೋಲ್ಡ್‌ ಬಾಂಡ್ ಯೋಜನೆಯಡಿ ನಿಮ್ಮ ಹೂಡಿಕೆಯ ಮೊತ್ತಕ್ಕೆ ವಾರ್ಷಿಕ ಶೇ.2.5 ಬಡ್ಡಿ ನೀಡಲಾಗುತ್ತದೆ. ಬಡ್ಡಿಯನ್ನು 6 ತಿಂಗಳಿಗೆ ಒಮ್ಮೆ ಪಾವತಿಸಲಾಗುತ್ತದೆ.

ಯಾರು ಖರೀದಿಸಬಹುದು? ಎಷ್ಟು ಖರೀದಿಸಬಹುದು?

ವ್ಯಕ್ತಿಗತವಾಗಿ ಅಥವಾ ಹಿಂದು ಅವಿಭಕ್ತ ಕುಟುಂಬಗಳು ವಾರ್ಷಿಕ ಗರಿಷ್ಠ ಗರಿಷ್ಠ 4 ಕೆಜಿ ಮೌಲ್ಯದ ಎಸ್‌ಜಿಬಿ ಖರೀದಿಸಬಹುದು. ಇನ್ನು ಟ್ರಸ್ಟ್‌ ಗಳು, ಇದಕ್ಕೆ ಸರಿಸಮಾನವಾದ ಸಂಸ್ಥೆಗಳು ಒಂದು ವಿತ್ತೀಯ ವರ್ಷದಲ್ಲಿ ಗರಿಷ್ಠ 20 ಕೆಜಿ ಮೌಲ್ಯದ ಎಸ್‌ಜಿಬಿ ಖರೀದಿಸಬಹುದು. ಒಬ್ಬ ವ್ಯಕ್ತಿ ಕನಿಷ್ಠ 1 ಬಾಂಡ್‌ ಕೊಳ್ಳಬೇಕು. ಇದು 8 ವರ್ಷದ ಅನಂತರ ಕೈಗೆ ಸಿಗುತ್ತದೆ. ಬಯಸಿದರೆ ಈ ಯೋಜನೆಯನ್ನು 5 ವರ್ಷಕ್ಕೇ ಮುಗಿಸಿಕೊಳ್ಳಬಹುದು.

ಎಲ್ಲಿ ಖರೀದಿಸಬಹುದು?

ವಾಣಿಜ್ಯ ಬ್ಯಾಂಕ್‌ಗಳು, ಅಂಚೆ ಕಚೇರಿ, ಬಿಎಸ್‌ಇ, ಎನ್‌ಎಸ್‌ಇ ಮತ್ತು ನ್ಯಾಷನಲ್‌ ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೋರೇಷನ್‌ನಲ್ಲಿ ಎಸ್‌ಜಿಬಿಗಳನ್ನು ಕೊಳ್ಳಬಹುದು. ವ್ಯಕ್ತಿಗತವಾಗಿ, ಟ್ರಸ್ಟ್‌ಗಳು, ಸಾಮಾಜಿಕ ಸಂಘಟನೆಗಳು, ಅವಿಭಕ್ತ ಹಿಂದು ಕುಟುಂಬಗಳು, ವಿಶ್ವವಿದ್ಯಾಲಯಗಳಿಗೆ ಕೊಳ್ಳುವ ಅವಕಾಶವಿದೆ. ಬಾಂಡ್‌ಗಳನ್ನು ಕೊಳ್ಳಲು ಆರ್‌ಬಿಐ ನಿರ್ದೇಶನದ ಪ್ರಕಾರ, ಆನ್‌ಲೈನ್ ಅರ್ಜಿ ಸಲ್ಲಿಸಬೇಕು.


ಚಿನ್ನದ ಮೌಲ್ಯ ನಿಗದಿ ಹೇಗೆ

ಭಾರತೀಯ ಷೇರುಪೇಟೆ ಹಾಗೂ ಶುದ್ಧ ಚಿನ್ನದ ಆಭರಣ ವರ್ತಕರು (ಜುವೆಲರ್ಸ್‌ ಅಸೋಸಿಯೇಶನ್‌ ಲಿಮಿಟೆಡ್‌) ನಿಗದಿಪಡಿಸಿದ ಬೆಲೆಯ ಪ್ರಕಾರ ಬಾಂಡ್‌ಗಳನ್ನು ವಿತರಿಸಲಾಗುವುದು. ಅಂದರೆ ಚಿನಿವಾರ ಪೇಟೆ ಕಾರ್ಯಾಚರಣೆ ಮಾಡುತ್ತಿರುವಾಗಿನ (ರಜಾದಿನಗಳನ್ನು ಬಿಟ್ಟು) ಕೊನೆಯ ಮೂರು ದಿನಗಳ ಸರಾಸರಿ ಬೆಲೆಯನ್ನು ನಿಗದಿ ಮಾಡಲಾಗುವುದು. ಸದ್ಯ 1 ಗ್ರಾಮ್‌ ಚಿನ್ನದ ಬೆಲೆ 4,677 ರೂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ